ದೇಶದ್ರೋಹ ಕಾನೂನುಗಳು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (UAPA) ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕಾಗಿ ಬಂಧಿಸುತ್ತಿರು ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, “ಸರ್ಕಾರವು, ವಾಕ್‌ಸ್ವಾತಂತ್ರ್ಯವನ್ನು ನಿಗ್ರಹಿಸಲು ಉಕ್ಕಿನ ಹಿಡಿತ ಬಳಸುತ್ತಿದೆ” ಎಂದಿದ್ದಾರೆ.
ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣದ ಹಿನ್ನೆಲೆಯಲ್ಲಿ ಕ್ಯಾಂಪೇನ್ ಫಾರ್ ಜ್ಯುಡಿಶಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್ (CJAR) ಮತ್ತು ಸ್ವರಾಜ್ ಅಭಿಯಾನ್ ಆಯೋಜಿಸಿದ್ದ “ವಾಕ್ ಸ್ವಾತಂತ್ರ್ಯ ಮತ್ತು ನ್ಯಾಯಾಂಗ” ಕುರಿತು ವರ್ಚುವಲ್ ಸಂವಾದದಲ್ಲಿ ನ್ಯಾಯಾಧೀಶರು ಈ ಮಾತು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಇದ್ದಕ್ಕಿದ್ದಂತೆ ಜನರ ಮೇಲೆ ನೀವು ದೇಶದ್ರೋಹದ ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ವಿಧಿಸುತ್ತಿದ್ದೀರಿ. ಏನನ್ನಾದರೂ ಹೇಳುವ ಸಾಮಾನ್ಯ ನಾಗರಿಕರಿಗೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ” ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದ್ದಾರೆ. ಈ ವರ್ಷದಲ್ಲಿ ಈಗಾಗಲೇ ಸುಮಾರು 70 ದೇಶದ್ರೋಹ ಪ್ರಕರಣಗಳಿವೆ, ಅಲ್ಲದೆ ಕಳೆದ ವರ್ಷ ಈ ಸಂಖ್ಯೆ ಸುಮಾರು 90 ಆಗಿತ್ತು ಎನ್ನುವುದನ್ನೂ ಅವರು ಉಲ್ಲೇಖಿಸಿದ್ದಾರೆ.
“ಸರ್ಕಾರವು, ವಾಕ್‌ಸ್ವಾತಂತ್ರ್ಯವನ್ನು ನಿಗ್ರಹಿಸಲು ಉಕ್ಕಿನ ಹಿಡಿತ ಬಳಸುತ್ತಿದೆ, ಇದು ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿಯಾದ ಪ್ರತಿಕ್ರಿಯೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ದೇಶದ್ರೋಹ ಕಾನೂನಿನ ಬಳಕೆಯ ಹೊರತಾಗಿ, ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ತಡೆಯಲು ಬಳಸುವ ಮತ್ತೊಂದು ವಿಧಾನವೆಂದರೆ ʼವಿಮರ್ಶಾತ್ಮಕ ಅಭಿಪ್ರಾಯಗಳನ್ನು ನಕಲಿ ಸುದ್ದಿಗಳನ್ನು ಹರಡುತ್ತಿದೆ ಎಂದು ಆರೋಪಿಸುವʼ ಮೂಲಕ ಅವುಗಳನ್ನು ತಳ್ಳಿಹಾಕುವುದು ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದ್ದಾರೆ. ಕೋವಿಡ್ ಪ್ರಕರಣಗಳು, ವೆಂಟಿಲೇಟರ್‌ಗಳ ಕೊರತೆ ಇತ್ಯಾದಿಗಳ ಬಗ್ಗೆ ಪತ್ರಕರ್ತರು ವರದಿ ಮಾಡಿರುವುದನ್ನು ನಕಲಿ ಸುದ್ದಿಗಳೆಂದು ತಳ್ಳಿ ಹಾಕಿರುವ ಉದಾಹರಣೆಗಳನ್ನು ಅವರು ಉಲ್ಲೇಖಿಸಿದ್ದಾರೆ.
ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ತಡೆಯಲು ಬಳಸುವ ಇನ್ನೂ ಒಂದು ವಿಧಾನವೆಂದರೆ ವಿಮರ್ಶೆಯ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸುವುದು. ಪ್ರಶಾಂತ್ ಭೂಷಣ್ ಅವರ ಪ್ರಕರಣದಲ್ಲಿ ಇದು ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

“ನ್ಯಾಯಾಂಗ ವ್ಯವಸ್ಥೆಯನ್ನು ಒಡೆಯುವ ಉದ್ದೇಶ ಪ್ರಶಾಂತ್ ರಿಗೆ ಇರಲಿಲ್ಲ ಎಂದು ನಾನು ನಂಬುತ್ತೇನೆ. ಆದರೆ ಅವರ ಹೇಳಿಕೆಗಳು ತಪ್ಪಾಗಿ ಓದಲ್ಪಟ್ಟವು. ಅವರು ನ್ಯಾಯಾಂಗದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸಿದ್ದರು” ಎಂದು ಅವರು ಹೇಳಿದ್ದಾರೆ.
ಜನರ ಭಾಷಣ, ಮಾತು, ಉದ್ದೇಶಗಳನ್ನು ತಪ್ಪಾಗಿ ಬಿಂಬಿಸುವ ಮತ್ತು ಆರೋಪಿಸುವ ಮೂಲಕ ಜನರ ಸ್ವಾತಂತ್ರ್ಯವನ್ನು ತಡೆಗಟ್ಟಲಾಗುತ್ತಿದೆ ಎಂದು ಲೋಕೂರ್ ಹೇಳಿದ್ದಾರೆ.
ಈ ನಿಟ್ಟಿನಲ್ಲಿ, 2019 ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾಡಿದ ಭಾಷಣದ ಕುರಿತು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾದವರ (ಡಾ.ಕಫೀಲ್ ಖಾನ್) ಭಾಷಣವು ನಿಜವಾಗಿ ರಾಷ್ಟ್ರೀಯ ಏಕೀಕರಣ ಮತ್ತು ಏಕತೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಗಮನಿಸಿದ ನಂತರ ಅಲಹಾಬಾದ್ ಹೈಕೋರ್ಟ್ ಅವರ ಬಂಧನವನ್ನು ರದ್ದುಪಡಿಸಿತು, ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಭಾಷಣವನ್ನು ತಪ್ಪಾಗಿ ಅರ್ಥೈಸಿದ್ದರಿಂದ ಅವರು ಸುಮಾರು ಆರು ತಿಂಗಳ ಕಾಲ ಬಂಧನದಲ್ಲಿರಬೇಕಾಯಿತು ಎಂದು ನ್ಯಾಯಮೂರ್ತಿ ಲೋಕೂರ್ ಹೇಳಿದ್ದಾರೆ.

ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮುಂತಾದವರ ಭಿನ್ನಾಭಿಪ್ರಾಯದ ಧ್ವನಿಯನ್ನು ತಪ್ಪಾಗಿ ಅರ್ಥೈಸುವ ಮೂಲಕ UAPA ಡಿಯಲ್ಲಿ ಬಂಧಿಸಿ ಜೈಲಿಗೆ ಹಾಕಲಾಗುತ್ತದೆ. ಅದೇವೇಳೆ ಹಿಂಸೆಗೆ ಪ್ರಚೋದಿಸುವ, ಜನರನ್ನು ಒಡೆಯುವ ಧ್ವೇಷ ಭಾಷಣ ಮಾಡುವವರ ವಿರುದ್ಧ ಯಾವ ಕ್ರಮಗಳೂ ಕೈಗೊಳ್ಳಲಾಗುತ್ತಿಲ್ಲ ಎಂಬುದರ ಕಡೆಗೆ ಗಮನ ಸೆಳೆದಿದ್ದಾರೆ.
ಸದ್ಯ ದೇಶಾದ್ಯಂತ 3.40 ಕೋಟಿಗೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಎತ್ತಿ ತೋರಿಸಿದ ಅವರು, ನ್ಯಾಯಾಂಗವು “ತನ್ನ ಕಾಳಜಿಗಳಿಗೆ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ ಮತ್ತು ನ್ಯಾಯಾಂಗದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದ್ದಾರೆ.
ಕೃಪೆ: Live Law
