ಮಾರ್ಕ್ ಜುಕರ್‌ಬರ್ಗ್ ಮತ್ತು ಮುಖೇಶ್ ಅಂಬಾನಿ ಒಗ್ಗೂಡಿದರೆ ಏನಾಗುತ್ತದೆ? ಅಮೆಜಾನ್, ಫ್ಲಿಪ್ಕಾರ್ಟ್, ಗೂಗಲ್ ಪೇ ಮತ್ತು ಪೇಟಿಎಂ ಸೇರಿದಂತೆ ಈ ವಲಯದಲ್ಲಿನ ದೈತ್ಯ ಸಂಸ್ಥೆಗಳಿಗೆ ಅತಿದೊಡ್ಡ ಸ್ಪರ್ಧೆ ಎದುರಾಗುತ್ತದೆ. ಮತ್ತು ಈ ಸ್ಪರ್ಧೆಯು ಮುಂಬರುವ ದಿನಗಳಲ್ಲಿ ಭಾರತದಲ್ಲಿನ ದೂರಸಂಪರ್ಕ ಕ್ಷೇತ್ರವಷ್ಟೇ ಅಲ್ಲದೇ, ಚಿಲ್ಲರೆ ವಹಿವಾಟು, ಪಾವತಿ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಸ್ಪರೂಪವನ್ನು ಬದಲಾಯಿಸಲಿದೆ!
ಅಷ್ಟಕ್ಕೂ ಈ ಹೊತ್ತಿಗೆ ಆಗಿರುವುದಿಷ್ಟು. ಮಾರ್ಕ್ ಜುಕರ್‌ಬರ್ಗ್‌ನ ಫೇಸ್‌ಬುಕ್ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಅಧೀನದಲ್ಲಿರುವ ಜಿಯೋ ಪ್ಲಾಟ್ಫಾರಂ ಲಿಮಿಡೆಟ್ (ಜೆಎಫ್ಎಲ್) ನಲ್ಲಿ 5.7 ಬಿಲಿಯನ್ ಡಾಲರ್ ಅಂದರೆ 43,574 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿ ಶೇ.9.9ರಷ್ಟು ಪಾಲನ್ನು ಖರೀದಿಸಿದೆ. ಈ ವಹಿವಾಟಿನೊಂದಿಗೆ ಇನ್ನೂ ಷೇರುಪೇಟೆಯಲ್ಲಿ ಲಿಸ್ಟಾಗದೇ ಇರುವ (ಬರುವ ದಿನಗಳಲ್ಲಿ ಲಿಸ್ಟಾಗುವ) ಜಿಯೋ ಪ್ಲಾಟ್‌ಫಾರಂಲಿಮಿಡೆಟ್ ನ ಉದ್ಯಮದ ಮೌಲ್ಯವು 4.5 ಲಕ್ಷ ಕೋಟಿಗೆ ಏರಿದೆ. ಸಾಮಾನ್ಯವಾಗಿ ಲಿಸ್ಟಾದ ನಂತರ ಕಂಪನಿಯ ಒಟ್ಟು ಮೌಲ್ಯವನ್ನು ಮಾರುಕಟ್ಟೆ ಬಂಡವಾಳ ಎನ್ನಲಾಗುತ್ತದೆ. ಲಿಸ್ಟಾಗುವ ಮುನ್ನ ಇದನ್ನು ಉದ್ಯಮದ ಮೌಲ್ಯ ಎನ್ನುತ್ತಾರೆ.
