ಕರೋನಾ ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾದ ಲಾಕ್ ಡೌನ್ ಇದೀಗ 60 ದಿನ ಪೂರೈಸಿದ್ದು, ನಾಲ್ಕನೇ ಹಂತದ ಲಾಕ್ ಡೌನ್ ಕೂಡ ಇನ್ನೆರಡು ದಿನದಲ್ಲಿ ಅಂತ್ಯ ಕಾಣಲಿದೆ.
ಇದೀಗ ಜಾಗತಿಕ ಮಹಾಮಾರಿಯಿಂದ ದೇಶದ ಜನರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರದ ಏಕೈಕ ಪ್ರಮುಖ ಕ್ರಮ ಲಾಕ್ ಡೌನ್ ಎಷ್ಟರಮಟ್ಟಿಗೆ ಸಫಲವಾಗಿದೆ? ಸೋಂಕು ಹರಡುವಿಕೆ ನಿಯಂತ್ರಣ ಮತ್ತು ರೋಗಕ್ಕೆ ಚಿಕಿತ್ಸೆಯ ನಿಟ್ಟಿನಲ್ಲಿ ವಿಶ್ವದಲ್ಲೇ ಸುದೀರ್ಘ ಅವಧಿಯ ಮತ್ತು ಅತಿ ಹೆಚ್ಚು ಆರ್ಥಿಕ ನಷ್ಟ ಮತ್ತು ಮಾನವೀಯ ಸಂಕಷ್ಟಕ್ಕೆ ಕಾರಣವಾದ ಲಾಕ್ ಡೌನ್ ನಿಂದ ನಿಜಕ್ಕೂ ಉದ್ದೇಶ ಈಡೇರಿತೆ ಎಂಬ ಪ್ರಶ್ನೆಗಳು ಜೋರಾಗಿ ಕೇಳಿಬರತೊಡಗಿವೆ.

ಅದರಲ್ಲೂ ಮುಖ್ಯವಾಗಿ ಪ್ರತಿಪಕ್ಷಗಳು ಮತ್ತು ದೇಶದ ಸಾಂಕ್ರಾಮಿಕ ತಜ್ಞರು, ಆರ್ಥಿಕ ತಜ್ಞರು ಈ ಪ್ರಶ್ನೆಯನ್ನು ಗಟ್ಟಿಯಾಗಿಯೇ ಕೇಳತೊಡಗಿದ್ದಾರೆ. ಬರೋಬ್ಬರಿ 65 ದಿನಗಳ ಜಗತ್ತಿನ ಅತಿ ಭೀಕರ ಲಾಕ್ ಡೌನ್ ಬಳಿಕವೂ ದೇಶ ಪಡೆದದ್ದಕ್ಕಿಂತ ಕಳೆದುಕೊಂಡಿದ್ದೇ ಅಪಾರ. ಒಂದು ಕಡೆ ಸೋಂಕು ನಿಯಂತ್ರಣ ಮತ್ತು ಜನರ ಜೀವ ರಕ್ಷಣೆಯಲ್ಲೂ ಲಾಕ್ ಡೌನ್ ಸಫಲವಾಗಲಿಲ್ಲ. ಮತ್ತೊಂದು ಕಡೆ ಆರ್ಥಿಕ ಚಟುವಟಿಕೆ ಸ್ಥಗಿತದ ಮೂಲಕ ಅದು ಸೃಷ್ಟಿಸಿದ ಅನಾಹುತ, ವಲಸೆ, ಸಾವುಗಳು ಕೂಡ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದವು ಎಂಬುದು ಅಂತಿಮವಾಗಿ ಪ್ರಧಾನಿ ಮೋದಿಯವರ ಏಕಪಕ್ಷೀಯ ಮತ್ತು ದಿಢೀರ್ ನಿರ್ಧಾರದ ಬಗ್ಗೆ ದೊಡ್ಡ ಮಟ್ಟದ ಟೀಕೆಗಳಿಗೂ ಕಾರಣವಾಗಿದೆ.
