ಮೂರು ಸುತ್ತಿನ ಲಾಕ್ಡೌನ್ ಮತ್ತು ಒಂದು ಸುತ್ತಿನ ಫ್ರೀ ಡೌನ್ ಬಳಿಕ ಇದೀಗ ದೇಶದ ಕರೋನಾ ಪಾಸಿಟಿವ್ ಪ್ರಕರಣಗಳು ಬರೋಬ್ಬರಿ ಮೂರು ಲಕ್ಷಕ್ಕೂ ಮೀರಿ ಮುನ್ನುಗ್ಗಿವೆ. ವಿಫಲ ಲಾಕ್ಡೌನ್ ಮತ್ತು ಪ್ರಕರಣಗಳ ಮಿತಿಮೀರಿದ ಏರಿಕೆಗೆ ಕಾರಣವಾದ ಫ್ರೀಡೌನ್ ಫಲಿತಾಂಶಗಳು ಈಗ ಸರ್ಕಾರ ಮತ್ತು ಜನರನ್ನು ದಿಕ್ಕು ತೋಚದ ಪರಿಸ್ಥಿತಿಗೆ ಎದುರಾಗಿಸಿವೆ.
ಮೊದಲ ಬಾರಿಗೆ ದೇಶವ್ಯಾಪಿ ಲಾಕ್ಡೌನ್ ಹೇರಿ ಬರೋಬ್ಬರಿ 83 ದಿನಗಳ ಬಳಿಕವೂ ಕರೋನಾ ಸೋಂಕು ಪ್ರಮಾಣ ಏರುಗತಿಯಲ್ಲೇ ಇದೆಯೇ ಹೊರತು, ಯಾವುದೇ ಇಳಿಮುಖ ಸೂಚನೆ ಸಿಕ್ಕಿಲ್ಲ. ಮೂರು ತಿಂಗಳ ಕಾಲದ ಲಾಕ್ಡೌನ್ನಿಂದಾಗಿ ಇಡೀ ದೇಶದ ಕೃಷಿ, ಉದ್ಯಮ, ಸೇವಾ ವಲಯಗಳು ಸೇರಿ ಉದ್ಯಮ, ಉದ್ಯೋಗ, ಬದುಕು ಕೊಚ್ಚಿ ಹೋಗಿದೆ. ಅಂದಿನ ಅನ್ನ ಅಂದಂದೇ ಸಂಪಾದಿಸುವ ಕೂಲಿಕಾರನಿಂದ ಸಾವಿರಾರು ಕೋಟಿ ಒಡೆಯರವರೆಗೆ ಎಲ್ಲರ ಬದುಕನ್ನು ಹೈರಾಣು ಮಾಡಿದ ಲಾಕ್ಡೌನ್ ಕೊನೆಗೂ ಕರೋನಾ ಸೋಂಕು ತಡೆಯುವಲ್ಲಿ; ಅಥವಾ ಕನಿಷ್ಟ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತೆ ಎಂದರೆ, ಅದೂ ಇಲ್ಲ. ಬದಲಾಗಿ ನೂರಾರು ಕೂಲಿ ಕಾರ್ಮಿಕರ ಸಾವಿಗೆ, ಕೋಟ್ಯಂತರ ಬಡವರ ಜೀವನಾಧಾರ, ಹೊತ್ತಿನ ಗಂಜಿಯ ನಷ್ಟಕ್ಕೆ ಕಾರಣವಾಯಿತು. ದೇಶದ ಇಡೀ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿತು.
ಹಾಗಾದರೆ, ಇಂತಹ ವೈಫಲ್ಯಕ್ಕೆ, ನಷ್ಟಕ್ಕೆ, ಸಾವು-ನೋವಿಗೆ ಕಾರಣವೇನು? ಯಾಕೆ ಲಾಕ್ಡೌನ್ ವಿಫಲವಾಯಿತು? ಎಲ್ಲಿ ಯಡವಟ್ಟಾಯಿತು? ಯಾರು ಈ ಸಾವು-ನೋವು-ನಷ್ಟಕ್ಕೆ ಹೊಣೆ? ಯಾರ ತೀರ್ಮಾನ ಮತ್ತು ತೀರ್ಮಾನದ ಲೋಪ ಇದಕ್ಕೆಲ್ಲ ಕಾರಣ? ಎಂಬ ಪ್ರಶ್ನೆಗಳು ಈಗ ಕಾಡತೊಡಗಿವೆ. ಅಂತಹ ಕಾಡುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಕೂಡ ಆರಂಭವಾಗಿದೆ.
