ಅಮೆರಿಕ ಇಡೀ ವಿಶ್ವವೇ ಗೌರವಿಸುವ ಹಾಗೂ ಆ ದೇಶದ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬಯಸುವ ರಾಷ್ಟ್ರ ಎಂದರೆ ಸುಳ್ಳಲ್ಲ. ಆದರೆ, ಇದೇ ಅಮೆರಿಕ ಇಡೀ ವಿಶ್ವದ ಎದುರು ತಾನೆಷ್ಟು ಕುಬ್ಜ ಎಂಬುದನ್ನು ವಿಶ್ವಕ್ಕೆ ಸಾರಿ ಸಾರಿ ಹೇಳುತ್ತಿದೆ. ಕಳೆದೊಂದು ವಾರದಿಂದ ನಡೆಯುತ್ತಿರುವ ಉಗ್ರ ಹೋರಾಟ ವಿಶ್ವದ ದೊಡ್ಡಣ್ಣನ ನಿಜ ಬಣ್ಣವನ್ನು ಜಗತ್ತಿನ ಎದುರು ಬೆತ್ತಲು ಮಾಡುತ್ತಿದೆ. ಇಡೀ ಅಮೆರಿಕದ ಅರ್ಧ ಭಾಗವೇ ಹೊತ್ತಿ ಉರಿಯುತ್ತಿದೆ. ಉತ್ತರ ಕೊಡಬೇಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಮೌನಕ್ಕೆ ಶರಣಾಗುವ ಮೂಲಕ ಅಂತರ ಕಾಯ್ದುಕೊಂಡಿದ್ದಾರೆ. ಜೊತೆಗೆ ಅಮೆರಿಕನ್ ನಾಗರಿಕರು ವಿಶ್ವದ ಅತ್ಯುನ್ನತ ಭದ್ರತಾ ವ್ಯವಸ್ಥೆಯಲ್ಲಿರುವ ವೈಟ್‌ಹೌಸ್ ಎದುರೇ ಬೃಹತ್ ಪ್ರತಿಭಟನೆ ನಡೆಸಿದ್ದು, ವೈಟ್‌ಹೌಸ್ ಕಪ್ಪು ಹೊಗೆಯಲ್ಲಿ ತುಂಬಿಕೊಳ್ಳುವಂತೆ ಮಾಡಿದ್ದಾರೆ. ಇಡೀ ವೈಟ್‌ಹೌಸ್ ಸಿಬ್ಬಂದಿಗಳು ಉಗ್ರ ಹೋರಾಟಕ್ಕೆ ಸಾಕ್ಷಿಯಾಗಿದ್ದಾರೆ. ಈ ವೇಳೆ ಸೀಕ್ರೆಟ್ ಸರ್ವಿಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಪಾರ್ಕ್ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಆತನ ಕುಟುಂಬ ಕೆಳ ಮಹಡಿಯ ಬಂಕರ್‌ಗೆ ಪಲಾಯನ ಮಾಡಿಸಿದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಯಾಕೆ ಈ ಹೋರಾಟ?
ಅಮೆರಿಕದಲ್ಲಿ ಕಳೆದ 6 ದಿನಗಳಿಂದ ಬಿಳಿಯರು ಮತ್ತು ಕಪ್ಪು ಜನಾಂಗದ ಸಮರ ತಾರಕ್ಕೇರಿದೆ. ಮಿನ್ನೆಸೋಟದ ಮಿನ್ನಿಪೊಲಿಸ್ ನಗರದಲ್ಲಿ 46 ವರ್ಷದ ಆಫ್ರಿಕನ್-ಅಮೆರಿಕನ್ ಪ್ರಜೆ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಬಣ್ಣದ ವ್ಯಕ್ತಿ ದಿನಸಿ ಅಂಗಡಿಯಲ್ಲಿ ಒಂದು ಸಿಗರೇಟ್ ಪ್ಯಾಕ್ ಹಾಗೂ ಒಂದು ಆಹಾರ ಪೊಟ್ಟಣ ಪಡೆದು 20 ಡಾಲರ್ ನೀಡಿದ್ದಾನೆ. ಆದರೆ ಅದು ನಕಲಿಯಾಗಿತ್ತು ಎಂದು ಅಂಗಡಿ ಮಾಲೀಕ ದೂರಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಆತ ಕುಡಿದಿದ್ದು, ಬದಲಾಯಿಸಿ ಕೊಡುವಂತೆ ಕೇಳಿದರೂ ಕೊಡುತ್ತಿಲ್ಲ ಎಂದಿದ್ದಾನೆ.
ಕೂಡಲೇ ಸ್ಥಳಕ್ಕೆ ಬಂದ ನಾಲ್ವರು ಪೊಲೀಸರು ಕಾರಿನಲ್ಲಿ ತನ್ನ ಪಾಡಿಗೆ ಕುಳಿತಿದ್ದ ಫ್ಲಾಯ್ಡ್ ಬಂಧನಕ್ಕೆ ಯತ್ನಿಸಿದ್ದಾರೆ. ಆದರೆ, ಬಂಧನಕ್ಕೆ ವಿರೋಧ ಮಾಡಿದ ಬಳಿಕ ಬಿಳಿಯ ಪೊಲೀಸ್ ಅಧಿಕಾರಿ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಮಂಡಿಯೂರಿದ್ದಾನೆ. ಉಸಿರಾಡಲು ಸಾಧ್ಯವಾಗ್ತಿಲ್ಲ, ಬಿಟ್ಟುಬಿಡಿ ಎಂದು ಕಿರುಚಿದರೂ ಏಳೆಂಟು ನಿಮಿಷ ಬಿಡದೆ ಕ್ರೂರವಾಗಿ ವರ್ತಿಸಿದ್ದಾನೆ. ಸ್ಥಳದಲ್ಲೇ ಫ್ಲಾಯ್ಡ್ ಸಾವನ್ನಪ್ಪಿದನ್ನು ಕಣ್ಣಾರ ಕಂಡ ಸಾಕ್ಷಿಗಳು ನಾಡಿ ಮಿಡಿತ ತಪಾಸಣೆಗೆ ಒತ್ತಾಯ ಮಾಡಿದ್ದಾರೆ. ಮತ್ತೋರ್ವ ಅಧಿಕಾರಿ ಪರೀಕ್ಷಿಸಿದಾಗ ಉಸಿರಾಟ ನಿಂತಿತ್ತು. ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದ. ಆದರೂ ಆಂಬ್ಯುಲೆನ್ಸ್‌ನಲ್ಲಿ ಹೆನ್ನೆಪಿನ್ ಕೌಂಟಿ ಆಸ್ಪತ್ರೆಗೆ ಕರೆದೊಯ್ದ ಒಂದು ಗಂಟೆಯ ಬಳಿಕ ಫ್ಲಾಯ್ಡ್ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಈ ಎಲ್ಲಾ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಅಮೆರಿಕವೇ ಹೊತ್ತಿ ಉರಿಯುತ್ತಿದೆ.