ಜೊತೆಗೆ ಲಾಕ್ ಡೌನ್ ಅವಧಿಯ ಆರ್ಥಿಕತೆಯ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಬರೋಬ್ಬರಿ 20 ಲಕ್ಷ ಕೋಟಿ ವಿಶೇಷ ʼಸ್ವಾಭಿಮಾನಿ ಭಾರತ್ʼ ಪ್ಯಾಕೇಜ್ ಕೂಡ ಕೇವಲ ಹುಸಿ ಭರವಸೆಯಾಗಿ, ಜನಸಾಮಾನ್ಯರ ಬಾಯಲ್ಲಿ ನಗೆಪಾಟಲಿನ ಸಂಗತಿಯಾಗಿ ಹೋಗಿದೆ. ವಾಸ್ತವವಾಗಿ ಸಂಕಷ್ಟದಲ್ಲಿರುವ ವಲಯಗಳಿಗೆ ಹಣಕಾಸಿನ ನಗದು ಬೆಂಬಲ ನೀಡುವ ಬದಲಾಗಿ ಕೇವಲ ಹಣಕಾಸು ಹೊಂದಾಣಿಕೆ ಮತ್ತು ಸಾಲ ನೀಡಿಕೆಯ ಆಶ್ವಾಸನೆಯನ್ನೇ ಪ್ಯಾಕೇಜ್ ಎಂದು ಘೋಷಿಸಿ ಮೋದಿಯವರ ದೇಶದ ಜನರ ಕಣ್ಣಿಗೆ ಮಣ್ಣೆರಚಿದ್ದಾರೆ ಎಂಬ ವ್ಯಾಪಕ ಆಕ್ರೋಶ ಮತ್ತು ಅಸಮಾಧಾನಕ್ಕೆ ಈ ಪ್ಯಾಕೇಜ್ ಕಾರಣವಾಗಿದೆ.
ಲಾಕ್ ಡೌನ್ ನಿರೀಕ್ಷಿತ ಫಲ ಕೊಟ್ಟಿಲ್ಲ ಮತ್ತು ಲಾಕ್ ಡೌನ್ ಉದ್ದೇಶವನ್ನು ಸರ್ಕಾರವೇ ವಿಫಲಗೊಳಿಸಿದೆ ಎಂಬ ಟೀಕೆಗಳು ಪ್ರತಿಪಕ್ಷಗಳಷ್ಟೇ ಅಲ್ಲದೆ, ಸ್ವತಃ ಬಿಜೆಪಿಯ ನಾಯಕರು, ಕರೋನಾ ವಿರುದ್ಧದ ಕಾರ್ಯತಂತ್ರದ ಕುರಿತ ಸರ್ಕಾರದ ಅಧಿಕೃತ ಉನ್ನತಮಟ್ಟದ ಕಾರ್ಯಪಡೆಯ ಸದಸ್ಯರಿಂದಲೇ ಕೇಳಿಬಂದಿವೆ. ಜೊತೆಗೆ, ವಿಫಲ ಕಾರ್ಯತಂತ್ರದ ಸೋಲಿನ ಹೊಣೆ ಹೊರುವ ಪ್ರಾಮಾಣಿಕತೆ ಸರ್ಕಾರದಲ್ಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬರೋಬ್ಬರಿ ಎರಡು ತಿಂಗಳ ಲಾಕ್ ಡೌನ್ ಮುಗಿಯಲು ಕ್ಷಣಗಣನೆ ಆರಂಭವಾಗಿದ್ದರೂ, ಕರೋನಾ ವಿರುದ್ಧದ ಸಮರ ಮತ್ತು ನೆಲಕಚ್ಚಿದ ಆರ್ಥಿಕತೆಯ ವಿಷಯದಲ್ಲಿ ತನ್ನ ಮುಂದಿರುವ ಯೋಜನೆಗಳೇನು? ಕಾರ್ಯತಂತ್ರವೇನು? ಎಂಬ ಬಗ್ಗೆ ಸರ್ಕಾರ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ. ಲಾಕ್ ಡೌನ್ ಅವಧಿಯನ್ನು ಭೌತಿಕ ಅಂತರ ಕಾಯಲು ಬಳಸುವ ಜೊತೆಜೊತೆಯಲ್ಲಿ ರೋಗದ ವಿರುದ್ಧ ಹೋರಾಡಲು ನಿರ್ಣಾಯಕವಾದ ವೈದ್ಯಕೀಯ ತಯಾರಿಗಳನ್ನು ಮಾಡಿಕೊಳ್ಳುವುದು ವಿವೇಚನೆಯ ಕ್ರಮ. ಆದರೆ ವ್ಯಾಪಕ ಪರೀಕ್ಷೆ ಸೇರಿದಂತೆ ಹಲವು ತಯಾರಿಯ ವಿಷಯದಲ್ಲಿ ಮೈಮರೆತು ಕೇವಲ ಲಾಕ್ ಡೌನ್ ಹೇರಿ ಕೈಕಟ್ಟಿಕುಳಿತ ಆರೋಪವನ್ನು ಸರ್ಕಾರದ ಕಾರ್ಯಪಡೆಯ ಸದಸ್ಯರೇ ಮಾಡಿದ್ದಾರೆ. ಹಾಗಿರುವಾಗ ಇದೀಗ ಲಾಕ್ ಡೌನ್ ಬಳಿಕದ ಕ್ರಮಗಳ ಸರ್ಕಾರಕ್ಕೆ ಮೂಲಭೂತವಾಗಿ ಅಂತಹದ್ದೊಂದು ಯೋಜನೆ ಇದೆಯೇ ಎಂಬುದು ಅನುಮಾನಾಸ್ಪದವಾಗಿದೆ.
ಇದೇ ಅನುಮಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ಅವರು ಕರೋನಾ ವಿಷಯದಲ್ಲಿ ಸರ್ಕಾರದ ತಪ್ಪು ನಡೆಗಳನ್ನು ಪ್ರಶ್ನಿಸಿದ್ದಷ್ಟೇ ಅಲ್ಲದೆ, ಸರ್ಕಾರಕ್ಕೆ ಹಲವು ಸಲಹೆಗಳನ್ನೂ, ಮುನ್ನೆಚ್ಚರಿಕೆಯನ್ನೂ ಆರಂಭದಿಂದಲೂ ನೀಡುತ್ತಲೇ ಬಂದಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಕೂಡ ಜನರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ ಮತ್ತು ವಿವಿಧ ವಲಯದ ತಜ್ಞರೊಂದಿಗೆ ಸಮಾಲೋಚನೆಯ ಮೂಲಕ ಈ ಬಿಕ್ಕಟ್ಟಿಗೆ ಪರಿಹಾರೋಪಾಯಗಳನ್ನು ಚರ್ಚಿಸಿದ್ದಾರೆ. ಆಗಿನಿಂದಲೂ ಅವರು ಸಂಪೂರ್ಣ ಲಾಕ್ ಡೌನ್ ಕ್ರಮ ಭಾರತದಂತಹ ಜನದಟ್ಟಣೆಯ ಮತ್ತುಆರ್ಥಿಕ ದುರ್ಬಲ ವರ್ಗದ ದೇಶಕ್ಕೆ ಒಳ್ಳೆಯದಲ್ಲ. ಅದು ರೋಗಕ್ಕಿಂತ ಭೀಕರ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸುತ್ತಲೇ ಇದ್ದರು. ಈಗಲೂ ಅವರು ಲಾಕ್ ಡೌನ್ ಅಂತ್ಯದ ಬಳಿಕ ಸರ್ಕಾರದ ಮುಂದಿರುವ ಯೋಜನೆಗಳೇನು? ದೀರ್ಘಾವಧಿಯಲ್ಲಿ ಉಳಿಯಲಿರುವ ರೋಗ ನಿಯಂತ್ರಣಕ್ಕೆ ಮತ್ತು ಆರ್ಥಿಕತೆ ಪುನಃಶ್ಚೇತನಕ್ಕೆ ಸರ್ಕಾರದ ಮುಂದಿರುವ ಕಾರ್ಯತಂತ್ರಗಳೇನು? ಎರಡೂ ವಿಷಯದಲ್ಲಿ ಸಂಪೂರ್ಣ ವಿಫಲವಾಗಿರುವ ಲಾಕ್ ಡೌನ್ ಕಾರ್ಯತಂತ್ರದ ವೈಫಲ್ಯದ ಹೊಣೆಯನ್ನು ಸರ್ಕಾರ ಹೊರುವುದೇ ಎಂದು ಪ್ರಶ್ನಿಸಿದ್ದಾರೆ.
ಆದರೆ, ಪ್ರತಿಪಕ್ಷಗಳ ರಚನಾತ್ಮಕ ಟೀಕೆ ಮತ್ತು ಸಲಹೆಗಳನ್ನು ಎಂದೂ ಸಕಾರಾತ್ಮಕವಾಗಿ ತೆಗೆದುಕೊಂಡ ಪರಂಪರೆಯನ್ನೇ ಹೊಂದಿರದ ಬಿಜೆಪಿ ಸರ್ಕಾರ, ಇಂತಹ ಹೊತ್ತಲ್ಲೂ ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧವಾದ ತನ್ನ ಸರ್ವಾಧಿಕಾರಿ ವರಸೆಯನ್ನು ಯಾವ ಹಿಂಜರಿಕೆ ಇಲ್ಲದೆ ವಿಜೃಂಭಿಸುತ್ತಿದೆ. ಎಂದಿನಂತೆ ಸರ್ಕಾರದ ವಿರುದ್ಧದ ಟೀಕೆಯನ್ನು, ಪ್ರಧಾನ ಮಂತ್ರಿಗಳ ವೈಫಲ್ಯದ ಕುರಿತ ಮಾತುಗಳನ್ನು ದೇಶದ ವಿರುದ್ಧದ ಟೀಕೆ, ದೇಶದ ವಿರುದ್ಧದ ಹೇಳಿಕೆಗಳೆಂದು ಬಿಂಬಿಸುವ ಕೀಳುಮಟ್ಟದ ವರಸೆಯ ಮೊರೆಹೋಗಿದೆ.
ಪ್ರಜಾತಾಂತ್ರಿಕ ರೀತಿಯಲ್ಲಿ ಚುನಾವಣೆಯ ಮೂಲಕ ಆಯ್ಕೆಯಾಗಿ ಬಂದ ಒಂದು ಸರ್ಕಾರ, ಆ ಸರ್ಕಾರದ ನಾಯಕ ತಪ್ಪು ನಿರ್ಧಾರಗಳನ್ನು, ಜನವಿರೋಧಿ ನೀತಿಗಳನ್ನು ಅನುಸರಿಸಿದಾಗ, ಆ ತಪ್ಪುಗಳನ್ನು, ನೀತಿಗಳನ್ನು ಪ್ರಶ್ನಿಸುವ, ಖಂಡಿಸುವ ಹೊಣೆಗಾರಿಕೆ ಪ್ರತಿಪಕ್ಷಗಳದ್ದು. ಹಾಗೇ ತನ್ನ ಸರಿ ತಪ್ಪುಗಳ ಬಗ್ಗೆ ಹೊಣೆಗಾರಿಕೆ ಹೊರುವುದು, ಜನರಿಗೆ ಉತ್ತರದಾಯಿಯಾಗಿರಬೇಕಾದುದು ಪ್ರಜಾಸತ್ತೆಯ ಪ್ರಕಾರ ನಡೆಯುವ ಸರ್ಕಾರ ಮತ್ತು ಅದರ ನಾಯಕರ ಕರ್ತವ್ಯ. ಆದರೆ, ಇಂತಹ ಪ್ರಾಥಮಿಕ ಬದ್ಧತೆಯನ್ನೇ ಮರೆತು, ಒಂದು ಸರ್ಕಾರವಾಗಿ ತನ್ನ ನಡೆಯನ್ನು ಪ್ರಶ್ನಿಸುವ, ವಿವರ ಕೇಳುವ, ಸಾರ್ವಜನಿಕ ಚರ್ಚೆಗೆ ಆಹ್ವಾನಿಸುವ ಕ್ರಮವನ್ನೇ ದೇಶವಿರೋಧಿ ಎಂದು ಕರೆದರೆ, ಅದರ ಅರ್ಥವೇನು? ತಾನು ಸರ್ವಾಧಿಕಾರಿ, ತನ್ನ ನೀತಿ-ನಿರ್ಧಾರಗಳನ್ನು ಪ್ರಶ್ನಿಸುವ, ತನಗೆ ಸವಾಲು ಹಾಕುವ ಅಧಿಕಾರ ಕನಿಷ್ಟ ಪ್ರತಿಪಕ್ಷಗಳಿಗೂ ಇಲ್ಲ ಎಂಬಷ್ಟರಮಟ್ಟಿಗೆ ಸರ್ವಾಧಿಕಾರ ತನ್ನದು ಎಂದೇ ಅರ್ಥವಲ್ಲವೆ?
