ಏಷ್ಯಾ ಖಂಡದಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರಗಳಾಗಿ ಗುರುತಿಸಿಕೊಂಡಿರುವ ಭಾರತ ಹಾಗೂ ಚೀನಾ ನಡುವೆ ಇದೀಗ ಗಡಿ ವಿಚಾರವಾಗಿ ಬಿಕ್ಕಟ್ಟು ಆರಂಭವಾಗಿದೆ. ಇಂತಹದ್ದೊಂದು ಬಿಕ್ಕಟ್ಟು ನಿನ್ನೆ, ಮೊನ್ನೆಯದ್ದಲ್ಲ. ಬದಲಿಗೆ ಸುಮಾರು ಐದಾರು ದಶಕಕ್ಕೂ ಮಿಕ್ಕಿದ ಬಿಕ್ಕಟ್ಟಿದು. ಇದು ಭಾರತ ಹಾಗೂ ಚೀನಾ ನಡುವಿನ ಅಪನಂಬಿಕೆಗೂ ಕಾರಣವಾಗಿದೆ. ವಿಶೇಷ ಅಂದ್ರೆ ಈ ಎರಡೂ ಏಷ್ಯನ್ ರಾಷ್ಟ್ರಗಳು ಪರಮಾಣು ಅಣ್ವಸ್ತ್ರಗಳನ್ನೂ ಹೊಂದಿದೆ. ಬಾಹ್ಯಾಕಾಶ ಸೇರಿದಂತೆ ಹಲವು ವೈಜ್ಞಾನಿಕ ಕ್ಷೇತ್ರಗಳಲ್ಲೂ ಅಪಾರ ಸಾಧನೆಗೈದಿವೆ. ಆದರೆ ಗಡಿ ವಿಚಾರಕ್ಕೆ ಬಂದಾಗ ಮಾತ್ರ ʼಗಡಿ ನಿಯಂತ್ರಣ ರೇಖೆʼ ಬಗ್ಗೆ ತಕರಾರು ಭುಗಿಲೇಳುತ್ತಲೇ ಇರುತ್ತದೆ. ಸಾಮ್ರಾಜ್ಯಶಾಹಿ ನೀತಿ ಹೊಂದಿರೋ ಚೀನಾವಂತೂ ಪ್ರತಿ ಬಾರಿಯೂ ನೆರೆಯ ದೇಶಗಳಲ್ಲಿ ಇಂತಹ ಜಗಳ ಮಾಡುವುರದಲ್ಲಿ ನಿಸ್ಸೀಮನೆನಿಸಿಕೊಂಡಿದೆ. ಇದೀಗ ಭಾರತವೂ ಅನಿವಾರ್ಯವಾಗಿ ಚೀನಾಕ್ಕೆ ಉತ್ತರಿಸಲೇಬೇಕಿದೆ.
ಹಾಗಂತ ಈ ಗಡಿ ವಿವಾದವೂ ಒಮ್ಮಿಂದೊಮ್ಮೆಗೆ ಉದ್ಭವಿಸಿಲ್ಲ, ಬದಲಿಗೆ ಇದು ಬ್ರಿಟಿಷರ ಕಾಲದಲ್ಲಿಯೇ ಇತ್ತು. 1914 ರಲ್ಲಿ ಚೀನಾ ಮತ್ತು ಟಿಬೆಟ್ ಸರಕಾರಗಳನ್ನ ಕೂರಿಸಿ ಇದೇ ಬ್ರಿಟಿಷರು ಗಡಿ ಗುರುತಿಸಿದ್ದರು. ಆದರೆ ಅಂದು ಮ್ಯಾಕ್ ಮೋಹನ್ ಗುರುತಿಸಿದ್ದ ಗಡಿ ರೇಖೆಯನ್ನ ಚೀನಾ ಎಂದೂ ಒಪ್ಪಿಕೊಂಡಿಲ್ಲ. ಪ್ರಸ್ತುತ ಚೀನಾ ತನ್ನದೆಂದು ಹೇಳುವ 90 ಸಾವಿರ ಚದರ ಕಿಲೋ ಮೀಟರ್ ಪ್ರದೇಶವು ಭಾರತದ ಅರುಣಾಚಲ ಪ್ರದೇಶಕ್ಕೆ ಸೇರಿದ್ದಾಗಿವೆ.

