ಭಾರತ ಹಳ್ಳಿಗಳ ದೇಶ, ರೈತ ದೇಶದ ಬೆನ್ನಲುಬು ಎಂದು ನಾವೆಲ್ಲರೂ ಹೇಳಿಕೊಂಡು ಬರುತ್ತಿದ್ದೇವೆ. ರೈತರ ಏಳಿಗೆಗಾಗಿ ಆಡಳಿತಕ್ಕೆ ಬರುವ ಸರ್ಕಾರಗಳೆಲ್ಲವೂ ಯೋಜನೆಗಳನ್ನೂ ರೂಪಿಸುತ್ತಲೇ ಇರುತ್ತವೆ. ಆದರೆ ನಿಜಕ್ಕೂ ಫಲಾನುಭವಿ ರೈತನಿಗೆ ಯೋಜನೆಗಳ ಸೌಲಭ್ಯ ಸಿಗುತ್ತಿದ್ದೆಯೇ ಎಂಬುದು ಇಲ್ಲಿ ಗಮನಾರ್ಹ ಅಂಶ. ಪ್ರಮುಖವಾಗಿ ಯೋಜನೆಗಳನ್ನು ರೂಪಿಸುವಾಗ ರೈತರ ಆರ್ಥಿಕ ಸ್ಥಿತಿಯನ್ನು ಸಹ ಗಮನದಲ್ಲಿಟ್ಟುಕೊಂಡು, ಕೆಲವೊಂದು ಯೋಜನೆಗಳು ಹಾಗೂ ಸೌಕರ್ಯಗಳನ್ನು ರೂಪಿಸಬೇಕಾಗುತ್ತದೆ. ಏಕೆಂದರೆ ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ (BPL) ಹಾಗೂ ಬಡತನ ರೇಖೆಗಿಂತ ಮೇಲೆ (APL) ಇರುವ ರೈತರು ಇದ್ದಾರೆ. ಆದರೆ ಬಡ ರೈತರ ಜೊತೆಗೆ, ಅನುಕೂಲಸ್ಥ ರೈತರು ಸಹ ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳಾಗಿದ್ದಾರೆ. ಆದರೆ ನಮ್ಮ ಕೇಂದ್ರ ಸರ್ಕಾರದಲ್ಲಾಗಲಿ ಹಾಗೂ ರಾಜ್ಯ ಸರ್ಕಾರದಲ್ಲಾಗಲಿ ಎಷ್ಟು ಜನ ರೈತರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಸಿದ್ಧಪಡಿಸಿಲ್ಲ.
ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ಸಮೀಕ್ಷೆ
ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ ಎಸ್ ಎಸ್ ಒ) ವರದಿಯ ಪ್ರಕಾರ 2011-12ರಲ್ಲಿ ಮಾಡಿದ ಸಮೀಕ್ಷೆಯಲ್ಲಿ ದೇಶದಲ್ಲಿ ಬಡತನ ರೇಖೆಗಿಂತ ಕೆಳಗೆ ವಾಸಿಸುವ ಗ್ರಾಮೀಣ ಜನಸಂಖ್ಯೆ 21.66ಕೋಟಿ. ಮತ್ತು ನಗರಗಳಲ್ಲಿ ವಾಸಿಸುವ ಜನಸಂಖ್ಯೆ 5.31 ಕೋಟಿ. ಈ ಅಂಕಿಅಂಶವನ್ನು ಪ್ರಸ್ತುತ ವರ್ಷಕ್ಕೆ (2019-20) ಹೋಲಿಸಿದರೆ ಗ್ರಾಮೀಣ ಹಾಗೂ ನಗರಗಳ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿರಬಹುದು. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರೆಲ್ಲಾ ರೈತಾಪಿಗಳಾಗಿರುವುದಿಲ್ಲ ಎಂಬುದು ಯೋಚಿಸಬೇಕು.
