ಇಡೀ ದೇಶದಲ್ಲೇ ಮಾರಣಾಂತಿಕ ಕರೋನಾ ವೈರಸ್ ಗೆ ಮೊದಲ ಬಲಿ ದಾಖಲಾಗಿದ್ದು ಕರ್ನಾಟಕದಲ್ಲೇ. ಮಾರ್ಚ್ 12 ಗುರುವಾರ ಕಲಬುರ್ಗಿಯ ವೃದ್ಧರೊಬ್ಬರು ಕರೋನಾಗೆ ಮೃತಪಟ್ಟಿದ್ದರು. ಈ ಘಟನೆ ದಾಖಲಾದ ನಂತರ ಇಡೀ ರಾಜ್ಯದ ಜನ ಭೀತಿಗೆ ಸಿಲುಕಿದ್ದರು. ದಿನವಿಡೀ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿ ಜನರನ್ನು ಮತ್ತಷ್ಟು ಭಯಕ್ಕೆ ದೂಡಿತ್ತು. ಆದರೆ, ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ರಾಜ್ಯ ಸರ್ಕಾರಕ್ಕೆ ಅಷ್ಟು ಸುಲಭದ ಕೆಲಸವಾಗಿರಲಿಲ್ಲ.
ಮಾರ್ಚ್ 24ರ ವೇಳೆಗಾಗಲೇ ಭಾರತದಾದ್ಯಂತ ಕರೋನಾ ತನ್ನ ಕಬಂಧಬಾಹುವನ್ನು ಚಾಚಿತ್ತು. 250ಕ್ಕೂ ಹೆಚ್ಚು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. 9 ಜನ ಬಲಿಯಾಗಿದ್ದರು. ಸುರಕ್ಷತೆಯ ದೃಷ್ಟಿಯಿಂದ ಮತ್ತು ಕರೋನಾಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ 21 ದಿನಗಳ ಲಾಕ್ಡೌನ್ ಘೋಷಿಸಿದ್ದರು.
ದೇಶಕ್ಕೆ ರಾಜ್ಯಕ್ಕೆ ಮತ್ತು ಸಾರ್ವಜನಿಕರಿಗೆ ಈ ಲಾಕ್ಡೌನ್ ಎಂಬ ಸನ್ನಿವೇಶ ನಿಜಕ್ಕೂ ಹೊಸದು. ದಿಢೀರೆಂದು ಜನ ರಸ್ತೆಗೆ ಇಳಿಯಬಾರದು, 21 ದಿನ ಮನೆಯಲ್ಲೇ ಇರಬೇಕು ಎಂದು ಆದೇಶಿಸುವುದು ಸುಲಭ. ಆದರೆ, ಅದನ್ನು ಕಾರ್ಯರೂಪಕ್ಕೆ ತರುವುದು ಮತ್ತು ಅದರ ಜೊತೆ ಜೊತೆ ಕರೋನಾ ಹರಡದಂತೆ ತಡೆಯುವುದು ಇದೆಯಲ್ಲ ಅದು ಸಾಧಾರಣ ಮಾತಲ್ಲ. ಆದರೆ, ಈ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅದನ್ನು ಸಾಧಿಸಿ ತೋರಿಸಿದ್ದರು. ರಾಜಕೀಯವಾಗಿ ಹತ್ತಾರು ವಿರೋದಾಭಾಸಗಳು ಇದ್ದಾಗ್ಯೂ ಈ ವಿಚಾರದಲ್ಲಿ ಬಿಎಸ್ವೈ ನಡೆ ನಿಜಕ್ಕೂ ಶ್ಲಾಘನೀಯ.
