ಕರೋನಾ ವೈರಾಣು ರೋಗ(ಕೋವಿಡ್-19) ತಡೆಯ ನಿಟ್ಟಿನಲ್ಲಿ ನಮ್ಮ ಸರ್ಕಾರಗಳು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ನಡೆಸುತ್ತಿವೆ. ಇದೀಗ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ಇಡೀ ದೇಶವನ್ನೇ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ.
ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಮತ್ತು ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ, ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸಬೇಕಿದೆ. ಹಾಗೆ ಮಾಡದೇ ಹೋದರೆ, ರೋಗ ತಡೆ ಅಸಾಧ್ಯ. ಹಾಗೆ ಒಬ್ಬರಿಂದ ಒಬ್ಬರಿಗೆ ರೋಗ ಸಾಮುದಾಯಿಕ ಸೋಂಕಾಗಿ ಹರಡಿದಲ್ಲಿ ನಮ್ಮ ದೇಶದ ಅಪಾರ ಜನದಟ್ಟಣೆ ಮತ್ತು ಸೀಮಿತ ವೈದ್ಯಕೀಯ ಸೌಲಭ್ಯಗಳ ಹಿನ್ನೆಲೆಯಲ್ಲಿ ಜನರ ಮಾರಣಹೋಮವೇ ನಡೆದುಹೋಗುವ ಭೀತಿ ಎದುರಾಗಿದೆ. ಆ ಹಿನ್ನೆಲೆಯಲ್ಲಿಯೇ ಆರ್ಥಿಕ ನಷ್ಟ, ಜನಜೀವನಕ್ಕೆ ಎದುರಾಗುವ ಕಷ್ಟಗಳನ್ನೆಲ್ಲಾ ಮೀರಿ ಹಿಂದೆಂದೂ ಕಂಡುಕೇಳರಿಯದ ಈ ಲಾಕ್ ಡೌನ್ ಘೋಷಿಸಲಾಗಿದೆ.
ಇಂತಹ ಬಿಗಿ ಕ್ರಮದ ಹಿಂದೆ ಜನರ ಜೀವ ರಕ್ಷಣೆಯ ಆ ಮೂಲಕ ದೇಶ ರಕ್ಷಣೆಯ ಸದುದ್ದೇಶವಿದೆ, ಕಾಳಜಿ ಇದೆ. ಆದರೆ, ನಮ್ಮ ಜನಗಳಿಗೆ ಈ ಲಾಕ್ ಡೌನ್ ಗಂಭೀರತೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಲಾಕ್ ಡೌನ್ ಮಾಡದೇ ಹೋದರೆ, ಅಥವಾ ಲಾಕ್ ಡೌನ್ ಮಾಡಿಯೂ ನೀವು ಅದನ್ನು ಪಾಲಿಸದೇ, , ಮನೆಯಲ್ಲಿ ಉಳಿಯದೆ ಮನಸೋ ಇಚ್ಛೆ ಸುತ್ತಾಡಿದರೆ ಕೇವಲ ನಿಮಗೆ ಅಷ್ಟೇ ಅಲ್ಲ, ಇಡೀ ಸಮಾಜಕ್ಕೇ ಅಪಾಯ ತಂದೊಡ್ಡುವಿರಿ ಮತ್ತು ಅಪಾರ ಜೀವ ಹಾನಿಗೆ ನೀವೇ ನೇರ ಹೊಣೆಯಾಗಲಿದ್ದೀರಿ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.