ದೇಶದಲ್ಲಿ ಒಟ್ಟಾರೆ ಜನಸಂಖ್ಯೆಯ ಆರ್ಥಿಕ ಪರಿಸ್ಥಿತಿಯನ್ನು ಸಮೀಕ್ಷೆ ಮಾಡಿದಂತೆ, ರೈತರ ಆರ್ಥಿಕ ಸ್ಥಿತಿಗತಿ ಸಮೀಕ್ಷೆ ನಡೆಸುವುದು ಅಗತ್ಯ. ಇದನ್ನು ತಿಳಿದುಕೊಳ್ಳದೆ ಇರುವುದು ಸರ್ಕಾರದ ಒಂದು ಬಲವಾದ ನ್ಯೂನತೆ ಎಂದು ಹೇಳಬಹುದು. ರೈತರ ಆರ್ಥಿಕ ಸಮೀಕ್ಷೆ ನಡೆಸದಿದ್ದರೆ, ಸರ್ಕಾರದ ಯೋಜನೆಗಳು ಮತ್ತು ಸೌಕರ್ಯಗಳು ನಿಜವಾದ ಪಲಾನುಭವಿ ರೈತನಿಗೆ ತಲುಪುವುದೇ ಇಲ್ಲ.

ರೈತ ಸಂಘ–ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ರವರ ಪ್ರಕಾರ, ರೈತರ ಆದಾಯ ಖಾತ್ರಿ ಆಯೋಗವನ್ನು ರಚನೆಮಾಡಿ, ಅದಕ್ಕೆ ಒಂದು ಕಾಲಮಿತಿಯನ್ನು ಕೊಟ್ಟು, ಒಬ್ಬ ರೈತ ಎಷ್ಟು ಎಕರೆಯಲ್ಲಿ ಎಷ್ಟು ಬೆಳೆ ಬೆಳೆದಿದ್ದಾನೆ, ಆತನಿಗೆ ಎಷ್ಟು ಲಾಭ ಮತ್ತು ನಷ್ಟ ಆಗಿದೆ, ರೈತ ಹೇಗೆ ಜೀವನ ನಡೆಸುತ್ತಿದ್ದಾನೆ. 2 ಎಕರೆ ರೈತನ ಬದುಕು ಮತ್ತು 5 ಎಕರೆ ರೈತನ ಬದುಕು ಹೇಗಿದೆ ಹಾಗೂ ನೂರು ಎಕರೆ ರೈತನ ಬದುಕು ಹೇಗಿದೆ ಎಂದು ಸಮೀಕ್ಷೆ ನಡೆಸಿ, ‘ರೈತರ ಆದಾಯ ಖಾತ್ರಿ ಆಯೋಗ’ ರಚಿಸಿ ಎಂದು ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬೇಡಿಕೆ ಇಟ್ಟಿದ್ದರು. ಆದರೆ ಯಾವ ಸರ್ಕಾರ ಈ ಆಯೋಗವನ್ನು ರಚನೆ ಮಾಡದಿರುವುದರಿಂದ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ನಾವು ರೈತರ ಆದಾಯ ಖಾತ್ರಿ ಆಯೋಗ ರಚಿಸಿ ಎಂದು ಬೇಡಿಕೆಯೊಂದನ್ನು ಇಟ್ಟಿದ್ದೆವು. ಆದರೆ ಆಯೋಗವನ್ನು ರಚಿಸಲಿಲ್ಲ. ಸರ್ಕಾರ ಆದಾಯ ಕೊಡುವುದು ಬಿಡುವುದು ಎರಡನೆ ಮಾತು. ಬಹುಸಂಖ್ಯಾತರು ಇರುವ ದೇಶದಲ್ಲೇ, ರೈತರು ಹೇಗೆ ಬದುಕುತ್ತಿದ್ದಾರೆ ಎಂಬುದು ತಿಳಿದುಕೊಳ್ಳಬೇಕು. ರೈತ ಎಷ್ಟೇ ಎಕರೆ ಭೂಮಿ ಹೊಂದಿರಲಿ, ಅವನ ಆರ್ಥಿಕ ಪರಿಸ್ಥಿತಿ ಬಡತನ ರೇಖೆಗಿಂತ ಕೆಳಗೆ ಇದೆ ಎಂದು ಸರ್ಕಾರ ಘೋಷಣೆ ಮಾಡಲಿ ಎಂದು ಹೇಳುತ್ತಿದ್ದೇನೆ” -ಕೋಡಿಹಳ್ಳಿ ಚಂದ್ರಶೇಖರ್,ರೈತ ಸಂಘ–ಹಸಿರುಸೇನೆ ರಾಜ್ಯಾಧ್ಯಕ್ಷ
ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ (PM-Kisan) ಯೋಜನೆ
ರೈತ ಸಮುದಾಯಕ್ಕೆ ಸ್ಥಿರ ಆದಾಯ ಬೆಂಬಲವನ್ನು ನೀಡಬೇಕೆಂದು ಕೇಂದ್ರ ಸರ್ಕಾರ ಪ್ರದಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ ತಂದಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ನರೇಂದ್ರ ಮೋದಿ 2 ಹೆಕ್ಟೇರ್ ಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ರೂ.6,000/- ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ನೀಡುವ ಯೋಜನೆ ಹಾಕಿಕೊಂಡಿತ್ತು. ತದನಂತರ 2019-20ರ ಬಜೆಟ್ ನಲ್ಲಿ ಅತಿ ಸಣ್ಣ ರೈತ (Marginal), ಸಣ್ಣ ರೈತ (Small), ಅರೆ ಮಧ್ಯಮ ರೈತ (Semi Medium), ಮಧ್ಯಮ ರೈತ (Medium) ಹಾಗೂ ಅನುಕೂಲಸ್ಥ ರೈತನು ಸಹ (Large) ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದಾನೆ. ದೇಶದಲ್ಲಿ ಪಿಎಂ-ಕಿಸಾನ್ ಯೋಜನೆಯ ಒಟ್ಟು ಪಲಾನುಭವಿ ರೈತರ ಸಂಖ್ಯೆ 7.39ಕೋಟಿ. ಮೊದಲನೆ ಕಂತಿನಲ್ಲಿ ಹಣವನ್ನು ಪಡೆದ ರೈತರ ಸಂಖ್ಯೆ 6.76ಕೋಟಿ. ಎರಡನೇ ಕಂತಿನಲ್ಲಿ 5.14 ಕೋಟಿ ರೈತರು. ಮೂರನೆ ಕಂತಿನಲ್ಲಿ 1.74 ಕೋಟಿ ರೈತರು ಯೋಜನೆಯ ಹಣವನ್ನು ಪಡೆದುಕೊಂಡಿದ್ದಾರೆ. 2019-20ರ ಹಣಕಾಸು ವರ್ಷದಲ್ಲಿ 87,217.50ಕೋಟಿ ಹಣವನ್ನು ಈ ಯೋಜನೆಗೆಂದು ಮೀಸಲಿಡಲಾಗಿದೆ. ಇದರಲ್ಲಿ ಆಡಳಿತ ವೆಚ್ಚ 217.50ಕೋಟಿ ಸಹ ಸೇರಿದೆ.
