ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಇನ್ನಷ್ಟು ರೈತರು ದೆಹಲಿಗೆ ಆಗಮಿಸಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗಿರುವಾಗಲೇ ಪ್ರತಿಭಟನಾನಿರತ ರೈತರು ಜಿಯೋನಿಂದ ಏರ್ಟೆಲ್, ವೊಡಾಫೋನ್-ಐಡಿಯಾಗೆ ಪೋರ್ಟ್ ಆಗುತ್ತಿದ್ದಾರೆ. ಇದರ ಪರಿಣಾಮ ಪ್ರತಿಭಟನಾ ಸ್ಥಳದಲ್ಲಿ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳ ಸಿಮ್ ಮಾರಾಟ ಮಳಿಗೆಗಳು ತಲೆಯೆತ್ತಿವೆ.
ಹೌದು, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರು ಜಿಯೋನಿಂದ ಇತರೆ ನೆಟ್ವರ್ಕ್ಗೆ ಪೋರ್ಟ್ ಆಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತರು ಪೋರ್ಟ್ ಆಗುತ್ತಿರುವುದನ್ನೇ ಅವಕಾಶ ಎಂದುಕೊಂಡ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ತಮ್ಮ ಸಿಮ್ಗಳನ್ನು ಮಾರಾಟ ಮಾಡುತ್ತಿವೆ. ಪ್ರತಿಭಟನಾ ಸ್ಥಳದಲ್ಲಿ ಸಿಮ್ ಮಾರಾಟ ಮಳಿಗೆ ತೆಗೆದು ರೈತರ ನಂಬರ್ಗಳನ್ನು ಜಿಯೋನಿಂದ ತಮ್ಮ ಕಂಪನಿಗಳಿಗೆ ಪೋರ್ಟ್ ಮಾಡಿಸುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ಸರ್ಕಾರದ ಮೂರು ಕೃಷಿ ಕಾಯ್ದೆಗಳು ದೇಶದ ಶ್ರೀಮಂತ ಉದ್ಯಮಪತಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಒಡೆತನದ ಸಂಸ್ಥೆಗಳಿಗೆ ಲಾಭದಾಯಕವಾಗಲಿದೆ ಎಂದು ರೈತರು ಈ ಜಿಯೋ ವಿರೋಧಿ ಆಂದೋಲನ ಶುರು ಮಾಡಿದ್ದಾರೆ. ಮೊದಲು ಪಂಜಾಬ್ನಲ್ಲಿ ಶುರುವಾದ ಈ ಅಭಿಯಾನ ಈಗ ದೇಶದ ಎಲ್ಲೆಡೆಯೂ ತೀವ್ರಗೊಂಡಿದೆ. ಹೀಗಾಗಿ ಪಂಜಾಬ್, ದೆಹಲಿ, ಹರಿಯಾಣ, ಉತ್ತರಪ್ರದೇಶ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ ಕಂಪನಿಗಳು ಜಿಯೋದಿಂದ ತಮ್ಮ ನೆಟ್ವರ್ಕ್ಗೆ ಪೋರ್ಟ್ ಆಗುವ ಜನರಿಗೆ ವಿಶೇಷ ಕೊಡುಗೆ ಮತ್ತು ರಿಯಾಯಿತಿ ನೀಡುತ್ತಿವೆ.
ನಮ್ಮ ಜಮೀನಿನ ಮೇಲೆ ಕಣ್ಣಿಟ್ಟ ಅಂಬಾನಿ ಮತ್ತು ಅದಾನಿ ಸಂಸ್ಥೆಗಳೊಂದಿಗೆ ನಾವ್ಯಾಕೇ ಸಂಬಂಧ ಹೊಂದಬೇಕು. ನಾವು ಅಂಬಾನಿ ಮತ್ತು ಅದಾನಿ ಒಡೆತನದ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುತ್ತೇವೆ. ದೇಶದ ಜನತೆಗೂ ಈ ಉದ್ಯಮಿಗಳ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡುತ್ತೇವೆ ಎಂದು ಪ್ರತಿಭಟನಾನಿರತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತೀ ದಿನ ದೇಶದ ವಿವಿಧ ಭಾಗಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಜಿಯೋದಿಂದ ಇತರೆ ಕಂಪನಿಗಳಿಗೆ ಪೋರ್ಟ್ ಆಗುತ್ತಿದ್ದಾರೆ. ಇದುವರೆಗೂ ಪ್ರತಿಭಟನಾ ಸ್ಥಳವೊಂದರಲ್ಲೇ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಜಿಯೋದಿಂದ ಪೋರ್ಟ್ ಆಗಿದ್ದಾರೆ. ದೇಶಾದ್ಯಂತ ಕೋಟಿಗೂ ಹೆಚ್ಚು ಜನ ಜೊಯೋ ಸಿಮ್ ಬಹಿಷ್ಕರಿಸಿದ್ದಾರೆ.
ಪಂಜಾಬ್ನಲ್ಲಿ ಸಾವಿರಕ್ಕೂ ಹೆಚ್ಚು ಜಿಯೋ ಕಂಪನಿ ಟವರ್ಗಳು ಧ್ವಂಸ
ಪಂಜಾಬ್ನಲ್ಲಿ ಜಿಯೋ ಕಂಪನಿ ಟವರ್ಗಳ ಧ್ವಂಸ ಮುಂದುವರಿದಿದೆ. ಪಂಜಾಬ್ ಸಿಎಂ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿಗೂ ಸೊಪ್ಪು ಹಾಕದ ಪ್ರತಿಭಟನಾನಿರತ ರೈತರು, ಶನಿವಾರ ರಾತ್ರಿ ಮಾತ್ರ ಸುಮಾರು 151 ಮೊಬೈಲ್ ಟವರ್ಗಳನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಹಾನಿಗೀಡಾದ ಮೊಬೈಲ್ ಟವರ್ಗಳ ಸಂಖ್ಯೆ 1,338ಕ್ಕೇರಿದೆ