ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಅಥವಾ ವಿಟೋ ಪವರ್ ಇರುವ ಐದು ದೇಶಗಳಲ್ಲಿ ಒಂದಾಗುವ ಅವಕಾಶ ಅಮೇರಿಕಾ ಕೊಟ್ಟಿತ್ತು. ನೆಹರೂರವರು ಅದನ್ನು ತಿರಸ್ಕರಿಸಿ ಆ ಅವಕಾಶವನ್ನು ಚೀನಾಕ್ಕೆ ಕೊಟ್ಟರು ಎನ್ನುವ ಸುಳ್ಳನ್ನು ಎಷ್ಟೊಂದು ವ್ಯವಸ್ಥಿತವಾಗಿ ಹರಿಯಬಿಟ್ಟಿದ್ದರೆಂದರೆ, ಸೋ ಕಾಲ್ಡ್ ಪ್ರಗತಿಪರರೂ ಇದೇ ಸರಿಯಿರಬೇಕು ಎಂದು ನಂಬುತ್ತಾರೆ. ಚರಿತ್ರೆ, ವಾಸ್ತವ ಹಾಗೂ ಫ್ಯಾಕ್ಟ್ ಎಲ್ಲರಿಗೂ ಗೊತ್ತಿರಲೇಬೇಕೆಂದಿಲ್ಲ. ಅದರೆ ಗೊತ್ತಿರದ ವಿಷಯಗಳನ್ನು ಓದಿ, ಸಂಶೋಧಿಸಿ, ಅಧ್ಯಯನ ಮಾಡಿ ತಿಳಿಯಬಹುದು. ಆದರೆ ಅದು ಸ್ವಲ್ಪ ಕಷ್ಟದ ಕೆಲಸ.
ಇಂಥದೊಂದು ಸುಳ್ಳನ್ನು ಹೇಳುತ್ತಿರುವವರಿಗೆ ವಿಶ್ವಸಂಸ್ಥೆಯ ಉದಯ, ಭದ್ರತಾ ಮಂಡಳಿಯ ಉದಯದ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲವೆನ್ನುವುದು ಸತ್ಯ. 1945ರಲ್ಲಿ ವಿಶ್ವಸಂಸ್ಥೆ ಸ್ಥಾಪನೆಯಾದಾಗಿನಿಂದ ಚೀನಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರ. ಅಷ್ಟೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯನೂ ಸಿಕ್ಕಿರಲಿಲ್ಲ. ವಿಶ್ವಸಂಸ್ಥೆ ಸ್ಥಾಪನೆಯಾಗಿದ್ದೇ ಎರಡನೇ ವಿಶ್ವಯುದ್ದದ ತರುವಾಯ. ಇಂಥ ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಒಂದು ಜಾಗತಿಕ ಸಂಸ್ಥೆಯಿರಬೇಕೆಂದು ಯುದ್ದದ ಮಧ್ಯದಲ್ಲೇ ಸಂಗಾತಿಗಳಾಗಿದ್ದ ಅಮೇರಿಕಾ, ಬ್ರಿಟನ್, ಸೋವಿಯತ್ ಒಕ್ಕೂಟ ಹಾಗೂ ಚೀನಾದ ಉದ್ದೇಶವಾಗಿತ್ತು.
