ಶುಕ್ರವಾರ ಕೊಟ್ಟಿರುವ ಅಂಕಿ ಸಂಖ್ಯೆಯ ಪ್ರಕಾರ ಕರ್ನಾಟಕದಲ್ಲಿ ಒಟ್ಟು ಕರೋನಾ ಕೇಸ್ 3693 ಆಗಿದ್ದು, ಬೆಂಗಳೂರು ಒಂದರಲ್ಲೇ 2208 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 115 ಆಗಿದೆ. ಕಳೆದ ಮೂರ್ನಾಲ್ಕು ದಿನಗಳ ಕಾಲದಲ್ಲಿ ಕಂಡು ಬರುತ್ತಿರುವ ಸಾವಿನ ಸಂಖ್ಯೆಯನ್ನು ಗಮನಿಸಿದಾಗ 14 ರಂದು 87, 15ರಂದು 87, 16ರಂದು 104, 17 ರಂದು 115 ಜನರು ಕರೋನಾದಿಂದ ಸಾವನ್ನಪ್ಪಿದ್ದಾರೆ ಎಂದು ಸ್ವತಃ ಸರ್ಕಾರ ಅಧಿಕೃತವಾಗಿ ಮಾಹಿತಿ ನೀಡಿದೆ.
ಕರೋನಾ ಸಾವನ್ನಪ್ಪುವ ಕಾಯಿಲೆ ಅಲ್ಲಾ ಎಂದು ಸರ್ಕಾರ, ತಜ್ಞರು ಹೇಳುವ ಸಾಮಾನ್ಯ ಮಾತು. ಹಾಗಿದ್ದ ಮೇಲೆ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಯಾಕೆ ಎನ್ನುವ ಪ್ರಶ್ನೆ ಮೂಡುತ್ತದೆ. ಕೇವಲ ಜ್ದರ, ಕೆಮ್ಮು, ನೆಗಡಿ ಬಾಧಿಸಿ ಹೋಗುವುದಿದ್ದರೆ ಸಾವಿನ ಪ್ರಮಾಣ ಹೆಚ್ಚಾಗುತ್ತಿರುವುದು ಯಾಕೆ..? ಕರೋನಾ ಸಾವಿಗೆ ಕಡಿವಾಣ ಬೀಳುತ್ತಿಲ್ಲ ಯಾಕೆ..? ದಿನದಿಂದ ದಿನಕ್ಕೆ ಸಾವಿನ ಪ್ರಕರಣಗಳು ಹೆಚ್ಚಾಗಲು ಕಾರಣವೇನು..? ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲೇ ಬೇಕಿದೆ.
ಕರೋನಾ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಸಾಮಾನ್ಯ. ಉಸಿರಾಟ ಸಮಸ್ಯೆ ಇದ್ದವರಿಗೆ ವೆಂಟಿಲೇಟರ್ ಹಾಗೂ ಆಕ್ಸಿಜನ್ ಪೂರೈಕೆ ಮಾಡುವ ಅನಿವಾರ್ಯತೆ ಇರುತ್ತದೆ. ಆದರೆ ಕರ್ನಾಟಕ ಸರ್ಕಾರದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆ ಇದೆ ಎನ್ನುವ ಅಂಶ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಕರೋನಾ ಸೋಂಕಿತರ ಬೇಡಿಕೆಗೆ ತಕ್ಕಂತೆ ವೆಂಟಿಲೇಟರ್‌ಗಳು ಲಭ್ಯವಾಗದ ಕಾರಣ ಸೋಂಕಿತರು ಸಾವನ್ನಪ್ಪುವ ಸಂದರ್ಭ ಎದುರಾಗಿದೆ. ಒಂದು ವೇಳೆ ಉಸಿರಾಟದ ಸಮಸ್ಯೆ ಇರುವ ಸೋಂಕಿತರಿಗೆ ತಕ್ಷಣಕ್ಕೆ ವೆಂಟಿಲೇಟರ್ ಹಾಗೂ ಆಕ್ಸಿಜನ್ ಪೂರೈಕೆ ಮಾಡಲು ಸಾಧ್ಯವಾದರೆ, ದಿನಕ್ಕೆ ನೂರಾರು ಮಂದಿ ಸಾಯುವುದನ್ನು ತಪ್ಪಿಸಬಹುದು ಎನ್ನುತ್ತಾರೆ ಆರೋಗ್ಯ ಸಿಬ್ಬಂದಿ.