ಹೊತ್ತಿ ಉರಿಯುತ್ತಿರುವ 40 ರಾಜ್ಯಗಳು:
ಅಮೆರಿಕದಲ್ಲಿ ಒಟ್ಟು 50 ರಾಜ್ಯಗಳಿದ್ದು, ಅದರಲ್ಲಿ 40 ರಾಜ್ಯಗಳಲ್ಲಿ 80ಕ್ಕೂ ಹೆಚ್ಚು ನಗರಗಳಲ್ಲಿ ಹಿಂಸಾಚಾರ ನಡೆಯುತ್ತಿದೆ. 17ಕ್ಕೂ ಹೆಚ್ಚು ರಾಜ್ಯಗಳ 30ಕ್ಕೂ ಹೆಚ್ಚು ನಗರಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. 5 ಸಾವಿರಕ್ಕೂ ಹೆಚ್ಚು ನ್ಯಾಷನಲ್ ಗಾರ್ಡ್ ಸೈನಿಕರನ್ನು ಬಿಗಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಆದರೂ ಪ್ರತಿಭಟನಾಕಾರರನ್ನು ತಡೆಯುವುದಕ್ಕೆ ಸಾಧ್ಯವಾಗ್ತಿಲ್ಲ. ಮೇ 25ರಂದು ನಡೆದ ಘಟನೆ ಬಳಿಕ ಶುರುವಾದ ರಾಷ್ಟ್ರವ್ಯಾಪಿ ಪ್ರತಿಭಟನೆಯಿಂದ ಅಮೆರಿಕವೇ ತಲ್ಲಣಗೊಂಡಿದೆ. 46 ವರ್ಷದ ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ಕೇಳಿ ಜನ ಬೀದಿಗೆ ಇಳಿದಿದ್ದಾರೆ. ಫ್ಲಾಯ್ಡ್ ಸಾವಿಗೆ ಕಾರಣವಾದ ಬಿಳಿಯ ಪೊಲೀಸ್ ಅಧಿಕಾರಿ ಡರೇಕ್ ಚೌವಿನ್ ವಿರುದ್ಧ ಕೊಲೆ ಆರೋಪ ಹೊರಿಸಿ ಬಂಧನ ಮಾಡಲಾಗಿದೆ. ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ಫ್ಲಾಯ್ಡ್ ಇತ್ತೀಚಿಗಷ್ಟೇ ಸಾಂಕ್ರಾಮಿಕ ಕಾಯಿಲೆ ಕರೋನಾದಿಂದ ನಿರುದ್ಯೋಗಿ ಆಗಿದ್ದರು ಎನ್ನಲಾಗಿದೆ.
ಮಿನ್ನೇಸೋಟ ಗವರ್ನರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ದೇವರಿಗೆ ಧನ್ಯವಾದ ತಿಳಿಸಿದ್ದಾರೆ. ಯಾಕೆಂದ್ರೆ ಯುವಕನೊಬ್ಬ ಈ ಎಲ್ಲಾ ಘಟನೆಗಳನ್ನು ವೀಡಿಯೊ ಮಾಡಲು ಕ್ಯಾಮೆರಾವನ್ನು ಹೊಂದಿದ್ದನು ಎಂದಿದ್ದಾರೆ. ಇಲ್ಲೀವರೆಗೂ ಅಮೆರಿಕದಲ್ಲಿ 4 ಸಾವಿರಕ್ಕೂ ಅಧಿಕ ಮಂದಿಯನ್ನು ಬಂಧನ ಮಾಡಲಾಗಿದೆ. ಜನರು ಸಿಕ್ಕ ಸಿಕ್ಕ ಶಾಪಿಂಗ್ ಮಾಲ್‌ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದಾರೆ. ಅಕ್ಷರಶಃ ಲೂಟಿ ರಾಜ್ಯವೇನೋ ಎಂಬಂತೆ ಅಮೆರಿಕ ಕಾಣಿಸುತ್ತಿದೆ. ಜನಾಂಗೀಯ ಗಲಾಟೆಯಿಂದ ನ್ಯೂಯಾರ್ಕ್, ಬರ್ಮಿಂಗ್ಹ್ಯಾಮ್, ಬೋಸ್ಟನ್, ಫಿಲೆಡೆಲ್ಫಿಯಾ, ಷಿಕಾಗೋ, ಲೂಯಿಸ್ವಿಲ್ಲೆ, ಅಂಟ್ಲಾಂಟ, ಡೆನ್ವರ್, ಸ್ಯಾನ್ ಫ್ರಾನ್ಸಿಸ್ಕೋ, ಸೀಯಾಟಲ್ ನಗರಗಳು ಸಂಪೂರ್ಣ ರಣಾಂಗಣವಾಗಿ ಮಾರ್ಪಟ್ಟಿವೆ. ಇಷ್ಟೆಲ್ಲಾ ಆದರೂ ಪೊಲೀಸರ ದೌರ್ಜನ್ಯ ಮಾತ್ರ ಇನ್ನೂ ನಿಂತಿಲ್ಲ. ಪ್ರತಿಭಟನಾ ನಿರತ ಜನರ ಮೇಲೆ ಅಶ್ರವಾಯು, ರಬ್ಬರ್ ಬುಲೆಟ್‌ಗಳಿಂದ ದಾಳಿ ಮಾಡುತ್ತಲೇ ಇದ್ದಾರೆ. ಪೊಲೀಸರಿಗೆ ಗುಂಡೇಟಿಗೆ ಮತ್ತೋರ್ವ ಸಾವನ್ನಪ್ಪಿದ ಬಳಿಕ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದೆ.
