ಕರ್ನಾಟಕದಲ್ಲಿ ಶಾಲಾ ಕಾಲೇಜು ಆರಂಭಕ್ಕೆ ಸರ್ಕಾರ ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಶಾಲಾ ಕಾಲೇಜು ಆಡಳಿತ ಮಂಡಳಿ ದಾಖಲಾತಿ ಆರಂಭ ಮಾಡಲು ಪೂರ್ವ ಸಿದ್ಧತೆ ಶುರು ಮಾಡಿವೆ. ರಾಜ್ಯ ಸರ್ಕಾರವೂ ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಾಸೆಯಂತೆಯೇ ಕೆಲಸ ಮಾಡುತ್ತಿದೆಯೇ ಎನಿಸುವ ಅನುಮಾನ ಸರ್ಕಾರದ ಅಧಿಸೂಚನೆಯಿಂದ ಗೊತ್ತಾಗುತ್ತಿದೆ. ಕೇಂದ್ರ ಸರ್ಕಾರ ಶಾಲಾ ಕಾಲೇಜು ತೆರೆಯುವ ಬಗ್ಗೆ ಯಾವ ನಿರ್ಧಾರ ಮಾಡಲಿದೆ ಎನ್ನುವುದನ್ನು ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಜುಲೈನಿಂದ ಶಾಲಾ ಕಾಲೇಜು ಆರಂಭದ ಬಗ್ಗೆ ಈಗಾಗಲೇ ಸುಳಿವು ನೀಡಿರುವುದರಿಂದ ರಾಜ್ಯ ಸರ್ಕಾರ ಜುಲೈನಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಅಧಿಸೂಚನೆ ಹೊರಡಿಸಿದೆ.
ಶಿಕ್ಷಣ ಇಲಾಖೆ ಅಧಿಸೂಚನೆ ಪ್ರಕಾರ ಜೂನ್ 5 ರಿಂದ ಶಾಲಾ ಕಾಲೇಜು ಸಿಬ್ಬಂದಿ ಕಚೇರಿಗೆ ತೆರೆಯಲು ಸೂಚಿಸಿದ್ದು, ಜೂನ್ 5 ರಿಂದ ಸರ್ಕಾರಿ ಶಾಲೆಗಳ ಸಿಬ್ಬಂದಿ ಹಾಜರಾಗಬೇಕು. ಜೂನ್ 8 ರಿಂದ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭ ಮಾಡಬಹುದು. ಜೂನ್ 8 ರಿಂದ ಖಾಸಗಿ ಶಾಲೆಗಳ ಕಚೇರಿ ಆರಂಭ ಮಾಡಬಹುದು. ಜೂನ್ 15 ರೊಳಗೆ ಪೋಷಕರ ಅಭಿಪ್ರಾಯ ಸಂಗ್ರಹ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ಕೊಟ್ಟಿದೆ. ಶಿಕ್ಷಣ ಇಲಾಖೆ ಪ್ರಸ್ತಾಪಿಸಿರುವ ದಿನಾಂಕದಂತೆ ಜುಲೈ 1 ರಿಂದ 4 ರಿಂದ 7ನೇ ತರಗತಿ, ಜುಲೈ 15 ರಿಂದ 1 ರಿಂದ 3ನೇ ತರಗತಿ, ಜುಲೈ 15 ರಿಂದ 8 ರಿಂದ 10ನೇ ತರಗತಿ ಹಾಗೂ ಜುಲೈ 20 ರಿಂದ ನರ್ಸರಿ, ಪ್ರಿ ನರ್ಸರಿ ತರಗತಿ ಆರಂಭ ಮಾಡುವ ಬಗ್ಗೆ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಆದರೆ ಕರೋನಾ ಸಂಕಷ್ಟ ಕಾಲದಲ್ಲಿ ಶಾಲಾ ಆರಂಭಕ್ಕೆ ತುದಿಗಾಲಲ್ಲಿ ನಿಂತಿರುವ ಸರ್ಕಾರ ಕ್ರಮಕ್ಕೆ ಜನಾಕ್ರೋಶ ವ್ಯಕ್ತವಾಗ್ತಿದೆ.

ಶಾಲಾ ಆರಂಭಕ್ಕೆ ವಿರೋಧ ಯಾಕೆ..? ವಿದೇಶದಲ್ಲಿ ಶಾಲಾ ಕಾಲೇಜು ಆರಂಭ ಆಗಿದ್ಯಾ..?
