ಎತ್ತರದ ಬೆಟ್ಟಗಳಲಿ ಮರ ಹುಟ್ಟುವುದಿಲ್ಲ,
ಗಿಡಗಳೂ ಇರುವುದಿಲ್ಲ, ಹುಲ್ಲೂ ಬೆಳೆಯುವುದಿಲ್ಲ.
ಎಷ್ಟೆಷ್ಟು ಎತ್ತರವಿರುವನೋ, ಅಷ್ಟಷ್ಟು ಒಬ್ಬಂಟಿಯಾಗಿರುತ್ತಾನೆ,
ಎಲ್ಲ ಭಾರ ಒಬ್ಬನೇ ಹೊತ್ತಿರುತ್ತಾನೆ, ವಸಂತವೂ ಇಲ್ಲ, ಶಿಶಿರವೂ ಇಲ್ಲ
ಎತ್ತರದ ಬರೀ ಬಿರುಗಾಳಿ ಮಾತ್ರ ಓ ನನ್ನ ಪ್ರಭುವೆ…
ಕೊಡಬೇಡ ನನಗಿಂತಹ ಎತ್ತರ ಅನ್ಯರನು ಆಲಂಗಿಸಲಾಗದು
-ಅಟಲ್ ಬಿಹಾರಿ ವಾಜಪೇಯಿ
ಉದಾರ ವಿಶ್ವ ದೃಷ್ಟಿಕೋನ ಮತ್ತು ಪ್ರಜಾಸತ್ತಾತ್ಮಕ ಆಲೋಚನೆಗಳಿಗೆ ಬೆಲೆ ಕೊಡುವ ಧೀಮಂತ ನಾಯಕ, ಶ್ರೇಷ್ಠ ಕವಿಯೆಂದೇ ಹೆಸರಾಗಿದ್ದ ಆಟಲ್ ಬಿಹಾರಿ ವಾಜಪೇಯಿ ಅವರನ್ನು ಜನರು ಎಂದೆದಿಗೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ರಾಷ್ಟ್ರ ರಾಜಕೀಯ ರಂಗದಲ್ಲಿ ಅಜಾತಶತ್ರು, ಚಾಣಾಕ್ಷ ರಾಜಕಾರಣಿ ಎಂದೇ ಪ್ರಖ್ಯಾತರಾಗಿದ್ದವರು. ತಮ್ಮ ಅಸಾಮಾನ್ಯ ವಾಕ್ ಚಾತುರ್ಯದಿಂದ, ತಮ್ಮ ಅಧಿಕಾರಾವಧಿಯಲ್ಲಿ ಕೈಗೊಂಡ ದಿಟ್ಟ ಮತ್ತು ದೂರದೃಷ್ಟಿಯ ಕ್ರಮಗಳಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದವರು. ಒಂದು ಸಂದರ್ಶನದಲ್ಲಿ ವಾಜಪೇಯಿ ಅವರೇ ಹೇಳಿದಂತೆ “ನನಗೆ ಪತ್ರಕರ್ತನಾಗಬೇಕೆಂಬ ಆಸೆಯಿತ್ತು. ಆದರೆ ಆಗಿದ್ದು ಮಾತ್ರ ರಾಜಕಾರಣಿ” ಎಂದಿದ್ದರು.
ಡಿಸೆಂಬರ್ 25, 1924ರಂದು ಮಧ್ಯಪ್ರದೇಶದ ಗ್ವಾಲಿಯರ್‌ನ ಶಿಂದೆ ಕಿ ಚವ್ವಾಣಿ ಎಂಬ ಗ್ರಾಮದ ಆದರ್ಶ ಶಿಕ್ಷಕರ ಕುಟುಂಬದಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನಿಸಿದರು. ಇವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ, ತಾಯಿ ಕೃಷ್ಣಾ ದೇವಿ. ವಾಜಪೇಯಿ ಅವರ ಪೋಷಕರು ಬ್ರಿಟಿಷ್ ವಸಾಹತುಶಾಹಿ ಆಡಳಿತವನ್ನು ವಿರೋಧಿಸಿ ಸ್ವಲ್ಪಕಾಲ ಜೈಲು ವಾಸ ಕೂಡ ಅನುಭವಿಸಿದ್ದರು. ಗ್ವಾಲಿಯರ್‌ನಲ್ಲೇ ವಿದ್ಯಾಭ್ಯಾಸ ಮುಗಿಸಿದ ವಾಜಪೇಯಿ ಹಿಂದಿ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪರಿಣಿತಿ ಪಡೆದಿದ್ದರು. ನಂತರ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ತನ್ನ ತಂದೆಯ ಜೊತೆಗೆ ಒಂದೇ ತರಗತಿಯಲ್ಲಿ ಒಂದೇ ಹಾಸ್ಟೆಲ್‌ನಲ್ಲಿ ಉಳಿದುಕೊಂಡು, ಅಭ್ಯಾಸ ಮಾಡಿ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು.