ಕರೋನಾ ವಿರುದ್ಧದ ಸಮರವನ್ನು 21 ದಿನದಲ್ಲೇ ಗೆದ್ದು ವಿಶ್ವಮಾದರಿಯಾಗುವ ವಿಶ್ವಾಸದ ಮಾತುಗಳ ಹಿಂದೆ ತಾರ್ತಿಕ ಲೆಕ್ಕಾಚಾರಗಳು, ವಾಸ್ತವಿಕ ಸಂಗತಿಗಳ ಅರಿವು ಮತ್ತು ಸೋಂಕು ಹರಡುವಿಕೆಯ ಕುರಿತ ಜ್ಞಾನ ಕೆಲಸ ಮಾಡಿದ್ದರೆ, ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಮಹಾ ದುರಂತವಾಗಿ ಈ ಲಾಕ್ಡೌನ್ ಮತ್ತು ಕರೋನಾ ವಿರುದ್ಧದ ಸಮರಗಳು ದಾಖಲಾಗುತ್ತಿರಲಿಲ್ಲ ಎಂಬುದು ಇದೀಗ ಬೆಳಕಿಗೆ ಬರತೊಡಗಿದೆ. ಮೊದಲ ಹಂತದ ಅಂತ್ಯದ ಹೊತ್ತಿಗೇ ಸ್ವತಃ ಪ್ರಧಾನಿ ಮೋದಿಯವರೇ ರಚಿಸಿದ್ದ ಕರೋನಾ ವಿರುದ್ಧದ ಹೋರಾಟದ ಕುರಿತ ಉನ್ನತಮಟ್ಟದ ಕಾರ್ಯಪಡೆ ಲಾಕ್ಡೌನ್ ಮತ್ತು ಸೋಂಕು ನಿಯಂತ್ರಣ ಕುರಿತ ಮೋದಿಯವರ ಧೋರಣೆ ಮತ್ತು ನಡೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ವ್ಯಾಪಕ ಪರೀಕ್ಷೆ, ಸೋಂಕಿತರ ಪತ್ತೆ, ಸಂಪರ್ಕ ಪತ್ತೆ, ಕ್ವಾರಂಟೈನ್, ಚಿಕಿತ್ಸೆ, ವೈದ್ಯಕೀಯ ವ್ಯವಸ್ಥೆಯ ಸಬಲೀಕರಣದಂತಹ ಕ್ರಮಗಳ ಹೊರತು ಕೇವಲ ಲಾಕ್ಡೌನ್ ಹಾಕಿ ಕೈಕಟ್ಟಿ ಕೂತರೆ ಏನೂ ಸಾಧಿಸಲಾಗದು. ಯಾವ ಸಮರವನ್ನೂ ಗೆಲ್ಲಲಾಗದು. ಬದಲಾಗಿ ಅಂತಹ ನಡೆ ಶತ್ರು ಪಡೆ ದಂಡೆತ್ತಿ ಬಂದಾಗ ಮರಳಲ್ಲಿ ಮುಖ ಹುಗಿದು ಕುಂಡೆ ಮೇಲೆ ಮಾಡಿಕೊಂಡು ಗೆದ್ದೇ ಎಂದು ಬೀಗಿದಷ್ಟೇ ಪರಮ ಮೂರ್ಖತನ ಎಂದೂ ಕಾರ್ಯಪಡೆ ಅಭಿಪ್ರಾಯಪಟ್ಟಿತ್ತು.