ಫಿಲಿಫೈನ್ಸ್ ಒಂದು ಪುಟ್ಟ ರಾಷ್ಟ್ರ. ಈ ದೇಶದಲ್ಲಿ 10 ಕೋಟಿ 67 ಲಕ್ಷ ಜನಸಂಖ್ಯೆ ಇದೆ. ಈ ದೇಶದಲ್ಲೂ ಕರೋನಾ ಸೋಂಕು ವ್ಯಾಪಿಸಿದ್ದು, 19,748 ಜನರು ಸೋಂಕಿನಿಂದ ಬಳಲಿದ್ದಾರೆ. 974 ಜನರು ಸೋಂಕಿನಿಂದಲೇ ಸಾವನ್ನಪ್ಪಿದ್ದಾರೆ. 4,153 ಜನರು ಕರೋನಾ ಸೋಂಕಿನಿಂದ ಗುಣಮುಖ ಆಗಿದ್ದಾರೆ. ಅಲ್ಲಿನ ಪರಿಸ್ಥಿತಿ ಸದ್ಯಕ್ಕೆ ಕರ್ನಾಟಕದಲ್ಲಿ ಏರಿಕೆಯಾಗುತ್ತಿರುವ ಮಟ್ಟದಲ್ಲೇ ಸೋಂಕು ಪ್ರಮಾಣ ಹೆಚ್ಚುತ್ತಿದೆ. ಸರಾಸರಿ ಮುನ್ನೂರು ನಾನೂರ ಲೆಕ್ಕದಲ್ಲಿ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಅಲ್ಲಿನ ಅಧ್ಯಕ್ಷ ರೋಡ್ರಿಗೋ ಡಟರ್ಟ್ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೋವಿಡ್ 19ಗೆ ಲಸಿಕೆ ಪತ್ತೆಯಾಗುವ ತನಕ ಶಾಲಾ ಕಾಲೇಜು ಆರಂಭ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿಯಷ್ಟು ವಿದ್ಯಾರ್ಥಿಗಳು ಇದ್ದು, ಅವರ ಆರೋಗ್ಯವೇ ನಮಗೆ ಮುಖ್ಯ. ಶಿಕ್ಷಣ ಸಿಗದಿದ್ದರೂ ಪರವಾಗಿಲ್ಲ ಮಕ್ಕಳ ಪ್ರಾಣದ ಜೊತೆ ನಾವು ಸಾಹಸ ಮಾಡುವುದಿಲ್ಲ ಎಂದಿದ್ದಾರೆ. ಯಾರು ಪದವೀಧರ ಆಗಿದ್ದರೂ ಪರವಾಗಿಲ್ಲ. ಲಸಿಕೆ ಪತ್ತೆಯಾಗುವ ತನಕ ಶಾಲಾ ಕಾಲೇಜು ತೆರಯಲು ಅನುಮತಿ ಕೊಡಲ್ಲ ಎಂದಿದ್ದಾರೆ. ಇನ್ನೂ ಭಾರತದಂತೆಯೇ ಫಿಲಿಫೈನ್ಸ್‌ನಲ್ಲೂ ಕೂಡ ಜನರು ಬಡತದಲ್ಲೇ ಜೀವನ ಮಾಡುತ್ತಿದ್ದು, ಆನ್‌ಲೈನ್ ಶಿಕ್ಷಣವೂ ಕೈಗೆಟಕುವ ಸಾಧ್ಯತೆ ತೀರಾ ಕಡಿಮೆ ಇದೆ.
ಸದ್ಯ ಕರ್ನಾಟಕದ ಪರಿಸ್ಥಿತಿ ಹೇಗಿದೆ..?
ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಹಾಗೂ ವಿಶ್ವದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಲೇ ಇದೆ. ಕೇವಲ ಕೇಂದ್ರ ಸರ್ಕಾರ ಲಾಕ್ಡೌನ್ ವಿನಾಯ್ತಿ ಘೋಷಣೆ ಮಾಡಿದ ಬಳಿಕ ಕರ್ನಾಟಕದಲ್ಲಿ ದಿನನಿತ್ಯ ನೂರಾರು ಕೇಸ್‌ಗಳು ಪತ್ತೆಯಾಗುತ್ತಿವೆ. ಬೆಂಗಳೂರಿನಲ್ಲಿ ಒಂದೊಂದೇ ಏರಿಯಾಗಳು ಸೀಲ್‌ಡೌನ್ ಆಗುತ್ತಿದ್ದು, ಇದೀಗ 38 ಏರಿಯಾಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಭಯ ಭೀತಿಯಲ್ಲಿ ಬದುಕುವಂತಾಗಿದೆ.
