ಶುಕ್ರವಾರ ಮುಂಜಾನೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಮಾಡಿ ರಸ್ತೆ ತಡೆ ನಡೆಸಿದ್ದ ರೈತ ಹಾಗೂ ಕಾರ್ಮಿಕ ಪರ ಸಂಘಟನೆಗಳ ನಿಯೋಗ ಸಂಜೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿದೆ. ಆದರೆ, ನಿಯೋಗದ ಸದಸ್ಯರ ಮನವಿಯನ್ನು ಸ್ವೀಕರಿಸಲು ಒಪ್ಪದ ಸರ್ಕಾರ ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ.
ಏಳು ಜನ ಸದಸ್ಯರ ನಿಯೋಗವು, ಶುಕ್ರವಾರ ಸಂಜೆ ಮೂರು ಗಂಟೆಗೆ ಸಿಎಂ ಅವರನ್ನು ಭೇಟಿಯಾಗಿತ್ತು. ಸರ್ಕಾರ ಈ ಅಧಿವೇಶನದಲ್ಲಿ ಮಂಡಿಸಲಾಗುವ ಭೂ ಸುಧಾರಣೆ ಕಾಯ್ದೆ / ಎ.ಪಿ.ಎಂ.ಸಿ ಕಾಯ್ದ / ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವ ಮಸೂದೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ ಮೂರು ಮಸೂದೆಗಳಿಂದ ರೈತ-ದಲಿತ-ಕಾರ್ಮಿಕರ ಸಮುದಾಯಗಳಿಗೆ ಆಗುವ ತೀವ್ರ ಅಪಾಯಗಳ ಬಗ್ಗೆ ಸಭೆಯಲ್ಲಿ ವಿವರಿಸಲಾಯಿತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಯಾವುದೇ ಕಾರಣಕ್ಕೂ ಈ ಮೂರು ಮಸೂದೆಗಳನ್ನು ಅಂಗೀಕರಿಸಬಾರದು ಹಾಗೂ ಹಿಂಪಡೆಯಬೇಕು ಮತ್ತು ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಸಹ ರಾಜ್ಯ ಸರ್ಕಾರ ವಿರೋಧಿಸಬೇಕೆಂದು ಒತ್ತಾಯಿಸಲಾಯಿತು. ಹಾಗೆಯೇ ಕೇಂದ್ರ ಸರ್ಕಾರ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ, ಖಾಸಗೀಕರಣ ಮಾಡುವುದನ್ನು ವಿರೋಧಿಸಬೇಕು, ಏಕೆಂದರೆ ಕೃಷಿ ಪಂಪ್ ಸೆಟ್ ಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸಲು ಹಾಗು ಮೀಟರ್ ಅಳವಡಿಸಲು ಹುನ್ನಾರವಾಗಿರುವುದರಿಂದ ಅದನ್ನು ತೆಲಂಗಾಣ ಹಾಗೂ ಇತರೆ ರಾಜ್ಯಗಳು ವಿರೋಧಿಸಿದಂತೆ ರಾಜ್ಯ ಸರ್ಕಾರ ಸಹ ವಿರೋಧಿಸಬೇಕೆಂದು ನಿಯೋಗವು ಆಗ್ರಹಿಸಿತ್ತು.
Also Read: ರಾಜ್ಯಸಭೆಯಲ್ಲಿ ನೂತನ ಕೃಷಿ ಮಸೂದೆ ಅಂಗೀಕಾರ, ವಿಪಕ್ಷಗಳ ವಿರೋಧ!
ಆದರೆ, ಇದ್ಯಾವುದಕ್ಕೂ ಒಪ್ಪದ ಮುಖ್ಯಮಂತ್ರಿಗಳು, ನೆಪಮಾತ್ರಕ್ಕೆ ಕೆಲವು ಅಲ್ಪ ಬದಲಾವಣೆಯನ್ನು ತರಲು ಯೋಚಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ಗುಣಗಾನವನ್ನು ಮಾಡಿದ ಪ್ರಸಂಗವೂ ನಡೆದಿದೆ.
ಈ ಕುರಿತಾಗಿ ಸಿಎಂ ಅವರಿಗೆ ಮನದಟ್ಟು ಮಾಡಲು ಯತ್ನಿಸಿದ ನಿಯೋಗವು ದೇಶಾದ್ಯಂತ ರೈತ ಪರ ಹೊರಾಟ ನಡೆಯುತ್ತಿದೆ, ಇಲ್ಲಿನ ರಾಜ್ಯ ಸರ್ಕಾರ ಕೂಡಾ ವಿರೋಧಿಸಬೇಕೆಂದು ಹೇಳಲಾಯಿತು.
Also Read: ಕೃಷಿ ಮಸೂದೆಗೆ ಮೋದಿ ಧಾವಂತ ಮತ್ತು ಕೃಷಿ ಹೂಡಿಕೆಗೆ ಅಂಬಾನಿ ಆತುರ!
