ಕೇಂದ್ರ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟಗಳ ಒತ್ತಡದಿಂದ ನಲುಗುತ್ತಿದೆ. ಒಂದು ಕಡೆ ದೇಶದ ಆರ್ಥಿಕತೆ ಹಿಂಜರಿತದತ್ತ ದಾಪುಗಾಲು ಹಾಕುತ್ತಿದ್ದರೆ, ಮತ್ತೊಂದು ಕಡೆ ಹಿಂಜರಿತ ಹಿಮ್ಮೆಟ್ಟಿಸುವ ಸಲುವಾಗಿ ಕಾರ್ಪೊರೆಟ್ ವಲಯಕ್ಕೆ ಭಾರಿ ತೆರಿಗೆ ಕಡಿತ ಮಾಡಿ ಮೈಮೇಲೆ ಮತ್ತಷ್ಟು ಭಾರ ಎಳೆದುಕೊಂಡಿದೆ.
ಪ್ರಸಕ್ತ ವಿತ್ತೀಯ ವರ್ಷದಲ್ಲಿ ವಿತ್ತೀಯ ಕೊರತೆ ಮಿತಿಯನ್ನು ಜಿಡಿಪಿಯ ಶೇ. 3.3ರಷ್ಟು ಕಾಯ್ದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದೆ. ವಿತ್ತೀಯ ಕೊರತೆ ಕಾಯ್ದುಕೊಳ್ಳುವುದು ಕೇಂದ್ರ ಸರ್ಕಾರದ ನೈತಿಕ ಜವಾಬ್ದಾರಿ. ಹೀಗಾಗಿ, ವಿತ್ತೀಯ ಕೊರತೆ ತುಂಬಿಕೊಳ್ಳಲು ಸಾರ್ವಜನಿಕ ವಲಯದ ಕಂಪನಿಗಳಲ್ಲಿನ ಹೂಡಿಕೆಯನ್ನು ಅಲ್ಪ ಪ್ರಮಾಣದಲ್ಲಿ ಹಿಂದಕ್ಕೆ ಪಡೆಯುವುದು ವಾಡಿಕೆ. ಇದರ ಮೂಲ ಉದ್ದೇಶ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಸಾರ್ವಜನಿಕರೂ ಪಾಲುದಾರರಾಗಲು ಅವಕಾಶ ಕಲ್ಪಿಸುವುದಾಗಿದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಸಾಕಷ್ಟು ಸಾರ್ವಜನಿಕ ಉದ್ದಿಮೆಗಳಲ್ಲಿ ಬಂಡವಾಳವನ್ನು ಹಿಂದಕ್ಕೆ ಪಡೆಯಲಾಗಿದೆ.
ಈಗ ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರವೂ ಸಾರ್ವಜನಿಕ ಉದ್ದಿಮೆಗಳಿಂದ ಬಂಡವಾಳ ಹಿಂದಕ್ಕೆ ಪಡೆಯಲು ಮುಂದಾಗಿದೆ. ಹಾಗಾದರೆ, ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಮಾಡಿದ್ದ ಬಂಡವಾಳ ಹಿಂಪಡೆಯುವಿಕೆಗೆ ಇಲ್ಲದ ವಿರೋಧ ಈಗ ವ್ಯಕ್ತವಾಗುತ್ತಿರುವುದಾದರೂ ಏತಕ್ಕೆ?
ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಸಾರ್ವಜನಿಕ ಉದ್ದಿಮೆಗಳಿಂದ ಶೇ. 5ರಿಂದ 10ರಷ್ಟು ಬಂಡವಾಳವನ್ನು ಹಿಂದಕ್ಕೆ ಪಡೆಯಲಾಗುತ್ತಿತ್ತು. ಕಂಪನಿಯ ಶೇ. 5-10ರಷ್ಟು ಷೇರುಗಳನ್ನು ಐಪಿಒ ಮೂಲಕ ಹೂಡಿಕೆದಾರರಿಗೆ ಮಾರಾಟ ಮಾಡಲಾಗುತ್ತಿತ್ತು. ಅಂದರೆ, ಜನಸಾಮಾನ್ಯರೂ ಕೂಡಾ ಈ ಕಂಪನಿಗಳ ಷೇರುಗಳನ್ನು ಕೊಂಡು ಪಾಲುದಾರರಾಗಲು ಅವಕಾಶವಾಗಿತ್ತು. ಜತೆಗೆ ಈ ಸಾರ್ವಜನಿಕ ಉದ್ದಿಮೆಗಳ ಸ್ಥಾನಮಾನಗಳು ಮತ್ತು ಸಂಪತ್ತುಗಳನ್ನು ಸುರಕ್ಷಿತವಾಗಿ ಕಾಪಾಡಲಾಗಿತ್ತು.
