ಕರೋನಾ ಸೋಂಕು ದೇಶವನ್ನು ಪೀಡಿಸಲು ಆರಂಭಿಸಿದ ಮೇಲೆ ಪ್ರಧಾನಿ ನರೇಂದ್ರ ಮೋದಿ ಐದು ಬಾರಿ ದೇಶ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಮೂರು ಬಾರಿ ನೇರವಾಗಿ ಟಿವಿಗೆ ಬಂದು, ಒಮ್ಮೆ ‘ಮನ್ ಕಿ ಬಾತ್’ ಮೂಲಕ, ಇನ್ನೊಮ್ಮೆ ವಿಡಿಯೋ ಸಂದೇಶದ ಮೂಲಕ. ಇಷ್ಟೆಲ್ಲಾ ಮಾಡಿರುವ ಮೋದಿ ಸುದ್ದಿಗೋಷ್ಟಿ ಮುಖಾಂತರವೂ ಮಾಹಿತಿ ಹಂಚಿಕೊಳ್ಳಬಹುದಿತ್ತಲ್ಲವೇ?
ಮೋದಿಗೆ ಸುದ್ದಿಗೋಷ್ಟಿ ಎಂಬ ಸಂಗತಿಯೇ ಗೊತ್ತಿಲ್ಲ. ಲಗಾಯತ್ತಿನಿಂದಲೂ; ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ. ಆಗಿನಿಂದ ಅವರಿಗೆ ಇನ್ನೊಂದು ವಿಚಾರವೂ ತಿಳಿದಿಲ್ಲ. ವಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಕರೋನಾ ಬಂದು ಕಾಡುತ್ತಿದ್ದರೂ ವಿಪಕ್ಷಗಳು ಮೋದಿಗೆ ನಗಣ್ಯವಾಗಿದ್ದವು. ಆದರೆ ಕಷ್ಟ ಕುತ್ತಿಗೆಗೆ ಬಂದಾಗ ವಿಪಕ್ಷಗಳು ನೆನಪಾದವು. ಕಡೆಗೂ ಸಂಸತ್ತಿನ ಸಭಾನಾಯಕರ ಸಭೆ ಕರೆದರೆನ್ನಿ. ಈಗ ಏಪ್ರಿಲ್ 11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನೂ ಕರೆದಿದ್ದಾರೆ. ಈ ಸಭೆ ಲಾಕ್ ಡೌನ್ ಅನ್ನು ಮುಕ್ತಾಯಗೊಳಿಸಬೇಕೋ ಅಥವಾ ಮುಂದುವರೆಸಬೇಕೋ ಎಂಬುದನ್ನು ನಿರ್ಧರಿಸಲು. ಈಗ ಲಾಕ್ ಡೌನ್ ಬೇಕೋ ಬೇಡವೋ ಎಂದು ಕೇಳಲು ಹೊರಟಿರುವ ಮೋದಿಗೆ ಲಾಕ್ ಡೌನ್ ಘೋಷಣೆ ಮಾಡುವ ಮುನ್ನ ಈ ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲೂ (ಜಮ್ಮು ಕಾಶ್ಮೀರ ಹೊರತುಪಡಿಸಿ) ಮುಖ್ಯಮಂತ್ರಿಗಳು ಇದ್ದಾರೆ ಎಂಬುದು ನೆನಪಿರಲಿಲ್ಲವೇ?