Also Read: ಲಾಕ್ಡೌನ್ ವಿಚಾರದಲ್ಲಿ ನೆರೆ ರಾಷ್ಟ್ರವನ್ನು ಅನುಸರಿಸಿದ್ದು ತಪ್ಪು: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಇದೀಗ ಇದೇ ಅಭಿಪ್ರಾಯವನ್ನು ಆಡಳಿತ, ವೈದ್ಯಕೀಯ, ಆರ್ಥಿಕತೆ ಮುಂತಾದ ವಲಯಗಳ ಪರಿಣತರೂ ವ್ಯಕ್ತಪಡಿಸತೊಡಗಿದ್ದಾರೆ. ಪ್ರಧಾನಿ ಮೋದಿಯವರು ತಪ್ಪಿದ್ದೆಲ್ಲಿ? ಅವರ ಆಡಳಿತ ಶೈಲಿಯಲ್ಲಿನ ಮಿತಿಗಳೇನು? ಅವರ ಅಂತಹ ಲೋಪಗಳ ಕಾರಣಕ್ಕೆ ದೇಶ ಕಳೆದುಕೊಂಡಿದ್ದು ಏನನ್ನು? ಹೇಗೆ ಈ ಅನಾಹುತಗಳನ್ನು ತಪ್ಪಿಸಬಹುದಿತ್ತು ಮತ್ತು ಅದೇ ಹೊತ್ತಿಗೆ ಸೋಂಕನ್ನೂ ನಿಯಂತ್ರಿಸಬಹುದಿತ್ತು ಎಂಬ ಬಗ್ಗೆ ತಮ್ಮ ಅನುಭವ ಮತ್ತು ಅರಿವಿನ ಹಿನ್ನೆಲೆಯಲ್ಲಿ ವಿಶ್ಲೇಷಿಸತೊಡಗಿದ್ದಾರೆ.
ಅಂತಹ ಪರಿಣಿತರ ಅಭಿಪ್ರಾಯ ಮತ್ತು ಸಲಹೆಗಳ ಹಿನ್ನೆಲೆಯಲ್ಲಿ ‘ದ ವೈರ್’ ಸುದ್ದಿಜಾಲತಾಣ ಮಾಡಿದ ವರದಿ ಗಮನಾರ್ಹ.
ಇಡೀ ಜಗತ್ತಿನಲ್ಲಿಯೇ ಅತಿ ಬಿಗಿಯಾದ ಮತ್ತು ಅತ್ಯಂತ ದೊಡ್ಡದಾದ (ಜನಸಮೂಹದ ಪ್ರಮಾಣದಲ್ಲಿ) ಲಾಕ್ಡೌನ್ ಎಂಬ ಮಾಧ್ಯಮಗಳ ಬಣ್ಣನೆಗೆ ಗುರಿಯಾದ, ‘ರಣಕಲಿ’ ಮೋದಿಯವರು ಕರೋನಾ ಹುಟ್ಟಡಗಿಸಲು ಬಳಸಿದ ‘ರಾಮಬಾಣ’ ಎಂದು ಹಾಡಿಹೊಗಳಿದ ಈ ಲಾಕ್ಡೌನ್ ನಿಜಕ್ಕೂ ನಿರೀಕ್ಷಿತ ಫಲ ಕೊಟ್ಟಿತೆ ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಹಾಗಾಗಿ ಮೋದಿಯವರ ಭಜನೆ ತಂಡದಂತಿರುವ ಮಾಧ್ಯಮಗಳು ಈಗ ಕರೋನಾ ಸೋಂಕು ಮತ್ತು ಲಾಕ್ಡೌನ್ ವಿಷಯದಲ್ಲಿ ಮೋದಿಯವರ ಬದಲಾಗಿ, ರಾಜ್ಯಗಳು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಂಡು ಬಾಣ ಬಿಡತೊಡಗಿವೆ. ಮೂರು ಹಂತದ ಲಾಕ್ಡೌನ್ ಮುಗಿದು ಮೊದಲ ಹಂತದ ಫ್ರೀಡೌನ್ ಆರಂಭವಾಗುತ್ತಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಟ್ವೀಟ್ ಒಂದರ ಗ್ರಾಫಿಕ್ ಭಾರತದ ಲಾಕ್ಡೌನ್ ಹೇರಿಕೆ ಮತ್ತು ಹಿಂತೆಗೆತ ಮತ್ತು ಅದೇ ರೀತಿಯಲ್ಲಿ ವಿವಿಧ ಕರೋನಾಪೀಡಿತ ದೇಶಗಳಲ್ಲಿನ ಲಾಕ್ಡೌನ್ ಹೇರಿಕೆ ಮತ್ತು ಹಿಂತೆಗೆತದ ಮಾಹಿತಿಯನ್ನು ಬಹಿರಂಗಪಡಿಸಿದ್ದರು.
Also Read: ವೈಫಲ್ಯ ಮುಚ್ಚಿಹಾಕಲು ಲಾಕ್ ಡೌನ್ ಅಸ್ತ್ರ: ಕರೋನಾ ಟಾಸ್ಕ್ ಫೋರ್ಸ್!
ಸ್ಪೇನ್, ಜರ್ಮನಿ, ಬ್ರಿಟನ್ ಮತ್ತು ಇಟಲಿ ದೇಶಗಳಲ್ಲಿ ಸೋಂಕು ಪ್ರಮಾಣ ಸಾಕಷ್ಟು ಗಣನೀಯ ಪ್ರಮಾಣದಲ್ಲಿರುವಾಗ ಹೇರಿದ್ದ ಲಾಕ್ಡೌನ್ ನನ್ನು ಬಹುತೇಕ ಸೋಂಕು ಪ್ರಮಾಣ ಇಳಿಮುಖವಾಗಿ ನೂರರ ಆಸುಪಾಸಿಗೆ ಇಳಿದಾಗ ತೆರವು ಮಾಡಿದ್ದರೆ, ಭಾರತದಲ್ಲಿ ಇಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ನಗಣ್ಯ(560ರಷ್ಟು) ಎಂಬಷ್ಟು ಪ್ರಮಾಣದ ಸೋಂಕು ಇರುವಾಗ ಅವಸರದಲ್ಲಿ ತೀರಾ ಮುಂಚಿತವಾಗಿ ಲಾಕ್ಡೌನ್ ಹೇರಲಾಯಿತು ಮತ್ತು ರೋಗ ಇನ್ನೂ ಏರುಗತಿಯಲ್ಲಿರುವಾಗಲೇ(ಪೀಕ್-ಶಿಖರಪ್ರಮಾಣ ತಲುಪುವ ಮುನ್ನವೇ) ತೆರವು ಮಾಡಲಾಯಿತು! ಇದು ಸೋಂಕು ಹರಡುವಿಕೆ ಪ್ರಮಾಣ, ವ್ಯಾಪಕತೆ, ದೇಶದ ಸಾಮಾಜಿಕ ಪರಿಸ್ಥಿತಿ, ಜನಸಂಖ್ಯಾ ಹಂಚಿಕೆಯ ರೀತಿ ಮುಂತಾದ ಮಾಹಿತಿಯೇ ಇಲ್ಲದೆ, ಕೇವಲ ಅಂಧಾನುಕರಣೆಯಲ್ಲಿ ಇತರ ದೇಶಗಳನ್ನು ಅನುಸರಿಸಲು(ತಟ್ಟೆಲೋಟ ಬಾರಿಸುವುದು, ದೀಪ ಬೆಳಗುವುದನ್ನು ನಕಲು ಮಾಡಿದಂತೆ!) ಹೋಗಿ ಮಾಡಿಕೊಂಡ ಎಡವಟ್ಟು!
130 ಕೋಟಿಯಷ್ಟು ಅಪಾರ ಜನಸಂಖ್ಯೆಯ ದೇಶವೊಂದನ್ನು ಇಡಿಯಾಗಿ ಏಕಾಏಕಿ (ಕೇವಲ ನಾಲ್ಕು ತಾಸು ಕಾಲಾವಧಿಯಲ್ಲಿ) ಸಂಪೂರ್ಣ ಲಾಕ್ಡೌನ್ ಮಾಡಿದ ಕ್ರಮ ನಿಜಕ್ಕೂ ಆಡಳಿತಾತ್ಮಕವಾಗಿ ಮಹಾ ದುಃಸ್ವಪ್ನದ ನಡೆ. ಆ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಈ ಲಾಕ್ಡೌನ್ ಹೇರಿದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆ ಮಾಜಿ ಕಾರ್ಯದರ್ಶಿ ಜವಾಹರ್ ಸರ್ಕಾರ್, ಆಡಳಿತಾತ್ಮಕವಾಗಿ ಲಾಕ್ಡೌನ್ ಒಂದು ಊಹಾತೀತ ಮಟ್ಟದ ವೈಫಲ್ಯ. ಇದಕ್ಕೆ ಪ್ರಧಾನಿಗಳ ಏಕಪಕ್ಷೀಯ ನಿರ್ಧಾರಗಳೇ ಕಾರಣ ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದಿದ್ದಾರೆ.
