ಕರೋನಾ ಸೋಂಕಿಗೆ ಔಷಧಿಯೆಂದು ಯೋಗಗುರು ಬಾಬಾ ರಾಮದೇವರ ಸಂಸ್ಥೆ ಪತಂಜಲಿ ಬಿಡುಗಡೆ ಮಾಡಿದ್ದ ʼಕೊರೊನಿಲ್ʼನ ಮಾರಾಟವನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ನಿಷೇಧಿಸಿದೆ. ಪತಂಜಲಿಯ ವಿವಾದಿತ ಔಷಧಿ ರೋಗ ನಿರೋಧಕ ಹೆಚ್ಚಿಸುವಿಕೆ ಹಾಗೂ ಕೆಮ್ಮು ಮತ್ತು ಜ್ವರದ ಔಷಧವೆಂದು ಪರವಾಣಿಗೆ ಪಡೆದಿದೆ, ಕೋವಿಡ್-19 ಚಿಕಿತ್ಸೆಗೆಂದು ನಾವು ಅನುಮೋದಿಸಿಲ್ಲವೆಂದು ಉತ್ತರಾಖಾಂಡ್ ಸರ್ಕಾರ ಹೇಳಿದ ಬೆನ್ನಿಗೆ ಮಹಾರಾಷ್ಟ್ರ ಈ ಕ್ರಮ ಕೈಗೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶ್‌ಮುಖ್ ಪತಂಜಲಿ ಸಂಸ್ಥಾಪಕ ರಾಮದೇವ್‌ರಿಗೆ ಎಚ್ಚರಿಕೆ ನೀಡಿದ್ದಾರೆ. ನಕಲಿ ಔಷಧಗಳ ಮಾರಾಟವನ್ನು ಮಹಾರಾಷ್ಟ್ರದಲ್ಲಿ ಅನುಮತಿಸುವುದಿಲ್ಲ ಎಂದಿರುವ ದೇಶ್‌ಮುಖ್ ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊರೊನಿಲ್‌ನ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಿದೆಯೇ ಎಂದು ಪತ್ತೆಹಚ್ಚುತ್ತದೆ ಎಂದಿದ್ದಾರೆ.
ಅಲ್ಲದೆ ಆಯುಷ್ ಸಚಿವಾಲಯದಿಂದ ಅನುಮತಿ ಪಡೆಯದೆ ಕೋವಿಡ್ ವಿರುದ್ಧದ ಔಷಧಿಯೆಂದು ಜಾಹಿರಾತು ನೀಡುವುದು ಅಥವಾ ಮಾರಾಟ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೂಡಾ ಎಚ್ಚರಿಸಿದ್ದಾರೆ.
ಅದಾಗ್ಯೂ ಬಿಜೆಪಿ ಶಾಸಕ ರಾಮ್ ಕದಮ್ ಪತಂಜಲಿಯನ್ನು ಸಮರ್ಥಿಸಿ ದೇಶ್‌ಮುಖ್ ಟ್ವೀಟಿಗೆ ಉತ್ತರಿಸಿದ್ದಾರೆ. ಪತಂಜಲಿಯ ಕೊರೊನಿಲ್ ಔಷಧಿಗೆ ಕ್ಲಿನಿಕಲ್ ಅನುಮೋದನೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಆದರೆ ಇದಕ್ಕೂ ಮೊದಲೂ ಕೇಂದ್ರ ಆಯುಷ್ ಸಚಿವಾಲಯ ಕೊರೊನಿಲ್‌ನ ವಿವರಗಳನ್ನು ನೀಡುವಂತೆ ಪತಂಜಲಿಗೆ ಕೇಳಿಕೊಂಡಿತ್ತು, ಅಲ್ಲದೆ ಸಮಸ್ಯೆ ಇತ್ಯರ್ಥವಾಗುವವರೆಗೆ ಜಾಹಿರಾತು ನಿಲ್ಲಿಸಬೇಕೆಂದೂ ಪತಂಜಲಿಗೆ ಹೇಳಿತ್ತು.
ಅದರೊಂದಿಗೆ ರಾಜಸ್ಥಾನ ಸರ್ಕಾರವೂ ಆಯುಷ್ ಸಚಿವಾಲಯದ ಅನುಮತಿಯಿಲ್ಲದ ಔಷಧಗಳನ್ನು ರಾಜ್ಯದೊಳಗೆ ಮಾರಾಟ ಹಾಗೂ ಬಳಕೆ ಇಲ್ಲ ಎಂದಿದೆ.