‘ವಿಶ್ವಸಂಸ್ಥೆ’ ಅಥವಾ United Nations ಎಂಬ ಶಬ್ದವನ್ನು ಮೊಟ್ಟಮೊದಲು ಉಪಯೋಗಿಸಿದ್ದು ಅಮೇರಿಕಾದ ಅಧ್ಯಕ್ಷರಾಗಿದ್ದ ರೂಸ್‍ವೆಲ್ಟ್. ಈ ನಿಟ್ಟಿನಲ್ಲಿ ಪ್ರಥಮ ಪ್ರಯತ್ನ ನಡೆದದ್ದು 1942ರಲ್ಲಿ. ಜನವರಿ 1, 1942ರಂದು ಅಮೇರಿಕಾದ ಅಧ್ಯಕ್ಷ ರೂಸ್‍ವೆಲ್ಟ್, ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಸೋವಿಯತ್ ಒಕ್ಕೂಟದ ಮಾಕ್ಸಿಮ್ ಲಿಟಿನೋವ್ ಹಾಗೂ ಚೀನಾದ ಟಿ ವಿ ಸೂಂಗ್ ಒಂದು ಸಣ್ಣ ಕಡತಕ್ಕೆ ಸಹಿ ಹಾಕುತ್ತಾರೆ. ಆ ಕಡತವೇ ಮುಂದೆ United Nations Declaration ಎಂದು ಕರೆಯಲ್ಪಡುತ್ತದೆ. ಇದಾದ ಮರುದಿನವೇ ಇನ್ನೊಂದು ಇಪ್ಪತ್ತೆರಡು ದೇಶಗಳೂ ಈ ಕಡತಕ್ಕೆ ಸಹಿ ಹಾಕುತ್ತವೆ. ಇದಾಗಿ ಮೂರು ವರುಷಗಳೊಳಗೆ ಅಂದರೆ ಮಾರ್ಚ್ 1945 ತಿಂಗಳ ಮೊದಲ ವಾರದೊಳಗೆ ಇನ್ನೂ 21 ದೇಶಗಳು ಈ ಕಡತಕ್ಕ ಸಹಿ ಹಾಕುತ್ತವೆ.
ಒಂದು ರೀತಿಯಲ್ಲಿ ವಿಶ್ವಸಂಸ್ಥೆಯ ಹುಟ್ಟಿಗೆ ಕಾರಣರಾದ ನಾಲ್ಕು ದೊಡ್ಡ ಹಾಗೂ ಬಲಶಾಲಿ ದೇಶಗಳಾದ ಅಮೇರಿಕಾ, ಇಂಗ್ಲೆಂಡ್, ಸೋವಿಯತ್ ಒಕ್ಕೂಟ ಹಾಗೂ ಚೀನಾವನ್ನು Four Policemen ಎಂದು ಕರೆಯಲಾಗುತ್ತೆ. ಈ Four Policemen ಗಳೇ ಮುಂದೆ ಹೋಗಿ ವಿಶ್ವಸಂಸ್ಥೆಯ ಅತ್ಯಂತ ಬಲಶಾಲಿ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗುತ್ತಾರೆ. 1944ರ ಆಗಸ್ಟ್ ಹಾಗೂ ಅಕ್ಟೋಬರ್ ತಿಂಗಳ ನಡುವೆ ಈ ‘ನಾಲ್ಕು ಪೋಲೀಸರು’ ವಾಷಿಂಗ್ಟನ್‍ನಲ್ಲಿ Dumbarton Oaks Conference ಅಥವಾ ವಿಶ್ವ ಶಾಂತಿ ಹಾಗೂ ರಕ್ಷಣೆ ಸಂಸ್ಥೆಯ ಸಭೆಯನ್ನು ನಡೆಸಿ ವಿಶ್ವಸಂಸ್ಥೆಯ ರಚನೆ, ಸದಸ್ಯರು, ಆದರ ಉದ್ದೇಶ ಹಾಗೂ ಪಾತ್ರದ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಸಭೆಯಲ್ಲೇ ಭದ್ರತಾ ಮಂಡಳಿಯ ರಚನೆಯ ಆಲೋಚನೆಯೂ ಬಂದು ಈ ನಾಲ್ಕು ದೇಶಗಳೊಟ್ಟಿಗೆ ಫ್ರಾನ್ಸ್ ನ್ನು ಕೂಡಾ ಖಾಯಂ ಸದಸ್ಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗುತ್ತೆ. ಅಲ್ಲಿಗೆ ಭದ್ರತಾ ಮಂಡಳಿಯ ಐದು ಖಾಯಂ ದೇಶಗಳ ಉದಯವಾಗುತ್ತೆ.