“ಮೋದಿಯವರಿಗೆ ಸಮಾಲೋಚನೆ, ಸಂವಾದಗಳಲ್ಲಿ ನಂಬಿಕೆಯೇ ಇಲ್ಲ. ಅವರ ಇಡೀ ಸರ್ಕಾರ ನಡೆಯುತ್ತಿರುವುದೇ ಕೆಲವೇ ಮಂದಿ ಹೌದಪ್ಪಗಳಿಂದಾಗಿ. ಆದರೆ ಜಾಗತಿಕ ಮಹಾಮಾರಿಯಂತಹ ಸಂಕಷ್ಟದ ಹೊತ್ತಲ್ಲಿ ಯಾವುದೇ ಕ್ರಮಕ್ಕೆ ಮುನ್ನ ಸಮಾಲೋಚನೆ, ಚರ್ಚೆಗಳು ಅಗತ್ಯ. ಮೊದಲು ಸಂಪುಟ ಮಟ್ಟದಲ್ಲಿ ಬಳಿಕ ಅಧಿಕಾರಿಗಳ ಮಟ್ಟದಲ್ಲಿ ವ್ಯಾಪಕ ಸಮಾಲೋಚನೆಗಳ ಬಳಿಕವಷ್ಟೇ ಲಾಕ್ಡೌನ್ ನಂತಹ ಕ್ರಮ ಜಾರಿ ಮಾಡುವುದು ವಿವೇಚನೆ. ಪರ ವಿರೋಧದ ಚರ್ಚೆಗಳು ವಾಸ್ತವಾಂಶಕ್ಕೆ ಹತ್ತಿರ ಆಡಳಿತಗಾರನನ್ನು ಕೊಂಡೊಯ್ಯುತ್ತವೆ. ಉದಾಹರಣೆಗೆ; ವಲಸೆ ಕಾರ್ಮಿಕರ ಸಮಸ್ಯೆಯನ್ನು ನೋಡಿಕೊಳ್ಳಲೆಂದೇ ಭಾರತ ಕಾರ್ಮಿಕ ಸಚಿವಾಲಯದಲ್ಲಿ 1979ರಿಂದಲೇ ಪ್ರತ್ಯೇಕ ಇಲಾಖೆಯೇ ಇದೆ. ಆದರೆ, ಈ ಬಾರಿ ಲಾಕ್ಡೌನ್ ವೇಳೆ ಅದರ ಹೆಸರನ್ನೇ ಕೇಳಲಿಲ್ಲ. ಯಾಕೆಂದರೆ; ಮೋದಿಯವರಿಗೆ ತಮ್ಮ ಸರ್ಕಾರದ ಇತರೆ ಸಚಿವಾಲಯ- ಇಲಾಖೆಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುವುದು ಇಷ್ಟವೇ ಇಲ್ಲ. ಅವರದ್ದೇನಿದ್ದರೂ ಜಾದುಗಾರನೊಬ್ಬ ಗಿಲಿಗಿಲಿ ಪೂ ಎಂದು ತನ್ನ ಟೊಪ್ಪಿಯಿಂದ ದಿಢೀರನೇ ಏನೋ ಒಂದನ್ನು ತೆಗೆದು ತೋರಿಸುವಂತಹ ಚಮತ್ಕಾರ, ಪವಾಡದಂತಹ ಆಡಳಿತ ವರಸೆ. ಆದರೆ, 130 ಕೋಟಿ ಜನರ ಬದುಕಿಗೆ ಸಂಬಂಧಿಸಿದ ಒಂದು ತೀರ್ಮಾನ ಕೈಗೊಳ್ಳುವಾಗ ಹೀಗೆ ಗಿಲಿಗಿಲಿ ಪೂ ಎನ್ನಲಾಗದು. ಹಾಗೆ ಜನರ ಬದುಕಿನ ಜೊತೆ ಆಟವಾಡುವಂತಹ ಜಾದೂ ಹಪಾಹಪಿಯ ಪರಿಣಾಮವೇ ಈ ದುರಂತ” ಎಂದು ಜವಾಹರ್ ಸರ್ಕಾರ್ ವಿಶ್ಲೇಷಿಸಿದ್ದಾರೆ!