ನಾಜೂಕಯ್ಯ ಮೋದಿ
ಆಗ ತಮ್ಮ ಎಂದಿನ ಶೈಲಿಯಲ್ಲಿ ಯಾರನ್ನೂ ಹೇಳದೆ ಕೇಳದೆ ಲಾಕ್ ಡೌನ್ ಮಾಡುವ ನಿರ್ಧಾರ ತೆಗೆದುಕೊಂಡರು. ರಾತ್ರಿ 8 ಗಂಟೆಗೆ ಟಿವಿ ಮುಂದೆ ಹೇಳಿಬಿಟ್ಟರು. ಈಗ ಅಂಥ ಪರಿಸ್ಥಿತಿ ಇಲ್ಲ. ವಿಪಕ್ಷಗಳನ್ನು, ಮುಖ್ಯಮಂತ್ರಿಗಳನ್ನು ಕೇಳದೆ ವಿಧಿಯಿಲ್ಲ. ಏಕೆಂದರೆ ಸಂಸತ್ತಿನ ಸಭಾನಾಯಕರ ಸಭೆಯಲ್ಲಿ ಸಲಹೆ ಕೇಳಿದ್ದರೂ, ಮುಖ್ಯಮಂತ್ರಿಗಳ ಸಭೆ ಕರೆದಿದ್ದರೂ ಮೋದಿಗೆ ಕೇರು ಮಾಡದೆ ಒರಿಸ್ಸಾ ಸಿಎಂ ನವೀನ್ ಪಟ್ನಾಯಕ್ ಏಕಾಏಕಿ ತಮ್ಮ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸಿದ್ದಾರೆ. ತೆಲಂಗಾಣ, ಪುದುಚೇರಿ ಮತ್ತು ಛತ್ತೀಸ್‌ಘಡದ ಮುಖ್ಯಮಂತ್ರಿಗಳು ಸಭೆಗೂ ಮುನ್ನವೇ ಲಾಕ್ ಡೌನ್ ಮುಂದುವರೆಸುವುದೇ ಕ್ಷೇಮ ಅಂತಾ ಹೇಳಿಬಿಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ಕ್ಷೇತ್ರದ ತಜ್ಞರ ಅಭಿಪ್ರಾಯವೂ ಲಾಕ್ ಡೌನ್ ಮುಂದುವರೆಸಬೇಕೆಂಬುದೇ ಆಗಿದೆ. ಈ ನಡುವೆ ಗ್ರೂಪ್ ಆಫ್ ಮಿನಿಸ್ಟರ್ಸ್ ಮತ್ತು ಕ್ಯಾಬಿನೆಟ್ ಸೆಕ್ರೆಟರಿ ಅಜಯ್ ಬಳ್ಳಾ ಅವರ ಸಮಿತಿಗಳ ಸಲಹೆಗಳು ಅಡ್ಡಗೋಡೆ ಮೇಲೆ ದೀಪ ಇಟ್ಟಿವೆ. ಆರ್ಥಿಕ ತಜ್ಞರು ಲಾಕ್ ಡೌನ್ ಮುಂದುವರೆಸಿದರೆ ದೇಶದ ಆರ್ಥಿಕತೆ ಅಧೋಗತಿಗೆ ತಲುಪಲಿದೆ ಎಂದು ಹೆದರಿಸಿದ್ದಾರೆ. ಗೊಂದಲಕ್ಕೀಡಾಗಿರುವ 56 ಇಂಚಿನ ಎದೆಯುಳ್ಳ ಮೋದಿ, ‘ಮುಖ್ಯಮಂತ್ರಿಗಳ ಸಭೆ ಕರೆದು, ಅಲ್ಲೇ ನಿರ್ಧರಿಸಿ, ಲಾಕ್ ಡೌನ್ ಮುಂದುವರೆಸುವ ಅಥವಾ ನಿಲ್ಲಿಸುವ ಅಥವಾ ಬೇರೊಂದು ರೀತಿಯಲ್ಲಿ ಜಾರಿ ಮಾಡುವ ಯಾವುದೇ ತೀರ್ಮಾನ ತಾನೊಬ್ಬನದೇ ಅಲ್ಲ, ಸಭೆಯ ನಿರ್ಧಾರ’ ಎಂದು ಹೇಳಲೊರಟಿದ್ದಾರೆ. ಇಂಥ ಚಾಲಾಕಿ ಗಿರಾಕಿಗಳನ್ನು ಕನ್ನಡದಲ್ಲಿ ʼನಾಜೂಕಯ್ಯʼ ಎಂದು ಬಣ್ಣಿಸುತ್ತಾರಲ್ಲವೇ?