1959 ರಲ್ಲಿ ಚೀನಾಕ್ಕೆ ಭೇಟಿ ನೀಡಿದ್ದ ದೇಶದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ, ಚೀನಾ ಭೂಪಟದಲ್ಲಿ ಭಾರತದ ಗಡಿ ಪ್ರದೇಶಗಳಿರುವುದರ ಬಗ್ಗೆ ಪ್ರಶ್ನೆ ಎತ್ತಿದ್ದರು. ಇದು ಚೀನಾ ಮ್ಯಾಕ್ ಮೋಹನ್ ಗುರುತಿಸಿದ್ದ ಗಡಿ ನಿಯಂತ್ರಣ ರೇಖೆಯನ್ನ ಒಪ್ಪಿಕೊಂಡಿಲ್ಲ ಹಾಗೂ ಅದರ ವಸಾಹತು ಶಾಹಿ ಬುದ್ಧಿಯೂ ಜಗಜ್ಜಾಹೀರಾಗುವಂತೆ ಮಾಡಿತ್ತು. ಅಂದಿನಿಂದ ಇಂದಿನವರೆಗೂ ಭಾರತ ಬಿಟ್ಟುಕೊಡಲಿಲ್ಲ, ಚೀನಾ ತನ್ನ ಪಟ್ಟು ಸಡಿಲಿಸಿಯೇ ಇಲ್ಲ. ಬದಲಿಗೆ, ಭಾರತ ಜೊತೆ ಗಡಿ ಕಾದಾಟದ ದುಸ್ಸಾಹಸಕ್ಕೆ ಚೀನಾ ಕೈ ಹಾಕುತ್ತಲೇ ಇದೆ.

1962 ರಲ್ಲಿ ನಡೆದೇ ಹೋಯ್ತು ಭಾರತ-ಚೀನಾ ಯುದ್ಧ!
ಹೀಗೆಯೇ ವಿಷಮ ಸ್ಥಿತಿ ಮುಂದುವರಿದು ಅದು ಭಾರತ ಹಾಗೂ ಚೀನಾ ನಡುವಿನ ಯುದ್ಧಕ್ಕೂ ನಾಂದಿ ಹಾಡಿತ್ತು. ರಾಜತಾಂತ್ರಿಕವಾಗಿ ಅಂದು ಕೂಡಾ ಚೀನಾ ಉತ್ತಮ ಸಂಬಂಧವಿರಿಸಿಕೊಂಡಿದೆ ಅನ್ನೋ ಹಾಗೆ ನಟಿಸಿ, ನಂತರ ಭಾರತದ ಬೆನ್ನಿಗೆ ಇರಿಯುವ ನರಿ ಬುದ್ಧಿ ಪ್ರದರ್ಶಿಸಿತ್ತು. ಅಂದು ನಾಲ್ಕು ವಾರಗಳ ಕಾಲ ನಡೆದ ಯುದ್ಧದಲ್ಲಿ ಭಾರತೀಯ ನೂರಾರು ಯೋಧರು ದೇಶಕ್ಕಾಗಿ ಪ್ರಾಣವನ್ನ ಬಲಿದಾನಗೈದಿದ್ದರು. ಇದರಿಂದಾಗಿ ಚೀನಾ, ಟಿಬೆಟ್ ಸಂಪರ್ಕಿಸುವ ಕಾರಿಡಾರ್ ಪ್ರದೇಶವಾದ ಅಕ್ಸಾಯ್ ಚಿನ್ ಪ್ರದೇಶವನ್ನ ವಶಕ್ಕೆ ಪಡೆದಿತ್ತು. ಆದರೆ ಭಾರತ ಅಕ್ಸಾಯ್ ಚಿನ್ ಮೇಲೆ ತನ್ನ ನಿಯಂತ್ರಣ ಸಾಧಿಸುವ ಉದ್ದೇಶದಿಂದ ಒಂದಿನಿತೂ ಹಿಂದೆ ಸರಿದಿಲ್ಲ.
1967 ನಾಥುಲಾ ಸಂಘರ್ಷ!