ಮಾಧ್ಯಮ ಗುರಿಯಾಗಿಸಿ ಪೊಲೀಸರ ಕಾರ್ಯಾಚರಣೆ..!
ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವಿನ ಚಕಮಕಿ ಕ್ಷಣಕ್ಷಣಕ್ಕೂ ಬಿತ್ತರ ಮಾಡುತ್ತಿರುವ ಮಾಧ್ಯಮಗಳ ಮೇಲೆ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ಜನರ ಮೇಲೆ ಪೊಲೀಸರ ದರ್ಪವನ್ನು ಎಳೆಎಳೆಯಾಗಿ ತೋರಿಸುತ್ತಿರುವ ಪತ್ರಕರ್ತರನ್ನು ಗುರಿಯಾಗಿಸಿ ಪೊಲೀಸರು ದಾಳಿ ಮಾಡುತ್ತಿದ್ದು, ಕ್ಯಾಮೆರಾ ಜಖಂ ಮಾಡಿದ್ದಾರೆ. ಕೆಲವು ಪತ್ರಕರ್ತರನ್ನು ಬಂಧನ ಮಾಡಿದ್ದಾರೆ. ಸಿಎನ್‌ಎನ್ ಪತ್ರಕರ್ತ ಓಮನ್ ಜಿಮೆನಜ್ ಮೇಲೆ ಫೈರ್ ಮಾಡಿದ್ದು, ಆತನ ಸಹವರ್ತಿ ಕೂಡ ಗಾಯಗೊಂಡಿದ್ದಾರೆ. ಇದೇ ರೀತಿ ಸಾಕಷ್ಟು ನಗರಗಳಲ್ಲಿ ಪತ್ರಕರ್ತರು ಪ್ರಾಣಭಯದಲ್ಲೇ ವರದಿ ಮಾಡುತ್ತಿದ್ದಾರೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗಳನ್ನೇ ಗುರಿಯಾಗಿಸಿ ಟ್ವೀಟ್ ಮಾಡಿದ್ದು, ದೇಶದಲ್ಲಿ ದ್ವೇಷ ಮತ್ತು ಅರಾಜಕತೆಯನ್ನು ಹುಟ್ಟುಹಾಕಲು ಮಾಧ್ಯಮಗಳು ಯತ್ನಿಸುತ್ತಿವೆ. ಸುಳ್ಳು ಸುದ್ದಿ ರಾರಾಜಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಮೆರಿಕದಲ್ಲಿ ವರ್ಣ ಸಂಘರ್ಷ ಇತಿಹಾಸ..!
