ವಿಷ್ಣು ನಾಯಕನಟನಾಗಿ ಪರಿಚಯವಾದ ಸಿನಿಮಾ ‘ನಾಗರಹಾವು’ (1973). ಸಾಹಿತಿ ತರಾಸು ಅವರ ಕಾದಂಬರಿಗಳನ್ನು ಆಧರಿಸಿ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ವಿಷ್ಣು ಕಣ್ಣು, ನಿಲುವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡ ಪುಟ್ಟಣ್ಣ ಅವರಿಗೊಂದು ಆಂಗ್ರಿ ಯಂಗ್ಮ್ಯಾನ್ ಇಮೇಜು ಸೃಷ್ಟಿಸಿಕೊಟ್ಟರು. ದೊಡ್ಡ ಯಶಸ್ಸು ಕಂಡ ಸಿನಿಮಾದಿಂದಾಗಿ ವಿಷ್ಣು ಭರವಸೆಯ ಹೀರೋ ಆಗಿ ಹೊರಹೊಮ್ಮಿದರು. ವಿಜಯಭಾಸ್ಕರ್ ಸಂಗೀತ ವಿಷ್ಣುಗೆ ಸ್ಟಾರ್ ಇಮೇಜು ತಂದುಕೊಡುವಲ್ಲಿ ನೆರವಾಗಿದ್ದು ಹೌದು.
ಬೂತಯ್ಯನ ಮಗ ಅಯ್ಯು (1974): ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಣ್ಣ ಕತೆಯನ್ನು ಆಧರಿಸಿ ಸಿದ್ದಲಿಂಗಯ್ಯನವರು ನಿರ್ದೇಶಿಸಿದ ಸಿನಿಮಾ. ‘ನಾಗರ ಹಾವು’ ಚಿತ್ರದಲ್ಲಿ ಸಿಕ್ಕಿದ್ದ ಆಂಗ್ರಿ ಯಂಗ್ಮ್ಯಾನ್ ಇಮೇಜು ಇಲ್ಲಿಯೂ ಮುಂದುವರಿಯಿತು. ಚಿತ್ರದ ದೊಡ್ಡ ಯಶಸ್ಸು ವಿಷ್ಣು ಅವರನ್ನು ಜನಮಾನಸದಲ್ಲಿ ನೆಲೆಸುವಂತೆ ಮಾಡಿತು. ಜಿ.ಕೆ.ವೆಂಕಟೇಶ್ ಸಂಯೋಜನೆಯ ಹಾಡುಗಳಿಗೆ ಜನರು ತಲೆದೂಗಿದರು.
ಕಳ್ಳ ಕುಳ್ಳ (1975): ಆರಂಭದ ದೊಡ್ಡ ಯಶಸ್ಸಿನೊಂದಿಗೆ ಗುರುತಿಸಿಕೊಂಡ ವಿಷ್ಣುವರ್ಧನ್ ಹಾಸ್ಯ ಪಾತ್ರವನ್ನು ಮಾಡಬಲ್ಲರು ಎಂದು ಈ ಚಿತ್ರದಲ್ಲಿ ಸಾಬೀತಾಯಿತು. ತಮ್ಮ ಉತ್ತಮ ಟೈಮಿಂಗ್ನಿಂದಾಗಿ ಚಿತ್ರದಲ್ಲಿ ವಿಷ್ಣು ಗಮನ ಸೆಳೆದರು. ಕೆ.ಎಸ್.ಆರ್.ದಾಸ್ ಚಿತ್ರದ ನಿರ್ದೇಶಕರು. ರಾಜನ್-ನಾಗೇಂದ್ರ ಅವರ ಸಂಗೀತ ಸಂಯೋಜನೆಯಿದ್ದ ಸಿನಿಮಾದ ಯಶಸ್ಸು ವಿಷ್ಣು ವೃತ್ತಿ ಬದುಕಿಗೆ ಶುಭವಾಯ್ತು.