ಈಗ ನರೇಂದ್ರಮೋದಿ ಸರ್ಕಾರ ಮಾಡಲು ಹೊರಟಿರುವುದೇನೆಂದರೆ- ಮಹಾರತ್ನ ಮತ್ತು ನವರತ್ನ ಎಂದೇ ಕರೆಯಲಾಗುತ್ತಿರುವ ಓ ಎನ್ ಜಿ ಸಿ (ONGC), ಎನ್ ಟಿ ಪಿಸಿ (NTPC), ಬಿಪಿಸಿಎಲ್ (BPCL), ಐಒಸಿ (IOC), ಗೇಲ್ (GAIL) ಸೇರಿದಂತೆ 20ಕ್ಕೂ ಹೆಚ್ಚು ಕಂಪನಿಗಳನ್ನು ‘ಸರ್ಕಾರಿ ಸ್ವಾಮ್ಯ’ ಅಥವಾ ‘ಸಾರ್ವಜನಿಕ ಉದ್ದಿಮೆ’ಗಳೆಂಬ ಹಣೆಪಟ್ಟಿಯನ್ನೇ ಕಿತ್ತೊಗೆಯಲು ಮುಂದಾಗಿದೆ.
ಇದರ ಅರ್ಥ ಈ ಕಂಪನಿಗಳಲ್ಲಿರುವ ಶೇ. 75-90ರಷ್ಟು ಪಾಲಿನ ಪೈಕಿ ಶೇ. 50ರಷ್ಟು ಪಾಲನ್ನು ಮಾರಾಟ ಮಾಡಿ, ಕೇವಲ ಶೇ. 25-40ರಷ್ಟು ಪಾಲು ಮಾತ್ರ ಉಳಿಸಿಕೊಳ್ಳಲು ಮುಂದಾಗಿದೆ. ಇದರಿಂದೇನಾಗುತ್ತದೆ ಎಂದರೆ- ಈ ಕಂಪನಿಗಳಲ್ಲಿನ ಸರ್ಕಾರದ ಬಹುತೇಕ ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡಿ ಅಷ್ಟೂ ಮೊತ್ತವನ್ನು ವಿತ್ತೀಯ ಕೊರತೆ ತುಂಬಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತದೆ.
ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ- ಈ ಹಿಂದೆ ಮನಮೋಹನ್ ಸಿಂಗ್ ಅವರ ಸರ್ಕಾರ ಅಲ್ಪಪ್ರಮಾಣದಲ್ಲಿ ಬಂಡವಾಳ ಹಿಂತೆಗೆತ ಮಾಡಿದಾಗ, ಆ ಮೊತ್ತವನ್ನು ವಿತ್ತೀಯ ಕೊರತೆ ತುಂಬಿಕೊಳ್ಳಲು ಬಳಸಲಾಗುತ್ತಿತ್ತೆಂದು ಮೇಲ್ನೋಟಕ್ಕೆ ಹೇಳಿದ್ದರೂ ಅವೆಲ್ಲವೂ ಬಂಡವಾಳ ಹೂಡಿಕೆಯಾಗಿ, ಬಂಡವಾಳ ವೆಚ್ಚವಾಗಿ ಬಳಕೆಯಾಗಿದ್ದವು. ಬಂಡವಾಳದ ಮೇಲಿನ ಹೂಡಿಕೆಯಾಗಲೀ, ವೆಚ್ಚವಾಗಲೀ, ದೇಶದ ಪಾಲಿಗೆ ದೀರ್ಘಕಾಲದಲ್ಲಿ ಬೃಹತ್ ಸಂಪತ್ತನ್ನು ಸೃಷ್ಟಿಸುತ್ತದೆ.