10ಲಕ್ಷಕ್ಕೂ ಹೆಚ್ಚು ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ (PM-Kisan) ಯೋಜನೆ ಪಲಾನುಭವಿಗಳಿರುವ ರಾಜ್ಯಗಳ ವಿವರ

ದೇಶದಲ್ಲಿ ಶೇಕಡ 50ರಷ್ಟು ಅತಿ ಸಣ್ಣ ರೈತ, ಸಣ್ಣ ಹಾಗೂ ಅರೆ ಮಧ್ಯಮ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಮತ್ತು ಶೇಕಡ 50ರಷ್ಟು ಮಧ್ಯಮ ಹಾಗೂ ಅನುಕೂಲಸ್ಥ ರೈತರು ಸಹ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಲ್ಲಿ ಎಲ್ಲರೂ ಫಲಾನುಭವಿಗಳಾಗಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಸುಸ್ಥಿತಿ ಇರುವ ರೈತರು ಸಾಕಷ್ಟಿದ್ದಾರೆ. ಕೆಲವು ಪ್ರದೇಶದಲ್ಲಿ ಸರಿಯಾದ ಸಮಯಕ್ಕೆ ಮಳೆ ಬಂದರೆ ಬೆಳೆಯು ಸಹ ಚೆನ್ನಾಗಿ ಬಂದಿರುತ್ತದೆ. ಹಲವು ಕಡೆ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಾರೆ, ಆದರೆ ಮಳೆ ಬಂದಿರುವುದಿಲ್ಲ, ಮತ್ತೊಂಡು ಕಡೆ ಬರ. ಹೀಗೆ ಸಾಕಷ್ಟು ಸಮಸ್ಯೆಗಳು, ಸವಾಲುಗಳನ್ನು ಎದುರಿಸಿಕೊಂಡು ರೈತರು ಜೀವಿಸುತ್ತಿದ್ದಾರೆ. ಹಾಗಂದ ಮಾತ್ರಕ್ಕೆ ರೈತರೆಲ್ಲರೂ ಬಡವರೆಂದು ಹೇಳಲಾಗದು. ಅಂತೆಯೇ ರೈತರಿಗೆ ಸಹಾಯ ಮಾಡಿದ ತಕ್ಷಣ ಶ್ರೀಮಂತರಾಗುತ್ತಾರೆ ಎಂದು ಹೇಳಲು ಸಾಧ್ಯವೆ?
ರೈತರ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸುವುದಕ್ಕೆ ದೇಶದಲ್ಲಿ ಇದೂವರೆಗೆ ಯಾವುದೇ ಮಾನದಂಡ ಇರದಿರುವುದು ದೊಡ್ಡ ದುರಂತ. ಅಲ್ಲದೆ ಕೇಂದ್ರ ಸರ್ಕಾರ ಇದನ್ನು ತಿಳಿದುಕೊಳ್ಳದೇ ಇರುವುದು ಒಂದು ದೊಡ್ಡ ನ್ಯೂನತೆ.
“ಎಲ್ಲಾ ರೈತರನ್ನು ಒಂದೇ ರೀತಿಯಲ್ಲಿ ನೋಡಬೇಕು. ಆದರೆ ನೆರೆ ಮತ್ತು ಬರ ಬಂದಿರುವ ರೈತರನ್ನು ಸರ್ಕಾರ ವಿಶೇಷವಾಗಿ ನೋಡಿ, ಸೌಕರ್ಯ ಮತ್ತು ಸವಲತ್ತುಗಳನ್ನು ನೀಡಬೇಕು. ಏಕೆಂದರೆ ಸಾಮಾನ್ಯ ರೀತಿಯಲ್ಲಿ ಇಂತಹ ಸಂಕಷ್ಟದಲ್ಲಿರುವ ರೈತನ್ನು ನೋಡಿದರೆ ಕಷ್ಟವಾಗುತ್ತದೆ. ಅಲ್ಲದೆ, ಒಬ್ಬ ರೈತನ ಭೂಮಿಯು ಎಷ್ಟಿದೆ ಎಂದು ಸಮೀಕ್ಷೆ ನಡೆಸಿ, ಬಡತನ ರೇಖೆಗಿಂತ ಕೆಳಗಿರುವ ರೈತ ಎನ್ನುವ ಮಾನದಂಡ ರೂಪಿಸಬೇಕು.” – ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