ವಾರದ ಹಿಂದೆ ಬಾಂಗ್ಲಾದೇಶ ಕಡಲ ತೀರಕ್ಕೆ ಬಂದಿಳಿದ ರೊಹಿಂಗ್ಯಾ ನಿರಾಶ್ರಿತರನ್ನು ಬಂಗಾಳ ಕೊಲ್ಲಿಯ ದ್ವೀಪ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಯನ್ಮಾರ್ ನಿಂದ ಹೊರಹಾಕಲ್ಪಡುವ ರೊಹಿಂಗ್ಯಾ ಸಂತ್ರಸ್ತರು ಸಾಮಾನ್ಯವಾಗಿ ಬಾಂಗ್ಲಾದೇಶ ಇಲ್ಲವೇ ಭಾರತದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನಂತಹ ರಾಜ್ಯಗಳನ್ನ ಅರಸಿ ಬರುತ್ತಾರೆ. ಆದರೆ ಈ ರೀತಿ ಬಂದ ಸಂತ್ರಸ್ತರನ್ನ ಯಾವ ದೇಶವೂ ಆಶ್ರಯ ನೀಡಲು ಸಿದ್ಧರಿಲ್ಲ. ಈಗಾಗಲೇ ಬಾಂಗ್ಲಾದೇಶ ವಿದೇಶಾಂಗ ಸಚಿವ, ತಮ್ಮ ಸಮುದ್ರ ಗಡಿಯಲ್ಲಿ ಬಂದಿಳಿದ ಸಂತ್ರಸ್ತರು ನಮ್ಮ ಜವಾಬ್ದಾರರಲ್ಲ, ಅದೇನಿದ್ದರೂ ಮಯನ್ಮಾರ್ ಸರಕಾರದ ಜವಾಬ್ದಾರಿ ಅವರನ್ನೇ ಕೇಳಬೇಕು ಎಂದಿದ್ದರು. ಮಾತ್ರವಲ್ಲದೇ ವಿಶ್ವಸಂಸ್ಥೆಯ UNHCR ಈ ರೀತಿ ಬಾಂಗ್ಲಾದೇಶದ ಕಡಲ ತೀರದಲ್ಲಿರುವ ಮಂದಿ ವಾರಗಳಿಂದ ಅನ್ನ, ಆಹಾರವಿಲ್ಲದೇ ಚಡಪಡಿಸುತ್ತಿದ್ದಾರೆ ಎಂದಿತ್ತು.

ಅಧಿಕೃತ ವರದಿ ಪ್ರಕಾರ ಕರೋನಾ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಯೋಗವಾಸ್ಯವಲ್ಲದ ಬಂಗಾಳ ಕೊಲ್ಲಿಯ ಭಶನ್ ಚಾರ್ ದ್ವೀಪಕ್ಕೆ ಸ್ಥಳಾಂತರ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಈ ದ್ವೀಪವು ಮನುಷ್ಯ ವಾಸಕ್ಕೆ ಸೂಕ್ತವಲ್ಲವೆಂದೇ ಪರಿಗಣಿಸಲಾಗಿದೆ. ಮಾತ್ರವಲ್ಲದೇ ಇಲ್ಲಿ ರೊಹಿಂಗ್ಯಾ ನಿರಾಶ್ರಿತರ ಹೊರತು ಇನ್ಯಾರೂ ವಾಸಿಸುತ್ತಿಲ್ಲ. ಬಾಂಗ್ಲಾದೇಶ ತನ್ನ ದೇಶದಲ್ಲಿರುವ ಕಾಕ್ಸ್ ಬಜಾರ್‌ನಲ್ಲಿರುವ ನಿರಾಶ್ರಿತರನ್ನ ಇಲ್ಲಿಗೇ ಸ್ಥಳಾಂತರಗೊಳಿಸುತ್ತಿದೆ.
“ಬಾಂಗ್ಲಾದೇಶವು ಅತ್ಯಂತ ಕಠಿಣ ಸವಾಲನ್ನಹ ಎದುರಿಸುತ್ತಾ ಇದೆ. ಹಾಗಂತ ರೊಹಿಂಗ್ಯಾ ನಿರಾಶ್ರಿತರನ್ನ ಕನಿಷ್ಠ ಆರೋಗ್ಯ ಸುರಕ್ಷತೆವಿಲ್ಲದ ಹಾಗೂ ಪ್ರವಾಹ ಪೀಡಿತ ದ್ವೀಪಕ್ಕೆ ಕಳುಹಿಸಿ ಕೊಟ್ಟಿರುವುದು ಸರಿಯಾದ ಕ್ರಮವಲ್ಲ” ಎಂದು ಹ್ಯೂಮನ್ ರೈಟ್ಸ್ ವಾಚ್ ನ ಏಷ್ಯಾ ಖಂಡದ ಮುಖ್ಯ ನಿರ್ದೇಶಕ ಬ್ರಾಡ್ ಆಡಮ್ಸ್ ತಿಳಿಸಿದ್ದಾರೆ.