ರಾಹುಲ್ ಗಾಂಧಿಯವರು ಲಾಕ್ ಡೌನ್ ವೈಫಲ್ಯ ಮತ್ತು ಸರ್ಕಾರದ ಮುಂದಿನ ಕಾರ್ಯತಂತ್ರಗಳನ್ನು ಪ್ರಶ್ನಿಸಿದ್ದನ್ನು, “ಕರೋನಾ ವಿರುದ್ಧದ ಹೋರಾಟದ ದೇಶದ ಇಚ್ಚಾಶಕ್ತಿಯನ್ನೇ ದುರ್ಬಲಗೊಳಿಸುವ ಯತ್ನ. ಬೇಜವಾಬ್ದಾರಿಯ ವರ್ತನೆ, ಸುಳ್ಳು ಮಾಹಿತಿ ಮತ್ತು ವಾಸ್ತವಾಂಶ ತಿರುಚುವ ಮೂಲಕ ದೇಶದ ಜನರ ದಾರಿತಪ್ಪಿಸುವ ಯತ್ನ” ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಕೇಂದ್ರ ಸಚಿವರ ರವಿಶಂಕರ್ ಪ್ರಸಾದ್ ಅವರ ಈ ಹೇಳಿಕೆ, ಸಹಜವಾಗೇ ಬಿಜೆಪಿ ಮತ್ತು ಬಿಜೆಪಿ ಸರ್ಕಾರದ ಧೋರಣೆಗೆ ಕೈಗನ್ನಡಿಯಾಗಿದೆ. ಜೊತೆಗೆ ಕರೋನಾ ವಿರುದ್ಧದ ಭಾರತದ ಹೋರಾಟವನ್ನು ದುರ್ಬಲಗೊಳಿಸುತ್ತಿರುವವರು ಯಾರು ಎಂಬ ಹೆಸರಿನಲ್ಲಿ ರಾಹುಲ್ ಗಾಂಧಿಯವರನ್ನೇ ಗುರಿಯಾಗಿಟ್ಟುಕೊಂಡು ಕಿರುಹೊತ್ತಿಗೆಯನ್ನೇ ಹೊರತಂದಿದೆ. ರಾಹುಲ್ ಅವರ ಈವರೆಗಿನ ಕರೋನಾ ಲಾಕ್ ಡೌನ್ ಮತ್ತು ರೋಗ ನಿಯಂತ್ರಣ ಕುರಿತ ಪ್ರಶ್ನೆಗಳು, ಸವಾಲುಗಳನ್ನೇ ಇಟ್ಟುಕೊಂಡು, ಅದಕ್ಕೆ ಕೆಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ತಮ್ಮದೇ ಮುಖವಾಣಿ ಮಾಧ್ಯಮಗಳು ನೀಡಿರುವ ಪ್ರಶಂಸೆಯನ್ನು ಆಧಾರವಾಗಿಟ್ಟುಕೊಂಡು ಉತ್ತರ ನೀಡಲಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಇಂತಹ ವಾಗ್ದಾಳಿ ಮತ್ತು ಹೇಳಿಕೆ, ಪ್ರತಿಹೇಳಿಕೆಗಳು ಸಹಜ.
ಆದರೆ, ಇಡೀ ಬಿಜೆಪಿಯ ವರಸೆ, ತನ್ನ ಸರ್ಕಾರವನ್ನು, ಪ್ರಧಾನಿಯನ್ನು ಪ್ರಶ್ನಿಸಿದ್ದೇ ದೇಶದ್ರೋಹ ಎಂಬ ದಾಟಿಯಲ್ಲಿರುವುದು ಅಪಾಯಕಾರಿ. ಸ್ವತಃ ರವಿಶಂಕರ್ ಪ್ರಸಾದ್ ಅವರ ಹೇಳಿಕೆ ಕೂಡ ಸ್ಪಷ್ಟವಾಗಿ ಅದೇ ದಾಟಿಯಲ್ಲಿದೆ. ಪ್ರಧಾನಿ ಮೋದಿ ಪ್ರಶ್ನಾತೀತರು, ತಮ್ಮ ಸರ್ಕಾರ ಪ್ರಶ್ನಾತೀತ. ತಪ್ಪು ನಡೆಗಳನ್ನಾಗಲೀ, ನೀತಿಗಳನ್ನಾಗಲೀ ಪ್ರಶ್ನಿಸುವಂತಿಲ್ಲ ಎಂಬುದು ಖಂಡಿತವಾಗಿಯೂ ಪ್ರಜಾಪ್ರಭುತ್ವದ ರೀತಿ-ನೀತಿಯಲ್ಲ. ಅದು ಸ್ಪಷ್ಟವಾಗಿ ಸರ್ವಾಧಿಕಾರಿ, ಫ್ಯಾಶಿಸ್ಟ್ ವರಸೆ.