50ರ ದಶಕದಲ್ಲಿ ಆರ್‌ಎಸ್‌ಎಸ್ ನಿಯತಕಾಲಿಕವೊಂದನ್ನು ನಡೆಸುವ ಉದ್ದೇಶದಿಂದ ಕಾನೂನು ವ್ಯಾಸಂಗವನ್ನೇ ಕೈಬಿಟ್ಟರು. ವಾಜಪೇಯಿ ಅವರು ಭಾರತೀಯ ಜನ ಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಆಪ್ತ ಅನುಯಾಯಿಯಾಗಿದ್ದವರು. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್ ಮತ್ತು ವೀರ್ ಅರ್ಜುನ್ ಪತ್ರಿಕೆಗಳಲ್ಲೂ ವಾಜಪೇಯಿ ಕೆಲಸ ಮಾಡಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಕಾಲ ಬಂಧನಕ್ಕೊಳಗಾಗಿದ್ದ ವಾಜಪೇಯಿ ಅವರ ರಾಜಕೀಯ ಬದುಕಿನ ಆರಂಭವಾಗಿದ್ದು ಆಗಲೇ.
1951ರಲ್ಲಿ ಭಾರತೀಯ ಜನಸಂಘದ ನಾಯಕರಾಗಿದ್ದಂತಹ ಶಾಮ್ ಪ್ರಸಾದ್ ಮುಖರ್ಜಿ ಮತ್ತು ದೀನ ದಯಾಳ್ ಉಪಾಧ್ಯಾಯ ಅವರ ಒಡನಾಟ ಬೆಳಸಿ, ಜನಸಂಘ ಪಕ್ಷಕ್ಕೆ ಸಕ್ರಿಯವಾಗಿ ತಮ್ಮ ಸೇವೆಯನ್ನು ಸಲ್ಲಿಸಲು ಮುಂದಾದರು. 1957ರಲ್ಲಿ ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನುಂಡರೂ, ಬಲರಾಮ್ಪುರ ಕ್ಷೇತ್ರದಿಂದ ಗೆದ್ದ ವಾಜಪೇಯಿ ಅವರ ಮಾತಿನ ಶೈಲಿಗೆ ಸ್ವತಃ ಜವಾಹರ್ ಲಾಲ್ ನೆಹರೂ ಧಿಗ್ಬ್ರಾಂತರಾದರು. “ಮುಂದೊಂದು ದಿನ ವಾಜಪೇಯಿ ಭಾರತದ ಪ್ರಧಾನಿಯಾಗುತ್ತಾರೆ: ಎಂದು ಸ್ವತಃ ನೆಹರೂ ಭವಿಷ್ಯ ನುಡಿದಿದ್ದರು.