ಮೋದಿ ಈಗಲಾದರೂ ಕಲಿಯಲಿ
ಮೋದಿ ವಿಪಕ್ಷ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಕಲಿತಂತೆ ವಿಶ್ವದ ಇತರೆ ನಾಯಕರ ನಡೆ ನೋಡಿ ಕೂಡ ಕಲಿಯಬೇಕಾಗಿದೆ. ತಮ್ಮ ‘ಒನ್ ವೇ’ ಶೈಲಿ ಅಥವಾ ಸ್ವಗತ ಸ್ವರೂಪದ ಜೊತೆಗೆ ಬೇರೆ ಬೇರೆ ದೇಶಗಳನ್ನು ಮುನ್ನಡೆಸುತ್ತಿರುವ ನಾಯಕರು ಅಲ್ಲಿನ ದೇಶವಾಸಿಗಳೊಂದಿಗೆ ಯಾವ ರೀತಿ ಸಂವಹಿಸುತ್ತಿದ್ದಾರೆ ಎಂಬುದನ್ನೂ ನೋಡಬೇಕಿದೆ. ಮೋದಿ ಜನರನ್ನು ಪರಿಣಾಮಕಾರಿಯಾಗಿ ಪ್ರಭಾವಿಸಬಲ್ಲರು ಎಂಬದರಲ್ಲಿ ಈಗ ಯಾರಿಗೂ ಅನುಮಾನಗಳಿಲ್ಲ. ಆದರೆ ಅವರು ಪ್ರಶ್ನೆಗಳಿಗೆ ಹೆದರಿದರೆ ಭವಿಷ್ಯದಲ್ಲಿ ‘ಪುಕ್ಕಲ’ ಎಂಬ ಬಿರುದು ಗ್ಯಾರಂಟಿ. ಪ್ರಧಾನಿ ಇನ್ನಾದರೂ ಪತ್ರಕರ್ತರನ್ನು ಎದುರಿಸಬೇಕು. ಅವರ ಪ್ರಶ್ನೆಗಳ ಮೂಲಕ ಸಿಗುವ ದೇಶವಾಸಿಗಳ ಅಭಿಪ್ರಾಯಕ್ಕೆ ಕಿವಿಗೊಡಬೇಕು.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿದಿನ ಪ್ರೆಸ್ ಮೀಟ್ ಮಾಡುತ್ತಿದ್ದಾರೆ. ಅಮೆರಿಕಾದ ಮಾಧ್ಯಮಗಳು ಭಾರತದ ಮಾಧ್ಯಮಗಳಿಗಿಂತ ವಸ್ತುನಿಷ್ಟವಾಗಿವೆ. ಆಳುವವರ ವಿರುದ್ಧ ನಿಷ್ಠುರವಾಗಿವೆ. ಆದರೂ ಟ್ರಂಪ್ ಪತ್ರಕರ್ತರ ಪ್ರಶ್ನೆಗೆ ಕಿವಿ ತೆರೆದಿದ್ದಾರೆ. ಯುನೈಟೆಡ್ ಕಿಂಗ್‌ಡಂನ ಬೋರಿಸ್ ಜಾನ್ಸನ್ ಕರೋನಾ ಪಾಸಿಟಿವ್ ಬಂದು ಕ್ವಾರಂಟೈನ್ ತಲುಪುವರೆಗೆ ಪ್ರತಿದಿನ ಪ್ರೆಸ್ ಮೀಟ್ ಮಾಡುತ್ತಿದ್ದರು. ಕರೋನಾದಿಂದ ನಲುಗಿಹೋಗಿರುವ ಇಟಲಿಯ ಪ್ರಧಾನ ಮಂತ್ರಿ ಗೈಸೆಪೆ ಕಾಂಟೆ ಕೂಡ ಮಾಧ್ಯಮಗಳ ಮುಂದೆ ಬರುತ್ತಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಏನು ಹೇಳಿದರೂ ನಂಬುವ ಸ್ಥಿತಿಯಲ್ಲಿಲ್ಲ ಬಿಡಿ. ಏಕೆಂದರೆ ಚೀನಾದ ಮಾಧ್ಯಮಗಳು ವಸ್ತುನಿಷ್ಟವಾಗಿ ವರದಿ ಮಾಡುತ್ತಿಲ್ಲ. ಹಾಗೆ ಮಾಡಲು ಆ ದೇಶದ ವ್ಯವಸ್ಥೆ ಬಿಟ್ಟಿಲ್ಲ. ಭಾರತದ ಬಗೆಗೂ, ಭಾರತದ ಮಾಧ್ಯಮಗಳ ಬಗೆಗೂ, ಮೋದಿ ಬಗೆಗೂ ಜಗತ್ತು ಹೀಗೆ ಮಾತನಾಡಿಕೊಳ್ಳಬಾರದಲ್ಲವೇ? ಅದಕ್ಕಾದರೂ ಮೋದಿ ಮಾತನಾಡಬೇಕು. ಮಾಧ್ಯಮ ಮುಕ್ತವಾಗಿರುವಂತೆಯೂ ನೋಡಿಕೊಳ್ಳಬೇಕು.