ಅಮೇರಿಕಾ ಈ ಮಂಡಳಿಗೆ ಬ್ರೆಜಿಲನ್ನೂ ಕೂಡಾ ಸೇರಿಸಲು ಉತ್ಸುಕವಾಗಿದ್ದರೂ ಬ್ರಿಟನ್ ಹಾಗೂ ಸೋವಿಯತ್ ಒಕ್ಕೂಟ ಅದನ್ನು ಒಪ್ಪುವುದಿಲ್ಲ. ಇದೇ ಸಭೆಯಲ್ಲಿ ಸದಸ್ಯ ದೇಶಗಳ ವಿಟೋ ಪವರ್ ಬಗ್ಗೆನೂ ಚರ್ಚೆ ನಡೆಯುತ್ತೆ. ಸೋವಿಯತ್ ಒಕ್ಕೂಟ ಭದ್ರತಾ ಮಂಡಳಿಯ ಎಲ್ಲಾ ಸದಸ್ಯರಿಗೂ ವಿಟೋ ಪವರ್ ಇರಬೇಕೆಂದು ವಾದಿಸಿದರೆ, ಬ್ರಿಟನ್ ವಿಟೋ ಪವರ್ ಇರಲೇಬಾರದೆಂದು ವಾದಿಸುತ್ತೆ. ಕೊನೆಗೆ 1945ರ ಫೆಬ್ರವರಿಯಲ್ಲಿ ನಡೆದ ಕ್ರೈಮೀಯಾ ಸಭೆಯಲ್ಲಿ ಅಮೇರಿಕಾ, ಸೋವಿಯತ್ ಒಕ್ಕೂಟ ಹಾಗೂ ಬ್ರಿಟನ್ ಭದ್ರತಾ ಮಂಡಳಿಯ ಐದು ಖಾಯಂ ದೇಶಗಳಿಗೆ ಮಾತ್ರ ವಿಟೋ ಪವರ್ ಕೊಡಲು ನಿರ್ಧರಿಸುತ್ತವೆ.
ಆ ವೇಳೆಯಲ್ಲಿ ಜರ್ಮನಿ ಹಾಗೂ ಜಪಾನ್ ಕೂಡಾ ವಿಶ್ವದ ಬಲಶಾಲಿ ದೇಶಗಳಾಗಿದ್ದವು. ಆದರೆ ಅವು ವಿಶ್ವಯುದ್ದದಲ್ಲಿ ಈ ಬಿಗ್-5ನ ವಿರೋಧ ಪಾಳಯದಲ್ಲಿದ್ದುರಿಂದ ಅವರನ್ನು ವಿಶ್ವಸಂಸ್ಥೆ/ ಭದ್ರತಾ ಮಂಡಳಿಯಿಂದ ದೂರವೇ ಇಡಲಾಗಿತ್ತು. 1945ರ ಎಪ್ರಿಲ್‍ನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ 50 ದೇಶಗಳ ಹಾಗೂ ಅನೇಕ ಸರಕಾರಿಯೇತರ ಸಂಘ-ಸಂಸ್ಥೆಗಳು ಜತೆಗೂಡಿ United Nations Charterನ್ನು ತಯಾರಿಸುತ್ತವೆ. ಈ United Nations Charter ಪ್ರಕಾರ ಅಮೇರಿಕಾ, ಬ್ರಿಟನ್, ಸೋವಿಯತ್ ಒಕ್ಕೂಟ, ಚೀನಾ ಹಾಗೂ ಫ್ರಾನ್ಸ್ ವಿಶ್ವಸಂಸ್ಥೆಯ ಐದು ಖಾಯಂ ದೇಶಗಳು. ಇಷ್ಟೆಲ್ಲಾ ತಯಾರಿ ನಡೆದು ಅಕ್ಟೋಬರ್ 24, 1945ರಂದು ಅಧಿಕೃತವಾಗಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬರುತ್ತೆ. ನೆನಪಿರಲಿ ಈ ಸಮಯದಲ್ಲಿ ಚೀನಾ ಅದಾಗಲೇ ಭದ್ರತಾ ಮಂಡಳಿಯ ಖಾಯಂ ಸದಸ್ಯ, ಅಮೇರಿಕಾದ ಸಂಗಾತಿ ಹಾಗೂ ಭಾರತ ಇನ್ನೂ ಬ್ರಿಟೀಷರ ವಸಾಹತು. ಆ ಹೊತ್ತಿಗೆ ಚೀನಾದಲ್ಲಿ ಕಮ್ಯೂನಿಸ್ಟ್ ಆಡಳಿತ ಇನ್ನೂ ಬಂದಿರಲಿಲ್ಲ. ಚೀನಾ ಅಧಿಕೃತವಾಗಿ ರಿಪಬ್ಲಿಕ್ ಆಫ್ ಚೈನಾ ಆಗಿತ್ತು. ಮುಂದೆ 1949ರ ಹೊತ್ತಿಗೆ ಚೀನಾದಲ್ಲಿ ರಾಜಕೀಯ ಪಲ್ಲಟ ನಡೆದು ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದು ಚೀನಾ ಪ್ಯೂಪಲ್ಸ್ ರಿಪಬ್ಲಿಕ್ ಆಫ್ ಚೈನಾ ಆಗುತ್ತದೆ.
ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದಾಗಿನಿಂದ ಭದ್ರತಾ ಮಂಡಳಿಯ ಸದಸ್ಯತ್ವದಲ್ಲಿ ಎರಡು ಬಾರಿ ಬದಲಾವಣೆಯಾಗಿದೆ. ಆದರೆ ಇದು United Nations Charterನ ಪರಿಚ್ಚೇದ 23ರಲ್ಲಿ ನಮೂದಾಗಿಲ್ಲ ಯಾಕೆಂದರೆ ಈ ಪರಿಚ್ಚೇದದ ಬದಲಾವಣೆ ಅಥವಾ ತಿದ್ದುಪಡಿ ಇದುವರೆಗೂ ಆಗಿಲ್ಲ. ಮೊದಲೆನೆಯದಾಗಿ ಭದ್ರತಾ ಮಂಡಳಿಯ ಖಾಯಂ ಸದಸ್ಯ ದೇಶವಾಗಿದ್ದ Republic of China 1949 ಪತನವಾಗಿ ಅಲ್ಲಿ ಕಮ್ಯೂನಿಸ್ಟರು ಅಧಿಕಾರಕ್ಕೆ ಬಂದು ಅದು People’s Republic of China ವಾದಾಗಿನಿಂದ ಚೀನಾವನ್ನು ಕೆಲಕಾಲ ವಿಶ್ವಸಂಸ್ಥೆಯಿಂದ ಅಮೇರಿಕಾ ದೂರವಿಟ್ಟಿತ್ತು. ಆದರೆ 1971ರಲ್ಲಿ Republic of China ದ ಬಳಿಯಿದ್ದ ಖಾಯಂ ಸದಸ್ಯ ರಾಷ್ಟ್ರ ಪದವಿಯನ್ನು People’s Republic of China ಕೊಡಲಾಯಿತು. ಮುಂದೆ 1991ರಲ್ಲಿ ಸೋವಿಯತ್ ಒಕ್ಕೂಟ ಪತನವಾದನಂತ, ಸೋವಿಯತ್ ಒಕ್ಕೂಟದ ಬದಲಿಗೆ ಖಾಯಂ ಸದಸ್ಯ ರಾಷ್ಟ ಸ್ಥಾನವನ್ನು ರಷ್ಯಾ ತುಂಬಿಸಿತು. ಈ ಎರಡೂ ದೇಶಗಳು ಮೂಲತ: ಭದ್ರತಾ ಮಂಡಳಿಯ ಖಾಯಂ ಸದಸ್ಯರೇ. ಆದರೆ ಅವುಗಳ ರಾಜಕೀಯ ಸ್ಥಿತ್ಯಂತರ ಹಾಗೂ ದೇಶಗಳಲ್ಲಿನ ಬದಲಾವಣೆ ನಂತರ ಅವರ ಹಿಂದಿನ ಹೆಸರನ್ನು ತೆಗೆದು, ಹೊಸ ಹೆಸರನ್ನು ಸೇರಿಸಿದಷ್ಟೇ.
