ದೇಶದಲ್ಲಿ ಎಲ್ಲವೂ ಉಲ್ಟ ಪಲ್ಟ ಆಗುತ್ತಿದ್ದರೂ ಪ್ರವಾಸೋದ್ಯಮವೊಂದು ಬೆಳೆಯುತ್ತಿದೆ. ಅದರಲ್ಲೂ ಕ್ರೂಸ್ ಪ್ರವಾಸೋದ್ಯಮ ಕಳೆದೆರಡು ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಕೇಂದ್ರ ಸರಕಾರ ಎಲ್ಲ ಮಹತ್ತರ ಗುರಿಗಳಂತೆ ಇಲ್ಲೂ ಕೂಡ ಬಹುದೊಡ್ಡ ನಿಶಾನಿಯನ್ನು ಇರಿಸಲಾಗಿದೆ.
ಮುಂದಿನ 5 ವರ್ಷದಲ್ಲಿ ಒಂದು ಸಾವಿರ ಮತ್ತು ಹತ್ತು ವರ್ಷದಲ್ಲಿ 2000 ಸಾವಿರ ಪ್ರವಾಸಿ ಹಡಗುಗಳು ದೇಶದ ಬಂದರುಗಳಿಗೆ ಭೇಟಿ ನೀಡಲಿವೆ ಎಂಬ ಆಶಯ ಕೇಂದ್ರ ಶಿಪ್ಪಿಂಗ್ ಸಚಿವಾಲಯದಾಗಿದೆ. ಪ್ರಸಕ್ತ ವರ್ಷ 593 ವಿದೇಶಿ ಪ್ರವಾಸಿ ಹಡಗುಗಳು ಭಾರತ ತೀರ ಪ್ರವೇಶಿಸಲಿವೆ. ಇದು ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಳ ಆದಾಂತಾಗಿದೆ. 2017- 18ರಲ್ಲಿ 138 ಕ್ರೂಸ್ ಆಗಮಿಸಿದ್ದರೆ 2019ರಲ್ಲಿ ಈ ಸಂಖ್ಯೆ 285 ಕ್ಕೆ ಏರಿಕೆಯಾಗಿದೆ.
2015- 16 ರಲ್ಲಿ 1.25 ಲಕ್ಷ ವಿದೇಶಿ ಪ್ರವಾಸಿಗರನ್ನು ಹೊತ್ತು ಕೇವಲ 128 ಕ್ರೂಸ್ ಶಿಪ್ಪುಗಳು ಮಾತ್ರ ಆಗಮಿಸಿದ್ದವು. ಅನಂತರ ಪ್ರವಾಸಿ ಹಡಗಿನಲ್ಲಿ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ 1.76 ಲಕ್ಷಕ್ಕೆ ಏರಿದ್ದು, ಈ ಹಣಕಾಸು ವರ್ಷದಲ್ಲಿ 4 ಲಕ್ಷ ಪ್ರವಾಸಿಗರ ಆಗಮನದ ನಿರೀಕ್ಷೆ ಇದೆ.
ಭಾರತದ ಕ್ರೂಸ್ ಟೂರಿಸಂ ಹೇಗಿದೆಯೆಂದರೆ ವಿದೇಶಿದಿಂದ ಆಗಮಿಸುವ ಪ್ರವಾಸಿ ಹಡಗುಗಳು ಮೊದಲಿಗೆ ಮುಂಬಯಿಯಲ್ಲಿ ಮೂರರಿಂದ ಐದು ದಿನ ಲಂಗರು ಹಾಕುತ್ತವೆ. ಎಲಿಫೆಂಟಾ ಕೇವ್ ಸಹಿತ ಮುಂಬಯಿಯ ಹಲವು ಪ್ರವಾಸಿ ಮತ್ತು ವಾಣಿಜ್ಯ ಕೇಂದ್ರಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಮುಂಬಯಿಯಲ್ಲಿ ಸುತ್ತಾಡಿದ ಅನಂತರ ಗೋವಾ ತೆರಳುವರು. ಗೋವಾದಿಂದ ಮಂಗಳೂರು, ಕೊಚ್ಚಿ ಮತ್ತು ಚೆನ್ನೈ ಬಂದರುಗಳಿಗೆ ಸಾಗುವ ಕ್ರೂಸ್ ಅನಂತರ ಮಾಲ್ದೀವ್ಸ್ ಅಥವಾ ಶ್ರೀಲಂಕಾ ದೇಶದತ್ತ ಸಾಗಿ ತನ್ನ ಮೂಲ ನೆಲೆಗೆ ಹಿಂತಿರುಗುತ್ತದೆ.