ರೋಗ ತಡೆಗಟ್ಟುವ ದೃಷ್ಟಿಯಿಂದ ಕ್ವಾರೆಂಟೈನ್ ಗೆ ಒಳಪಡಿಸುವ ಅನಿವಾರ್ಯತೆ ಇದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅವರನ್ನ ಕುಟುಂಬಿಕರಿಂದ ದೂರವಿರಿಸಬಹುದೇ ಹೊರತು ಈ ರೀತಿಯಾದ ಕ್ರಮ ಸರಿಯಲ್ಲ ಎಂದರು.
ಬಾಂಗ್ಲಾದೇಶವು ಕಳೆದ ವರುಷವೇ 1 ಲಕ್ಷ ರೊಹಿಂಗ್ಯಾ ನಿರಾಶ್ರಿತರಿಗಾಗಿ ಭಶನ್ ಚಾರ್ ದ್ವೀಪದಲ್ಲೇ ವ್ಯವಸ್ಥೆಯನ್ನ ಕಲ್ಪಿಸಲು ಆರಂಭಿಸಿದೆ. ಆದರೆ ಆ ದ್ವೀಪ ಪ್ರದೇಶ ಅನ್ನೋದು ತೀವ್ರ ತರಹದ ಪ್ರವಾಹಕ್ಕೆ ಸಿಲುಕುವ ದ್ವೀಪವೆಂದೇ ತಿಳಿದಿರೋ ವಿಚಾರ. ಆದರೆ ಬಾಂಗ್ಲಾದೇಶ ಗಡಿಯಲ್ಲಿ ಆಗಮಿಸುವ ನಿರಾಶ್ರಿತರ ಮೇಲಿನ ನಿಯಂತ್ರಣಕ್ಕಾಗಿ ಇದೇ ಅಗತ್ಯವೆಂದು ಭಾವಿಸಿಕೊಂಡಿದೆ.
ಆಶ್ರಯವನ್ನ ಅರಸಿ ಹೊರಟಿದ್ದ ಬೋಟ್ ವೊಂದನ್ನ ಮಲೇಷ್ಯಾದ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅದರಲ್ಲಿ ಹದಿನೈದು ಮಹಿಳೆಯರು ಹಾಗೂ 5 ಮಕ್ಕಳಿದ್ದರು ಎನ್ನಲಾಗಿದೆ. ಇನ್ನೊಂದೆಡೆ ಮಲೇಷ್ಯಾ ನಿರಾಕರಿಸಿದ ಬೋಟ್‌ಗಳು ಕರೋನಾ ನಿರ್ಬಂಧದಿಂದಾಗಿ ಬಂಗಾಳ ಕೊಲ್ಲಿಯಲ್ಲಿ ನೆಲೆಸಿದ್ದು, ಸಾವು ಬದುಕಿನ ನಡುವೆ ಜೀವನವಿದೆ. ವಿಶ್ವ ಸಂಸ್ಥೆ ಆ ರೀತಿ ಬಂಗಾಳ ಕೊಲ್ಲಿಯಲ್ಲಿ ಬಾಕಿಯಾದ ರೊಹಿಂಗ್ಯಾ ನಿರಾಶ್ರಿತರನ್ನ ದಡಕ್ಕೆ ಕರೆಸಿಕೊಳ್ಳುವಂತೆ ಬಾಂಗ್ಲಾಕ್ಕೆ ತಿಳಿಸಿದರೂ ಬಾಂಗ್ಲಾದೇಶದ ಅಧಿಕಾರಿಗಳು ನಿರಾಕರಿಸಿದ್ಧಾರೆ. ಅದಕ್ಕೆ ಬಾಂಗ್ಲಾ ನೀಡುವ ಕಾರಣವೂ ವಿಶ್ವಸಂಸ್ಥೆಯನ್ನೇ ಇಕ್ಕಟ್ಟಿಗೆ ಸಿಲುಕಿಸುವಂತದ್ದು. ಅದೇನೆಂದರೆ, ಬಂಗಾಳ ಕೊಲ್ಲಿ ಸುತ್ತಮುತ್ತ ಎಂಟು ದೇಶಗಳಿದ್ದು ನಾವೇ ಯಾಕಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕು ಅನ್ನೋದಾಗಿದೆ.