ವಾಜಪೇಯಿ ಅವರು 1975ರಿಂದ 1977ರ ವರೆಗೆ ತುರ್ತು ಪರಿಸ್ಥಿತಿ ಸಮಯದಲ್ಲಿ ಸಾಕಷ್ಟು ಬಾರಿ ಜೈಲಿಗೂ ತೆರಳಿದ್ದರು. ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು. ನಂತರ 1977ರ ಚುನಾವಣೆಯಲ್ಲಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು. 1980ರಲ್ಲಿ ತಮ್ಮ ಬಹುಕಾಲದ ಸ್ನೇಹಿತರಾದ ಎಲ್ ಕೆ ಅಡ್ವಾಣಿ, ಭೈರಾನ್ ಸಿಂಗ್ ಶೆಖಾವತ್ ಸೇರಿದಂತೆ ಜನಸಂಘ ಮತ್ತು ಆರ್‌ಎಸ್‌ಎಸ್‌ನ ಹಲವು ಸಹೋದ್ಯೋಗಿಗಳನ್ನೂ ಹಾಗೂ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿದರು. ಇದರಿಂದಾಗಿ ʼಭಾರತೀಯ ಜನತಾ ಪಕ್ಷʼ (ಬಿಜೆಪಿ) ಸ್ಥಾಪನೆಯಾಯಿತು. ಅಲ್ಲದೆ, ವಾಜಪೇಯಿ ಅವರು ಪಕ್ಷದ ಮೊದಲ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು. ತಮ್ಮ ಅತ್ಯುತ್ತಮ ಮಾತುಗಾರಿಕೆ, ಸರಳತೆಯಿಂದ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದರು. 1995ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿತು. ಈ ಗೆಲುವಿಗೆ ವಾಜಪೇಯಿ ಅವರು ಸಾಕಷ್ಟು ಶ್ರಮಿಸಿದ್ದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯಾದಾಗ ವಾಜಪೇಯಿ ಕುಸಿದುಹೋಗಿದ್ದರು. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಹಲವು ನಿಮಿಷಗಳ ಕಾಲ ಭಾವುಕರಾಗಿ ಕುಳಿತಲ್ಲೇ ಕುಳಿತಿದ್ದರು. ನಂತರ ಅವರು ಹೇಳಿದಿಷ್ಟೆ, “ಸರಿಪಡಿಸಲಾಗದ ಹಾನಿ” ಎಂದು ಹೇಳಿ ದುಖಃಪಟ್ಟಿದ್ದರು.
ಇವರ ಕಾರ್ಯವೈಖರಿಗೆ ಬಂದ ಪ್ರಶಸ್ತಿಗಳು ಹಲವು. 1992ರಲ್ಲಿ ಪದ್ಮವಿಭೂಷಣ ಪ್ರಶಸ್ತಿ, 1993ರಲ್ಲಿ ಕಾನ್ಪುರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, 1994ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಸಂದೀಯಪಟು ಪ್ರಶಸ್ತಿಗಳು ವಾಜಪೇಯಿ ಅವರ ಮಡಿಲಿಗೆ ಸೇರಿವೆ. ರಾಜಕೀಯದಲ್ಲಿ ಸಕ್ರಿಯವಾಗಿದ್ದರಿಂದ, ಜನತೆಯ ಅಗಾದ ಬೆಂಬಲವಿದ್ದರಿಂದ 1995ರ ಮುಂಬೈಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಎಲ್ ಕೆ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರು.
1996ರಲ್ಲಿ ಪ್ರಥಮ ಬಾರಿಗೆ ಪ್ರಧಾನಮಂತ್ರಿಯಾದರು. ಆದರೆ ಬಹುಮತದ ಕೊರತೆಯಿಂದ ಕೇವಲ 13 ದಿನಗಳಲ್ಲಿ ಅಧಿಕಾರ ಕಳೆದುಕೊಂಡರು. 1998ರಲ್ಲಿ ಎರಡನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದರು. ಆದರೆ ಎಐಎಡಿಎಂಕೆ ನಾಯಕಿ ಜಯಲಲಿತಾ ಬೆಂಬಲ ವಾಪಸ್ ಪಡೆದ ಕಾರಣ 13 ತಿಂಗಳುಗಳಿಗೆ ಅಧಿಕಾರ ಕಳೆದುಕೊಳ್ಳಬೇಕಾಯಿತು. 1999ರಲ್ಲಿ 303 ಸೀಟುಗಳು ಗೆಲ್ಲುವ ಮೂಲಕ ಐದು ವರ್ಷಗಳ ಕಾಲ ಪ್ರಧಾನಿಯಾಗಿ ಎನ್‌ಡಿಎ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಇದೇ ವರ್ಷದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಉತ್ತೇಜಿಸಿ, ಗೆಲ್ಲುವಂತೆ ಮಾಡಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲಬೇಕು.