ಈ ವಹಿವಾಟಿನಿಂದ ರಿಲಯನ್ಸ್ ಇಂಡಸ್ಟ್ರೀಸ್ ಒಡೆಯ ಮುಖೇಶ್ ಅಂಬಾನಿ ಮತ್ತು ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕೆರ್ಬರ್ಗ್ ಇಬ್ಬರಿಗೂ ಲಾಭವಾಗಲಿದೆ. ಜೆಐಎಲ್ ಸೇರಿದಂತೆ ರಿಲಯನ್ಸ್ ಇಂಡಸ್ಟ್ರೀಸ್ ನ ಒಟ್ಟು ಸಾಲವು 1.54 ಲಕ್ಷ ಕೋಟಿ ರುಪಾಯಿಗಳಷ್ಟಿದೆ. 2021ನೇ ವಿತ್ತೀಯ ವರ್ಷಾಂತ್ಯಕ್ಕೆ ಸಾಲಮುಕ್ತ ಕಂಪನಿಯನ್ನಾಗಿ ಮಾಡುವುದು ಮುಖೇಶ್ ಅಂಬಾನಿ ಅವರ ಯೋಜನೆ. ಈ ನಿಟ್ಟಿನಲ್ಲಿ ಸೌದಿಯ ಅರಾಮ್ಕೊ ಕಂಪನಿಗೆ ರಿಲಯನ್ಸ್ ಪೆಟ್ರೋಕೆಮಿಕಲ್ ಮತ್ತು ರಿಫೈನರೀಸ್ ವಿಭಾಗದ ಶೇ.20ರಷ್ಟು ಪಾಲನ್ನು ಸುಮಾರು 1 ಲಕ್ಷ ಕೋಟಿಗೆ ಮಾರಾಟ ಮಾಡುವ ಮಾತುಕತೆ ನಡೆದಿದೆ. ಇನ್ನೂ ಅಧಿಕೃತ ಒಪ್ಪಂದ ಆಗಬೇಕಿದೆ. ಪಾಲು ಮಾರುವಿಕೆಯ ಈ ಎರಡು ವಹಿವಾಟಿನಲ್ಲೇ ಸುಮಾರು 1.43 ಲಕ್ಷ ಕೋಟಿ ರುಪಾಯಿ ನಿರೀಕ್ಷಿಸಲಾಗಿದೆ. ಅಲ್ಲದೇ ಕಂಪನಿಯಲ್ಲಿರುವ ನಗದು ಬಳಸಿ ಉಳಿದ ಬಾಕಿ ಸಾಲ ಚುಕ್ತಾ ಮಾಡವುದು ಮುಖೇಶ್ ಲೆಕ್ಕಾಚಾರ.
1.54 ಲಕ್ಷ ಕೋಟಿ ಸಾಲದ ಪೈಕಿ ಜಿಯೋ ಪ್ಲಾಟ್ಫಾರಂ ಲಿಮಿಡೆಟ್ ಲೆಕ್ಕದಲ್ಲಿರುವ ಸಾಲದ ಮೊತ್ತವು 40,000 ಕೋಟಿ ರುಪಾಯಿ. ಫೇಸ್ಬುಕ್ ನಿಂದ ಬರುವ 43,000 ಕೋಟಿ ಪೈಕಿ 28,000 ಕೋಟಿ ರುಪಾಯಿ ಸಾಲ ಪಾವತಿಗೆ ಬಳಸಲಾಗುತ್ತದೆ. 15,000 ಕೋಟಿ ರುಪಾಯಿಗಳನ್ನು ಜಿಯೋ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.
ಜಿಯೋ ಪ್ಲಾಟ್ಫಾರಂ ಲಿಮಿಡೆಟ್ ನಲ್ಲಿ ಫೇಸ್ಬುಕ್ ಹೂಡಿಕೆ ಮಾಡುವ ಬೆಳವಣಿಗೆಗೆ ಷೇರುಪೇಟೆಯು ಸಕಾರಾತ್ಮಕವಾಗಿ ಸ್ಪಂದಿಸಿದೆ. ಜಿಯೋನಲ್ಲಿ ಫೇಸ್ಪುಕ್ ಹೂಡಿಕೆ ಮಾಡಿದ ಮೊತ್ತ 43,574 ಕೋಟಿ ರುಪಾಯಿಗಳಾದರೆ, ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮಾರ್ಚ್ 22ರ ದಿನದ ವಹಿವಾಟಿನಲ್ಲಿ ಶೇ.10ರಷ್ಟು ಜಿಗಿದಿದೆ. ಇದರಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಮಾರುಕಟ್ಟೆ ಬಂಡವಾಳವು ಒಂದೇ ದಿನ 80,000 ಕೋಟಿ ರುಪಾಯಿಗಳಷ್ಟು ಜಿಗಿದಿದೆ.