1962 ರಲ್ಲಿ ಪ್ರಾಬಲ್ಯ ಮೆರೆದಿದ್ದನ್ನೇ ತಲೆಯಲ್ಲಿ ತುಂಬಿಕೊಂಡಿದ್ದ ಚೀನಾ, 1967 ರಲ್ಲಿ ಮತ್ತೆ ಸಿಕ್ಕಿಂ ಗಡಿ ಭಾಗದಲ್ಲಿ ಕಂದಕಗಳನ್ನ ನಿರ್ಮಿಸುತ್ತಿತ್ತು. ಇದನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಭಾರತ ಸೆಪ್ಟಂಬರ್ 11 ರಂದು ಚೀನಿ ಸೈನಿಕರನ್ನ ತಡೆಯುವ ಪ್ರಯತ್ನ ಮಾಡಿತ್ತು. ಸಿಕ್ಕಿಂ ಒಳಗೆ ನುಗ್ಗಿ ಬಂದ ಚೀನಿ ಸೈನಿಕರನ್ನ ನಾಲ್ಕೇ ದಿವಸಗಳಲ್ಲಿ ವಾಪಾಸ್ ಹೋಗುವಂತೆ ಮಾಡಿದ್ದರು. ಅದೇ ವರುಷದ ಅಕ್ಟೋಬರ್ ನಲ್ಲಿ ಚೋ ಲಾ ಪ್ರದೇಶದಲ್ಲಿ ಏಕಾಏಕಿ ದಾಳಿ ನಡೆಸಿದ್ದ ಚೀನೀ ಸೈನಿಕರ ವಿರುದ್ಧ ಭಾರತ ನೀಡಿದ್ದ ತಕ್ಕ ಉತ್ತರಕ್ಕೆ ಚೀನಾದ 400 ರಷ್ಟು ಯೋಧರು ಪ್ರಾಣ ತೆತ್ತಿದ್ದರು. ಭಾರತದ 88 ಸೈನಿಕರು ಹುತಾತ್ಮರಾಗಿದ್ದರು. ಆದರೆ ಅಂದು ಭಾರತ ನೀಡಿದ್ದ ಏಟು ಚೀನಾವನ್ನ ಇನ್ನಿಲ್ಲದಂತೆ ಕಾಡಿತ್ತು..
1975 ರಲ್ಲಿ ನಡೆದ ತುಲುಂಗ್ ಲಾ ದಾಳಿ
ಇದು ಭಾರತ ಹಾಗೂ ಚೀನಾ ನಡುವಿನ ಕೊನೆಯ ಗುಂಡಿನ ಕಾಳಗ ಎಂದೇ ಹೇಳಲಾಗಿದೆ. ಇದೀಗ 45 ವರುಷಗಳ ನಂತರ ಗುಂಡಿನ ಕಾಳಗ ನಡೆಯದೇ ಹೋದರೂ, ಸಾವು-ನೋವು ನಡೆದಿರುವುದು ಗಮನಾರ್ಹ. ಅದಕ್ಕೂ ಮೊದಲು 1975 ರ ನಡೆದ ತುಲುಂಗ್ ದಾಳಿ ಹಿನ್ನೆಲೆ ಗಮನಿಸೋದಾದರೆ, ಅಂದೂ ಚೀನಾ ಸೈನಿಕರು ಹೊಂಚು ಹಾಕಿ ಅರುಣಾಚಲ ಪ್ರದೇಶದ ತುಲುಂಗ್ ಲಾ ದಲ್ಲಿ ಗಸ್ತಿನಲ್ಲಿದ್ದ ಅಸ್ಸಾಂ ರೈಫಲ್ಸ್ ನಾಲ್ವರು ಜವಾನರನ್ನ ಚೀನಾ ಸೈನಿಕರು ಗುಂಡಿಟ್ಟು ಹತ್ಯೆಗೈದಿದ್ದರು. ಇದು ಭಾರತ, ಚೀನಾ ನಡುವಿನ ಪರಿಸ್ಥಿತಿ ವಿಷಮ ಸ್ಥಿತಿಗೆ ಹೋಗಲು ಕಾರಣವಾಗಿತ್ತು. ಆದರೆ ಚೀನಾ ಅಸ್ಸಾಂ ರೈಫಲ್ಸ್ ಯೋಧರ ಸಾವಿಗೆ ತಾನು ಕಾರಣವಲ್ಲ ಎಂದು ವಾದಿಸಿತ್ತು. ಈ ಕುರಿತ ವರದಿಯನ್ನ ಅಮೆರಿಕಾದ ʼನ್ಯೂಯಾರ್ಕ್ ಟೈಮ್ಸ್ʼ ಕೂಡಾ ಬಿತ್ತರಿಸಿತ್ತು.

