ನಾಯಕನೊಬ್ಬನ ನಿಜವಾದ ನಾಯಕತ್ವ ಬೆಳಕಿಗೆ ಬರುವುದು ಸಂಕಷ್ಟದ ಹೊತ್ತಲ್ಲಿ ವಿನಃ ಸಂಭ್ರಮದ ಹೊತ್ತಲ್ಲಲ್ಲ ಎಂಬ ಮಾತಿದೆ. ಸದ್ಯದ ಭಾರತ ಎದುರಿಸುತ್ತಿರುವ ಸಂಕಷ್ಟದ ಸರಮಾಲೆ ನಿಜವಾಗಿಯೂ ಅದರ ನಾಯಕತ್ವವನ್ನು ಪರೀಕ್ಷೆಗೊಡ್ಡಿದೆ. ನಾಯಕರ ಇಚ್ಛಾಶಕ್ತಿ, ದೇಶದ ಜನತೆ ಮತ್ತು ದೇಶದ ಗಡಿಗಳ ಕುರಿತ ಅವರ ಕಾಳಜಿ ಅಸಲಿಯತ್ತು ಈಗ ಬಹಿರಂಗಗೊಳ್ಳುತ್ತಿದೆ. ಹಾಗೇ ನಾಯಕತ್ವದ ಸುತ್ತ ಕಟ್ಟಿದ ಭೂತದ ಕೋಲದಂತಹ ಪ್ರಭಾವಳಿಯ ಪದರುಗಳು ಕೂಡ ಕಳಚಿಬೀಳತೊಡಗಿವೆ.
ಅದರಲ್ಲೂ ದೇಶದ ಯಾವುದೇ ವಲಯದ ಸಾಧನೆಯನ್ನು ಆಯಾ ಸಾಧನೆಯ ಹಿಂದಿನ ಪ್ರತಿಭೆ ಮತ್ತು ಆ ಸಂಸ್ಥೆಗಳ ನಿರಂತರ ಶ್ರಮಕ್ಕೆ ಸಮರ್ಪಿಸುವ ಬದಲು, ತನ್ನದೇ ವೈಯಕ್ತಿಕ ವರ್ಚಸ್ಸು ವೃದ್ಧಿಗೆ, ಪ್ರಭಾವಳಿಯ ಕಿರೀಟಕ್ಕೆ ಅರ್ಪಿಸಿಕೊಂಡು ಬೆನ್ನು ತಟ್ಟಿಕೊಳ್ಳುವ ನಾಯಕರಿಗಂತೂ ಇಂತಹ ಸಂಕಷ್ಟದ ಹೊತ್ತು ಕತ್ತಿಯಂಚಿನ ನಡಿಗೆ. ಇಂತಹ ಕತ್ತಿಯಂಚಿನ ನಡಿಗೆ ಎಂತಹ ದುಸ್ಸಾಹಸ ಎಂಬುದು ಎಲ್ಲರೂ ಸರಿಯಿರುವಾಗ ನಾಯಕನೊಬ್ಬನಿಗೆ ಕಲ್ಪನೆ ಕೂಡ ಇರದು. ಆದರೆ, ಹೀಗೆ ಒಂದು ಕಡೆ 21 ದಿನಗಳ ಪೌರಾಣಿಕ ಲಕ್ಷ್ಮಣರೇಖೆಗೆ ಸೊಪ್ಪುಹಾಕದೆ ಅಟ್ಟಹಾಸ ಮೆರೆಯುತ್ತಿರುವ ಕರೋನಾ ಮಹಾಮಾರಿ, ಮತ್ತೊಂದು ಗಡಿಯಲ್ಲಿ ಜಗತ್ತಿನ ಬಲಿಷ್ಠ ಶಕ್ತಿರಾಷ್ಟ್ರ ಚೀನಾದ ಹದ್ದುಮೀರಿದ ನಡೆ, ಇನ್ನೊಂದು ಕಡೆ ಕರೋನಾ ಲಾಕ್ ಡೌನ್ ನೆಲಕಚ್ಚಿಸಿದ ಆರ್ಥಿಕತೆ, ಹಸಿವು, ನಿರುದ್ಯೋಗ, ಸರ್ಕಾರಿ ಆದಾಯ ಖೋತಾ, ಸಾಲುಸಾಲು ಬೆನ್ನು ತಿರುಗಿಸಲಾಗದ ಸಂಕಷ್ಟಗಳು, ಸವಾಲುಗಳು ಮುಗಿಬಿದ್ದಾಗ ಮುಖ ಉಸುಕಿನಲ್ಲಿ ಹೂತುಕೊಳ್ಳದೇ ಎದುರುಗೊಳ್ಳುವುದು ಸರಳವಲ್ಲ!