ಸದ್ಯಕ್ಕೆ ಭಾರತದಲ್ಲಿ ಮುಂಬಯಿ, ಗೋವಾ, ಮಂಗಳೂರು, ಕೊಚ್ಚಿ ಮತ್ತು ಚೆನ್ನೈ ಮಾತ್ರ ಕ್ರೂಸ್ ಟೂರಿಸಂ ಕೇಂದ್ರಗಳಾಗಿವೆ. ಅದರಲ್ಲೂ ಮಂಗಳೂರಿನಲ್ಲಿ ಪ್ರವಾಸಿಗರ ಹಡಗು ತಂಗುವುದು ಕೇವಲ ಹತ್ತು ಗಂಟೆ ಮಾತ್ರ. ಗುಜರಾತಿನ ಸೂರತ್, ದಿಯು, ದಾಮನ್, ಫೋರ್ ಬಂದರ್, ದ್ವಾರ್ಕ, ಮಹಾರಾಷ್ಟ್ರದ ಕೆಲವೆಡೆ, ಕೇರಳದ ಕಲ್ಲಿಕೋಟೆ, ತಿರುವನಂತಪುರ, ಲಕ್ಷದ್ವೀಪ, ಕರವತ್ತಿ ಮುಂತಾದೆಡೆ ಕ್ರೂಸ್ ಪ್ರವಾಸೋದ್ಯಮ ಆರಂಭವಾಗಿಲ್ಲ.
ಪಶ್ಚಿಮ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮ ಪ್ರಗತಿಯನ್ನು ಕಾಣುತ್ತಿದ್ದು, ಮುಂಬಯಿ ಮತ್ತು ನವಮಂಗಳೂರು ಬಂದರಿನಲ್ಲಿ ಹೆಲಿಕಾಪ್ಟರ್ ಸೇವೆಯನ್ನು ನೀಡಲಾಗುತ್ತಿದೆ.
ನವಮಂಗಳೂರಿಗೆ ಬಂದರಿಗೆ ಇತ್ತೀಚೆಗೆ ಆಗಮಿಸಿದ ಪನಾಮಾ ಮತ್ತು ಇಟಲಿ ಮೂಲದ ಎರಡು ಪ್ರವಾಸಿ ಹಡಗುಗಳು ಮೂರು ಸಾವಿರಕ್ಕಿಂತಲೂ ಹೆಚ್ಚು ಮಂದಿ ವಿದೇಶಿ ಪ್ರವಾಸಿಗರನ್ನು, ಒಂದು ಸಾವಿರ ಮಂದಿ ಸ್ವದೇಶಿ ಪ್ರವಾಸಿಗರನ್ನು ತಂದಿದೆ. ಕ್ರೂಸ್ ಸೀಸನ್ ನವೆಂಬರ್ ತಿಂಗಳಲ್ಲಿ ಆರಂಭವಾಗಿ ಮೇ ಎರಡನೇ ವಾರದಲ್ಲಿ ಕೊನೆಗೊಳ್ಳುತ್ತದೆ. ಮೊದಲು ಆಗ ಮಿಸಿ ಪನಾಮಾ ಕ್ರೂಸ್ ಮತ್ತು ಅನಂತರ ಆಗಮಿಸಿದ ಕೋಸ್ಟಾ ವಿಕ್ಟೋರಿಯ ಬಹುದೊಡ್ಡ ಕ್ರೂಸ್ ಶಿಪ್ ಆಗಿವೆ.
ಕೇಂದ್ರ ಪ್ರವಾಸೋದ್ಯಮ ಇಲಾಖೆ ಮತ್ತು ಶಿಪ್ಪಿಂಗ್ ಇಲಾಖೆ ಜಂಟಿಯಾಗಿ ಕ್ರೂಸ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತಿದ್ದು, ಭಾರತಕ್ಕೆ ಕ್ರೂಸ್ ಮೂಲಕ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಕ್ರೂಸ್ ಟೂರಿಸಂ ಹೊಸದಾಗಿ ಬೆಳವಣಿಗೆ ಆಗುತ್ತಿರುವ ಕ್ಷೇತ್ರವಾಗಿದ್ದು, ಮುಂಬಯಿಗೆ ಹೆಚ್ಚಿನ ಸಂಖ್ಯೆ ಪ್ರವಾಸಿ ಹಡಗುಗಳು ಬರುತ್ತಿದ್ದವು. ಇದೀಗ ಮಂಗಳೂರಿನಲ್ಲಿ ಕ್ರೂಸ್ ಟೂರಿಸಂ ಪ್ರಗತಿ ಕಾಣುತ್ತಿದೆ. ನವಮಂಗಳೂರು ಬಂದರು ಮಂಡಳಿಗೆ ಈ ವರ್ಷ 26ಕ್ಕೂ ಹೆಚ್ಚು ವಿದೇಶಿ ಪ್ರವಾಸಿ ಹಡಗುಗಳು ಆಗಮಿಸಲಿದೆ. ಕಳೆದ ವರ್ಷ ಒಟ್ಟು 26 ವಿದೇಶಿ ಕ್ರೂಸ್ವೆಸೆಲ್ ಬಂದಿತ್ತು.