ಆದರೆ, ನರೇಂದ್ರ ಮೋದಿ ಸರ್ಕಾರವು ಬಂಡವಾಳ ಹಿಂತೆಗೆಯುತ್ತಿರುವುದರಲ್ಲಿನ ಮೂಲ ಉದ್ದೇಶವೇ ಸಂಪೂರ್ಣವಾಗಿ ವಿತ್ತೀಯ ಕೊರತೆಯನ್ನು ನೀಗಿಸಿಕೊಳ್ಳುವುದಾಗಿದೆ. ಅಂದರೆ, ಬಂಡವಾಳ ಹಿಂತೆಗೆತದಿಂದ ಬರುವ ಅಷ್ಟೂ ಮೊತ್ತವೂ ಹದಗೆಟ್ಟ ಆರ್ಥಿಕತೆಯಿಂದಾಗಿ ಅನುಭವಿಸಿರುವ ನಷ್ಟ ಭರಿಸಲು ಬಳಕೆಯಾಗುತ್ತದೆ. ಬಂಡವಾಳ ಹೂಡಿಕೆಗಾಗಲೀ, ಬಂಡವಾಳ ವೆಚ್ಚಕ್ಕಾಗಲೀ ವಿನಿಯೋಗವಾಗುವುದಿಲ್ಲ. ಇದುವರೆಗೆ ನಮ್ಮ ದೇಶದ ಆರ್ಥಿಕ ಸುರಕ್ಷತೆಯ ಆಧಾರ ಸ್ತಂಭಗಳಂತೆ ಇದ್ದ ಸಾರ್ವಜನಿಕ ವಲಯದ ಉದ್ದಿಮೆಗಳು ವ್ಯರ್ಥವಾಗಿ ಖಾಸಗಿಯವರ ಪಾಲಾಗುತ್ತವೆ.
ಸರ್ಕಾರದ ಈ ಕಂಪನಿಗಳ ‘ಸಾರ್ವಜನಿಕ ಉದ್ದಿಮೆ’ ಹಣೆ ಪಟ್ಟಿ ಕಿತ್ತುಹಾಕುವಲ್ಲಿ ಬೇರೆಯೇ ಹುನ್ನಾರ ಇದೆ. ಯಾವುದೇ ಕಂಪನಿಯಲ್ಲಿ ಕೇಂದ್ರ ಸರ್ಕಾರವು ಅಥವಾ ರಾಜ್ಯ ಸರ್ಕಾರವು ಶೇ. 51ರ ಮೇಲ್ಪಟ್ಟು ಪಾಲು ಹೊಂದಿದ್ದರೆ, ಅಥವಾ ಉಭಯ ಸರ್ಕಾರಗಳು ಸೇರಿ ಶೇ. 51ರ ಮೇಲ್ಪಟ್ಟು ಪಾಲು ಹೊಂದಿದ್ದರೆ, ಹಾಲಿ ಇರುವ ಕಾನೂನುಗಳ ಪ್ರಕಾರ ಸಾರ್ವಜನಿಕ ಉದ್ದಿಮೆ ಎನಿಸಿಕೊಳ್ಳುತ್ತದೆ. ಈ ಕಂಪನಿಗಳ ಮೇಲೆ ಕೇಂದ್ರ ಮಹಾಲೆಕ್ಕಪರಿಶೋಧಕರು ಮತ್ತು ಸಿವಿಸಿ ಅಂದರೆ ಕೇಂದ್ರ ವಿಚಕ್ಷಣ ಆಯೋಗದ ನಿಯಂತ್ರಣ ಮತ್ತು ನಿಗಾ ಇರುತ್ತದೆ. ಏನೇ ಅವ್ಯವಹಾರ ನಡೆಸಿದರೂ ಲೆಕ್ಕಪರಿಶೋಧನೆ ವೇಳೆ ಬಯಲಿಗೆ ಬರುತ್ತದೆ, ಇಲ್ಲವೇ ಸಿವಿಸಿ ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲು ಮುಕ್ತ ಅವಕಾಶ ಹೊಂದಿರುತ್ತದೆ.