ತಮ್ಮವರ ಮಾತನ್ನಾದರೂ ಕೇಳಲಿ
ಮೋದಿಗೆ ಮಾಧ್ಯಮಗಳ ಮುಂದೆ ಬರುವ ಧೈರ್ಯ ಇಲ್ಲ. ಹೋಗಲಿ, ಅವರದೇ ಸಂಪುಟ ಸಹೋದ್ಯೋಗಿಗಳು, ಅವರದೇ ಪಕ್ಷದ ಸಂಸದರು, ಪದಾಧಿಕಾರಿಗಳು ಅಥವಾ ಕಾರ್ಯಕರ್ತರ ಅಭಿಪ್ರಾಯವನ್ನಾದರೂ ಕೇಳಲಿ. ಕಳೆದ ಬಾರಿ ಸಂಪುಟ ಸಭೆ ನಡೆಯಿತು. ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಎರಡು ವರ್ಷಗಳ ಮಟ್ಟಿಗೆ ತಡೆಹಿಡಿಯಲು ನಿರ್ಧರಿಸಲಾಯಿತು. ಅದೂ ಸಂಪುಟ ಸಹುದ್ಯೋಗಿಗಳೊಂದಿಗೆ ಚರ್ಚೆ ಮಾಡಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಮೋದಿ ನಿರ್ಧರಿಸಿದ್ದರು. ಸಂಪುಟ ಸಭೆ ಒಪ್ಪಿಗೆ ನೀಡಬೇಕಾದ ಸಂಪ್ರದಾಯ ಪಾಲಿಸಬೇಕಾಗಿತ್ತು. ಹಾಗೆ ಮಾಡಲಾಯಿತು ಅಷ್ಟೇ. ಗ್ರೂಪ್ ಆಫ್ ಮಿನಿಸ್ಟರ್ಸ್ ಕತೆಯೂ ಅಷ್ಟೇ; ನೆಪಮಾತ್ರಕ್ಕೆ. ಕಡೆಗೆ ಎಲ್ಲವನ್ನೂ ನಿರ್ಧರಿಸುವವರು ಮೋದಿಯೇ. ಸಂಸದರು, ಪದಾಧಿಕಾರಿಗಳು, ಕಾರ್ಯಕರ್ತರು ನೆನಪಾಗುವ ಪ್ರಶ್ನೆಯೇ ಇಲ್ಲ, ಏಕೆಂದರೆ ಈಗ ಯಾವ ಚುನಾವಣೆಯೂ ಇಲ್ಲ.
ಇರಲಿ, ಏಪ್ರಿಲ್ 11ರಂದೇ ಏಪ್ರಿಲ್ 14ರ ಬಳಿಕ ಲಾಕ್ ಡೌನ್ ಇರುತ್ತೋ ಇಲ್ಲವೋ ಎಂದು ನಿರ್ಧಾರವಾಗುತ್ತೆ. ಬಳಿಕ 6ನೇ ಬಾರಿಗೆ ದೇಶ ಉದ್ದೇಶಿಸಿ ಮಾತನಾಡಲು ಮೋದಿ 8 PMಗೋ ಅಥವಾ 9 AMಗೋ ಬರುತ್ತಾರೆ. ಆಗಲಾದರೂ ಸುದ್ದಿಗೋಷ್ಟಿ ಮೂಲಕ ಬರಲಿ. ಪ್ರಶ್ನೆಗಳನ್ನು ಎದುರಿಸಲಿ. ಜೊತೆಗೆ ಮುಂದೇನು ಎಂಬುದನ್ನಷ್ಟೇ ಹೇಳದೆ ಕೇಂದ್ರ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಲು ಏನೇನು ಮಾಡಲಿದೆ? ಜನರ ಕಷ್ಟಕ್ಕೆ ಕೇಂದ್ರ ಸರ್ಕಾರ ಹೇಗೆ ಕಟಿಬದ್ದವಾಗಿದೆ ಎಂಬುದನ್ನೂ ತಿಳಿಸಲಿ.