ಮಂಗಳೂರಿನಲ್ಲಿ ಹೆಲಿಕಾಪ್ಟರ್ ಟೂರಿಸಂ ಕೂಡ ಆರಂಭ ಮಾಡಿದ್ದು, ಹೆಚ್ಚಿನ ಪ್ರಚಾರ ಆಗಬೇಕಾಗಿದೆ ಎನ್ನುತ್ತಾರೆ ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ರಮಣ. ಪ್ರವಾಸಿಗರು ಮಂಗಳೂರಿನಿಂದ ಕಾಸರಗೋಡಿನ ಬೇಕಲ್ ಪೋರ್ಟ್, ಹಳೆಬೇಡು, ಚಿಕ್ಕಮಗಳೂರಿನ ಕಾಫಿ ತೋಟ, ಕಾರ್ಕಳ ಏಕಶಿಲಾ ಗೊಮ್ಮಟ, ಮೂಡಬಿದಿರಿಯ ಸಾವಿರ ಕಂಬದ ಬಸದಿ ನೋಡಲು ಬಯಸುವುದರಿಂದ ಹೆಲಿಕಾಪ್ಟರ್ ಪ್ರಯೋಜನಕಾರಿ ಆಗುತ್ತದೆ.
ಬಂದರು ಮಂಡಳಿ ಅಧ್ಯಕ್ಷ ರಮಣ ಪ್ರಕಾರ ವಿದೇಶಿ ಪ್ರವಾಸಿಗರ ಆಗಮನದಿಂದ ಇಲ್ಲಿನ ಆರ್ಥಿಕತೆಗೆ ಉತ್ತೇಜನ ದೊರೆಯುತ್ತದೆ. ವಿದೇಶಿ ಪ್ರವಾಸಿಗರ ಆಗಮನದಿಂದ ಮಂಗಳೂರಿನಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ 300 ಮಂದಿಗೆ ಉದ್ಯೋಗ ದೊರೆಯುತ್ತದೆ. ವಿದೇಶಿ ಪ್ರವಾಸಿಗರು ಅಂದಾಜು ತಲಾ 150 ಡಾಲರ್ ಖರ್ಚು ಮಾಡುವುದರಿಂದ ಸ್ಥಳೀಯರಿಗೆ ಅನುಕೂಲ ಆಗುತ್ತದೆ. ಟೂರಿಸ್ಟ್ ವಾಹನಗಳು, ಟೂರ್ ಆಪರೇಟರ್ಸ್, ಸ್ಥಳೀಯ ಕರಕುಶಲ ವಸ್ತುಗಳ ಮಾರಾಟಗಾರರಿಗೆ ವ್ಯಾಪಾರ ಆಗುತ್ತದೆ.