ಒಂದು ವೇಳೆ ಈ ಉದ್ದಿಮೆಗಳಲ್ಲಿ ಸರ್ಕಾರದ ಪಾಲುದಾರಿಕೆ ಶೇ. 51ಕ್ಕಿಂತ ಕಡಿಮೆ ಆದಾಗ, ಇವುಗಳು ಸಿಎಜಿ ಮತ್ತು ಸಿವಿಸಿ ನಿಗಾ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ, ನರೇಂದ್ರಮೋದಿ ಸರ್ಕಾರ ಈ ಕಂಪನಿಗಳನ್ನು ಕೇಂದ್ರ ಸರ್ಕಾರದ ನಿಗಾದಿಂದ ಮುಕ್ತಗೊಳಿಸುವ ಹುನ್ನಾರ ನಡೆಸಿದೆ. ಇದು ಮೇಲ್ನೋಟಕ್ಕೆ ಮೋದಿ ಆಪ್ತ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲೆಂದೇ ಈ ಪ್ರಸ್ತಾವ ತರಲಾಗಿದೆ ಎನ್ನಲಾಗುತ್ತಿದೆ.
ಒಎನ್‌ಜಿಸಿ, ಐಒಸಿ, ಗೇಲ್ ಮತ್ತು ಎನ್‌ಟಿಪಿಸಿ ಸೇರಿದಂತೆ ಹಲವಾರು ‘ಮಹಾರತ್ನ’ ಮತ್ತು ‘ನವರತ್ನ’ ಕಂಪನಿಗಳು ಶೀಘ್ರದಲ್ಲೇ ಸಿಎಜಿ ಮತ್ತು ಸಿವಿಸಿ ಪರಿಶೀಲನೆಯಿಂದ ಮಕ್ತವಾಗಿ ಸ್ವತಂತ್ರ ಮಂಡಳಿಯಿಂದ ನಡೆಸಲ್ಪಡುವ ಉದ್ಯಮದ ಘಟಕಗಳಾಗಿ ಪರಿಣಮಿಸುತ್ತವೆ. ನೇರವಾಗಿ ಹೇಳುವುದಾದರೆ, ಖಾಸಗೀಕರಣಗೊಳ್ಳುತ್ತವೆ. ಇದಕ್ಕಾಗಿ ಹಾಲಿ ಲಾಭದಲ್ಲಿರುವ 20ಕ್ಕೂ ಹೆಚ್ಚು ಸಾರ್ವಜನಿಕಲ ವಲಯದ ಉದ್ದಮೆಗಳ ಪಟ್ಟಿ ಸಲ್ಲಿಸುವಂತೆ ಹಣಕಾಸು ಸಚಿವಾಲಯವು ನೀತಿ ಆಯೋಗಕ್ಕೆ ಸೂಚಿಸಿದೆ.