2012ರವರೆಗೂ ರಿಲಯನ್ಸ್ ಪೆಟ್ರೋಕೆಮಿಕಲ್ ಮತ್ತು ರಿಫೈನರೀಸ್ ಉದ್ಯಮದಲ್ಲೇ ತನ್ನನ್ನು ತೊಡಗಿಸಿಕೊಂಡಿತ್ತು. ಅಲ್ಲಿಯವರೆಗೆ ಸಾಲಮುಕ್ತ ಕಂಪನಿಯಾಗಿಯೇ ಉಳಿದಿತ್ತು. ಒಂದೇ ಉದ್ಯಮ ನಂಬಿದರೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ರಿಟೇಲ್ ವ್ಯಾಪಾರ ಮತ್ತು ಟೆಲಿಕಾಂ ವಲಯಕ್ಕೆ ಮುಖೇಶ್ ಅಂಬಾನಿ ಕಾಲಿಟ್ಟರು. ಅದಕ್ಕಾಗಿ ಸುಮಾರು 2.40 ಲಕ್ಷ ಕೋಟಿ ರುಪಾಯಿ ಸಾಲ ಮಾಡಿದ್ದರು. 2019-20ನೇ ಸಾಲಿನ ವರ್ಷಾಂತ್ಯಕ್ಕೆ ಇದ್ದ ಸಾಲದ ಮೊತ್ತವು 1.54 ಕೋಟಿ ರುಪಾಯಿಗಳು.
ಇದು ಕಂಪನಿಯ ಹಣಕಾಸು ಲೆಕ್ಕಾಚಾರ. ಆದರೆ, ಈ ವಹಿವಾಟಿನಿಂದ ಮುಖೇಶ್- ಮಾರ್ಕ್ ಜುಕರ್‌ಬರ್ಗ್ ಅವರಿಗೆ ಆಗುವ ಲಾಭವೇನು? ಫೇಸ್ಬುಕ್ ಬಳಕೆದಾರರ ಪೈಕಿ ಅತಿಹೆಚ್ಚು ಮಂದಿ ಭಾರತದಲ್ಲಿದ್ದಾರೆ. ಅಷ್ಟೇ ಅಲ್ಲಾ, ಫೇಸ್ಬುಕ್ ಒಡೆತನದ ವಾಟ್ಸಪ್ ಬಳೆಕೆಯದಾರರ ಸಂಖ್ಯೆ ಭಾರತದಲ್ಲೇ ಹೆಚ್ಚು. ಮಾರ್ಕ್ ಜುಕೇರ್ಬರ್ಗ್ ‘ವಾಸ್ಸಪ್ ಪೇ’ ಆರಂಭಿಸಿದ್ದಾರೆ. ಅದಕ್ಕೊಂದು ಗಟ್ಟಿ ನೆಲೆ ಬೇಕಿದೆ. ಈಗಾಗಲೇ 38.8 ಕೋಟಿ ಮೊಬೈಲ್ ಚಂದಾದಾರರು ಇರುವ ಜಿಯೋ ಪ್ಲಾಟ್ಫಾರಂ ಲಿಮಿಡೆಟ್ ಕಂಪನಿಯಲ್ಲಿ ಪಾಲು ಪಡೆದರೆ, ಸಲೀಸಾಗಿ 38.8 ಕೋಟಿ ಚಂದಾದಾರರನ್ನು ‘ವಾಟ್ಸಪ್ ಪೇ’ವ್ಯಾಪ್ತಿಗೆ ತರಬಹುದು. ಅದಕ್ಕಾಗಿ ಹೆಚ್ಚುವರಿ ವೆಚ್ಚ ಮಾಡಬೇಕಿಲ್ಲ. ಇದು ಮಾರ್ಕ್ ಜುಕರ್‌ಬರ್ಗ್ ಲೆಕ್ಕಾಚಾರ. ಜಿಯೋ ಬೆಂಬಲದೊಂದಿಗೆ ‘ವಾಟ್ಸಪ್ ಪೇ’ ಮುಂಬರುವ ದಿನಗಳಲ್ಲಿ ಅತಿದೊಡ್ಡ ಮತ್ತು ವ್ಯಾಪಕ ಹಣಪಾವತಿ ವೇದಿಕೆಯಾಗಿ ಪರಿವರ್ತನೆಯಾಗಲಿದೆ. ಇದು ಈಗ ಹಾಲಿ ಇರುವ ಪೇಟಿಎಂ, ಅಮೆಜಾನ್ ಮತ್ತು ಗೂಗಲ್ ಪೇಗಳಿಗೆ ತೀವ್ರವಾಗಿ ಸ್ಪರ್ಧೆ ನೀಡಲಿದೆ.