ಕರೋನಾ ಸೋಂಕನ್ನು ತಡೆಯಲು ಸಾಮಾಜಿಕ ಅಂತರ ಮಾತ್ರವೇ ಮದ್ದು ಎಂದು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, “ಜೀವ, ಜೀವನ ಎರಡರ ನಡುವೆ ನಮ್ಮ ಆಯ್ಕೆ ಜೀವ” ಆಗಿರಬೇಕು ಎಂದಿದ್ದರು. ಆ ಬಳಿಕ ಸೋಂಕು ಹೆಚ್ಚಳವಾಗುತ್ತಿದ್ದರೂ ಲಾಕ್ಡೌನ್ ವಿನಾಯ್ತಿ ಕೊಡುವ ಮೂಲಕ ಜೀವನವನ್ನು ಮೌನವಾಗಿಯೇ ಆಯ್ಕೆ ಮಾಡಿಕೊಂಡರು. ತುಂಬಾ ಕಡಿಮೆ ಕರೋನಾ ಸೋಂಕು ಇದ್ದಾಗ ಲಾಕ್ಡೌನ್ ಮಾಡಿಕೊಂಡಿದ್ದ ಸರ್ಕಾರ, ಕರೋನಾ ಸೋಂಕು ಹೆಚ್ಚಳವಾಗುತ್ತಿದ್ದ ಹಾಗೆ ಎಲ್ಲವನ್ನೂ ಮುಕ್ತ ಮಾಡುವ ಮೂಲಕ ಕರೋನಾ ಹರಡಲು ಕಾರಣರಾಗಿದ್ದಾರೆ ಎನ್ನುವ ಕೋಪ ಜನ ಮಾನಸದಲ್ಲಿ ಶುರುವಾಗಿದೆ. ಇದೀಗ ಖಾಸಗಿ ಶಾಲಾ ಕಾಲೇಜುಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಇಡೀ ದೇಶದಲ್ಲಿ ಮೊದಲಿಗನಾಗಿ ಶಾಲಾ ಕಾಲೇಜು ಆರಂಭ ಮಾಡುವ ಬಗ್ಗೆ ತರಾತುರಿಯಲ್ಲಿ ನಿರ್ಧಾರ ಮಾಡುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಬ್ರಿಟನ್‌ನಲ್ಲಿ ಸರ್ಕಾರದ ನಡೆ ವಿರೋಧಿಸಿದ ಜನ..!
ಕರೋನಾ ಸಂಕಷ್ಟದಲ್ಲಿ ಮುಳುಗಿರುವ ಬ್ರಿಟನ್ ಜಾಗತಿಕ ಲೆಕ್ಕಾಚಾರದಲ್ಲಿ 5ನೇ ಸ್ಥಾನದಲ್ಲಿದೆ. 2,77,985 ಜನರಿಗೆ ಸೋಂಕು ಬಂದಿದ್ದು, 39,369 ಜನರು ಕರೋನಾ ವೈರಾಣು ದಾಳಿಗೆ ಬಲಿಯಾಗಿದ್ದಾರೆ. ಆದರೆ 10 ವಾರದಗಳ ಬಳಿಕ ಇದೀಗ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರ ಮಾಡಿದೆ. ಸರ್ಕಾರವೇ ಶಾಲಾ ಖಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದರೂ ಹಲವಾರು ಶಾಲಾ ಆಡಳಿತ ಮಂಡಳಿಗಳು ಶಾಲೆಗಳನ್ನು ಆರಂಭ ಮಾಡುವ ಮನಸ್ಸು ಮಾಡಿಲ್ಲ. ಸರ್ಕಾರದ ನಿರ್ಧಾರಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರ ಸಾಮಾಜಿಕ ಅಂತರ ಕಾಪಾಡಿಕೊಂಡು ಪಾಠ ಮಾಡಲು ಸೂಚಿಸಿ ಶಾಲೆಗಳನ್ನು ತೆರೆದಿದೆ. ಆದರೆ ಮಕ್ಕಳನ್ನು ಅವರ ಸ್ನೇಹಿತರ ಜೊತೆ ಆಟವಾಡದಂತೆ ತಡೆಯಲು ಸಾಧ್ಯವೇ..? ಮಕ್ಕಳು ಒಟ್ಟಿಗೆ ಕೂರುವುದನ್ನು ತಪ್ಪಿಸಲು ಆಗುತ್ತದೆ..? ಇದೇ ಕಾರಣದಿಂದ ನಾವಿನ್ನು ಮಕ್ಕಳನ್ನು ಶಾಲೆಗೆ ಕಳಹಿಸುವ ದುಸ್ಸಾಹಸ ಮಾಡುವುದಿಲ್ಲ ಎಂದಿದ್ದಾರೆ ಡರೇನ್ ಸ್ಟೈಯ್ಡ್ ದಂಪತಿ. ಇನ್ನೂ ಕೆಲವರು ಕರೋನಾ ಎಂದು ಹೆದರಿ ಕುಳಿತರೆ ಆಗಲ್ಲ. ಈಗಾಗಲೇ ಮಕ್ಕಳು ಮನೆಯಲ್ಲಿ ಕುಳಿತು ಮಾನಸಿಕವಾಗಿ ದಣಿದಿದ್ದಾರೆ. ಅನಾರೋಗ್ಯಕ್ಕೆ ಒಳಗಾಗುವ ಮುನ್ನ ಅವರನ್ನು ಶಾಲೆಗಳಿಗೆ ಕಳಹಿಸಬೇಕು. ಇಲ್ಲದಿದ್ದರೆ ತಿಂಗಳುಗಳ ಕಾಲವಲ್ಲ, ವರ್ಷವಾದರೂ ಹೀಗೇ ಮುಂದುವರಿಯುತ್ತದೆ ಎಂದಿದ್ದಾರೆ. ಬ್ರಿಟನ್ ಸರ್ಕಾರ ಕೂಡ 1 ರಿಂದ 6ನೇ ವರ್ಷದ ಮಕ್ಕಳು ಶಾಲೆಗೆ ಬರಬೇಕು ಎಂದು ಕಡ್ಡಾಯ ಮಾಡಿಲ್ಲ. ಬ್ರಿಟನ್ ಸರ್ವೇ ಪ್ರಕಾರ ಅರ್ಧಕ್ಕಿಂತ ಹೆಚ್ಚಿನ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಕಳಹಿಸುವ ಮನಸ್ಸು ಮಾಡಿಲ್ಲ. ಶಾಲಾ ಆಡಳಿತ ಮಂಡಳಿಗಳೂ ಮಕ್ಕಳನ್ನು ಕರೆತರುವುದು, ಮನೆಗೆ ತಲುಪಿಸುವುದು ಕಷ್ಟಕರವಾಗಿದೆ ಎಂದು ವರದಿಯಾಗಿದೆ.
ಚೀನಾದ ವುಹಾನ್ ಗಿಂತಲೂ ಆತುರಾ ಸರೀನಾ..?
ಇಡೀ ವಿಶ್ವಕ್ಕೆ ಗೊತ್ತಿರುವಂತೆ ಕರೋನಾ ತವರೂರು ಚೀನಾ ದೇಶದ ವುಹಾನ್ ಪ್ರಾಂತ್ಯ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೋಂಕು ಕಾಣಿಸಿಕೊಂಡು ಮರಣ ಮೃದಂಗ ಬಾರಿಸಿದ ಬಳಿಕ ಶಾಲಾ ಕಾಲೇಜುಗಳನ್ನು ಜನವರಿ 23 ರಿಂದ ಬಂದ್ ಮಾಡಿ ಅಲ್ಲಿನ ಸರ್ಕಾರ ಆದೇಶ ಮಾಡಿತ್ತು. 76 ದಿನಗಳ ಬಳಿಕ ಅಲ್ಲಿನ ಶಾಲೆಗಳು ಪುನಃ ತೆರೆದಿವೆ. ಆದರೆ ಏಪ್ರಿಲ್ 26ರಂದು ಕರೋನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆ ಆದ ಬಳಿಕ ವುಹಾನ್ ಸಂಪೂರ್ಣವಾಗಿ ಕರೋನಾ ಸೋಂಕು ಮುಕ್ತ ನಗರವಾಗಿದೆ. ಸುಮಾರು 57 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವುಹಾನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಗಳಲ್ಲೂ ಕಟ್ಟಿನಿಟ್ಟಿನ ಕ್ರಮ ಕೈಗೊಂಡಿರುವ ಚೀನಾ ಸರ್ಕಾರ, ಉಷ್ಣಾಂಶ ಪರೀಕ್ಷೆ, ಮಾಸ್ಕ್, ಬಾಡಿ ಸ್ಯಾನಿಟೈಸ್‌ಗೂ ವ್ಯವಸ್ಥೆ ಮಾಡಿಕೊಂಡಿದೆ. ಮಗು ಶಾಲೆಗೆ ಬರುತ್ತಿದ್ದ ಹಾಗೆ ಸಂಪೂರ್ಣ ಬ್ಯಾಗ್‌ನಿಂದ ಹಿಡಿದು ಸ್ಯಾನಿಟೈಸ್ ಮಾಡಿ ಒಳಕ್ಕೆ ಬಿಡಲಾಗುತ್ತದೆ. ಶಾಲೆಯೊಳಗೂ ಸಿಂಗಲ್ ಚೇರ್ ವ್ಯವಸ್ಥೆ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗ್ತಿದೆ. ಇನ್ನೊಂದು ಮಹತ್ವದ ವಿಚಾರ ಎಂದರೆ, ವುಹಾನ್‌ನಲ್ಲಿ 1 ಕೋಟಿ 10 ಲಕ್ಷ ಜನಸಂಖ್ಯೆಯಿದ್ದು, ಎಲ್ಲರಿಗೂ ಕರೋನಾ ತಪಾಸಣೆ ಮಾಡಲಾಗಿದೆ. ಆದರೆ ಕರ್ನಾಟಕದಲ್ಲಿ ಸೋಂಕಿನ ಲಕ್ಷಣ ಕಂಡು ಬಂದರೆ ಮಾತ್ರ ಗಂಟಲು ದ್ರವ ಪರೀಕ್ಷೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಶಾಲಾ ಕಾಲೇಜು ಆತುರ ಎಷ್ಟು ಸರಿ..?ಶಾಲೆಗಳಿಗೆ ಮಕ್ಕಳನ್ನು ಕಳುಹಿಸಬಹುದಾ..?

ಪ್ರಧಾನಿ ನರೇಂದ್ರ ಮೋದಿ ಹೇಳಿದರು ಎನ್ನುವ ಕಾರಣಕ್ಕೆ ಜನ ಜಾಗಟೆ, ಗಂಟೆ ಎಲ್ಲವನ್ನೂ ಬಾರಿಸಿದ್ದು ಆಯ್ತು. ಮನೆಯ ವಿದ್ಯುತ್ ದೀಪವನ್ನು ಆರಿಸಿ ಮೊಬೈಲ್ ಟಾರ್ಚ್ ಬಿಟ್ಟಿದ್ದೂ ಆಯ್ತು. ಬಡವರು ನಡುಬೀದಿಯಲ್ಲಿ ನಡೆದು ಹೋಗಲಾರದೆ ಸಾವಿನ ಮನೆ ಸೇರಿದ್ದೂ ಆಯ್ತು. ಅನ್ನ ಸಿಗದೆ ಸಾವಿರಾರು ಜನರು ಪರದಾಟ ನಡೆಸಿದ್ದೂ ಆಯ್ತು. ಕಾರ್ಮಿಕರನ್ನು ಕರೆದೊಯ್ಯುವ ವ್ಯವಸ್ಥೆ ಅವ್ಯವಸ್ಥೆ ಆಗಿದ್ದರಿಂದ ಸಾವಿರಾರು ಜನರು ಕರೋನಾ ಸೋಂಕಿಗೆ ತುತ್ತಾಗಿದ್ದೂ ಆಯ್ತು. ಇದೀಗ ಭಾರತ ಸೋಂಕಿತರ ಸಂಖ್ಯೆಯಲ್ಲಿ ವಿಶ್ವದ 7ನೇ ಸ್ಥಾನದಲ್ಲಿ ಬಂದು ನಿಂತಿದೆ. ದಿನವೊಂದಕ್ಕೆ 8 ಸಾವಿರ ಗಡಿಯನ್ನು ದಾಟಿ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಕರೋನಾ ಸೋಂಕು ರಣಕೇಕೆ ಹಾಕುತ್ತಿದೆ. ಒಮ್ಮೆ ಭಾರತದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಸೋಂಕು ಬರುವುದಕ್ಕೆ ಶುರುವಾದರೆ ಸರ್ಕಾರ ಚಿಕಿತ್ಸೆ ಕೊಡುವುದಕ್ಕೆ ಆಸ್ಪತ್ರೆಗಳಲ್ಲಿ ಜಾಗ ಇಲ್ಲದಂತಾಗುತ್ತದೆ. ಈಗಾಗಲೇ ಸೋಂಕಿತರು ಹೆಚ್ಚಾಗುತ್ತಿದ್ದು, ಕೆಲವೊಂದು ಜಿಲ್ಲಾ ಕೋವಿಡ್ 19 ಆಸ್ಪತ್ರೆಗಳಲ್ಲಿ ಸೋಂಕಿತರಷ್ಟು ಹಾಸಿಗೆ ವ್ಯವಸ್ಥೆಯೇ ಇಲ್ಲ. ಹೀಗಿರುವಾಗ ಸರ್ಕಾರ ಯಾರ ಒತ್ತಡಕ್ಕೆ ಮಣಿಯುತ್ತಿದೆ..? ಮಕ್ಕಳ ಪ್ರಾಣದ ಜೊತೆ ಚಕ್ಕಂದ ಆಡುವುದಕ್ಕೆ ಕುಮ್ಮಕ್ಕು ಏನಾದರೂ ಇದೆಯಾ..? ಎನ್ನುವುದನ್ನು ಶಿಕ್ಷಣ ಸಚಿವರೇ ತಿಳಿಸಬೇಕಿದೆ.

ಶಿಕ್ಷಣ ಸಚಿವರು ಈಗ ಏನಂತಿದ್ದಾರೆ ಗೊತ್ತಾ..?
ಶಿಕ್ಷಣ ಇಲಾಖೆ ದಿನಾಂಕ ಸಹಿತ ಅಧಿಸೂಚನೆ ಹೊರಡಿಸಿದ ಬಳಿಕ ಜನಾಕ್ರೋಶ ಉಂಟಾಗಿದೆ. ಪೋಷಕರು ಸರ್ಕಾರ ನಡೆಯನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಓದದಿದ್ದರೂ ಪರವಾಗಿಲ್ಲ ಮಕ್ಕಳನ್ನು ಶಾಲೆಗೆ ಕಳುಹಿಸಿ ನಾವು ಹಿಂಸೆ ಅನುಭವಿಸಲು ಸಿದ್ಧರಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಇದೀಗ ಉಲ್ಟಾ ಹೊಡೆದಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಾಲೆ ಆರಂಭದ ಬಗ್ಗೆ ಅಭಿಪ್ರಾಯ ಕೇಳಿದ್ದೇವೆ. ಪೋಷಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಮಾಡುತ್ತೇವೆ. ತರಗತಿಗಳು ಹೇಗಿರಬೇಕು..? ಶಿಫ್ಟ್ ವ್ಯವಸ್ಥೆ ಬೇಕಾ..? ಪ್ರಿ ನರ್ಸರಿ ಆರಂಭಿಸಬೇಕೇ..? ಬೇಡವೇ..? ಎಂಬ ಬಗ್ಗೆ ಪೋಷಕರ ಅಭಿಪ್ರಾಯ ಸಂಗ್ರಹಿಸಿ, ಕೇಂದ್ರಕ್ಕೆ ವರದಿ ಕಳುಹಿಸುತ್ತೇವೆ. ಆ ಬಳಿಕ ಕೇಂದ್ರದ ನಿರ್ದೇಶನದಂತೆ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ. ಕರೋನಾ ಜೊತೆಗೆ ನಾವು ಬದುಕನ್ನೂ ಕಟ್ಟಿಕೊಳ್ಳಬೇಕಿದೆ. ಹಾಗಾಗಿ ಕರೋನಾ ಆತಂಕ ಕಡಿಮೆಯಾದ ಬಳಿಕ, ಎಚ್ಚರಿಕೆ ತೆಗೆದುಕೊಂಡು ಶಾಲೆಗಳನ್ನು ಶುರು ಮಾಡುವ ಬಗ್ಗೆ ತೀರ್ಮಾನ ಮಾಡ್ತೇವೆ ಎಂದಿದ್ದಾರೆ.
Also Read: ಚರ್ಚೆಗೆ ಗ್ರಾಸವಾಯ್ತು ಶಾಲೆ ಪುನರಾರಂಭದ ಸರ್ಕಾರದ ಪ್ರಸ್ತಾವನೆ