ಹಾಗೆ ನೋಡಿದರೆ ಇದು ಬಿಜೆಪಿಯ ವಿಷಯದಲ್ಲಿ ಹೊಸದೇನಲ್ಲ. ಯಾವಾಗ ಪ್ರಣಾಳಿಕೆಯ ಬಲದ ಮೇಲೆ, ಭವಿಷ್ಯದ ಯೋಜನೆ- ನೀತಿಗಳ ಬಲಾಬಲದ ಮೇಲೆ ನಡೆಯಬೇಕಾದ ಚುನಾವಣೆಯನ್ನು ವ್ಯಕ್ತಿಯ ನಾಮಬಲದ ಮೇಲೆ ನಡೆಸಲಾಯಿತೋ ಆಗಿನಿಂದಲೇ ಈ ವರಸೆ ಆರಂಭವಾಗಿದೆ. ‘ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎಂಬುದು ಚುನಾವಣಾ ಘೋಷಣೆಯಾದಾಗ, ಅಂತಹ ಘೋಷಣೆಯ ಮೇಲೆ ಜನಾದೇಶ ಪಡೆದು ಪ್ರಧಾನಿ ಸ್ಥಾನಕ್ಕೇರಿದವರನ್ನು ಪ್ರಶ್ನಿಸುವುದನ್ನು ಸಹಜವಾಗೇ ಇಡೀ ದೇಶವನ್ನೇ ಪ್ರಶ್ನಿಸಿದಂತೆ ಪ್ರತಿಬಿಂಬಿಸಲಾಗುತ್ತದೆ. ಸರ್ಕಾರವನ್ನು ಪ್ರಶ್ನಿಸುವುದನ್ನು ದೇಶದ್ರೋಹದ ಮಟ್ಟಕ್ಕೆ ಬಿಂಬಿಸಲಾಗುತ್ತದೆ. ಆದರೆ, ಇಷ್ಟು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಪ್ರಧಾನಿಯೇ ದೇಶವಾಗಿರಲಿಲ್ಲ, ಪ್ರಧಾನಿ ಹುದ್ದೆಯಲ್ಲಿರುವ ವ್ಯಕ್ತಿ ಕೂಡ ದೇಶವಾಗಿರಲಿಲ್ಲ. ಪ್ರಧಾನಿ ಹುದ್ದೆ ಎಂಬುದು ದೇಶದ ಆಡಳಿತದ ಚುಕ್ಕಾಣಿಯ ಹೊಣೆಗಾರಿಕೆಯಾಗಿತ್ತು ಮತ್ತು ಆ ಹುದ್ದೆಯಲ್ಲಿರುವ ವ್ಯಕ್ತಿ ಇಡೀ ದೇಶಕ್ಕೆ ಉತ್ತರದಾಯಿಯಾಗಿರುತ್ತಿದ್ದರು.

ಈಗ ಬಿಜೆಪಿ ಆ ಎಲ್ಲಾ ಪ್ರಜಾಪ್ರಭುತ್ವವಾದಿ ರೀತಿರಿವಾಜುಗಳನ್ನು ಬದಲಾಯಿಸಿದೆ. ಹಾಗಾಗಿ ಜನಸಾಮಾನ್ಯರು, ಮಾಧ್ಯಮಗಳ ಜೊತೆಗೆ ಪ್ರತಿಪಕ್ಷಗಳು ಕೂಡ ಸರ್ಕಾರ ಮತ್ತು ಸರ್ಕಾರದ ಮುಖ್ಯಸ್ಥರನ್ನು ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ಅದು ಆ ವ್ಯಕ್ತಿ, ಹುದ್ದೆ ಮತ್ತು ಸರ್ಕಾರಕ್ಕೆ ಒಡ್ಡಿದ ಸವಾಲಲ್ಲ; ದೇಶಕ್ಕೇ ಎಸೆದ ಸವಾಲು; ದೇಶದ್ರೋಹ ಎಂದು ಬಿಂಬಿಸಲಾಗುತ್ತಿದೆ ಮತ್ತು ಭಿನ್ನಮತವನ್ನು, ಪ್ರಶ್ನಿಸುವವರನ್ನು ದೇಶದ್ರೋಹದ ಕಠಿಣ ಕಾನೂನು ಅಸ್ತ್ರದ ಭೀತಿ ಹುಟ್ಟಿಸಿ ಬಾಯಿ ಮುಚ್ಚಿಸಲಾಗುತ್ತಿದೆ. ಇದು ಇಂದಿನ ವಾಸ್ತವ!