ಆದರೆ, ಜನಸೇವೆ, ದೇಶಪ್ರೇಮ, ರಾಷ್ಟ್ರೀಯವಾದ, ಯೋಧರ ತ್ಯಾಗಬಲಿದಾನಗಳ ಸ್ಮರಣೆ, ಸದಾವತ್ಸಲೆಯ ಜಪ ಮುಂತಾದವುಗಳನ್ನೆಲ್ಲಾ ಕೇವಲ ರಾಜಕೀಯ ಲಾಭ ನಷ್ಟದ ಹತಾರಗಳಾಗಿ, ವ್ಯಕ್ತಿ ಪೂಜೆಯ, ಬಹುಪರಾಕಿನ ಸರಕುಗಳಾಗಿ ಬಳಸುವ ನಿರ್ಲಜ್ಜರ ಗುಂಪೊಂದು ನಾಯಕತ್ವದ ಸುತ್ತ ನೆರೆದಿದ್ದರೆ ಮತ್ತು ಅದು ಎಲ್ಲಾ ವಾಸ್ತವಿಕ ವೈಫಲ್ಯಗಳನ್ನೂ ವ್ಯಕ್ತಿ ವರ್ಚಸ್ಸಿನ ಬಣ್ಣದ ಗರಿಗಳನ್ನಾಗಿ ಬದಲಾಯಿಸುವ ಗಿಲಿಗಿಲಿ ಪೂ ಜಾದೂ ಕರಗತ ಮಾಡಿಕೊಂಡಿದ್ದರೆ, ಅಂತಹ ಸವಾಲು ಮತ್ತು ಸಂಕಷ್ಟಗಳು ಕೂಡ ರಾಜಕಾರಣದ ಹೊಸ ಹತಾರಗಳಾಗಿ ಹೇಗೆ ಬದಲಾಗುತ್ತವೆ ಎಂಬುದಕ್ಕೂ ಸದ್ಯದ ಸ್ಥಿತಿ ನಿದರ್ಶನ.
ಕರೋನಾ ಸೋಂಕು ನೂರು ದಿನಗಳ ಲಾಕ್ ಡೌನ್ ಬಳಿಕವೂ ನಿಯಂತ್ರಣಕ್ಕೆ ಬಂದಿಲ್ಲ. ಪೂರ್ವಭಾವಿ ತಯಾರಿ ಇಲ್ಲದೆ, ವಿವೇಚನೆರಹಿತವಾಗಿ ಹೇರಲಾದ ದಿಢೀರ್ ಲಾಕ್ ಡೌನ್ ನಿಂದಾಗಿ ಕರೋನಾ ಸೋಂಕು ನಿಯಂತ್ರಣದ ಬದಲಾಗಿ ಸೋಂಕು ವ್ಯಾಪಕವಾಗಲು ಹೆಚ್ಚು ಅನುಕೂಲ ಒದಗಿಸಿದಂತಾಯ್ತು. ಸೋಂಕು ಹರಡುವ ವೇಗ ಮೊದಲ 100 ದಿನ ಕುಂಠಿತವಾದರೂ, ಆ ಬಳಿಕ ಹತ್ತಾರು ಪಟ್ಟು ವೇಗದಲ್ಲಿ ದಿಢೀರನೇ ದೇಶದ ಮೂಲೆಮೂಲೆಗೆ ತಲುಪಿತು. ಆರಂಭದಲ್ಲಿ ಸೋಂಕು ದುಪ್ಪಟ್ಟು ವೇಗ ನಿಯಂತ್ರಿಸುವಲ್ಲಿ ಲಾಕ್ ಡೌನ್ ಕೆಲಮಟ್ಟಿಗೆ ಯಶಸ್ವಿಯಾದರೂ, ಆ ಬಳಿಕ ಫ್ರೀ ಡೌನ್ ಅಥವಾ ಅನ್ ಲಾಕ್ ಡೌನ್ ಜಾರಿಯಾಗುತ್ತಲೇ ನಗರಗಳಲ್ಲಿ ಸಿಲುಕಿಕೊಂಡಿದ್ದವರು ಹಳ್ಳಿಗಳತ್ತ ಮುಖಮಾಡುತ್ತಲೇ ಸೋಂಕು ದುಪ್ಪಟ್ಟು ವೇಗ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಿತು. ಈ ನಡುವೆ ಸೋಂಕಿತರ ಸಂಖ್ಯೆ ಏರುತ್ತಿದ್ದಂತೆ ಕುಸಿದು ಬಿದ್ದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ನೂರು ದಿನಗಳ ಲಾಕ್ ಡೌನ್ ಅವಧಿಯನ್ನು ದೇಶದ ವೈದ್ಯಕೀಯ ವ್ಯವಸ್ಥೆಯನ್ನು ಕರೋನಾ ಎದುರಿಸಲು ಸರ್ಕಾರ ಎಷ್ಟರಮಟ್ಟಿಗೆ ಸಜ್ಜುಗೊಳಿಸಿದೆ ಎಂಬುದನ್ನು ಜಗಜ್ಜಾಹೀರುಗೊಳಿಸಿತು.
ಈಗ ಸರ್ಕಾರ ಬಹುತೇಕ ಕೈಚೆಲ್ಲಿ ಕುಳಿತಿದೆ. ಹಾಗೆ ನೋಡಿದರೆ ಮೇ ಮಧ್ಯಂತರದಲ್ಲಿ ಲಾಕ್ ಡೌನ್ ತೆರವುಗೊಳ್ಳತ್ತಲೇ ಸೋಂಕು ರಾಕೆಟ್ ವೇಗ ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ತನ್ನ ಜವಾಬ್ದಾರಿ ಕಳಚಿಕೊಳ್ಳುವ ಸೂಚನೆಗಳನ್ನು ನೀಡಿತ್ತು. ಸೋಂಕಿನೊಂದಿಗೆ ಜೀವಿಸುವುದನ್ನು ಕಲಿತುಕೊಳ್ಳಬೇಕು ಎಂದು ತಿಂಗಳ ಹಿಂದೆ ಕರೋನಾ ಮಣಿಸಿಬಿಡುತ್ತೇವೆ ಎಂದು 21 ದಿನಗಳ ಗಡುವು ಕೊಟ್ಟಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೇಳಿದಾಗಲೇ ಇದು ಸ್ಪಷ್ಟವಾಗಿತ್ತು. ಆ ಬಳಿಕ ಕಳೆದ ವಾರದ ಕರೋನಾ ಭಾಷಣದಲ್ಲೂ ಅವರು ಮತ್ತೊಮ್ಮೆ ಅದನ್ನು ದೃಢಪಡಿಸಿದ್ದಾರೆ.