ಇನ್ನು ರೋಹಿಂಗ್ಯಾ ನಿರಾಶ್ರಿತರನ್ನ ಭಾಶನ್ ಚಾರ್ ದ್ವೀಪಕ್ಕೆ ಕಳಿಸುವ ಮುನ್ನ ವಿಶ್ವಸಂಸ್ಥೆಯ ನಿರಾಶ್ರಿತರ ಪರವಿರುವ ಸಂಸ್ಥೆ UNHCR ಸ್ಥಳಾಂತರಗೊಳ್ಳುವವರೆಲ್ಲರ ನಿಖರ ಮಾಹಿತಿ ದಾಖಲಿಸಿಕೊಳ್ಳುವಂತೆ ತಿಳಿಸಿದೆ. ಅಲ್ಲದೇ ಕ್ವಾರೆಂಟೈನ್ ಒಳಪಡಿಸುವ ಪ್ರದೇಶದಲ್ಲೂ ಸೂಕ್ತ ಆರೋಗ್ಯ ವ್ಯವಸ್ಥೆ ಕಲ್ಪಿಸುವಂತೆಯೂ ತಿಳಿಸಿದೆ.
ಎಪ್ರಿಲ್ ತಿಂಗಳ ಮಧ್ಯಕ್ಕೆ ಇದೇ ರೀತಿ ಬಂಗಾಳ ಕೊಲ್ಲಿಯಲ್ಲಿ ಸಿಲುಕಿದ್ದ 396 ನಿರಾಶ್ರಿತರನ್ನ ರಕ್ಷಿಸಲಾಗಿತ್ತು. ಅದರಲ್ಲಿ 60 ಮಂದಿ ಮೃತಪಟ್ಟಿದ್ದರು. ಪ್ರತಿ ವರುಷ ಸಾವಿರಾರು ರೊಹಿಂಗ್ಯಾ ನಿರಾಶ್ರಿತರು ಕಿರಿದಾದ ಬೋಟ್‌ಗಳಲ್ಲಿ ಅಪಾಯಕಾರಿ ಪಯಣ ಬೆಳೆಸುತ್ತಾರೆ. ಇದರಿಂದಾಗಿ ನೂರಾರು ಜನ ಸಾವನ್ನಪ್ಪುತ್ತಾರೆ. ಒಂದು ಕಡೆ ತಮ್ಮ ಮೂಲ ನೆಲೆ ಮಯಾನ್ಮಾರ್ ನಲ್ಲಿ ಆಡಳಿತ ವರ್ಗದಿಂದಲೇ ದೌರ್ಜನ್ಯಕ್ಕೊಳಗಾಗಿ ಊರು ಬಿಡುತ್ತಿರುವ ಈ ವರ್ಗವು ಅನಿವಾರ್ಯವಾಗಿ ಇನ್ನಿತರ ದೇಶಗಳನ್ನ ಅರಸಿ ಹೊರಡುತ್ತವೆ.

ಒಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಸಿರಿಯಾ ಅತೀ ಹೆಚ್ಚು ನಿರಾಶ್ರಿತರನ್ನ ಬಿಟ್ಟಕೊಟ್ಟರೆ, ನಾಲ್ಕನೇ ಸ್ಥಾನದಲ್ಲಿ ಮಯನ್ಮಾರ್ ಇದ್ದು, ಇಲ್ಲಿ ನೆಲೆಸಿರುವ ರೊಹಿಂಗ್ಯಾ ನಿವಾಸಿಗಳನ್ನ ಅಲ್ಲಿನ ಆಡಳಿತ ವ್ಯವಸ್ಥೆ ಹೊರದಬ್ಬುತ್ತಿದೆ. ಇಲ್ಲವೇ ದ್ವಿತೀಯ ದರ್ಜೆಯ ಪ್ರಜೆಗಳಂತೆ ಕಾಣುತ್ತಿವೆ. ಇವರ ಮೇಲೆ ನಡೆಯುತ್ತಿರುವ ನಿರಂತರ ಮಿಲಿಟರಿ ದೌರ್ಜನ್ಯಕ್ಕೆ ರೊಹಿಂಗ್ಯಾ ಮಂದಿ ತತ್ತರಿಸಿ ಹೋಗಿದ್ದಾರೆ. ಇದುವರೆಗೂ ಲಕ್ಷಾಂತರ ಮಂದಿ ಬಾಂಗ್ಲಾದೇಶದಲ್ಲೇ ಆಶ್ರಯ ಪಡೆದಿದ್ದಾರೆ. ಆದರೆ ಕರೋನಾ ಭೀತಿಯಿಂದ ಇದೀಗ ಅವರನ್ನ ಸ್ಥಳಾಂತರ ಮಾಡಲು ಬಾಂಗ್ಲಾ ಮುಂದಾಗಿದೆ.
ಒಟ್ಟಾರೆಯಾಗಿ ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ನಿರಾಶ್ರಿತರ ಸಮಸ್ಯೆಗೆ ಯಾವ ವಿಶ್ವಸಂಸ್ಥೆಗೂ ಇದುವರೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.