ಇನ್ನು ಭಾರತಕ್ಕೆ ಖಾಯಂ ದೇಶವಾಗಿ ಸದಸ್ಯತ್ವ ಸಿಗಬೇಕಾದರೆ United Nations Charterನ ತಿದ್ದುಪಡಿ ಆಗಬೇಕು. ಅದು ಇದುವರೆಗೂ ಆಗಲಿಲ್ಲ. 1950ರ ಹೊತ್ತಿಗೆ ಅಮೇರಿಕಾ, ಸೋವಿಯತ್ ಒಕ್ಕೂಟ ಮೆಲ್ಲ-ಮೆಲ್ಲನೆ ದೂರ ಸರಿದು ಶೀತ ಸಮರಕ್ಕೆ ನಾಂದಿ ಬೀಳುತ್ತೆ. ಅಷ್ಟೊತ್ತಿಗೆ ಚೀನಾದಲ್ಲೂ ಕಮ್ಯೂನಿಸ್ಟರು ಅಧಿಕಾರಕ್ಕೆ ಬರುತ್ತಾರೆ. ಇನ್ನೊಂದೆಡೆ ಕೊರಿಯಾ ಯುದ್ದ ಆರಂಭವಾಗುತ್ತೆ. ಇನ್ನು ಅಮೇರಿಕಾ 1952ರ ತನಕ ಜಪಾನ್ ದೇಶದಲ್ಲಿ ಠಿಕಾಣಿ ಹೂಡಿ ಕೂತಿತ್ತು. ಚೀನಾ ಹಾಗೂ ಸೋವಿಯತ್ ಒಕ್ಕೂಟ ತನ್ನಿಂದ ದೂರವಾಗಿ, ಸೂಪರ್ ಪವರ್ ಗಳಾಗಿ ಬೆಳೆಯುವುದನ್ನು ಕಂಡ ಅಮೇರಿಕಾ, ಚೀನಾವನ್ನು ಹೇಗಾದರೂ ಕಟ್ಟಿಹಾಕಬೇಕೆಂದು ಅಪೇಕ್ಷಿಸಿ, ಭಾರತವನ್ನು ಸೋವಿಯತ್ ಒಕ್ಕೂಟ ಹಾಗೂ ಚೀನಾದ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಆರಂಭಿಸಿತ್ತು. ಈ ನಿಟ್ಟಿನಲ್ಲಿ ಅಮೇರಿಕಾದ ಸೆಕ್ರೆಟರಿ ಜನರಲ್ ಜಾನ್ ಫಾಸ್ಟರ್ ಹಾಗೂ ರಾಯಭಾರಿ ಫಿಲಿಫ್ ಜೆಸ್ಸಪ್ ಅಂದು ಅಮೇರಿಕಾದಲ್ಲಿ ಭಾರತದ ರಾಯಭಾರಿ ಆಗಿದ್ದ ವಿಜಯಲಕ್ಷ್ಮೀ ಪಂಡಿತ್ ಅವರ ಬಳಿ ಸೂಚ್ಯವಾಗಿ ಭಾರತ ಚೀನಾ ಹಾಗೂ ಸೋವಿಯತ್ ಒಕ್ಕೂಟವನ್ನು ದೂರವಿಡುವುದಾದರೆ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಕೊಡುವ ಬಗ್ಗೆ ‘ಯೋಚನೆ’ ಮಾಡುತ್ತೇವೆಯೆಂದು ನೇರವಾಗಿ ಅಲ್ಲ ಬದಲಾಗಿ ಸೂಚ್ಯವಾಗಿ ಹೇಳಿದ್ದರಂತೆ. ಅದರೆ ಇದನ್ನು ಅಧಿಕೃತವಾಗಿ, ಲಿಖಿತ ರೂಪದಲ್ಲಿ ಎಂದೂ ಅಮೇರಿಕಾ ಭಾರತಕ್ಕೆ ಕೊಡಲೇ ಇಲ್ಲ. ಪಂಡಿತ್ ಇದರ ಬಗ್ಗೆ ಪ್ರಧಾನಿ ನೆಹರೂರವರ ಬಳಿ ಚರ್ಚಿಸಿದಾಗ ಅವರು ‘ಭಾರತಕ್ಕೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗುವ ಎಲ್ಲಾ ಅರ್ಹತೆಗಳಿವೆ. ಆದರೆ ನಮ್ಮ ನೆರೆ ರಾಷ್ಟ್ರದೊಡನೆ ವೈರತ್ವವನ್ನು ಕಟ್ಟಿಕೊಂಡು ಭಾರತ ಈ ಹುದ್ದೆಯನ್ನು ಪಡೆಯಲು ಇಚ್ಚಿಸುವುದಿಲ್ಲ’ ಎಂದು ಹೇಳಿದ್ದರು.