ಇನ್ನು ಚೀನಾ ವಿಷಯದಲ್ಲಿ ಕೂಡ ಸರಿಸುಮಾರು ಎರಡು ತಿಂಗಳಿನಿಂದ ಗಡಿಯಲ್ಲಿ ಸೇನಾ ಪಡೆಗಳ ಜಮಾವಣೆ ಆಗುತ್ತಲೇ ಇದ್ದರೂ, ಗಡಿಯುದ್ದಕ್ಕೂ ಹಲವು ಕಡೆ ಗಡಿ ಉಲ್ಲಂಘನೆ ಆಗುತ್ತಿದ್ದರೂ ಸೇನಾ ಸಂಘರ್ಷ ನಡೆದು 20 ಮಂದಿ ಭಾರತೀಯ ಯೋಧರು ಬರ್ಬರವಾಗಿ ಹತ್ಯೆಯಾದರೂ ಪ್ರಧಾನಮಂತ್ರಿಗಳು ಮೌನ ವಹಿಸಿದ್ದರು. ಜೂನ್ 19ರ ಸರ್ವಪಕ್ಷ ಸಭೆಯ ಬಳಿಕವಂತೂ ಗಡಿಯಲ್ಲಿ ಏನೂ ನಡೆದೇ ಇಲ್ಲ ಎಂಬ ದಾಟಿಯಲ್ಲಿ ಮಾತನಾಡಿದ್ದ ಅವರು, ಭಾರತದ ಗಡಿಯೊಳಕ್ಕೆ ಯಾರೂ ಕಾಲಿಟ್ಟಿಲ್ಲ, ಯಾರೂ ಬರಲಾರರು ಕೂಡ ಎಂದಿದ್ದರು. ಆದರೆ, ವಾಸ್ತವವಾಗಿ ಗಡಿಯಲ್ಲಿ ಚೀನಾ ಭಾರತದ ಭೂಭಾಗ ಆಕ್ರಮಿಸಿಕೊಂಡಿದೆ ಮತ್ತು ಆ ವಿಷಯಕ್ಕೆ ನಡೆದ ಸಂಘರ್ಷದಲ್ಲೇ ಭಾರತೀಯ ಯೋಧರ ಬಲಿದಾನವಾಗಿದೆ ಎಂಬುದನ್ನು ವರದಿಗಳು ಉಪಗ್ರಹ ಚಿತ್ರ ಸಹಿತವಾಗಿ ಸಾಬೀತು ಮಾಡಿದ್ದವು.
ಕರೋನಾ ರೀತಿಯಲ್ಲೇ ಏನೂ ಆಗಿಲ್ಲ, ಏನೂ ಆಗಲ್ಲ ಎಂಬ ವರಸೆಯಲ್ಲೇ ಚೀನಾ ಗಡಿ ಆಕ್ರಮಣದ ವಿಷಯವನ್ನೂ ನಿಭಾಯಿಸಲು ಪ್ರಯತ್ನಿ ಸೋತ ಬಳಿಕ, ಪ್ರತಿಪಕ್ಷಗಳು ಮತ್ತು ಕೆಲವು ಮಾಧ್ಯಮಗಳ ಪ್ರಶ್ನೆಗಳು ದೇಶದ ಜನರಿಗೆ ತಮ್ಮ ಪ್ರಾಪಗಾಂಡಾ ಮೀರಿ ಹೆಚ್ಚು ಮನವರಿಕೆಯಾಗುತ್ತಿವೆ ಎನಿಸುತ್ತಲೇ ಹೊಸ ತಂತ್ರಗಾರಿಕೆಯ ಭಾಗವಾಗಿ ದಿಢೀರ್ ಲಡಾಕ್ ಭೇಟಿ ನಿಗದಿಯಾಗಿತ್ತು. ಏನೂ ನಡೆದೇ ಇಲ್ಲ ಎನ್ನುತ್ತಲೇ ಚೀನಾದ ವಿರುದ್ಧ ಯೋಧರು ತೋರಿದ ಸಾಹಸವನ್ನು ಶ್ಲಾಘಿಸುವ, ಲಡಾಕ್ ನ ಗಲ್ವಾನಾದ ಗಡಿಯಲ್ಲಿ ನಡೆದ ಆಕ್ರಮಣವನ್ನು ಸುಮಾರು 250 ಕಿಮೀ ದೂರದ ನಿಮುವಿನಲ್ಲಿಯೇ ಪರಿಶೀಲಿಸಿ ಇಡೀ ದಿನ ಯೋಧರೊಂದಿಗೆ ಕಳೆದು ವಾಪಸು ಬಂದಿದ್ದಾರೆ ಪ್ರಧಾನಿ.