ರಿಲಯನ್ಸ್ ರಿಟೇಲ್ಸ್ ಮೂಲಕ ಮುಖೇಶ್ ಅಂಬಾನಿ ದಿನಸಿ, ದಿನೋಪಯೋಗಿ ವಸ್ತುಗಳ ಜತೆಗೆ ಉಡುಪುಗಳು ಮತ್ತು ಆಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ. ಜಿಯೋ ಪ್ಲಾಟ್ಫಾರಂ ಲಿಮಿಡೆಟ್ ನಂತೆಯೇ ರಿಲಯನ್ಸ್ ರಿಟೇಲ್ ಪ್ರತ್ಯೇಕ ಕಂಪನಿಯಾಗಿದ್ದು, ಅದರ ಉದ್ಯಮದ ಮೌಲ್ಯವು ಸುಮಾರು 2.50 ಲಕ್ಷ ಕೋಟಿ ರುಪಾಯಿಗಳು ಎಂದು ಅಂದಾಜು ಮಾಡಲಾಗುತ್ತಿದೆ. ಜಿಯೋ ಮಾರ್ಟ್ ಮೂಲಕ ಇ-ಕಾಮರ್ಸ್ ವಹಿವಾಟಿಗೆ ಇಳಿದಿರುವ ಮುಖೇಶ್ ಅಂಬಾನಿಗೆ ಫೇಸ್‌ಬುಕ್ ಮತ್ತು ವಾಟ್ಸಪ್ ಗ್ರಾಹಕರನ್ನು ತಲುಪುವ ಅತಿದೊಡ್ಡ, ಸುಲಭ ಮತ್ತು ವೆಚ್ಚವೇ ಇಲ್ಲದ ಮಾರ್ಗಗಳಾಗಿವೆ. ಹೀಗಾಗಿ ಮುಖೇಶ್- ಮಾರ್ಕ್ ಜುಕರ್‌ಬರ್ಗ್ ಜತೆಗೂಡುವುದರಿಂದ ಈಗಾಗಲೇ ಇ-ಕಾಮರ್ಸ್ ನಲ್ಲಿ ಪ್ರಾಬಲ್ಯ ಸಾಧಿಸಿರುವ ಅಮೇಜಾನ್ ಮತ್ತು ವಾಲ್ಮಾರ್ಟ್ ಖರೀದಿಸಿರುವ ಫ್ಲಿಪ್ಕಾರ್ಟ್ ಕಂಪನಿಗಳಿಗೆ ಪ್ರಬಲ ಸ್ಪರ್ಧೆ ಎದುರಾಗಲಿದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ಇ-ಕಾಮರ್ಸ್ ವಹಿವಾಟನ್ನು ವಿಕೇಂದ್ರೀಕರಿಸುವುದು ಮುಖೇಶ್ ಅಂಬಾನಿಯ ಗುರಿ. ಅಂದರೆ, ವಾಟ್ಸಪ್ ಬಳಸಿಕೊಂಡು ಸ್ಥಳೀಯವಾಗಿರುವ ಕಿರಾಣಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅತ್ಯಂತ ತ್ವರಿತವಾಗಿ, ಕಡಮೆ ವೆಚ್ಚದಲ್ಲಿ ಗ್ರಾಹಕರಿಗೆ ದಿನಸಿ ಮತ್ತು ದಿನೋಪಯೋಗಿ ವಸ್ತುಗಳನ್ನು ಪೂರೈಸುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ರಿಲಯನ್ಸ್, ಜಿಯೋ, ಫೇಸ್ಬುಕ್- ವಾಟ್ಸಪ್ ನಡುವೆ ಪ್ರತ್ಯೇಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಮುಂದೆ ಗ್ರಾಹಕರಿಗಾಗುವ ಲಾಭವೇನು?