ಅಮೆರಿಕದಲ್ಲಿ ಪದೇಪದೇ ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಕಪ್ಪು ವರ್ಣಿಯರ ವಿರುದ್ಧ ತಾರತಮ್ಯ ನೀತಿ ಅನುಸರಿಲಾಗುತ್ತದೆ ಎನ್ನುವ ಆರೋಪ ಸರ್ವೇ ಸಾಮಾನ್ಯ. ಕಪ್ಪು ವರ್ಣಿಯರ ವಿರುದ್ಧ ದೌರ್ಜನ್ಯಕ್ಕೆ ಶತಮಾನಗಳ ಇತಿಹಾಸವಿದೆ. ಗುಲಾಮಗಿರಿಗಾಗಿ ಆಫ್ರಿಕಾದಿಂದ ಅಮೆರಿಕಕ್ಕೆ ಬಂದವರು ಕಪ್ಪು ವರ್ಣೀಯರು ಎಂಬ ಮಾತಿದೆ. ತಮ್ಮನ್ನು ಬಿಳಿಯರ ಸಮಾನ ಎಂದು ಒಪ್ಪಿಕೊಳ್ಳದ ಶ್ವೇತ ವರ್ಣ ಜನರ ವಿರುದ್ಧ ಸದಾಕಾಲ ಕಪ್ಪು ಜನಾಂಗ ಕೆಂಡಕಾರುತ್ತಲೇ ಇರುತ್ತದೆ. ಪದೇಪದೇ ಕಪ್ಪು ಹಾಗೂ ಶ್ವೇತ ವರ್ಣಿಯರ ನಡುವೆ ಹಿಂಸಾತ್ಮಕ ಘರ್ಷಣೆ ನಡೆಯುತ್ತದೆ. ಇದೇ ದೌರ್ಜನ್ಯ ಖಂಡಿಸಿದ್ದ ಮಾರ್ಟಿನ್ ಲೂಥರ್ ಕಿಂಗ್ ಅಮೆರಿಕದಲ್ಲಿ ಬೃಹತ್ ಚಳುವಳಿಯನ್ನೇ ನಡೆಸಿದ್ದರು. ಅಮೆರಿಕದಲ್ಲಿ ಕಪ್ಪು ವರ್ಣೀಯರಿಗೂ ಸಮಾನ ಅಧಿಕಾರ ಸಿಗಬೇಕು ಎಂದು ಮಾರ್ಟಿನ್ ಲೂಥರ್ ಕಿಂಗ್ ಹೋರಾಟ ಫಲವಾಗಿಯೇ ಇಂದು ಅವರಿಗೆ ಸಮಾನ ಅಧಿಕಾರ ಸಿಕ್ಕಿದೆ. ಆದರೂ, ಇನ್ನೂ ಕೂಡ ದೌರ್ಜನ್ಯ ನಡೆಯುತ್ತಲೇ ಇರುತ್ತದೆ. ಜನಾಂಗೀಯ ಘರ್ಷಣೆಯೂ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಇದೀಗ ಅಂತಿಮವಾಗಿ ವಿಶ್ವಕ್ಕೇ ಬುದ್ಧಿವಾದ ಹೇಳುವ ದೊಡ್ಡಣ್ಣ ಅಮೆರಿಕ ವಿಶ್ವದ ಎದುರು ತಾನೆಷ್ಟು ಮಾನಸಿಕವಾಗಿ ಕೀಳುಮಟ್ಟದಲ್ಲಿ ಇದ್ದೇನೆ ಎಂಬುದನ್ನು ಸಾಬೀತು ಮಾಡಿದಂತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಟ್ವೀಟರ್‌ನಲ್ಲಿ ಮತ್ತೆ ಮತ್ತೆ ಜನರಲ್ಲಿ ಕಿಚ್ಚು ಹೊತ್ತಿಸುವ ಪೋಸ್ಟ್ ಹಾಕಿರುವುದು ಹುಚ್ಚು ದೊರೆ ಕೈಗೆ ಅಧಿಕಾರ ಕೊಟ್ಟಂತಾಗಿದೆ. #AntifaTERRORISTA ಎಂಬ ಹ್ಯಾಶ್ ಟ್ಯಾಗ್ ಜೊತೆಗೆ ಟ್ರಂಪ್ ಪರವಾಗಿ ಟ್ವೀಟರ್‌ನಲ್ಲಿ ಅಭಿಯಾನ ಶುರುವಾಗಿದೆ. ಕಪ್ಪು ವರ್ಣಿಯರ ದೌರ್ಜನ್ಯವನ್ನು ಜನರು ಶೇರ್ ಮಾಡುತ್ತಿದ್ದಾರೆ. ಸ್ವತಃ ಟ್ರಂಪ್ ಡೊನಾಲ್ಡ್ ಟ್ರಂಪ್ ಉಗ್ರರ ಗುಂಪಿನ ದಾಳಿ ಎಂದು ಬಣ್ಣಿಸಿದ್ದಾರೆ.