Also Read: ಲಾಕ್ ಡೌನ್ ಸಂಕಷ್ಟ: ಮೋದಿ ವಿರುದ್ದ ಹೆಚ್ಚುತ್ತಿರುವ ವಲಸೆ ಕಾರ್ಮಿಕ ಸಮುದಾಯದ ಅಸಮಾಧಾನ
ಹಾಗೆ ಆರೋಗ್ಯ ವ್ಯವಸ್ಥೆಯ ವಿಷಯದಲ್ಲಿ ಲಾಕ್ಡೌನ್ ಮತ್ತು ಸೋಂಕು ನಿಯಂತ್ರಣದ ಕ್ರಮಗಳ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಖ್ಯಾತ ನ್ಯೂರೋ ಸರ್ಜನ್(ನರರೋಗ ತಜ್ಞ) ಡಾ ಸುಜಯ್ ಸನ್ಯಾಲ್, ಲಾಕ್ಡೌನ್ ಹೇರಿಕೆಯ ಕಾಲ ಮತ್ತು ರೀತಿ ಎರಡೂ ತಪ್ಪು. ಯಾವುದೇ ಯೋಜನೆ ಮತ್ತು ಯೋಚನೆ ಇಲ್ಲದೇ ಜಾರಿಗೆ ತಂದ ಅನಾಹುತಕಾರಿ ಕ್ರಮ ಅದು ಎಂದಿದ್ದಾರೆ.
ಅವರ ಪ್ರಕಾರ, “ಇಟಲಿ, ಸ್ಪೇನ್ ನಂತಹ ಶೀತ ವಲಯದ ದೇಶಗಳನ್ನು ಅನುಸರಿಸುವ ಬದಲು ಉಷ್ಣವಲಯದ ಭಾರತ ತನ್ನದೇ ರೀತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕಿತ್ತು. ಅಲ್ಲಿನ ವೇಗದಲ್ಲಿ ಇಲ್ಲಿ ಸೋಂಕು ಹರಡುತ್ತಿಲ್ಲ. ಅಲ್ಲದೆ ಆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಯುವಕರ ಸಂಖ್ಯೆ ಅಧಿಕವಿದೆ. ಜೊತೆಗೆ ಭಾರತೀಯರಿಗೆ ಜನ್ಮದತ್ತವಾದ ರೋಗನಿರೋಧಕ ಶಕ್ತಿ ಇದೆ. ಹಾಗಾಗಿ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ ಇದೆ. ಆದರೆ, ಈ ಭಿನ್ನತೆಗಳನ್ನೆಲ್ಲಾ ಗಮನಿಸುವ ಗೋಜಿಗೂ ಹೋಗದೆ ಪ್ರಧಾನಿ ಮೋದಿಯವರು ನೇರವಾಗಿ ಆ ದೇಶಗಳ ಲಾಕ್ಡೌನ್ ಮಾದರಿಯನ್ನು ಯಥಾ ನಕಲು ಮಾಡಿ ಏಕಪಕ್ಷೀಯವಾಗಿ ಜಾರಿಗೊಳಿಸಿದರು. ಹಾಗೇ ಅಲ್ ಲಾಕ್ ನಿರ್ಧಾರ ಕೂಡ ಅಷ್ಟೇ ವಿಚಿತ್ರ. ಲಾಕ್ಡೌನ್ ಹೇರಿಕೆ ಮತ್ತು ಹಿಂತೆಗೆತದ ವಿಷಯದಲ್ಲಿ ಸರ್ಕಾರ ಯಾವುದೇ ಸಮಾಲೋಚನೆ, ವಿವೇಚನೆ ನಡೆಸಿಲ್ಲ. ಏನೋ ತೋಚಿದ್ದನ್ನು ಮಾಡಿ ಕೈತೊಳೆದುಕೊಂಡಿದೆ ಎನಿಸುತ್ತದೆ. ಏಕೆಂದರೆ; ಸೋಂಕು ಪ್ರಮಾಣದಲ್ಲಿ ಗಣನೀಯವಾಗಿ ನಿರಂತರ ಇಳಿಕೆ ಕಂಡುಬಂದಲ್ಲಿ ಮಾತ್ರ ಲಾಕ್ಡೌನ್ ತೆರವುಮಾಡುವುದು ಈವರೆಗೆ ವೈಜ್ಞಾನಿಕ ಮಾದರಿಗಳು ತೋರಿಸಿಕೊಟ್ಟಿರುವ ಸಾಬೀತಾದ ಯಶಸ್ವಿ ಕ್ರಮ. ಆದರೆ ನಮ್ಮಲ್ಲಿ ಸೋಂಕು ಪ್ರಮಾಣದ ಗರಿಷ್ಟ ಮಟ್ಟದಲ್ಲಿ ದಿನದಿಂದ ದಿನಕ್ಕೆ ಏರುಗತಿಯಲ್ಲಿರುವಾಗಲೇ ಫ್ರೀಡೌನ್ ಮಾಡಲಾಗಿದೆ”.
Also Read: ಲಾಕ್ ಡೌನ್ ಕಾರ್ಯತಂತ್ರದ ವೈಫಲ್ಯ ಪ್ರಶ್ನಿಸಿದರೆ ದೇಶದ ವಿರೋಧಿ ಟೀಕೆ ಹೇಗೆ?
ಹಾಗೆಯೇ, ಲಾಕ್ಡೌನ್ ಆರ್ಥಿಕ ಸಾಧಕ-ಬಾಧಕ ಮತ್ತು ಜಾರಿಯ ಲೋಪಗಳ ಬಗ್ಗೆ ವಿಶ್ಲೇಷಿಸಿರುವ ಅರ್ಥಶಾಸ್ತ್ರಜ್ಞ ಸೈಕಾತ್ ಸಿನ್ಹಾ ರಾಯ್, “ಲಾಕ್ಡೌನ್ ಅವಧಿಯಲ್ಲಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಉತ್ತಮಗೊಳಿಸಲು, ಸೋಂಕಿನ ವಿರುದ್ಧದ ಸಮರಕ್ಕೆ ಸಜ್ಜುಗೊಳಿಸಲು ದೇಶಕ್ಕೆ ಸಾಕಷ್ಟು ಸಮಯಾವಕಾಶ ಸಿಕ್ಕಿತ್ತು. ಆದರೆ, ಅಂತಹ ಅವಕಾಶವನ್ನು ಬಳಸಿಕೊಂಡ ಬಗ್ಗೆ ಯಾವುದೇ ಪುರಾವೆ ಇಲ್ಲ. ಹಾಗಾಗಿ ಈ ಲಾಕ್ಡೌನ್ ಒಂದು ಕಡೆ ಆರ್ಥಿಕತೆಯನ್ನು ಹಾಳು ಮಾಡಿದರೆ, ಮತ್ತೊಂದು ಕಡೆ ಅಪಾಯಕಾರಿ ಸೋಂಕಿನ ವಿರುದ್ಧ ಜನರನ್ನು ಬಲಹೀನರನ್ನಾಗಿ ಮಾಡಿದೆ” ಎಂದಿದ್ದಾರೆ.