ಆದರೆ, ಸರ್ಕಾರವು ರೈತ ಪರ ಸಂಘಟನೆಗಳ ಹಕ್ಕೊತ್ತಾಯಕ್ಕೆ ಕಿವಿಗೊಡದ ಕಾರಣ, ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಐಕ್ಯ ಹೋರಾಟ ತಿಳಿಸಿದೆ. ಸೆಪ್ಟೆಂಬರ್ 28ರ ಕರ್ನಾಟಕ ಬಂದ್ ಕೂಡಾ ಮತ್ತಷ್ಟು ತೀವ್ರಗತಿಯಲ್ಲಿ ನಡೆಯಲಿದೆ ಎಂದು ಸಿಎಂ ಅವರಿಗೆ ಎಚ್ಚರಿಕೆ ನೀಡಲಾಗಿದೆ.
ಸಿಎಂ ಅವರನ್ನು ಭೇಟಿಯಾದ ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯಾಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಉಪಾಧ್ಯಕ್ಷ ಮಾರುತಿ ಮಾಡೆ, ಕಬ್ಬು ಬೆಳೆಗಾರರ ಸಂಘ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ನಮ್ಮೂರು ಭೂಮಿ ನಮಗಿರಲಿ ಅಭಿಯಾನದ ವಿ ಗಾಯತ್ರಿ, ಕವಿತ ಕುರುಗಂಟಿ, ಪ್ರಾಂತ ರೈತ ಸಂಘದ ಟಿ. ಯಶವಂತ, ಕೃಷಿ ಆರ್ಥಿಕ ತಜ್ಞರಾದ ಡಾ. ಪ್ರಕಾಶ್ ಕಮ್ಮರಡಿ ಅವರಿದ್ದರು.
Also Read: ದೇಶದ ಈರುಳ್ಳಿ ರಫ್ತು ನಿಷೇಧ; ಉದ್ದೇಶಿತ ಕೃಷಿ ಸುಧಾರಣಾ ಮಸೂದೆ ವಿರುದ್ದವಾಗಿದೆಯೇ?
ರೈತರ ಪ್ರತಿಭಟನೆ; ಪ್ರತಿಭಟನಾಕಾರರು ಪೊಲೀಸರ ವಶಕ್ಕೆ
ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಸೆಪ್ಟೆಂಬರ್ 28 ರಂದು ನಡೆಯಲಿರುವ ಕರ್ನಾಟಕ ಬಂಧ್‌ಗೆ ಮುಂಚಿತವಾಗಿ ನಡೆದಂತಹ ರಸ್ತೆ ತಡೆ ಪ್ರತಿಭಟನೆಯಲ್ಲಿ ರಾಜ್ಯದ ರೈತರ ಆಕ್ರೋಶ ಮುಗಿಲು ಮುಟ್ಟಿತ್ತು. ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಮಂಡಿಸಲಾಗಿದ್ದ ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಯಿತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕನ್ನಡ ಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಸಿಐಟಿಯು, ಆಮ್ ಆದ್ಮಿ ಪಾರ್ಟಿ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿರುವುದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಬಿಚ್ಚಿಡುತ್ತಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಅವರು ಹೇಳಿದ್ದಾರೆ.
Also Read: ನೂತನ ಕೃಷಿ ಮಸೂದೆ ವಿರೋಧಿಸಿ ರೈತ-ದಲಿತ-ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ
ಇನ್ನು ಚಾಟಿ ಬೀಸುತ್ತಲೇ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ಮೈಸೂರು ಬ್ಯಾಂಕ್ ವೃತ್ತದಲ್ಲಿ ಉರುಳು ಸೇವೆ ಮಾಡಿದ್ದಾರೆ. ಇನ್ನೋರ್ವ ರೈತ ಅರೆಬೆತ್ತಲೆಯಾಗಿ ಶೀರ್ಷಾಸನ ಮಾಡಿ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿದ್ದಾರೆ. ಪ್ರತಿಧ್ವನಿಯೊಂದಿಗೆ ಮಾತನಾಡಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರುದ ಕುರುಬೂರು ಶಾಂತಕುಮಾರ್ ಅವರು, ಸರ್ಕಾರದ ರೈತ ವಿರೋಧಿ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.
ಪ್ರತಿಭಟನೆಯ ಕಾವು ಜೋರಾಗುತ್ತಿದ್ದಂತೆಯೇ, ಮೈಸೂರು ಬ್ಯಾಂಕ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಲು ಆರಂಭವಾಯಿತು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರೂ ವಿಫಲರಾದರು. ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ, ಪೊಲೀಸರು ಎಲ್ಲರನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್, ನಟ ಚೇತನ್ ಸೇರಿದಂತೆ ಇತರ ಪ್ರಮುಖ ನಾಯಕರನ್ನು ವಶಕ್ಕೆ ಪಡೆಯಲಾಗಿದೆ.
Also Read: ಕೃಷಿ ಸುಧಾರಣಾ ಕಾಯ್ದೆಯ ಬಗ್ಗೆ ತಪ್ಪು ಮಾಹಿತಿ ಎಂದ ಮೋದಿ; ವಾಸ್ತವಾಂಶವೇನು?