ಅಟಲ್ ಬಿಹಾರಿ ವಾಜಪೇಯಿ ಅವರು ಒಬ್ಬ ವ್ಯಕ್ತಿಯಲ್ಲ ಅಥವಾ ರಾಜಕಾರಣಿ ಮಾತ್ರ ಆಗಿರಲಿಲ್ಲ. ಅವರೊಂದು ಶಕ್ತಿ, ಬಹುಮುಖಿ, ಅಜಾತಶತ್ರು ಹಾಗೂ ದೇಶ ಕಂಡ ಒಂದು ದಂತಕತೆ. ಇವರನ್ನು ಯಾವರೀತಿ ವರ್ಣಿಸಬೇಕು ಅಥವಾ ವರ್ಣಿಸಲು ಮುಂದಾದರೆ ಪದಗಳೇ ಸಾಲದು. ಏಕೆಂದರೆ, ವಾಜಪೇಯಿ ಅವರು ವಿಶಿಷ್ಟ ರಾಜಕಾರಣಿ ಹೌದು. ಅದರ ಹೊರತಾಗಿ ಮಹಾ ಮಾನವತಾವಾದಿ, ಕವಿ, ಪತ್ರಕರ್ತ, ವಾಗ್ಮಿ, ಸರಳ-ಸ್ನೇಹಮಯಿ. ಮಾತಿಗೆ ನಿಂತರೆ ಅವರೊಲ್ಲಬ್ಬ ಕವಿ, ಸಂತ, ತತ್ವಜ್ಞಾನಿ, ಮಾರ್ಗದರ್ಶಕ ಜಾಗೃತನಾಗುತ್ತಿದ್ದ.
ಜನಸಂಘದ ಸ್ಥಾಪಕ ಸದಸ್ಯರಾಗಿ, ನಂತರ ಭಾರತೀಯ ಜನತಾಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರಾಗಿ, ಪ್ರಧಾನಿಯಾಗಿದ್ದ ಅವರು ಕಾಂಗ್ರೆಸ್‌ಗೆ ಸಮರ್ಥ ಪ್ರತಿಪಕ್ಷವನ್ನು ಕಟ್ಟಿಬೆಳೆಸಲು ತಪಸ್ಸಿನಂತೆ ದುಡಿದರು. ಹಾಗೆಂದು ಅವರೆಂದೂ ಉಗ್ರ ಹಿಂದುತ್ವವಾದಿಯಾಗಿರಲಿಲ್ಲ. ಬದಲಾಗಿ ಸೌಮ್ಯವಾದಿ, ಉದಾರವಾದಿ, ಸುಧಾರಣಾವಾದಿ ಎನಿಸಿದ್ದರು. ಈ ಕಾರಣಕ್ಕಾಗಿಯೇ ಎಲ್ಲ ಪಕ್ಷಗಳಲ್ಲೂ ಒಪ್ಪಿತರಾಗಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಜತೆ ಶಾಂತಿ, ಸೌಹಾರ್ದ ಬೆಸೆಯಲು ಸಾಕಷ್ಟು ಪ್ರಯತ್ನಿಸಿದರು. ”ಸ್ನೇಹಿತರನ್ನು ಬದಲಾಯಿಸಬಹುದೇ ಹೊರತು ನೆರೆಹೊರೆಯವರನ್ನಲ್ಲ”, ಎಂದು ಹೇಳುತ್ತಿದ್ದ ಮಾತು ಪಾಕಿಸ್ತಾನ ಕುರಿತು ಅವರು ಹೊಂದಿದ್ದ ವಾಸ್ತವಿಕ ನಿಲುವಿನ ಪ್ರತೀಕವಾಗಿತ್ತು. ಈ ಕಾರಣಕ್ಕಾಗಿ 1999 ರಲ್ಲಿ ದೆಹಲಿ- ಲಾಹೋರ್ ಬಸ್ ಸಂಚಾರ ಸೇರಿ ಹಲವು ಉಪಕ್ರಮಗಳ ಮೂಲಕ ಆ ದೇಶದೊಡನೆ ಸಂಬಂಧ ಸುಧಾರಣೆಗೆ ಸಾಕಷ್ಟು ಪ್ರಯತ್ನಿಸಿದರು. ಭಾರತ ಕ್ರಿಕೆಟ್ ತಂಡವು ಪಾಕ್ ಪ್ರವಾಸಕ್ಕೆ ಹೊರಟು ನಿಂತಾಗ, ”ಪಂದ್ಯದ ಜತೆಗೆ ಆ ದೇಶದ ಜನರ ಹೃದಯವನ್ನೂ ಗೆದ್ದು ಬನ್ನಿ,” ಎಂದು ಹೇಳಿದ್ದು ಅವರ ಉದಾರ ಹಾಗೂ ಉದಾತ್ತ ವಿಚಾರಕ್ಕೆ ಸಾಕ್ಷಿ.