ಇಡೀ ಭೇಟಿ ಸಂಪೂರ್ಣವಾಗಿ ಕುಸಿದ ವರ್ಚಸ್ಸು ವೃದ್ಧಿಯ ಪ್ರಯತ್ನ ಎಂಬ ಮಾತುಗಳು ರಾಜಕೀಯ ವಲಯದಿಂದಷ್ಟೇ ಅಲ್ಲದೆ, ರಾಷ್ಟ್ರೀಯ ಮಾಧ್ಯಮದಿಂದಲೂ ಕೇಳಿಬಂದಿದೆ. ಯಾಕೆಂದರೆ, ಗಡಿಯ ಸಮೀಪದಲ್ಲಿ ನಿಂತು ಮಾತನಾಡಿದ ಮೋದಿ, ಇದು ಆಕ್ರಮಣಕಾರಿ ನೀತಿಯ ಕಾಲವಲ್ಲ, ಅಭಿವೃದ್ಧಿಯ ಕಾಲ. ದುರ್ಬಲರು ಯಾವಾಗಲೂ ಶಾಂತಿಗಾಗಿ ಮುಂದಾಗುವುದಿಲ್ಲ. ಶಾಂತಿ ಬಯಸುವುದೆಂದರೆ ಅದು ದಿಟ್ಟತನದ ಮೊದಲ ಹಂತ ಎಂಬ ಮಾತುಗಳನ್ನಾಡಿದ್ದಾರೆಯೇ ವಿನಃ ಚೀನಾದ ವಿರುದ್ಧ ಯಾವುದೇ ನೇರ ಎಚ್ಚರಿಕೆಯಾಗಲೀ, ಚೀನಾ ಹೆಸರಿನ ಪ್ರಸ್ತಾಪವಾಗಲೀ ಮಾಡಲೇ ಇಲ್ಲ! ಮತ್ತದೇ ಪುರಾಣದ ಪಾತ್ರಗಳ ಪ್ರಸ್ತಾಪ, ಯೋಧರಿಗೆ ಸಮಾಧಾನ ಮತ್ತು ಅವರ ಸಾಹಸಕ್ಕೆ ಪ್ರಸಂಶೆಯ ಮಾತುಗಳನ್ನು ಆಡಿದ್ದಾರೆ. ಸುಸಜ್ಜಿತ ಆಸ್ಪತ್ರೆ, ಮತ್ತು ಅತ್ಯಂತ ಶಿಸ್ತುಬದ್ಧವಾಗಿ ಕ್ಯಾಮರಾಗಳಿಗಾಗಿಯೇ ಸಜ್ಜುಗೊಳಿಸಿದಂತೆ ಕೂರಿಸಿದ್ದ ಯೋಧರು, ಪ್ರತಿ ಹೆಜ್ಜೆಹೆಜ್ಜೆಯನ್ನೂ ಚಿತ್ರೀಕರಿಸಿದ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಮಾಡಿದ ವ್ಯವಸ್ಥಿತ ಆನ್ ಲೈನ್ ತಂಡ, ಎಲ್ಲವೂ ಇದೊಂದು ಪಕ್ಕಾ ಪ್ರಭಾವಳಿ ಕಟ್ಟುವ ಸಾಹಸ ಎಂಬುದಕ್ಕೆ ಪೂರಕವಾಗಿದ್ದವು. ಭಕ್ತರು ಆ ಫೋಟೋಗಳಲ್ಲಿ ಮೋದಿಯವರ ಚಿತ್ರದ ಅಕ್ಕಪಕ್ಕ ಹುಲಿ, ಸಿಂಹದ ನೆರಳು ಫೋಟೋಶಾಪ್ ಮಾಡಿ, ಚೀನಾಕ್ಕೆ ಗಡಿಯಲ್ಲೇ ನಿಂತು ಎಚ್ಚರಿಕೆ ಕೊಟ್ಟ ಭಾರತದ ಸಿಂಹ ಎಂದು ಟ್ರೋಲ್ ಮಾಡಿದ್ದೂ ಆಯಿತು.
ಆ ಮೂಲಕ ಚೀನಾ ಆಕ್ರಮಣದ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮತ್ತು ಕೆಲವು ಮಾಜಿ ಯೋಧರು ಎತ್ತಿದ್ದ ಪ್ರಶ್ನೆಗಳಿಗೆ ಮತ್ತು ವಾಸ್ತವಾಂಶ ದೇಶದ ಜನತೆಯ ಮುಂದಿಡುವಂತೆ ಕೇಳಬಂದಿದ್ದ ಆಗ್ರಹಕ್ಕೆ ಉತ್ತರ ನೀಡಲಾಯಿತು.