ಆ ಹೊತ್ತಿಗೆ ಚೀನಾ ಇನ್ನೂ ನಮ್ಮ ವೈರಿ ದೇಶವಾಗಿರಲಿಲ್ಲ. ಸೋವಿಯತ್ ಒಕ್ಕೂಟ ನಮ್ಮ ಮಿತ್ರ ದೇಶವಾಗಿತ್ತು. ನಮ್ಮ ದೇಶದೊಡನೆ ಗಡಿ ಹಂಚಿಕೊಂಡಿರುವ ಚೀನಾದೊಡನೆ ಅನಗತ್ಯವಾಗಿ ವೈರತ್ವವನ್ನು ಕಟ್ಟಿಕೊಳ್ಳಲು ಅದಾಗಲೇ ಅಸ್ತಿತ್ವಕ್ಕೆ ಬಂದ ಭಾರತ ತಯಾರಿರಲಿಲ್ಲ. ನೆಹರೂಗೆ ಮೊದಲು ಭಾರತವನ್ನು ಕಟ್ಟಬೇಕಾದ ಅಗತ್ಯದ ಬಗ್ಗೆ ತಿಳಿದಿತ್ತು. ಏನೂ ಇಲ್ಲದ ದೇಶದಲ್ಲಿ, ಬ್ರಿಟೀಷರು ತಿಂದು, ತೇಗಿ ಮುಗಿಸಿದ್ದ ದೇಶದಲ್ಲಿ ಎಲ್ಲವನ್ನೂ ಕಟ್ಟಬೇಕಾಗಿತ್ತು. ದೇಶ ಆಹಾರ, ಶಿಕ್ಷಣ, ರಕ್ಷಣೆ, ವಿಜ್ಞಾನ-ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಬೇಕಿತ್ತೇ ಹೊರತು ಯುದ್ದ ಮಾಡಿ ದೇಶವನ್ನು ಪುನ: ಅಧಪತನಕ್ಕೆ ತಳ್ಳುವ ಹಾಗಿದ್ದಿಲ್ಲ. ಅವಾಗ ಅಮೇರಿಕಾ ಏಷಿಯಾ ಖಂಡದಲ್ಲಿ ತನ್ನ ಪ್ರಾಬಲ್ಯವನ್ನು ವೃದ್ಧಿಸಲು ಬಯಸುತ್ತಿತ್ತು. ಚೀನಾ ಹಾಗೂ ಏಷಿಯಾ ಖಂಡಕ್ಕೆ ತೀರಾ ಹತ್ತಿರದ ಸೋವಿಯತ್ ಒಕ್ಕೂಟ ಈ ನಿಟ್ಟಿನಲ್ಲಿ ಅದಕ್ಕೆ ಅಡ್ಡಗಾಲಗಿದ್ದರು. ಆದರೂ ಅಮೇರಿಕಾ ಕೊರಿಯಾ ಯುದ್ದದಲ್ಲಿ ಕೈಹಾಕಿತ್ತು. ಇದೆಲ್ಲಾ ಆಗುವ ಕೇವಲ ಐದಾರು ವರುಷಗಳ ಹಿಂದೆ ಜಪಾನಿನ ಮೇಲೆ ಅಣುಬಾಂಬ್ ಪ್ರಯೋಗಿಸಿದ ಅಮೇರಿಕಾ ಮತ್ತೊಮ್ಮೆ ಏಷಿಯಾದಲ್ಲಿ ಇಂಥದೊಂದು ದುಷ್ಕೃತ್ಯಕ್ಕೆ ಕೈಹಾಕುವುದಿಲ್ಲವೆಂದು ನಂಬಲು ನೆಹರೂ ತಯಾರಿರಲಿಲ್ಲ. ಒಂದೊಮ್ಮೆ ತಾನು ಅಮೇರಿಕಾದೊಡನೆ ಗುರುತಿಸಿಕೊಂಡರೆ, ಅಮೇರಿಕಾ ತನ್ನನ್ನು ಬಳಸಿ ಏಷಿಯಾ ಖಂಡದಲ್ಲಿ ತನ್ನ ಪ್ರಾಬಲ್ಯ ವೃದ್ಧಿಗೆ ಪ್ರಯತ್ನಿಸಿ ಭಾರತವನ್ನು ತನ್ನ ನೆರೆ ರಾಷ್ಟ್ರಗಳೊಂದಿಗೆ ವೈರಿಯನ್ನಾಗಿ ಮಾಡುತ್ತೆ ಎಂದು ದೂರದೃಷ್ಟಿಯ ನೆಹರೂಗೆ ಚೆನ್ನಾಗಿ ತಿಳಿದಿತ್ತು.