ಸಾಹಸಸಿಂಹ (1982): ಜೋಸೈಮನ್ ನಿರ್ದೇಶನದ ಈ ಸಿನಿಮಾ ವಿಷ್ಣು ವೃತ್ತಿಬದುಕಿಗೆ ಮಹತ್ವದ ತಿರುವಾಯ್ತು. ವಿಷ್ಣು ಅವರಿಗೆ ಆಕ್ಷನ್ ಪಾತ್ರಗಳಲ್ಲಿ ಬ್ರೇಕ್ ಕೊಟ್ಟ ಸಿನಿಮಾ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಯುವಕನಾಗಿ ವಿಷ್ಣುವರ್ಧನ್ ಯುವಪೀಳಿಗೆಯ ಫೇವರಿಟ್ಹೀರೋ ಆದರು. ಈ ಚಿತ್ರದ ಯಶಸ್ಸಿನ ನಂತರ ಅವರ ಹೆಸರಿನ ಹಿಂದೆ ‘ಸಾಹಸಸಿಂಹ’ ಸೇರಿಕೊಂಡಿತು.
ಬಂಧನ (1984):ಲೇಖಕಿ ಉಷಾ ನವರತ್ನರಾಂ ಅವರ ಕೃತಿಯನ್ನು ಅಧರಿಸಿ ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶಿಸಿದ ಸಿನಿಮಾ. ಆಕ್ಷನ್ ಸಿನಿಮಾಗಳಲ್ಲೇ ಹೆಚ್ಚಾಗಿ ಮಿಂಚುತ್ತಿದ್ದ ವಿಷ್ಣುಗೆ ಈ ಸಿನಿಮಾ ಬೇರೆಯದ್ದೇ ಇಮೇಜು ಸೃಷ್ಟಿಸಿಕೊಟ್ಟಿತು. ಉತ್ತಮ ಕತೆ, ಹಾಡು, ನಿರೂಪಣೆಯಿಂದಾಗಿ ಅತ್ಯುತ್ತಮ ಕೌಟುಂಬಿಕ ಚಿತ್ರ ಎನಿಸಿಕೊಂಡಿತು. ಎಂ ರಂಗರಾವ್ ಸಂಗೀತ ಸಂಯೋಜನೆಯ ಹಾಡುಗಳು ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಕಡ್ಡಾಯವಾಗಿ ಕೇಳಿಬರುತ್ತವೆ.
ಮಲಯ ಮಾರುತ (1986):ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ಈ ಚಿತ್ರದೊಂದಿಗೆ ಎಲ್ಲಾ ವರ್ಗದ ಪ್ರೇಕ್ಷಕರ ಫೇವರಿಟ್ ಹೀರೋ ಆಗಿದ್ದ ವಿಷ್ಣು ಮತ್ತೊಂದು ಎತ್ತರಕ್ಕೆ ಏರಿದರು. ಅತ್ಯುತ್ತಮ ಚಿತ್ರಸಾಹಿತ್ಯ ಮತ್ತು ಸಂಗೀತ ಸಂಯೋಜನೆಯ ಸಂಗೀತಮಯ ಸಿನಿಮಾ. ವಿಜಯ ಭಾಸ್ಕರ್ ಸಂಗೀತ ಸಂಯೋಜನೆಯ ಹಾಡುಗಳು ಚಿತ್ರಕ್ಕೆ ವಿಶೇಷ ಮೆರುಗು ನೀಡಿದವು. ಒಂದೊಳ್ಳೆಯ ಪ್ರೇಮಕತೆಯಾಗಿಯೂ ಇದು ಸೆಳೆಯಿತು.