ಕರೋನಾ ವಿಷಯದಲ್ಲಿ ಕೂಡ ಇಂತಹದ್ದೇ ದಾರಿ ಕಂಡುಕೊಂಡಂತೆ ದಿಢೀರನೇ ಕಳೆದ ಎರಡು ಮೂರುದಿನಗಳಿಂದ ಹೊಸ ಹೊಸ ಸುದ್ದಿಗಳು ಕೇಂದ್ರ ಸರ್ಕಾರದ ಕಡೆಯಿಂದ ಹೊರಬೀಳತೊಡಗಿವೆ. ಚೀನಾದ ವಿಷಯದಲ್ಲಿ ಆದಂತೆಯೇ ಈ ವಿಷಯದಲ್ಲಿ ಕೂಡ ವಾಸ್ತವಾಂಶಗಳ ಬಗ್ಗೆ ಸರ್ಕಾರ ಚಕಾರವೆತ್ತುತ್ತಿಲ್ಲ. ದೇಶದಲ್ಲಿ ಕರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ 100 ದಿನಗಳ ಲಾಕ್ ಡೌನ್ ವೈಫಲ್ಯಕ್ಕೆ ಕಾರಣವೇನು ಮತ್ತು ಹೊಣೆ ಯಾರು? ದೇಶದ ಅಪಾರ ಸಾವುನೋವು ಮತ್ತು ಆರ್ಥಿಕ ನಷ್ಟಕ್ಕೆ ಯಾರು ಕಾರಣ? ಈಗಲೂ ಸೋಂಕು ದೇಶದಲ್ಲಿ ಸಮುದಾಯದ ಮಟ್ಟಕ್ಕೆ ಹರಡಿಲ್ಲ ಎಂಬುದು ಎಷ್ಟರಮಟ್ಟಿಗೆ ನಿಜ? ಯಾಕೆ ವ್ಯಾಪಕ ಪರೀಕ್ಷೆಗಳನ್ನು ನಡೆಸುತ್ತಿಲ್ಲ? ಕರೋನಾ ಸೋಂಕು ಪರೀಕ್ಷೆ ಸೇರಿದಂತೆ ವೈದ್ಯಕೀಯ ವೆಚ್ಚದಲ್ಲಿ ಆಗಿರುವ ಭಾರೀ ಏರಿಕೆಗೆ ಕಾರಣವೇನು? ಸರ್ಕಾರಿ ವೈದ್ಯಕೀಯ ಸಿಬ್ಬಂದಿಗೆ ವೈದ್ಯಕೀಯ ಸುರಕ್ಷಾ ಸಾಧನ ಕೊರತೆ ಮತ್ತು ಕಳಪೆ ಗುಣಮಟ್ಟಕ್ಕೆ ಕಾರಣವೇನು? ಸರ್ಕಾರದ ತಜ್ಞರ ಪ್ರಕಾರ ಸೋಂಕು ಈಗ ಯಾವ ಹಂತದಲ್ಲಿದೆ ಮತ್ತು ಯಾವಾಗ ಕಡಿಮೆಯಾಗಲಿದೆ? ಎಂಬ ಯಾವ ನಿರ್ಣಾಯಕ ಪ್ರಶ್ನೆಗಳಿಗೂ ಸರ್ಕಾರವಾಗಲೀ, ಮೋದಿಯವರಾಗಲೀ ಉತ್ತರ ನೀಡುತ್ತಿಲ್ಲ!
