ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಎದುರು ಲೈಂ**ಕ ಶೋಷಣೆ ಪ್ರಕರಣದಲ್ಲಿ ದೂರು ನೀಡಿರುವ ಮಹಿಳೆ ಧರಣಿ ನಡೆಸಿದ್ದು, ಪ್ರಕರಣಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆ ನಿರತ ಮಹಿಳೆಯನ್ನು ಬಲವಂತವಾಗಿ ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ಇತ್ತೀಚೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ಮಹಿಳೆ ದೂರು ನೀಡಿದ್ದು, ಪ್ರತಿದೂರು ಕೂಡ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಕಡೆಯ ದೂರುಗಳ ಪರಿಶೀಲನೆ ನಡೆಸಲಾಗುತ್ತಿದೆ.

ಘಟನೆಯ ಹಿನ್ನೆಲೆ ಏನು…?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ವಿರುದ್ಧ ಲೈಂ**ಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಜೀವ ಬೆದರಿಕೆ ಆರೋಪದಡಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಿರುಕುಳ ನೀಡಲಾಗುತ್ತಿದ್ದು, ತಮ್ಮ ಮೇಲೆ ಲೈಂ**ಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಿರುವ ಮಹಿಳೆ, ಈ ವಿಚಾರವನ್ನು ಬಹಿರಂಗಪಡಿಸಿದರೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದರು.

ಇತ್ತ ಗೋಪಾಲ್ ಜೋಶಿ ಅವರು ಕೂಡ ಮಹಿಳೆ ವಿರುದ್ಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಹಣ ವಸೂಲಿ ಮಾಡುವ ಉದ್ದೇಶದಿಂದ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಅವರು ದೂರಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಎರಡೂ ಕಡೆಯ ದೂರುಗಳ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.