ಒತ್ತಡದಲ್ಲೇ ಮುಗಿದ ಈ 33 ದಿನ:
ಕಲಬುರ್ಗಿಯ ವೃದ್ಧ ಕರೋನಾಗೆ ಬಲಿಯಾಗಿ ಇಂದಿಗೆ 33 ದಿನಗಳಾಗಿವೆ. ಆದರೆ, ಇಷ್ಟು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕಿಂತ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡಿದ್ದು ರಾಜ್ಯ ಸರ್ಕಾರಗಳೇ. ಏಕೆಂದರೆ ಒಂದಡೆ ಜನರನ್ನು ಮನೆಯಲ್ಲಿ ಕೂರಿಸಬೇಕು ಮತ್ತೊಂದೆಡೆ ಕರೋನಾ ವಿರುದ್ಧ ಹೋರಾಟಕ್ಕೆ ಇಡೀ ಆರೋಗ್ಯ ಇಲಾಖೆಯನ್ನು ಸಜ್ಜುಗೊಳಿಸಬೇಕು. ರಾಜ್ಯ ಸರ್ಕಾರ ಈ ಎರಡೂ ಕೆಲಸದಲ್ಲಿ ಯಶಸ್ವಿಯಾಗಿದೆ.
ಲಾಕ್ಡೌನ್ ಘೋಷಿಸಲಾಗುತ್ತಿದ್ದಂತೆ ಪೊಲೀಸ್, ರಿಸರ್ವ್ ಪೊಲೀಸ್, ಗೃಹ ರಕ್ಷಕ ದಳ ಹಾಗೂ ಸ್ವಯಂ ಕಾರ್ಯಕರ್ತರು ಸೇರಿದಂತೆ ಸಾವಿರಾರು ಜನರನ್ನು ರಾಜ್ಯ ಸರ್ಕಾರ ಬೀದಿಗೆ ಇಳಿಸಿತ್ತು. ಕರೋನಾಪಾಸಿಟಿವ್ ಇರುವ ಪ್ರದೇಶಗಳ ಸುತ್ತ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು. ಪ್ರಮುಖ ನಗರಗಳ ರಸ್ತೆಗಳ ಸುತ್ತ ಪೊಲೀಸ್ ಕಣ್ಗಾವಲು ಬಿಗಿ ಮಾಡಲಾಗಿತ್ತು.
ಇದಲ್ಲದೆ ಅಂತಾರಾಜ್ಯ ಮತ್ತು ಜಿಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಈ ಮೂಲಕ ಕರೋನಾತಡೆಗೆ ರಾಜ್ಯ ಸರ್ಕಾರ ಕೇಂದ್ರದ ಮಹತ್ವದ ಆಶಯವನ್ನು ನನಸಾಗಿದೆ. ಕರೋನಾಸಾಮೂದಾಯಿಕವಾಗಿ ಹರಡುವುದನ್ನು ತಪ್ಪಿಸಿದೆ.
ಸುಧಾರಿಸಿದ ಆರೋಗ್ಯ ವ್ಯವಸ್ಥೆ:
ಕರೋನಾಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದಂತೆ ಕಠಿಣ ಕ್ರಮಗಳಿಗೆ ಮುಂದಾದ ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ ರಾಜ್ಯದಾದ್ಯಂತ ಸುಮಾರು 1768ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಲು ಆದೇಶ ಹೊರಡಿಸಿತ್ತು. ರಾಜ್ಯದ ಹಲವೆಡೆ ಕರೋನಾ ಪತ್ತೆ ಹಚ್ಚುವ ಲ್ಯಾಬ್ ಸ್ಥಾಪನೆಗೆ ಮುಂದಾಯಿತು. ಕಲಬುರ್ಗಿಯಲ್ಲಿ ಪ್ರಸ್ತುತ ಕರೋನಾ ಲ್ಯಾಬ್ ಸ್ಥಾಪಿಸಲಾಗಿದೆ.
ಇದಲ್ಲದೆ ಮಿಂಚಿನ ವೇಗದಲ್ಲಿ ಕೆಲಸ ಮಾಡುತ್ತಿರುವ ಸಚಿವದ್ವಯರಾದ ಶ್ರೀರಾಮುಲು ಹಾಗೂ ಡಾ|ಕೆ. ಸುಧಾಕರ್ ರಾಜ್ಯದಾದ್ಯಂತ ಮಿಂಚಿನ ಸಂಚಾರ ನಡೆಸಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆಗೆ ಸರಣಿ ಸಭೆ ನಡೆಸಿರುವ ಸಚಿವರು ಕರೋನಾ ತಡೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ.