ರಾಜ್ಯದಲ್ಲಿ ವೆಂಟಿಲೇಟರ್ ಮತ್ತು ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆಗಳ ಕೊರತೆ ಇರುವ ಕಾರಣದಿಂದಲೇ ಉಸಿರಾಟ ಸಮಸ್ಯೆಯಿಂದ ಬಳಲುವ ಜನರ ಸಾವು ಸಂಭವಿಸುತ್ತಿದೆ ಎನ್ನುವುದಕ್ಕೆ ಇಲ್ಲಿನ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಇರುವುದು ಕೇವಲ 500 ವೆಂಟಿಲೇಟರ್‌ಗಳು. ಆಕ್ಸಿಜನ್ ಪೂರೈಕೆ ವ್ಯವಸ್ಥೆ ಇರುವ ಹಾಸಿಗೆಗಳ ಸಂಖ್ಯೆ 1,000. ಈಗಾಗಲೇ ಈ ಹಾಸಿಗೆಗಳು ಭರ್ತಿಯಾಗಿರುವ ಕಾರಣ, ಹೊಸದಾಗಿ ಕರೋನಾ ಸೋಂಕಿಗೆ ತುತ್ತಾಗುತ್ತಿರುವ ರೋಗಿಗಳಿಗೆ ಜೀವರಕ್ಷಕ ಸಾಧನವಾದ ವೆಂಟಿಲೇಟರ್ ಸಿಗುತ್ತಿಲ್ಲ. ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ವೆಂಟಿಲೇಟರ್ ಅವಶ್ಯಕತೆ ಹೆಚ್ಚಾಗುತ್ತಿದ್ದು, ವೆಂಟಿಲೇಟರ್ ಸಿಗದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಕರೋನಾ ಆರಂಭ ಕಾಲದಲ್ಲಿ ರಾಜ್ಯ ಸರ್ಕಾರ ನಾವು ಸಂಪೂರ್ಣ ತಯಾರಿದ್ದೇವೆ. ನಮ್ಮ ಜನರಿಗೆ ಬೇಕಾದಷ್ಟು ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಇದೆ ಎಂದು ಘೋಷಣೆ ಮಾಡಿತ್ತು. ಇನ್ನೂ ಹೆಚ್ಚುವರಿಯಾಗಿ 1,500 ವೆಂಟಿಲೇಟರ್‌ಗಳ ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಭರವಸೆಯ ಮಾತುಗಳನ್ನು ಆಡಿತ್ತು. ಅದರಲ್ಲೂ ಮೈಸೂರಿನಲ್ಲಿರುವ ಸ್ಕ್ಯಾನ್ ರೇ ಕಂಪನಿ ವೆಂಟಿಲೇಟರ್ ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಆರ್.ಕೆ ಸಂಸ್ಥೆ ಸಹ 800 ವೆಂಟಿಲೇಟರ್ ಪೈಕಿ 630 ವೆಂಟಿಲೇಟರ್ ಪೂರೈಕೆ ಮಾಡಲು ಮಾತ್ರವೇ ಶಕ್ತವಾಗಿದೆ ಎನ್ನಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಖಾಸಗಿ ಆಸ್ಪತ್ರೆಗಳು ಶ್ರೀಮಂತ ರೋಗಿಗಳ ಪಾಲು..!
ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಸೂಕ್ತ ರೀತಿಯಲ್ಲಿ ಸಹಕಾರ ಕೊಡ್ತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪ ಮಾಡಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲೂ ಸಹ, ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಸಹಕಾರ ದೊರೆಯದ ಹಿನ್ನೆಲೆಯಲ್ಲಿ ಶನಿವಾರ ಖಾಸಗಿ ವೈದ್ಯಕೀಯ ಕಾಲೇಕು ಆಡಳಿತ ಮುಖ್ಯಸ್ಥರ ಜೊತೆಗೆ ಸಭೆ ಕರೆಯಲಾಗಿದೆ ಎಂದಿದ್ದಾರೆ.
ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಆರಂಭವಾಗಿದೆ. ಆದರೆ ಅತ್ಯಂತ ಪ್ರಭಾವಿಶಾಲಿಗಳು, ಶಾಸಕರು, ಸಚಿವರು, ದೊಡ್ಡ ದೊಡ್ಡ ಉದ್ಯಮಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸರ್ಕಾರ ಹೇಳುವುದು ಬೇರೆ ಲೆಕ್ಕಾಚಾರ. ಸಾಮಾನ್ಯ ಜನರನ್ನು ದಾಖಲು ಮಾಡಿಕೊಳ್ಳದೆ ವಾಪಸ್ ಕಳುಹಿಸುವಂತಿಲ್ಲ. ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು, ಆ ಬಳಿಕ ಬಿಬಿಎಂಪಿಗೆ ರೋಗಿಯ ಬಗ್ಗೆ ಮಾಹಿತಿ ಕೊಡಬೇಕು ಎಂದಿದೆ. ಆದರೆ ಆಸ್ಪತ್ರೆಯಲ್ಲಿ ಸರ್ಕಾರಕ್ಕೆ ಕೊಡಬೇಕಿರುವಷ್ಟು ಬೆಡ್‌ಗಳಲ್ಲಿ ಈಗಾಗಲೇ ಕರೋನಾ ಸೋಂಕಿತರು ಇದ್ದಾರೆ ಎನ್ನುವುದು ಖಾಸಗಿ ಆಸ್ಪತ್ರೆಗಳ ವಾದವಾಗಿದೆ.

ಕರೋನಾ ಸೋಂಕಿತರು ಪಾರಾಗುವುದು ಹೇಗೆ..?
ಕರೋನಾ ಸೋಂಕಿತರಿಗೆ ಸರ್ಕಾರದಿಂದ ಪೂರಕ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ ಚಿಕಿತ್ಸೆಗಾಗಿ ಅಲೆದಾಡಿ ಪ್ರಾಣ ಬಿಡುವ ಮೊದಲು ಸೋಂಕು ಬರುತ್ತಿದ್ದ ಹಾಗೆ ವೈದ್ಯರನ್ನು ಸಂಪರ್ಕಿಸಿ ಮನೆಯಲ್ಲೇ ಚಿಕಿತ್ಸೆ ಪಡೆಯುವ ಬಗ್ಗೆ ಮಾಹಿತಿ ಕೊಡಬೇಕು. ಮನೆಯಲ್ಲಿ ತುಂಬಾ ಚೆನ್ನಾಗಿ ಗಾಳಿ, ಬೆಳಕು ಬರುವ ರೂಮಿನಲ್ಲಿ ವಾಸ ಮಾಡಬೇಕು. ಆರೋಗ್ಯ ಚೇತರಿಕೆಗೆ ಬೇಕಾದ ಸೊಪ್ಪು ತರಕಾರಿ ಹೆಚ್ಚಾಗಿ ಸೇವಿಸಬೇಕು. ಹಣ್ಣು ಹಂಪಲು ಸಹ ಆರೋಗ್ಯ ವೃದ್ಧಿಗೆ ಪೂರಕ. ಆಸ್ಪತ್ರೆ ಎಂದು ಹೋಗುವುದು, ಅಲ್ಲಿನ ವ್ಯವಸ್ಥೆ ನೋಡಿ ಮತ್ತಷ್ಟು ಆರೋಗ್ಯ ಹದಗೆಡುವುದರ ಬದಲು ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಸೂಕ್ತ. ಈ ರೀತಿ ಸಾಕಷ್ಟು ಮಂದಿ ಚಿಕಿತ್ಸೆ ಪಡೆಯುವುದರಿಂದ ಈಗಾಗಲೇ ಬೇರೆ ಬೇರೆ ಕಾಯಿಲೆಗೆ ತುತ್ತಾಗಿರುವ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲು ಸಹಕಾರಿ ಆಗಲಿದೆ.
ಒಟ್ಟಾರೆ, ಸರ್ಕಾರ ವೆಂಟಿಲೇಟರ್ ಇಲ್ಲದೆ ಚಿಕಿತ್ಸೆ ನೀಡಲಾಗದೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲೀವರೆಗೂ 1147 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಕೂಡ 33,205 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲೀವರೆಗೂ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದವವರ ಸಂಖ್ಯೆಗಿಂತಲೂ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಅಧಿಕವಾಗುತ್ತಿರುವುದು ಹಾಗೂ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಆರೋಗ್ಯ ಸಚಿವ ಶ್ರೀರಾಮುಲು ಹೇಳಿರುವಂತೆ ಜನರನ್ನು ಸರ್ಕಾರ ಕಾಪಾಡಲ್ಲ, ದೇವರೇ ಕಾಪಾಡಬೇಕಿದೆ.





