ಕನ್ನಡ ಚಿತ್ರರಂಗದ ಹೆಸರಾಂತ ನಟ, ವರನಟ, ನಟಸಾರ್ವಭೌಮ ಬಿರುದಾಂಕಿತ ಡಾ. ರಾಜ್ ಕುಮಾರ್ ಅಗಲಿ ಇಂದಿಗೆ ಹದಿನಾಲ್ಕು ವರುಷಗಳು ಸಂದಿವೆ. ಐದು ದಶಕಗಳ ಕಾಲ ಚಿತ್ರರಂಗವನ್ನು ಅನಭಿಷಿಕ್ತ ದೊರೆಯಂತೆ ಆಳಿದ ಡಾ.ರಾಜ್ ಇನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ತನ್ನ ನಟನೆಯ ಮೂಲಕವೇ ಇಡೀ ಭಾರತೀಯ ಚಿತ್ರರಂಗದಲ್ಲಿ ಮನೆಮಾತಾಗಿದ್ದ ರಾಜ್ ಕುಮಾರ್ ಅವರು, 2006 ಎಪ್ರಿಲ್ 12 ರಂದು ಇಹಲೋಕ ತ್ಯಜಿಸುವ ಸಮಯದಲ್ಲಿ ಅವರಿಗೆ 76 ವರ್ಷ ಪ್ರಾಯವಾಗಿತ್ತು. ಇಂದು ಅವರ ಪುಣ್ಯಸ್ಮರಣೆಯಾಗಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ರಾಜ್ ಹಿರಿಯ ಪುತ್ರ ಶಿವರಾಜ್ ಕುಮಾರ್ ಆಗಮಿಸಿ ಪುಷ್ಪ ನಮನ ಸಲ್ಲಿಸಿದರು.
ಕರೋನಾ ಭೀತಿಯ ಲಾಕ್‌ಡೌನ್ ಬಿಸಿ ರಾಜ್ ಪುಣ್ಯಸ್ಮರಣೆಗೂ ತಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕೆಲವರಷ್ಟೇ ಆಗಮಿಸಿ ಪುಣ್ಯಸ್ಮರಣೆ ಸಲ್ಲಿಸಿದ್ದಾರೆ. ಪ್ರತಿ ವರುಷ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಪೂಜೆ ಸಲ್ಲಿಸುತ್ತಿದ್ದ ರಾಜ್ ಕುಟುಂಬ ಲಾಕ್‌ಡೌನ್ ಹಿನ್ನೆಲೆ ಸರಳ ರೀತಿಯ ಪೂಜೆ ನೆರವೇರಿಸಿತು.
ಹಿನ್ನೆಲೆ ಗಾಯಕರಾಗಿಯೂ ಹೆಸರುವಾಸಿಯಾಗಿದ್ದ ರಾಜ್ ಹಾಡಿದ್ದ ʼಯಾರೇ ಕೂಗಾಡಲಿ, ಊರೇ ಹೋರಾಡಲಿʼ ಸಾಕಷ್ಟು ಜನಪ್ರಯತೆ ಹಾಗೂ ರಾಜ್ ಅವರಿಗೆ ಪೂರ್ಣಪ್ರಮಾಣದ ಗಾಯಕರಾಗಲೂ ವೇದಿಕೆ ನೀಡಿತ್ತು. ತನ್ನ ವಿಭಿನ್ನ ಕಂಠದಿಂದ ಆ ನಂತರ ಅವರು ಹಲವಾರು ಸಂಗೀತಗಳಿಗೆ ಕಂಠದಾನ ಮಾಡಿದ್ದಾರೆ.

ನಾಡು, ನುಡಿ ವಿಚಾರದಲ್ಲೂ ಸದಾ ಕನ್ನಡಿಗರ ಜೊತೆ ನಿಲ್ಲುತ್ತಿದ್ದ ಡಾ. ರಾಜ್, 1981 ರಲ್ಲಿ ನಡೆದ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಸಾಹಿತಿಗಳಿಗೆ ಬೆಂಬಲ ನೀಡಿದ್ದರ ಪರಿಣಾಮ, ರಾಜ್ಯಾದ್ಯಂತ ಗೋಕಾಕ್ ವರದಿ ಜಾರಿಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆಗಳು ನಡೆದವು. ಆ ಹೋರಾಟದಲ್ಲಿ ರಾಜ್ಯಾದ್ಯಂತ ವರನಟ ಡಾ.ರಾಜ್ ಕುಮಾರ್ ಸಂಚರಿಸಿ ಹೋರಾಟ ಸಂಘಟಿಸಿದ್ದರ ಪರಿಣಾಮ ಅಂದಿನ ರಾಜ್ಯ ಸರಕಾರ ವರದಿಯನ್ನ ಜಾರಿಗೊಳಿಸಿತ್ತು.
ಅತ್ಯಂತ ಸರಳತೆ ಹಾಗೂ ಕಿರಿಯ ಕಲಾವಿದರಿಗೆ ಸದಾ ಸ್ಫೂರ್ತಿದಾಯಕರಾಗಿದ್ದ ಡಾ.ರಾಜ್ ಕುಮಾರ್ ಅವರಿದೆ ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಪ್ರಶಸ್ತಿ ಸಹಿತ ಹತ್ತು ಹಲವು ಪ್ರಶಸ್ತಿಗಳು ಸಂದಿವೆ. ಇಂದಿಗೂ ಕನ್ನಡ ಚಿತ್ರರಂಗದ ಯುವನಟರು ಡಾ.ರಾಜ್ ಕುಮಾರ್ ಅವರನ್ನ ಮಾದರಿಯಾಗಿಸಿಕೊಂಡಿದ್ದಾರೆ. ವರನಟ ರಾಜ್ ಕುಮಾರ್ ಅವರ ಮೂವರು ಗಂಡು ಮಕ್ಕಳಲ್ಲಿ ಶಿವರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗಲೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ.