ಸುಭಾಷ್ ಚಂದ್ರ ಗಾರ್ಗ್ ಅವರು, ಹಣಕಾಸು ಕಾರ್ಯದರ್ಶಿ ಹುದ್ದೆಯಲ್ಲಿದ್ದಾಗ ಜುಲೈ 12ರಂದು ಮಿಂಟ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ “ಸರ್ಕಾರಿ ಕಂಪನಿಯ ವ್ಯಾಖ್ಯಾನದಂತೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ 51% ಷೇರುಗಳನ್ನು ಹೊಂದಿರಬೇಕು. ಅದು ಶೇ. 51ಕ್ಕಿಂತ ಕಡಿಮೆ ಆದರೆ, ಅದು ಸರ್ಕಾರಿ ಕಂಪನಿಯ ಸ್ವರೂಪ ಕಳೆದುಕೊಳ್ಳುತ್ತದೆ. ಆದ್ದರಿಂದ ಸರ್ಕಾರದ ಪಾಲು ಶೇ. 51ಕ್ಕಿಂತ ಕಡಿಮೆ ಆದ ಕಂಪನಿಗಳಿಗೆ ಸರ್ಕಾರಿ ಉದ್ದಿಮೆಯ ಸ್ಥಾನವನ್ನು ಉಳಿಸಿಕೊಳ್ಳಬೇಕೆ ಬೇಡವೇ ಎಂದು ನಿರ್ಧರಿಸಬೇಕಾಗುತ್ತದೆ ಎಂದು ತಿಳಿಸಿದ್ದರು. ಅವರನ್ನು ಹಣಕಾಸು ಇಲಾಖೆಯಿಂದ ಇಂಧನ ಇಲಾಖೆಗೆ ಎತ್ತಂಗಡಿ ಮಾಡಲಾಗಿತ್ತು ಮತ್ತು ಅವರೀಗ ಸ್ವಯಂ ನಿವೃತ್ತಿ ಹೊಂದಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಈಗ ಓ ಎನ್ ಜಿ ಸಿ ಬದಲಿಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೆಷನ್ ಲಿಮಿಡೆಟ್ (ಬಿಪಿಸಿಎಲ್) ಮಾರಾಟಕ್ಕೆ ಮುಂದಾಗಿದೆ. ಈ ಕಂಪನಿಯಲ್ಲಿರುವ ಕೇಂದ್ರ ಸರ್ಕಾರಾದ ಶೇ. 53.29ರಷ್ಟು ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡಲಿದೆ. ಅಕ್ಟೋಬರ್ 3ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬಿಪಿಸಿಎಲ್ (BPCL) ನ ಶೇ. 53.29, ಶಿಪ್ಪಿಂಗ್ ಕಾರ್ಪೊರೆಷನ್ ಆಫ್ ಇಂಡಿಯಾ (SCI) ಶೇ. 63.75ರಷ್ಟು, ಕಂಟೈನರ್ ಕಾರ್ಪೊರೆಷನ್ (Concor) ಶೇ. 30ರಷ್ಟು ಮತ್ತು ಎನ್ಇಇಪಿಸಿಒ (NEEPCO) ದ ಶೇ. 100ರಷ್ಟು ಮತ್ತು ಟಿಎಚ್ಡಿಸಿಯ (THDC) ಶೇ. 75ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರ 2019-20ನೇ ಸಾಲಿನಲ್ಲಿ 1.05 ಲಕ್ಷ ಕೋಟಿಯನ್ನು ಬಂಡವಾಳ ಹಿಂತೆಗೆತದಿಂದ ಸಂಗ್ರಹಿಸುವ ಗುರಿ ಹೊಂದಿದೆ. ಈ ಪೈಕಿ ಬಿಪಿಸಿಎಲ್ ಮಾರಾಟದಿಂದ ಸುಮಾರು 60,000 ಕೋಟಿ ರುಪಾಯಿ ಲಭಿಸಲಿದೆ. ಉಳಿದ ಕಂಪನಿಗಳಿಂದ ಬಾಕಿ ಪೈಕಿ ಶೇ. 75ರಷ್ಟು ಸಂಗ್ರಹವಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರವು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿ ಕಾರ್ಪೊರೆಟ್ ವಲಯಕ್ಕೆ ಕೊಡಮಾಡಿದ 1.45ಲಕ್ಷ ಕೋಟಿ ರುಪಾಯಿಗಳನ್ನು ಸರಿದೂಗಿಸಲು ಸಾರ್ವಜನಿಕ ವಲಯದ ಕಂಪನಿಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಅತಿ ದೊಡ್ಡ ತೈಲ ಸಂಸ್ಕರಣ ಕಂಪನಿಯಾಗಿರುವ ಓ ಎನ್ ಜಿ ಸಿ ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಆದರೆ, ಅದರ ನೆತ್ತಿಯ ಮೇಲೆ ಮೋದಿ ಸರ್ಕಾರದ ಬಂಡವಾಳ ಹಿಂತೆಗೆತದ ಕತ್ತಿ ತೂಗುತ್ತಲೇ ಇದೆ.