ಆ ಹಿನ್ನೆಲೆಯಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಪ್ರತಿಯೊಬ್ಬರೂ ತಮ್ಮ- ತಮ್ಮ ಮನೆಯಲ್ಲಿ ಉಳಿಯುವುದು, ಬೇರೆಯವರೊಡನೆ ಅಂತರ ಕಾಯ್ದುಕೊಳ್ಳುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು ಎಷ್ಟು ಮುಖ್ಯ ಮತ್ತು ಏಕೆ ಎಂಬುದನ್ನು ಚಿತ್ರ ಸಹಿತ ವಿವರಿಸುವ ಪ್ರಯತ್ನ ಇದು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಅಂತರ(ಸೋಷಿಯಲ್ ಡಿಸ್ಟೆನ್ಸಿಂಗ್) ಬಗ್ಗೆ ಜಾಗೃತಿ ಮೂಡಿಸಲು ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಚಿತ್ರ ಮಾಲಿಕೆಗಳಲ್ಲಿ ಒಂದನ್ನು ನಾವಿಲ್ಲಿ ಬಳಸಿಕೊಂಡಿದ್ದೇವೆ. ಆ ಮೂಲಕ ಹೆಚ್ಚು ಜನರಿಗೆ ಸಾಮಾಜಿಕ ಅಂತರ, ಲಾಕ್ ಡೌನ್ ಮತ್ತು ಆ ಮೂಲಕ ಒಟ್ಟಾರೆ ಸೋಂಕು ನಿಯಂತ್ರಣದ ಅರಿವು ಮೂಡಿಸುವುದು ನಮ್ಮ ಉದ್ದೇಶ.
1. ನಮ್ಮ ನಡುವೆ ಈಗಾಗಲೇ ಕರೋನಾ ವೈರಾಣು ಸೋಂಕಿತರು ಅಲ್ಲಲ್ಲಿ ಇರುವುದರಿಂದ, ಅವರನ್ನೂ ಒಳಗೊಂಡಂತೆ ಈಗ ನಮ್ಮಲ್ಲಿ ನಾಲ್ಕು ಗುಂಪಿನ ಜನರಿದ್ದಾರೆ ಎಂದುಕೊಳ್ಳಿ.
2. ಅವರಲ್ಲಿ ‘A’ ಗುಂಪಿನವರು; ವೈರಾಣು ಸೋಂಕಿಗೆ ಒಳಗಾದ ಮೊದಲ ವ್ಯಕ್ತಿಗಳು. ವಿದೇಶದಿಂದ ವಾಪಸ್ಸಾದವರು ಅಥವಾ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರು ಈ A ಗುಂಪಿನವರು.
3. ಈ ‘A’ ತನ್ನ ಆಪ್ತರು ಅಥವಾ ವ್ಯವಹಾರ ನಂಟಿನ ‘C’ ಗುಂಪಿನವರನ್ನು ಭೇಟಿ ಮಾಡಲು ಹೋಗುವಾಗ ಆತನಿಗೆ ನೇರ ಪರಿಚಯವಿಲ್ಲದ ‘B’ ಗುಂಪಿನವರನ್ನು ಹಾದುಹೋಗುತ್ತಾನೆ.
ವಿಮಾನನಿಲ್ದಾಣ
ಬಸ್ ನಿಲ್ದಾಣ
ಸಾರ್ವಜನಿಕ ಶೌಚಾಲಯ
ಟ್ಯಾಕ್ಸಿ/ ಕ್ಯಾಬ್
ಸಲೂನ್
ಲಿಫ್ಟ್
ರೈಲು ನಿಲ್ದಾಣ
ಹೋಟೆಲ್
ಸೂಪರ್ ಮಾರ್ಕೆಟ್
ದಿನಸಿ ಅಂಗಡಿ
ಹಾಲಿನ ಬೂತ್
ಮತ್ತಿತರ ಕಡೆ..
4. ‘A’ ವ್ಯಕ್ತಿ ‘C’ಯನ್ನು ಭೇಟಿ ಮಾಡುತ್ತಾನೆ. ಈ C ಗುಂಪಿನವರು ಎಷ್ಟೇ ಮಂದಿ ಇದ್ದೂ ಅವರನ್ನು ಗುರುತಿಸಬಹುದು.
ಕುಟುಂಬ,
ಆಪ್ತರು,
ಸಹೋದ್ಯೋಗಿ,
ನೆರೆಮನೆಯವರು,
ಬ್ಯಾಂಕ್ ಕ್ಯಾಷಿಯರ್,
ಸಿನಿಮಾ ಕೌಂಟರ್ ಸಿಬ್ಬಂದಿ
ಹೋಟೆಲ್ ಸಪ್ಲೈಯರ್
ಮತ್ತಿತರರು.
