ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನಿರ್ದೇಶನ ನೀಡಿದ್ದಾರೆ. ಈ ಯೋಜನೆಯನ್ನು ನಿಲ್ಲಿಸುವಂತೆ ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ಜನರು ಒತ್ತಡ ಹೇರಿದ್ದರು. ವಿದ್ಯಾಗಮ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕರಿಗೆ ಕರೋನಾ ಸೋಂಕು ತಗುಲಿದ ನಂತರ, ಯೋಜನೆಯ ಕುರಿತು ಅಪಸ್ವರಗಳು ಎದ್ದಿದ್ದವು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, “ತನ್ನ ಜೀವ ಹೋದರೂ ಚಿಂತೆಯಿಲ್ಲ ವಿದ್ಯಾಗಮ ಯೋಜನೆ ನಿಲ್ಲಿಸುವವರೆಗೆ ಅಹೋರಾತ್ರಿ ಧರಣಿ ನಡೆಸುತ್ತೇನೆ,” ಎಂದು ಹೇಳಿದ್ದಾರೆ.
ನನ್ನ ಜೀವ ಹೋದರೂ ಪರವಾಗಿಲ್ಲ. ಮಂಗಳವಾರದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ.
6/6— H D Kumaraswamy (@hd_kumaraswamy) October 10, 2020
ಈಗ ವಿದ್ಯಾಗಮ ಯೋಜನೆಯ ಕುರಿತಾಗಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಒಂದು ವರ್ಗ ವಿದ್ಯಾಗಮ ಯೋಜನೆಯನ್ನು ಮುಂದುವರೆಸಬೇಕು ಎಂದು ಹೇಳಿದರೆ, ಇನ್ನೊಂದು ವರ್ಗವು ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದೇ ಸರಿ ಎಂಬ ವಾದವನ್ನು ಮುಂದಿಡುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂದು ಹೇಳುವ ಪ್ರಕಾರ, ಮಕ್ಕಳ ಭವಿಷ್ಯ ಎಲ್ಲಕ್ಕಿಂತಲೂ ಮುಖ್ಯ ಎಂಬ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯಬೇಕು. ಮಕ್ಕಳಿಗೆ ಕರೋನಾ ಸೋಂಕು ತಗುಲುವುದಿಲ್ಲ ಅಥವಾ ಅದರಿಂದ ಮಕ್ಕಳು ಸಾವನ್ನಪ್ಪುವುದಿಲ್ಲ ಎಂಬ ವಿಚಾರವನ್ನು ದೃಢಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ಹಿಂದೆ ಕರೋನಾ ಸೋಂಕಿನಿಂದ ಮಕ್ಕಳು ಕೂಡಾ ಮೃತಪಟ್ಟಿದ್ದಾರೆ. ಹೀಗಾಗಿ ಮಕ್ಕಳ ಭವಿಷ್ಯವನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ, ಎಂದು ಹೇಳುತ್ತಿದ್ದಾರೆ.
ಇನ್ನು, ಮಕ್ಕಳ ವಿದ್ಯಾಭ್ಯಾಸ ಒಂದು ವರ್ಷ ಮುಂದೂಡಲ್ಪಟ್ಟರೆ ಯಾವುದೇ ರೀತಿಯ ನಷ್ಟವಿಲ್ಲ. ಸಂಪೂರ್ಣ ರಾಜ್ಯದಲ್ಲಿ ಈ ವರ್ಷವನ್ನು ʼಜೀರೋ ಇಯರ್ʼ (ಶೂನ್ಯ ಶೈಕ್ಷಣಿಕ ವರ್ಷ) ಎಂದು ಘೋಷಿಸಿದರೆ ಉತ್ತಮ. ಇದನ್ನು ಜಾರಿಗೆ ತರಲು ಸರ್ಕಾರ ಮುಂದಾಗಬೇಕು. ಮುಂಬರುವ ನೇಮಕಾತಿಗಳಲ್ಲಿ ಸರ್ಕಾರವು ಒಂದು ವರ್ಷದ ರಿಯಾಯಿತನ್ನು ನೀಡಿ ಈ ನಷ್ಟವನ್ನು ಸರಿದೂಗಿಸಬಹುದು. ಇದರಿಂದಾಗಿ ಸರ್ಕಾರಿ ಅಥವಾ ಖಾಸಗಿ ಶಾಲೆಗಳ ಶಿಕ್ಷಕರು ತೊಂದರೆಗೆ ಒಳಗಾಗದಂತೆ ಸರ್ಕಾರ ನಿಯಮಗಳನ್ನು ರೂಪಿಸಬೇಕು, ಎಂವ ವಾದವನ್ನು ಮುಂದಿಡುತ್ತಿದ್ದಾರೆ.

ವಿದ್ಯಾಗಮ ಯೋಜನೆಯ ಪರ ಇರುವವರು, ದೇಶದಲ್ಲಿ ಸಂಪೂರ್ಣವಾಗಿ ಲಾಕ್‌ಡೌನ್ ತೆರೆಯಲ್ಪಟ್ಟಿದೆ. ಪ್ರವಾಸಿ ತಾಣಗಳಲ್ಲಿ ಮಕ್ಕಳೊಂದಿಗೆ ಪೋಷಕರು ಭೇಟಿ ನೀಡುತ್ತಿದ್ದಾರೆ. ಈ ಹೊತ್ತಿನಲ್ಲಿ ಕರೋನಾ ಹಬ್ಬುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಆನ್ಲೈನ್ ತರಗತಿಗಳಿಗೆ ಹಣ ಹೊಂದಿಸಿ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಆಗದೇ ಇರುವಂತಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆ ವರದಾನವಾಗಿತ್ತು. ಈಗ ಸ್ಥಗಿತಗೊಂಡಿದ್ದರಿಂದ ಅವರ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆ ಉಂಟಾಗಿದೆ. ಬಡವರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸಲು ಆರಂಭಿಸಿದ್ದಾರೆ. ಮತ್ತೆ ಬಾಲ ಕಾರ್ಮಿಕರಾಗುವ ಹಂತಕ್ಕೆ ವಿದ್ಯಾರ್ಥಿಗಳು ತಲುಪಿದ್ದಾರೆ, ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ, ವಿದ್ಯಾಗಮ ಯೋಜನೆ ಸ್ಥಗಿತಗೊಂಡ ಬೆನ್ನಲ್ಲೇ ಈ ರೀತಿಯ ಚರ್ಚೆಗಳು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆಯು ನಡೆಯುತ್ತಿವೆ. ಸರ್ಕಾರ ಯಾವ ರೀತಿ ಈ ಗೊಂದಲಗಳಿಗೆ ಪರಿಹಾರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.