2017 ಡೋಕ್ಲಾಂ ಗಡಿ ಬಿಕ್ಕಟ್ಟು
2017 ರಲ್ಲಿ ದಶಕಗಳ ನಂತರ ಮತ್ತೆ ಕಾಲ್ಕೆರೆದು ಜಗಳಕ್ಕೆ ಬಂದ ಚೀನಿ ಸೈನಿಕರಿಗೆ ಇಲ್ಲೂ ದೊಡ್ಡ ಮಟ್ಟಿನ ಹಿನ್ನಡೆಯಾಗಿತ್ತು. ಅಂದು ಸಿಕ್ಕಿಂ ನ ಡೋಕ್ಲಾಂ ನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರಿಂದ ತಿಂಗಳ ಕಾಲ ಇಂತಹದ್ದೇ ಬಿಕ್ಕಟ್ಟು ಎದುರಾಗಿತ್ತು. ಮುನ್ನುಗ್ಗಿ ಬರುತ್ತಿದ್ದ ಚೀನಿ ಸೈನಿಕರನ್ನ ಭಾರತೀಯ ಯೋಧರು ತಡೆದು ನಿಲ್ಲಿಸಿದ್ದರು. ಆ ಸಮಯದಲ್ಲೂ ಸೈನಿಕರ ನಡುವೆ ಕಲ್ಲು ತೂರಾಟದ ಮೂಲಕ ಕಾದಾಟ ನಡೆದು ಕೆಲ ಯೋಧರು ಗಾಯಗೊಂಡಿದ್ದರು. ಆದರೆ ಎರಡು ತಿಂಗಳ ಬಳಿಕ ರಾಜತಾಂತ್ರಿಕ ಮಾತುಕತೆ ನಂತರ ಚೀನಾ ಅನಿವಾರ್ಯವಾಗಿ ಗಡಿ ಭಾಗದಿಂದ ಹಿಂದೆ ಸರಿದಿತ್ತು. ಮಾತ್ರವಲ್ಲದೇ ಡೋಕ್ಲಾಂ ನಲ್ಲಿ ಚೀನಾ ನಿರ್ಮಿಸಲು ಮುಂದಾಗಿದ್ದ ರಸ್ತೆ ಕಾಮಗಾರಿಯನ್ನೂ ಸ್ಥಗಿತಗೊಳಿಸಲಾಯಿತು.
MEA Press Statement on Doklam Disengagement Understanding pic.twitter.com/fVo4N0eaf8
— Anurag Srivastava (@MEAIndia) August 28, 2017
ಇದೀಗ ಮತ್ತದೇ ಗಡಿ ವಿವಾದ; ಚೀನಾದ ದುಸ್ಸಾಹಸ..
ಭಾರತ, ಅಮೆರಿಕಾ ಜೊತೆ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡಿರುವುದೇ ಚೀನಾಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ಏಷ್ಯಾದಲ್ಲಿ ತಾನೊಬ್ಬ ʼದೊಡ್ಡಣ್ಣʼನೆನಿಸಿಕೊಳ್ಳುವ ಕಮ್ಯುನಿಸ್ಟ್ ನೇತೃತ್ವದ ಚೀನಾಕ್ಕೆ ಪ್ರಜಾಪ್ರಭುತ್ವ ದೇಶ ಭಾರತ ಒಂದು ರೀತಿ ಮಗ್ಗುಲ ಮುಳ್ಳು ಅನ್ನೋ ಭಾವನೆಯಿದೆ. ಆದರೆ ಭಾರತ ಯಾವತ್ತೂ ಯುದ್ಧದಾಹಿ ರಾಷ್ಟ್ರವಾಗಿ ಗುರುತಿಸಿಕೊಂಡಿಲ್ಲ. ಪ್ರತಿಬಾರಿಯೂ ಭಾರತ ನ್ಯೂಟನ್ ನ ಮೂರನೇ ನಿಯಮವನ್ನೇ ಪಾಲಿಸಿದೆ. ಅದರ ಹೊರತು ಚೀನಾದಂತೆ ಗಡಿ ಒಪ್ಪಂದ ಉಲ್ಲಂಘಿಸಿ ಜಗಳಕ್ಕೆ ಹೋಗುವ ಜರೂರತ್ತು ಭಾರತಕ್ಕಿಲ್ಲ. ಇದನ್ನ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೇ ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ. ಆದರೆ ಈಗ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಉಂಟಾಗಿರೋದು ಅಂತಿಂತಹ ಬಿಕ್ಕಟ್ಟಲ್ಲ. ಅಷ್ಟು ಸುಲಭವಾಗಿ ಬಗೆಹರಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಜೂನ್ 15 ರ ಸಂಜೆಗೆ ಭಾರತದ ಗಡಿಯೊಳಗೆ ನುಗ್ಗಿ ಗಸ್ತು ಠಾಣೆ ನಿರ್ಮಿಸಿದ್ದನ್ನ ಭಾರತೀಯ ಸೇನೆ ತಕರಾರು ಎತ್ತಿದ್ದು, ಕರ್ನಲ್ ಸಂತೋಷ್ ಬಾಬು ನೇತೃತ್ವದ ತಂಡ ಚೀನಾ ಸೈನಿಕರಿಗೆ ಗಸ್ತು ಠಾಣೆ ತೆರವುಗೊಳಿಸುವಂತೆ ಸೂಚಿಸಿತ್ತು. ಇದಕ್ಕೆ ಒಪ್ಪಿದ್ದ ಚೀನಾ ಸೈನಿಕರು, ಗಡಿಯತ್ತ ವಾಪಾಸ್ ಹೋಗಿದ್ದರು. ಆ ಬಳಿಕ ಸಂತೋಷ್ ಬಾಬು ನೇತೃತ್ವದ ತಂಡ ತೆರವುಗೊಳಿಸಲು ಮುಂದಾಗಿದ್ದು, ಆ ಸಮಯಕ್ಕೆ ಮತ್ತೆ ಗಸ್ತು ಠಾಣೆ ಬಳಿ ಬಂದ ಚೀನಿ ಸೈನಿಕರು ದೊಣ್ಣೆ, ಕಬ್ಬಿಣ ಸರಳುಗಳನ್ನ ತಂದಿದ್ದರು. ಮಾತ್ರವಲ್ಲದೇ ನೂರಾರು ಸಂಖ್ಯೆಯಲ್ಲಿದ್ದ ಅವರು, ಕಡಿಮೆ ಸಂಖ್ಯೆಯಲ್ಲಿದ್ದ ಭಾರತೀಯ ಯೋಧರ ಮೇಲೆ ದಾಳಿ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದರು. ಇದರಿಂದ ಕರ್ನಲ್ ಸಂತೋಷ್ ಬಾಬು ಸಹಿತ ಮೂವರು ಸಾವನ್ನಪ್ಪಿದರು. ಆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳ ತಲುಪಿದ ಭಾರತೀಯ ಸೈನಿಕರು ಮರು ದಾಳಿ ಸಂಘಟಿಸಿದರು. ಸಂಪೂರ್ಣ ಶೀತಮಯವಾಗಿದ್ದ ಗಾಲ್ವಾನ್ ಕಣಿವೆಯ ನದಿ ಬಳಿ ನಡೆದ ಕಾದಾಟದಿಂದ ಕೆಲವು ಸೈನಿಕರು ನೀರಿಗೆ ಬಿದ್ದು, ಅಲ್ಲಿಯೇ ಮೃತಪಟ್ಟರು ಎನ್ನಲಾಗಿದೆ. ಅಷ್ಟಕ್ಕೂ ಈ ಎಲ್ಲಾ ಗಡಿ ಕಾದಾಟಕ್ಕೆ ಪ್ರಮುಖ ಕಾರಣವೇ, ಕೆಲವೆಡೆ ಇದುವರೆಗೂ ಭಾರತ ಹಾಗೂ ಚೀನಾ ನಡುವೆ ಗಡಿ ರೇಖೆಗಳಿಲ್ಲದೇ ಇರೋದು ಅನ್ನೋದು ವಿಶ್ಲೇಷಕರ ಅಭಿಪ್ರಾಯ. ವಾಸ್ತವ ಗಡಿ ರೇಖೆ (Line of Actuall Controll) ಇದ್ದರೂ ಅದನ್ನ ಚೀನಾ ಕೆಲವೆಡೆ ಒಪ್ಪಿಕೊಳ್ಳದೇ ಇರೋದು ಕೂಡಾ ಗಡಿ ಕಾದಾಟಕ್ಕೆ ಕಾರಣವಾಗಿದೆ.