5. ‘C’ಯನ್ನು ಗುರುತಿಸಿ ಪ್ರತ್ಯೇಕಿಸಬಹುದು, ನಿಗಾ ಇಡಬಹುದು.
6. ‘D’ ಮನೆಯಲ್ಲಿಯೇ ಉಳಿದಿರುತ್ತಾರೆ ಮತ್ತು ಹೊರಗೆ ಹೋಗುವುದೇ ಇಲ್ಲ.
7. ಸಮಸ್ಯೆ ಇರುವುದು ‘B’ ವಿಷಯದಲ್ಲಿ. ‘B’ಯನ್ನು ಗುರುತಿಸಲಾಗದು ಮತ್ತು ಸ್ವತಃ ‘B’ಗೂ ತಾನು ‘B’ ಎಂಬುದು ಗೊತ್ತೇ ಇರುವುದಿಲ್ಲ. ಬೇರೆಯವರಿಗೂ ಗೊತ್ತಿರುವುದಿಲ್ಲ.
8. ಒಂದು ವೇಳೆ ‘D’ ಮನೆಯಿಂದ ಹೊರಹೋದರೆ; ಅವರು ‘B’ಯನ್ನು ಭೇಟಿ ಅಥವಾ ಸಂಪರ್ಕ ಮಾಡಬಹುದು. ಹಾಗೆ ಯಾವುದೇ ಬಗೆಯಲ್ಲಿ ನೇರ ಸಂಪರ್ಕಿಸಿದರೂ ‘D’ ಮತ್ತೊಬ್ಬ ಹೊಸ ‘B’ಯಂತಾಗುತ್ತಾರೆ. ಅಂದರೆ, ಈ ಗುಂಪುಗಳಲ್ಲಿ ಹೊಸದಾಗಿ ‘B2’ ಸೇರ್ಪಡೆಯಾಗುತ್ತದೆ.
9. ಲಾಕ್ ಡೌನ್ ಅಥವಾ ಪ್ರತ್ಯೇಕಿಸುವುದರ ಹಿಂದಿನ ಉದ್ದೇಶವೇ ಈ ‘B’ ಗುಂಪಿನವರನ್ನು ಗುರುತಿಸಿ, ನಿಗಾ ಇಡುವುದು ಮತ್ತು ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸುವುದು.
10. ಸೋಂಕಿತರಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳಲು ಎರಡು ವಾರ(14 ದಿನ) ಹಿಡಿಯುತ್ತದೆ. ಹಾಗಾಗಿ ಎರಡು ವಾರದಲ್ಲಿ ‘B’ನಲ್ಲಿ ರೋಗ ಲಕ್ಷಣ ಕಾಣಿಸಿಕೊಳ್ಳುತ್ತವೆ.
14 ದಿನ
ಜ್ವರ
ಒಣಕೆಮ್ಮು
ಉಸಿರಾಟದ ತೊಂದರೆ
11. ಈ ಮಾದರಿಯ ಮೂಲಕ ‘B’ಯನ್ನು ಗುರುತಿಸಿ, ಅಗತ್ಯ ಚಿಕಿತ್ಸೆ ನೀಡಬಹುದು. B ಸಂಖ್ಯೆಯನ್ನು ಕಡಿಮೆಗೊಳಿಸಬಹುದು ಮತ್ತು B2 ಗುಂಪು ಸೃಷ್ಟಿಯಾಗದಂತೆ ತಡೆಯಬಹುದು. ಆ ಮೂಲಕ ಅಂತಿಮವಾಗಿ ಸೋಂಕನ್ನು ಸಂಪೂರ್ಣ ತಡೆಯಬಹುದು.
ವ್ಯಕ್ತಿಯೊಬ್ಬ ಮನಸ್ಸು ಮಾಡಿದರೆ ದೊಡ್ಡ ಬದಲಾವಣೆ ತರಬಹುದು. ಹಿಂದಡಿ ಇಡಿ, ಮನೆಯಲ್ಲೇ ಉಳಿಯಿರಿ, ಸೋಂಕು ತಡೆಯಿರಿ