ಜೊತೆಗೆ, ಹದಿನೈದು ದಿನ ತಡವಾಗಿ ಲಾಕ್ಡೌನ್ ಹೇರಿದ್ದರೆ, ಆರ್ಥಿಕವಾಗಿ ಸಾಕಷ್ಟು ನಷ್ಟವನ್ನು ತಪ್ಪಿಸಬಹುದಿತ್ತು. ಕಾರ್ಮಿಕರ ಬದುಕಿಗೆ ಕನಿಷ್ಟ ಭದ್ರತೆ ಒದಗಿಸಬಹುದಿತ್ತು. ಉತ್ಪಾದಿತ ಸರಕುಗಳನ್ನು ಮತ್ತುಅದಾಗಲೇ ಆರ್ಡರ್ ಪಡೆದಿದ್ದ ಬೇಡಿಕೆಗೆ ಸರಕು ಒದಗಿಸಲೂ ಕಾಲಾವಕಾಶ ಸಿಗುತ್ತಿತ್ತು. ಆಗ ಆರ್ಥಿಕ ನಷ್ಟ ಮತ್ತು ಹಣಕಾಸಿನ ಹೊಂದಾಣಿಕೆಯ ಮುಗ್ಗಟ್ಟು ಇಷ್ಟು ತೀವ್ರವಾಗಿರುತ್ತಿರಲಿಲ್ಲ. ಆದರೆ, ದೈನಂದಿನ ವ್ಯವಹಾರಗಳ ಅರಿವಿಲ್ಲದ ವಿವೇಚನಾಹೀನ ದಿಢೀರ್ ಲಾಕ್ಡೌನ್ ಕ್ರಮದಿಂದಾಗಿ ಇಡೀ ತಯಾರಿಕೆ ಮತ್ತು ಹಂಚಿಕೆಯ ಆರ್ಥಿಕತೆ ಹಠಾತ್ ಕುಸಿದುಹೋಯಿತು ಎಂದೂ ಅವರು ವಿಶ್ಲೇಷಿಸಿದ್ದಾರೆ.
ಒಟ್ಟಾರೆ ಲಾಕ್ಡೌನ್ ವಿಫಲ ಎಂಬುದು ಎಷ್ಟು ದಿಟವೋ, ಅಷ್ಟೇ ಅದು ಅನಾಹುತಕಾರಿ ಮತ್ತು ತಪ್ಪಿಸಬಹುದಾಗಿದ್ದ ರಾಷ್ಟ್ರೀಯ ದುರಂತ ಎಂಬುದು ಕೂಡ ನಿರ್ವಿವಾದ. ಎಲ್ಲವನ್ನೂ ತಮ್ಮ ವ್ಯಕ್ತಿತ್ವದ ವರ್ಚಸ್ಸು ವೃದ್ಧಿಯ ಅವಕಾಶವೆಂಬಂತೆ ನೋಡುವ ಮತ್ತು ಕೇವಲ ಮತಬ್ಯಾಂಕ್ ಹಿತಾಸಕ್ತಿಯೊಂದನ್ನೇ ಪರಿಗಣಿಸಿ ನೀತಿ ನಿಲುವುಗಳನ್ನು ಕೈಗೊಳ್ಳುವ ಪ್ರಧಾನಿಗಳ ವರಸೆಗೆ ದೇಶ ಬಲುದೊಡ್ಡ ಬೆಲೆ ತೆತ್ತಿದೆ ಎಂಬುದು ಕೂಡ ಅಷ್ಟೇ ಸತ್ಯ. ಗಿಲಿ ಗಿಲಿ ಪೂ ಎಂಬಂತೆ ಜಾದೂ ಮಾಡಿ ಸೋಂಕು ತಡೆಯುವುದು ಸಾಧ್ಯ ವೆಂದು ನಂಬಿರುವ ಮತ್ತು ಹಾಗೆ ಜನರನ್ನು ನಂಬಿಸುವ ಆಡಳಿತಗಾರರು ಮತ್ತು ಅವರ ತಾಳಕ್ಕೆ ಕುಣಿಯುವ ಸಾರ್ವಜನಿಕ ಮಾಧ್ಯಮಗಳ ಅವಿವೇಕಕ್ಕೆ ಶತಮಾನಗಳ ಕಾಲ ಮರೆಯದ ಸಂಕಷ್ಟಕ್ಕೆ ಜನಸಾಮಾನ್ಯರು ಬಲಿಬಿದ್ದಿದ್ದಾರೆ!
Also Read: ಕೇವಲ ಅಧಿಕಾರಿಗಳ ಮಾತು ಕೇಳಿದ್ದೇ ಲಾಕ್ ಡೌನ್ ದುರಂತಕ್ಕೆ ಕಾರಣ!