ಗುಂಡಿನ ದಾಳಿ ನಡೆಸದಿರಲು ಭಾರತದ ಯೋಧರು ನಿರ್ಧರಿಸಿದ್ದೇಕೆ?
ಇಂತಹ ಸ್ಥಿತಿಯಲ್ಲಿ ಸಾಮಾನ್ಯವಾಗಿ ಗುಂಡಿನ ದಾಳಿಗಳು ನಡೆಯುತ್ತದೆ. ಆದರೆ ಇಲ್ಲಿ ಹಾಗಾಗಲಿಲ್ಲ, ಗಡಿ ದಾಟಿ ಬರುವ ಪಾಕ್ ಉಗ್ರರನ್ನ ಒಂದೇ ಗುಂಡಿಗೆ ಬಲಿ ಪಡೆಯುವಂತಹದ್ದೇ ಅವಕಾಶ ಇಲ್ಲಿಲ್ಲ. ಏಕೆಂದರೆ, ಇದು ಸೂಕ್ಷ್ಮ ವಿಚಾರವಾದ ಹಿನ್ನೆಲೆಯಲ್ಲಿ.. 1993 ಹಾಗೂ 1996 ರಲ್ಲಿ ಭಾರತ ಹಾಗೂ ಚೀನಾ ನಡುವೆ ಒಪ್ಪಂದ ನಡೆದಿದ್ದು, ಅದರಂತೆ ಭಾರತೀಯ ಯೋಧರು ಒಪ್ಪಂದ ಮುರಿಯಲಿಲ್ಲ. ತನ್ನ ಮೇಲೆ ಷಡ್ಯಂತ್ರದ ದಾಳಿ ಆಗುತ್ತಿದ್ದರೂ, ಭಾರತೀಯ ಯೋಧರು ಕೂಡಾ ಕಲ್ಲುಗಳ ಮೂಲಕವೇ ಪ್ರತಿರೋಧ ಒಡ್ಡಿದರು. ಸುಮಾರು 45ಕ್ಕೂ ಅಧಿಕ ಮಂದಿ ಚೀನಾ ಸೈನಿಕರು ಇದರಿಂದ ಸಾವು-ನೋವು ಕಾಣುವಂತಾಯಿತು. ಅಂದಹಾಗೆ 1993 ರ ಒಪ್ಪಂದದ ಪ್ರಕಾರ, ಯಾರೇ ಗಡಿ ದಾಟಿ ಬಂದರೂ ಅವರಿಗೆ ಎಚ್ಚರಿಕೆಯನ್ನ ನೀಡಬೇಕು.

ಇನ್ನು 1996 ರಲ್ಲಿ ನಡೆದ ಒಪ್ಪಂದ ಪ್ರಕಾರ ಗಡಿಯ 2 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಸ್ಫೋಟಕ ಬಳಸಿ ದಾಳಿ ಮಾಡುವಂತಿಲ್ಲ. ಆದ್ದರಿಂದ ಭಾರತೀಯ ಸೇನೆ ಎಲ್ಲೂ ತನ್ನಲ್ಲಿದ್ದ ಗನ್ ಗಳ ಸಹಾಯ ಪಡೆದಿಲ್ಲ. ಅತ್ತ ಚೀನಿ ಸೈನಿಕರ ಮಾರಕಾಯುಧಗಳಿಗೆ ಯಾವುದೇ ಎದೆಗುಂದದೇ ಹೋರಾಟ ಮೆರೆದಿದ್ದಾರೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಯೋಧರು ಅತ್ತ ಒಪ್ಪಂದ ಮುರಿಯದೆ, ಇತ್ತ ಗಡಿ ನುಗ್ಗಲು ಬಂದವರನ್ನು ಒಳ ನುಗ್ಗಲು ಬಿಡದೇ ಭಾರತದ ಅಸ್ತಿತ್ವಕ್ಕಾಗಿ ಶಸ್ತ್ರಾಸ್ತ್ರಗಳಿಲ್ಲದೇ ಕದನ ನಡೆಸಿದ್ದಾರೆ.. ಹುತಾತ್ಮರಾಗಿದ್ದಾರೆ.. ಮತ್ತು ತಕ್ಕ ಪ್ರತಿರೋಧ ತೋರಿದ್ದಾರೆ..