ಮುತ್ತಿನ ಹಾರ (1990) :ರಾಜೇಂದ್ರಸಿಂಗ್ ಬಾಬು ನಿರ್ದೇಶನ, ಹಂಸಲೇಖ ಸಂಗೀತ ಸಂಯೋಜನೆಯ ಈ ಪ್ರಯೋಗ ವಿಷ್ಣು ವೃತ್ತಿ ಬದುಕಿನ ಮಹೋನ್ನತ ಚಿತ್ರಗಳಲ್ಲೊಂದು. ಗಡಿಯಲ್ಲಿ ದೇಶ ಕಾಯುವ ಸೈನಿಕವಾಗಿ ವಿಷ್ಣುವರ್ಧನ್ ಅವರದ್ದು ಮನೋಜ್ಞ ಅಭಿನಯ. ಮಡಿಕೇರಿ ನೇಟಿವಿಟಿಯನ್ನು ಸೊಗಸಾಗಿ ಚಿತ್ರಿಸಲಾಗಿದ್ದ ಚಿತ್ರದಲ್ಲಿ ‘ಅಚ್ಚಪ್ಪ’ನಾಗಿ ವಿಷ್ಣು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ನಿಷ್ಕರ್ಷ (1993):ಕನ್ನಡದಲ್ಲಿ ಏಕತಾನತೆಯ ಪ್ರೇಮಕತೆ, ಆಕ್ಷನ್ ಸಿನಿಮಾಗಳೇ ಬರುತ್ತಿದ್ದ ದಿನಗಳಲ್ಲಿ ಸಂಚಲನ ಸೃಷ್ಟಿಸಿದ ಸಿನಿಮಾ ‘ನಿಷ್ಕರ್ಷ’. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು ವಿಷ್ಣು ಸ್ಟೈಲಿಷ್ ಇಮೇಜನ್ನು ಸಮರ್ಥವಾಗಿ ಬಳಸಿಕೊಂಡರು. ಪೊಲೀಸ್ಅಧಿಕಾರಿಯಾಗಿ ವಿಷ್ಣುವರ್ಧನ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಉತ್ತಮ ಹಿನ್ನೆಲೆ ಸಂಗೀತ, ಆರ್ಷಕ ನಿರೂಪಣೆಯೊಂದಿಗೆ ಸಿನಿಮಾ ವಿಷ್ಣು ವೃತ್ತಿಬದುಕಿನ ಮತ್ತೊಂದು ಯಶಸ್ವೀ ಪ್ರಯೋಗ ಎನಿಸಿಕೊಂಡಿತು.
ಹಾಲುಂಡ ತವರು (1994) :ಡಿ.ರಾಜೇಂದ್ರ ಬಾಬು ನಿರ್ದೇಶನದ ಸಿನಿಮಾ ಅತ್ಯುತ್ತಮ ಕೌಟುಂಬಿಕ, ಸದಭಿರುಚಿಯ ಚಿತ್ರವಾಗಿ ದೊಡ್ಡ ಯಶಸ್ಸು ಕಂಡಿತು. ಹೃದಯವಂತ, ದಯಾಮಯಿ, ತ್ಯಾಗಜೀವಿ ಪಾತ್ರದಲ್ಲಿ ತೆರೆಯ ಮೇಲೆ ವಿಷ್ಣು ಕಾಣಿಸಿದ್ದರು. ಉತ್ತಮ ಕತೆ, ಹಂಸಲೇಖ ಅವರ ಸಾಹಿತ್ಯ, ಸಂಗೀತವೂ ಜೊತೆಯಾಗಿ ಚಿತ್ರ ಸೂಪರ್ಹಿಟ್ ಎನಿಸಿಕೊಂಡಿತು.
ಆಪ್ತಮಿತ್ರ (2004) :ಪಿ.ವಾಸು ನಿರ್ದೇಶನದ ‘ಆಪ್ತಮಿತ್ರ’ ಉತ್ತಮ ಸೈಕಾಲಾಜಿಕಲ್ ಥ್ರಿಲ್ಲರ್ ಪ್ರಯೋಗವಾಗಿ ಎಲ್ಲರಿಗೂ ಇಷ್ಟವಾಯ್ತು. ಮನಃಶಾಸ್ತ್ರಜ್ಞನ ಪಾತ್ರದಲ್ಲಿ ನಟಿಸಿದ್ದ ವಿಷ್ಣು ಇಮೇಜ್ಗೆ ಚಿತ್ರದ ಪಾತ್ರ ಸೂಕ್ತವಾಗಿ ಹೊಂದಿಕೆಯಾಗಿತ್ತು. ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ಬಸ್ಟರ್ ಎನಿಸಿಕೊಂಡ ಚಿತ್ರದಲ್ಲಿನ ವಿಷ್ಣು ಪಾತ್ರ ಇತರೆ ಭಾಷೆಗಳ ಹೀರೋಗಳಿಗೆ ಸ್ಪೂರ್ತಿಯಾಯ್ತು. ಮುಂದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ‘ಆಪ್ತಮಿತ್ರ’ ರೀಮೇಕಾಯ್ತು. ಇದರ ಮುಂದುವರೆದ ಅವತರಣಿಕೆಯಾಗಿ ‘ಆಪ್ತರಕ್ಷಕ’ ಕೂಡ ವಿಷ್ಣುರ್ಧನ್ ವೃತ್ತಿಬದುಕಿನಲ್ಲಿ ಮತ್ತೊಂದು ದೊಡ್ಡ ಯಶಸ್ಸು ತಂದುಕೊಟ್ಟಿತು.