ಬದಲಾಗಿ ಕರೋನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಮತ್ತು ಆ ಮೂಲಕ ತಪ್ಪು ನಿರ್ಧಾರಗಳು ಮತ್ತು ಅಕಾಲಿಕ ಕ್ರಮಗಳ ಮೂಲಕ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದ ಪ್ರಮಾದದಿಂದ ಜಾರಿಕೊಳ್ಳಲು ಹೊಸ ಅಸ್ತ್ರ ಬಿಡಲಾಗಿದೆ. ಅದು ಆಗಸ್ಟ್ 15ರ ಸ್ವಾತಂತ್ರ್ಯ ದಿನದ ಹೊತ್ತಿಗೆ ಭಾರತದ ತನ್ನದೇ ಆದ ಚುಚ್ಚುಮದ್ದು ಬಳಕೆಗೆ ತರಲಿದೆ ಎಂಬುದು! ವಾಸ್ತವವಾಗಿ ಚೀನಾ ಗಡಿ ವಿಷಯದಂತೆಯೇ ಚಚ್ಚುಮದ್ದು ವಿಷಯದಲ್ಲಿ ಕೂಡ ವಾಸ್ತವಾಂಶಗಳನ್ನು ಬೇಕೆಂದೇ ಮರೆಯಲಾಗುತ್ತಿದೆ. ಚುಚ್ಚುಮದ್ದಿನ ಕ್ಲಿನಿಕಲ್ ಪ್ರಯೋಗದ ಅವಧಿಯ ಮಿತಿಯನ್ನು ನಿರ್ಲಕ್ಷಿಸಿ, ಐಸಿಎಂಆರ್ ಮುಖ್ಯಸ್ಥರು ಕೇವಲ 50 ದಿನದಲ್ಲಿ ಕ್ಲಿನಿಕಲ್ ಟ್ರಯಲ್ ಮಾಡಿ ಸಾರ್ವಜನಿಕ ಬಳಕೆಗೆ ಆಗಸ್ಟ್ ಹದಿನೈದರ ಹೊತ್ತಿಗೆ ತಮ್ಮ ಕೈಗಿಡಬೇಕು ಎಂದು ಮಾನವರ ಮೇಲೆ ಪ್ರಯೋಗದ ಹೊಣೆ ವಹಿಸಿಕೊಂಡಿರುವ ವೈದ್ಯಕೀಯ ಸಂಸ್ಥೆಗಳಿಗೆ ಜು.2ರಂದು ತಾಕೀತು ಮಾಡಿದ್ದಾರೆ. ತಾನೇ ವಿಧಿಸಿದ ಔಷಧಿಗಳ ಮಾನವ ಪ್ರಯೋಗದ ಮೇಲಿನ ಎಲ್ಲಾ ಷರತ್ತುಗಳನ್ನು ಉಲ್ಲಂಘಿಸಿ ಐಸಿಎಂಆರ್ ಹೀಗೆ ತರಾತುರಿ ಮಾಡುತ್ತಿರುವುದಕ್ಕೆ ಕಾರಣ; ಆಗಸ್ಟ್ 15ರಂದು ದೇಶವನ್ನುದ್ದೇಶಿಸಿ ಮಾತನಾಡುವಾಗ ಮೋದಿಯವರು ಕರೋನಾಕ್ಕೆ ಚುಚ್ಚುಮದ್ದು ಕಂಡುಹಿಡಿದ ಮೊದಲ ದೇಶ ಭಾರತ ಎಂದು ಘೋಷಿಸಿ, ತಮ್ಮ ಪ್ರಭಾವಳಿಗೆ ಮತ್ತೊಂದು ಗರಿ ಮೂಡಿಸಿಕೊಳ್ಳುವ ಧಾವಂತ ಎಂಬುದು ಗುಟ್ಟೇನಲ್ಲ!
ಈ ನಡುವೆ ಕರೋನಾ ಮತ್ತು ಚೀನಾ ವಿಷಯದಲ್ಲಿ ಮೋದಿಯವರು ಹೀಗೆ ದಿಢೀರ್ ಸಕ್ರಿಯರಾಗಿ ತಮ್ಮ ಟ್ರೋಲ್ ಪಡೆಗಳಿಗೆ ಪುರುಸೊತ್ತಿಲ್ಲದಷ್ಟು ಕೆಲಸ ಕೊಟ್ಟಿರುವುದರ ಹಿಂದೆ ಸಮೀಪಿಸುತ್ತಿರುವ ಬಿಹಾರ ಚುಣಾವಣೆಯ ಸಂಗತಿಯೂ ಒಂದು ಕಾರಣವೆನ್ನಲಾಗುತ್ತಿದೆ. ಆ ಹಿನ್ನೆಲೆಯಲ್ಲಿಯೇ ಲಡಾಕ್ ದಿಢೀರ್ ಭೇಟಿ ಮತ್ತು ಕರೋನಾ ಚುಚ್ಚುಮದ್ದು ಕುರಿತ ಐಸಿಎಂಆರ್ ತರಾತುರಿ ಕಟ್ಟಾಜ್ಞೆಗಳು ಹೊರಬಿದ್ದಿವೆ. ಆ ಮೂಲಕ ಈವರೆಗೆ ಈ ವಿಷಯಗಳಲ್ಲಿ ಸರ್ಕಾರ ಮತ್ತು ಸ್ವತಃ ಪ್ರಧಾನಿ ಅನುಭವಿಸಿರುವ ಹಿನ್ನಡೆ ಮತ್ತು ಹೀನಾಯ ಸೋಲನ್ನು ಈ ವ್ಯವಸ್ಥಿತವಾಗಿ ರೂಪಿಸಿದ ‘ಯಶಸ್ಸು’ಗಳಲ್ಲಿ ಮರೆಮಾಚುವ ಉದ್ದೇಶದಿಂದಲೇ ಇದೆಲ್ಲಾ ದಿಢೀರನೇ ಗರಿಬಿಚ್ಚಿವೆ ಎಂಬ ಮಾತೂ ಇದೆ.
ಬಾಲಾಕೋಟ್ ದಾಳಿಯಂತಹ ಸೇನಾ ಕಾರ್ಯಾಚರಣೆ ಮತ್ತು ಆ ಹಿಂದಿನ ಪುಲ್ವಾಮಾ ದಾಳಿಯಂತಹ ಯೋಧರ ಹತ್ಯಾಕಾಂಡವನ್ನು ಕೂಡ ನ್ಯಾಯಾಲಯಗಳ ಸೂಚನೆಯನ್ನು ಮೀರಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಭಾರೀ ಜನಾದೇಶವನ್ನೂ ಪಡೆದ ಮೋದಿಯವರು, ಈಗಲೂ ಅದೇ ದಾಳ ಉರುಳಿಸಿದ್ದಾರೆ. ಚೀನಾ ವಿಷಯದಲ್ಲಿ ವಾಸ್ತವವಾಗಿ ಭಾರತಕ್ಕೆ ಹಿನ್ನಡೆಯಾಗಿದ್ದೂ ಅದನ್ನು ತಮ್ಮ ಲೇಯ್-ಲಡಾಕ್ ಭೇಟಿ ಮೂಲಕ ಮರೆಮಾಚಲಾಗುತ್ತಿದೆ. ಹಾಗೇ ಕರೋನಾ ನಿಯಂತ್ರಣ ಮತ್ತು ಲಾಕ್ ಡೌನ್ ವೈಫಲ್ಯಗಳನ್ನು ಕೂಡ ಹೊಸ ಚುಚ್ಚುಮದ್ದು ಮೂಲಕ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ವಿಶ್ಲೇಷಣೆಗಳಿವೆ.
ಅಂದರೆ, ಎಲ್ಲವನ್ನೂ ಚುನಾವಣಾ ಲಾಭ ಮತ್ತು ಸ್ವಂತದ ವರ್ಚಸ್ಸು ವೃದ್ಧಿಯ, ಪ್ರಭಾವಳಿಯ ಅವಕಾಶವಾಗಿ ಮಾತ್ರ ನೋಡುವ ನಾಯಕರೊಬ್ಬರು ದೇಶದ ಚುಕ್ಕಾಣಿ ಹಿಡಿದರೆ, ಗಡಿಯ ವಿಷಯದಲ್ಲಾಗಲೀ, ಸೋಂಕು ಮತ್ತು ಚುಚ್ಚುಮದ್ದಿನ ವಿಷಯವೇ ಆಗಲೀ, ಎಲ್ಲವೂ ರಾಜಕೀಯ ಲಾಭನಷ್ಟದ ಸಂಗತಿಯೇ ವಿನಃ ಅಸಲೀ ದೇಶದ ಮತ್ತು ದೇಶಬಾಂಧವರ ಕಾಳಜಿಯ ಸಂಗತಿಯಲ್ಲ! ದೇಶದ ಗಡಿ ಮತ್ತು ಸಮಗ್ರತೆಯ ಮೇಲೆ ಮತಪೆಟ್ಟಿಗೆಯ ನೆರಳು ಚಾಚಿದ್ದರೆ, ಆಸ್ಪತ್ರೆ ಮತ್ತು ಪ್ರಯೋಗಾಲಯಗಳ ವಿಜ್ಞಾನದ ಮೇಲೆ ರಾಜಕಾರಣದ ಹಸ್ತ ಚಾಚಿದೆ!