ಬರುವ ದಿನಗಳಲ್ಲಿ ರಿಟೇಲ್ (ದಿನಸಿ, ನಿತ್ಯೋಪಯೋಗಿ ವಸ್ತುಗಳ ಮಾರಾಟ), ಇ-ಕಾಮರ್ಸ್, ಪೇಮೆಂಟ್, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಗಣನೀಯ ಬದಲಾವಣೆ ಆಗಲಿದೆ. ಫೇಸ್ಬುಕ್ ಗಿಂತಲೂ ಜನರು ವಾಟ್ಸಪ್ ಗೆ ಅಡಿಕ್ಟ್ ಆಗಿದ್ದಾರೆ. ಬಹುತೇಕ ವಹಿವಾಟು, ಸಂವಹನ ವಾಟ್ಸಪ್ ಮೂಲಕವೇ ನಡೆಯುತ್ತಿದೆ. ಮೊಬೈಲ್ ಇದ್ದೂ ಫೇಸ್ಬುಕ್ ಬಳಸದೇ ಇರುವವರ ಸಂಖ್ಯೆ ಬಳಷ್ಟಿದೆ. ಆದರೆ, ವಾಟ್ಸಪ್ ಬಳಸದೇ ಇರುವವರ ಸಂಖ್ಯೆ ತೀರಾ ಅತ್ಯಲ್ಪ. ಇದು ಮುಖೇಶ್ ಅಂಬಾನಿ ಅವರ ರಿಟೇಲ್ ವಹಿವಾಟು ವಿಸ್ತರಣೆಗೆ ಮೆಟ್ಟಿಲುಗಳಾಗಲಿದೆ. ಜುಕೇರ್ಬರ್ಗನ ವಾಟ್ಸಪ್ ಗೆ ಕೂಡಾ 38.8 ಕೋಟಿ ಜಿಯೋ ಮೊಬೈಲ್ ಬಳಕೆದಾರರು ಏಕಾಏಕಿ ದಕ್ಕುವುದರಿಂದ ವಾಟ್ಸಪ್ ಪೇ ವಿಸ್ತರಿಸುವುದು ಸುಲಭವಾಗುತ್ತದೆ.
ಉದ್ಯಮದ ಮೇಲಿನ ಪರಿಣಾಮವೇನು?
ದೂರಸಂಪರ್ಕ ಉದ್ಯಮದ ಮೇಲೆ ಮುಖೇಶ್- ಮಾರ್ಕ್ ಜುಕರ್‌ಬರ್ಗ್ ಒಗ್ಗೂಡಿದ್ದರಿಂದ ಆಗುವ ಪರಿಣಾಮ ಏನು? ವೋಡಾಫೋನ್ ಮತ್ತು ಏರ್ಟೆಲ್ ಕಂಪನಿಗಳ ಕತೆ ಏನು? ವಾಸ್ತವವಾಗಿ ಈ ಬೆಳವಣಿಗೆಯಿಂದ ಈ ಕಂಪನಿಗಳಿಗೂ ಹೆಚ್ಚಿನ ಅನುಕೂಲ ಆಗಲಿದೆ. ಫೇಸ್‌ಬುಕ್ ಜಿಯೋ ಕಂಪನಿಯಲ್ಲಿ ಹೂಡಿಕೆ ಮಾಡಿರುವುದು, ಭಾರತದ ಇಡೀ ದೂರಸಂಪರ್ಕ ಉದ್ಯಮದ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸಿದೆ. ಅಂದರೆ ಬರುವ ದಿನಗಳಲ್ಲಿ ಜಗತ್ತಿನ ಪ್ರಮುಖ ಕಂಪನಿಗಳು ಏರ್ಟೆಲ್ ಮತ್ತು ವೋಡಾಫೋನ್ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಇದು ವ್ಯವಹಾರಿಕ ಅನುಕೂಲ. ಆದರೆ, ಈ ಬೆಳವಣಿಗೆಯಿಂದ ಸ್ಪರ್ಧೆಯು ಮತ್ತೊಂದು ಹಂತಕ್ಕೆ ಜಿಗಿಯುತ್ತದೆ. ತತ್ಪರಿಣಾಮ ಈ ಮೂರು ಕಂಪನಿಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಉತ್ತಮ ಮತ್ತು ಹೊಸ ಹೊಸ ಸೇವೆಗಳನ್ನು ಒದಗಿಸಲಿವೆ, ಅದು ಅನಿವಾರ್ಯ ಕೂಡಾ. ಉದ್ಯಮದಲ್ಲಿ ಸ್ಪರ್ಧೆ ತೀವ್ರವಾಗುವುದರಿಂದ ಯಾರೂ ದರ ಏರಿಕೆ ಮಾಡುವ ‘ಸಾಹಸ’ಕ್ಕೆ ಇಳಿಯುವುದಿಲ್ಲ. ಹಾಗಾಗಿ, ಇನ್ನೂ ಸಾಕಷ್ಟು ತಿಂಗಳುಗಳ ಕಾಲ ಈಗಿರುವ ಮೊಬೈಲ್ ಸೇವೆಗಳ ದರಗಳು ಏರಿಕೆಯಾಗುವ ಸಾಧ್ಯತೆ ಕಡಮೆ. ಅಂದರೆ, ಮತ್ತಷ್ಟು ತಿಂಗಳುಗಳ ಕಾಲ ‘ಗ್ರಾಹಕರೇ ಮಹಾರಾಜ’ರು!!