ಅಲ್ಲದೆ, ರಾಜ್ಯಕ್ಕೆ ಅಗತ್ಯವಾದ ವೆಂಟಿಲೇಟರ್ ಸೇರಿದಂತೆ ಎಲ್ಲಾ ಆರೋಗ್ಯ ಸಂಬಂಧಿತ ಸಲಕರಣೆಗಳ ಖರೀದಿಗೆ ಮುಂದಾಗುವ ಮೂಲಕ ಭವಿಷ್ಯದಲ್ಲಿ ಎದುರಾಗಬಹುದಾದ ಎಲ್ಲಾ ಸಂದಿಗ್ಧ ಪರಿಸ್ಥಿತಿಗೆ ರಾಜ್ಯವನ್ನು ಅಣಿಗೊಳಿಸಿದ್ದಾರೆ.
ಹಸಿದವರಿಗೆ ಅನ್ನ ನೀಡಲು ವಿಶಿಷ್ಠ ಯೋಜನೆ:
ಲಾಕ್ಡೌನ್ ಸಂದರ್ಭದಲ್ಲಿ ದಿನನಿತ್ಯದ ಕೂಲಿ ಹಾಗೂ ಕಟ್ಟಡ ಕಾರ್ಮಿಕರು, ಬೀದಿ ಬದಿಯ ಸಣ್ಣ ವ್ಯಾಪಾರಿಗಳು ಒಪ್ಪೊತ್ತಿನ ಊಟಕ್ಕೂ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಇದನ್ನು ಮನಗಂಡಿರುವ ರಾಜ್ಯ ಸರ್ಕಾರ ಹಸಿದವರ ಹಸಿವು ನೀಗಿಸಲು ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಯೋಜನೆಗಳಲ್ಲದೆ ಅನೇಕ ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಿದೆ.

ಹಸಿದವರಿಗೆ ಅವರ ಸ್ಥಳಕ್ಕೆ ತೆರಳಿ ಆಹಾರ ನೀಡಲಾಗಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಕಾರ್ಮಿಕರಿಗೆ ಹಂಚಲು ಮಾತ್ರ ಸುಮಾರು 1 ಲಕ್ಷ ಆಹಾರ ಕಿಟ್ಗಳನ್ನು ತಯಾರಿಸಲು ಇಸ್ಕಾನ್ ಅಕ್ಷಯ ಪಾತ್ರೆಗೆ ಆದೇಶಿಸಿರುವ ರಾಜ್ಯ ಸರ್ಕಾರ ಈ ಕಿಟ್ಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಬಡವರ ಹಸಿವು ನೀಗಿಸುವ ಕೆಲಸಕ್ಕೆ ಮುಂದಾಗಿದೆ. ಅಲ್ಲದೆ, ಮೂರು ತಿಂಗಳ ಪಡಿತರವನ್ನು ಒಟ್ಟಿಗೆ ನೀಡುವ ಮೂಲಕ ಗ್ರಾಮೀಣ ಭಾಗದ ಬಡವರ ಪರವಾಗಿ ಕೆಲಸ ನಿರ್ವಹಿಸುತ್ತಿದೆ.
ಒಟ್ಟಾರೆ ಕರೋನಾದಿಂದಾಗಿ ಕಠಿಣತೆಗೆ ಸಿಲುಕಬಹುದಾಗಿದ್ದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ಹಸಿದವರಿಗೆ ಅನ್ನವನ್ನೂ ನೀಡುವ ಮೂಲಕ ಹಸಿವು ಮುಕ್ತ ಕರ್ನಾಟಕ ಎಂಬ ತನ್ನ ಘೋಷವಾಕ್ಯವನ್ನು ಉಳಿಸಿಕೊಂಡಿರುವ ಸಿಎಂ ಯಡಿಯೂರಪ್ಪ ಸರ್ಕಾರದ ಕಾರ್ಯ ನಿಜಕ್ಕೂ ಶ್ಲಾಘನೀಯ.