ಎಲ್ಲಕ್ಕಿಂತಾ ಹೆಚ್ಚಾಗಿ ಅಮೇರಿಕಾ ಹೇಳಿದ ಮಾತ್ರಕ್ಕೆ ಭಾರತಕ್ಕೆ ಖಾಯಂ ಸದಸ್ಯ ರಾಷ್ಟ್ರ ಹುದ್ದೆ ಸಿಗುತ್ತಿದ್ದಿಲ್ಲ. ಯಾಕೆಂದರೆ ಸೋವಿಯತ್ ಒಕ್ಕೂಟ ಚೀನಾವನ್ನು ಹೊರಕ್ಕೆ ಹಾಕುವ ಪ್ರಯತ್ನಗಳಿಗೆ ವಿಟೋ ಮಾಡುವುದು ಗ್ಯಾರಂಟಿಯಾಗಿತ್ತು. ಇನ್ನು ಬ್ರಿಟನ್ ಕೂಡಾ ಕೇವಲ ಎರಡ್ಮೂರು ವರುಷಗಳ ಹಿಂದೆ ತನ್ನ ವಸಾಹತು ಆಗಿದ್ದ ದೇಶವೊಂದು ತನ್ನ ಸಮನಾಗಿ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ದೇಶವನ್ನಾಗಿ ನೋಡಲು ಅಪೇಕ್ಷಿಸುವ ಸಾಧ್ಯತೆಗಳೇ ಇದ್ದಿಲ್ಲ. ಹಾಗಾಗಿ ಇವರ ಸಹಕಾರ ಇಲ್ಲದೇ United Nations Charterನ ತಿದ್ದುಪಡಿ ಮಾಡುವ ಅವಕಾಶನೇ ಇದ್ದಿಲ್ಲ. ಸಪ್ಟೆಂಬರ್ 1955ರಲ್ಲಿ ಲೋಕಸಭೆಯಲ್ಲಿ ಮಾತಾನಾಡಿದ ಪ್ರಧಾನಿ ನೆಹರೂ ‘ಭಾರತಕ್ಕೆ ಭದ್ರತಾ ಮಂಡಳಿಯ ಖಾಯಂ ರಾಷ್ಟ್ರವಾಗುವ ಬಗ್ಗೆ ಯಾವುದೇ ಅಧಿಕೃತ ಅಥವಾ ಅನಧಿಕೃತ ಪ್ರಸ್ತಾಪಗಳು ಬಂದಿಲ್ಲ. ಭದ್ರತಾ ಮಂಡಳಿಯ ರಚನೆಯಾಗಿರುವುದು United Nations Charterನ ಪ್ರಕಾರ. ಈ UN Charterಗೆ ತಿದ್ದುಪಡಿ ತರದೇ ಯಾವುದೇ ದೇಶವನ್ನು ಹೊರಹಾಕಲು ಅಥವಾ ಸೇರಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಹಾಗಾಗಿ ಭಾರತಕ್ಕೆ ಅವಕಾಶವಿತ್ತು, ನೆಹರೂ ಚೀನಾಕ್ಕೆ ಕೊಟ್ಟರು ಎನ್ನುವುದೆಲ್ಲಾ ಬೊಗಳೆ, ಊಹಾಪೋಹ. ಸ್ವತಂತ್ರ ಭಾರತದ ಉದಯವಾಗುವ ಮೊದಲಿನಿಂದಲೂ ಚೀನಾ ಭದ್ರತಾ ಮಂಡಳಿಯ ಖಾಯಂ ಸದಸ್ಯ ಹಾಗೂ ಭಾರತದ ಬದಲಿಗೆ ಅಲ್ಲಿ ಸ್ಥಾನ ಪಡೆದ ದೇಶವಲ್ಲ. ಇನ್ನು ಕಸಿನ್ ಸಿಸ್ಟರ್ ಗಳನ್ನು ಮುಂದಿಟ್ಟುಕೊಂಡು ಅಂತೆ-ಕಂತೆಗಳ ಸಂತೆಯಲ್ಲಿ ಸುಳ್ಳುಗಳನ್ನು ಮಾರಿ ಜೀವನೋಪಾಯ ಕಂಡುಕೊಂಡವರಿಗೆ ಚರಿತ್ರೆ ಬಿಡಿ ವರ್ತಮಾನದ ಅರಿವೇ ಇಲ್ಲ. ಬರೀ ಇಂಥ ಪ್ರೊಪಾಗಾಂಡಗಳಿಂದ ತಮ್ಮ ಹೊಟ್ಟೆ ಹೊರೆಯುವುದಷ್ಟೇ ಇವರ ಕಾಯಕ.