ಒಂದೊಂದು ಪ್ರವಾಸಿ ಹಡಗಿನಲ್ಲಿ ಒಂದೂವರೆ ಸಾವಿರ ಮಂದಿ ಇದ್ದರೂ ಎಲ್ಲರೂ ಸೈಟ್ ಸೀಯಿಂಗ್ ಹೋಗುವುದಿಲ್ಲ. ಆದರೆ, ಕನಿಷ್ಟ ಒಂದು ಸಾವಿರ ಮಂದಿ ಹೊರ ಬಂದರೂ ಹತ್ತು ಲಕ್ಷ ರೂಪಾಯಿ ವ್ಯವಹಾರ ಅಂದರೆ ವಿದೇಶಿ ವಿನಿಮಯ ಆಗುತ್ತದೆ. ಒಂದೆರಡು ದಿವಸ ಕ್ರೂಸ್ ಮಂಗಳೂರಿನಲ್ಲಿ ನಿಲ್ಲುವಂತಹ ವ್ಯವಸ್ಥೆ ಆದಾಗ ಇನ್ನಷ್ಟು ಆದಾಯ ದೊರೆಯುತ್ತದೆ. ಅದಕ್ಕಾಗಿ ನಮ್ಮ ಪ್ರವಾಸಿ ಕೇಂದ್ರಗಳು, ಕರಕುಕುಶಲ ಕೇಂದ್ರಗಳು, ಪ್ರವಾಸಿ ಕೇಂದ್ರಗಳನ್ನು ಅಂತರಾಷ್ಟ್ರೀಯವಾಗಿ ಪ್ರಚಾರ ಮಾಡಬೇಕು. ಮಾತ್ರವಲ್ಲದೆ, ಇಂತಹ ಕೇಂದ್ರಗಳಿಗೆ ತೆರಳಲಳು ಮೂಲಭೂತ ಸೌಕರ್ಯ ಅಭಿವೃದ್ಧಿ ಮಾಡಬೇಕಾಗುತ್ತದೆ. ಇಂದು ಕಾರ್ಕಳ ಮತ್ತು ಮೂಡಬಿದಿರೆಗೆ ಹಾಗೂ ಬೇಕಲ ಪೋರ್ಟನ್ನು ಸಂಪರ್ಕಿಸುವ ಹೆದ್ದಾರಿಗಳು ಅತ್ಯಂತ ಕೆಟ್ಟ ಸ್ಥಿತಿಯಲ್ಲಿವೆ.
ಮಂಗಳೂರಿಗೆ ಆಗಮಿಸುವ ವಿದೇಶಿ ಪ್ರವಾಸಿಗರನ್ನು ಮಂಗಳೂರು ಅಲೋಶಿಯಸ್ ಚಾಪೆಲ್, ಮಿಲಾಗ್ರಿಸ್ ಚರ್ಚ್, ರೋಸಾರಿಯೋ ಚರ್ಚ್, ಮಂಗಳೂರಿನ ಸಿಟಿ ಸೆಂಟರ್ ಮಾಲ್, ದುರ್ನಾತ ಬೀರುವ ಕೆಟ್ಟ ಸ್ಥಿತಿಯಲ್ಲಿ ಇರುವ ಕೇಂದ್ರ ಮಾರುಕಟ್ಟೆಯನ್ನು ತೋರಿಸುವ ಪರಿಸ್ಥಿತಿ ಇದೆ. ಭಾರತ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಸುಸಜ್ಜಿತವಾದ ಅರ್ಬನ್ ಹಾತ್ ಮಂಗಳೂರಲ್ಲಿ ಇಲ್ಲ.
ಭಾರತೀಯ ಪ್ರವಾಸಿಗರು ಮುಂಬಯಿಯಿಂದ ಕೊಚ್ಚಿ ತನಕ ಸಾಗುವ ನಾಲ್ಕು ದಿನಗಳ ಕ್ರೂಸ್ ಪ್ರವಾಸ ನಡೆಸುತ್ತಾರೆ. ಕೆಲವರು ಮಾಲ್ದೀವ್ಸ್ ಅಥವ ಶ್ರೀಲಂಕಾ ತನಕ ಕೂಡ ಹೋಗುವುದುಂಟು. ಮುಂಬಯಿಯಿಂದ ಭಾರತೀಯರು ಪ್ರವಾಸ ಆರಂಭಿಸಿ ಕೊಚ್ಚಿ ತನಕ ಬರುತ್ತಾರೆ.
ಕ್ರೂಸ್ ಮೂಲಕ ಆಗಮಿಸುವ ವಿದೇಶಿ ಪ್ರವಾಸಿಗಳ ಅನುಕೂಲಕ್ಕಾಗಿ ಪ್ರತಿ ಬಂದರಿನಲ್ಲಿ ಶಿಪ್ ಬರ್ತಿಂಗ್, ಎಮಿಗ್ರೇಶನ್ಸೆಂಟರ್, ಪ್ರೀ ಪೇಯ್ಡ್ ಆಟೊ ವ್ಯವಸ್ಥೆ, ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳು, ಪ್ರವಾಸಿ ತಾಣಗಳ ಸಂದರ್ಶನಕ್ಕಾಗಿ ಮಲ್ಟಿ ಆ್ಯಕ್ಸಿಲ್ ಬಸ್ಗಳು, ಟೂರಿಸ್ಟ್ಕಾರು, ಆಟೊಗಳ ವ್ಯವಸ್ಥೆ ಮಾಡಲಾಗಿದೆ.