ಕರೋನಾ ಎಂಬ ಸಾಂಕ್ರಾಮಿಕ ಸೋಂಕಿಗೆ ಸಿಲುಕಿರುವ ಇಡೀ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಪರದಾಡುತ್ತಿದೆ. 2020 – 21ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ದರವು (GDP) ದರ ಶೇಕಡ 1.9 ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜಿಸಿದೆ. 1930ರಲ್ಲಿ ಎದುರಾಗಿದ್ದ ಆರ್ಥಿಕ ಸಂಕಷ್ಟದ ಬಳಿಕ ಭಾರತಕ್ಕೆ ಎದುರಾಗಿರುವ ಮೊದಲ ಆರ್ಥಿಕ ಸಂಕಷ್ಟ ಎಂದು ಎಂದಾಜಿಸಲಾಗಿದೆ. ಭಾರತದಲ್ಲಿ ಸಮಸ್ಯೆ ಆಗಿರುವ ನಡುವೆಯೇ ಕರ್ನಾಟಕ ಕೂಡ ಆರ್ಥಿಕ ಸಮಸ್ಯೆಗೆ ಒಳಗಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ರಾಜ್ಯದ ಆರ್ಥಿಕತೆ ಸರಿಯಾಗಿಲ್ಲ. ಹಣಕಾಸಿನ ಸಮಸ್ಯೆ ಇದೆ ಎಂದಿದ್ದಾರೆ. ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಸಿಎಂ ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿದ್ದಾರೆ. ಆ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎನ್ನುವ ವಿಚಾರದಲ್ಲಿ ಚರ್ಚೆ ಶುರುವಾಗಿದೆ.
ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲ ಎಂದರೆ ಪೆಟ್ರೋಲ್ ಹಾಗೂ ಅಬಕಾರಿ ಇಲಾಖೆ. ಇವೆರಡನ್ನು ಹೊರತುಪಡಿಸಿದರೆ ಕೇಂದ್ರ ಸರ್ಕಾರದಿಂದ ಬರುವ ಜಿಎಸ್ಟಿ ತೆರಿಗೆ ಭಾಗ ಅಷ್ಟೇ. ಆದರೆ ದೇಶವೇ ಲಾಕ್ಡೌನ್ ಆದಾಗಿನಿಂದ ಬರಬೇಕಾದ ಎಲ್ಲಾ ಮೂಲಗಳೆಲ್ಲಾ ಬಂದ್ ಆಗಿವೆ. ಸರ್ಕಾರಕ್ಕೆ ಯಥೇಚ್ಛವಾಗಿ ಆದಾಯ ತಂದುಕೊಡುತ್ತಿದ್ದ ಪೆಟ್ರೋಲ್, ಡೀಸೆಲ್ ಮಾರಾಟ ನಡೆಯುತ್ತಿದ್ದರೂ ವಾಹನಗಳ ಸಂಚಾರ ಸ್ಥಗಿತವಾಗಿದೆ. ಈ ನಡುವೆ ಮದ್ಯಪಾನ ಸಂಪೂರ್ಣವಾಗಿ ನಿಂತು ಹೋಗಿರುವ ಕಾರಣ ಸರ್ಕಾರಕ್ಕೆ ಸೂಕ್ತ ಆದಾಯ ಮೂಲವಿಲ್ಲದೆ ಕಂಗಾಲಾಗಿದೆ. ಆದರೆ, ಇದೀಗ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಸಿಎಂ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕೆಲವು ನಿರ್ಧಾರ ಮಾಡಿದ್ದು, ಅನಧಿಕೃತ ಕಟ್ಟಡಗಳ ಕುರಿತು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ತ್ವರಿತ ವಿಲೇವಾರಿ ಮಾಡಿಸಲು ಕ್ರಮಕೈಗೊಳ್ಳುವುದು. ಬಿಡಿಎ ವ್ಯಾಪ್ತಿಯಲ್ಲಿರುವ 12 ಸಾವಿರ ಕಾರ್ನರ್ ನಿವೇಶನಗಳನ್ನು ಹರಾಜು ಹಾಕುವುದು. ಖಾಸಗಿ ಮತ್ತು ಸಹಕಾರಿ ಸಂಘಗಳ ಬಡಾವಣೆ ನಿರ್ಮಾಣ ಹಾಗೂ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡುವುದು ಎನ್ನಲಾಗಿತ್ತು.
ಆರ್ಥಿಕ ಸಮಸ್ಯೆಯನ್ನು ಸರಿದೂಗಿಸಲು ಇರುವ ಮಾರ್ಗೋಪಾಯಗಳನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ 1 ಸಾವಿರ ಕೋಟಿ ರೂಪಾಯಿ ಹಣವನ್ನು ವೈದ್ಯಕೀಯ ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಲು ತೀರ್ಮಾನ ಮಾಡಲಾಗಿದೆ. ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿಯೂ ಮೂಲೆ ನಿವೇಶನಗಳು ಹಾಗೂ ಖಾಲಿ ಇರುವ ನಿವೇಶನಗಳನ್ನು ಹರಾಜು ಹಾಕಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಈ ನಡುವೆ ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಅಕ್ರಮ ಮನೆಗಳು, ನಿವೇಶಗಳನ್ನು ಸಕ್ರಮ ಮಾಡಲು ಕಾನೂನು ತಿದ್ದುಪಡಿಗೆ ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯ ಸಂಪುಟ ಉಪಸಮಿತಿಯ ಸಭೆಯಲ್ಲಿ ಈ ತಿರ್ಮಾನ ತೆಗೆದುಕೊಂಡಿದ್ದು, ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಬಡಾವಣೆಗಳಲ್ಲಿನ ಅಕ್ರಮ ಮನೆಗಳನ್ನು ಸಕ್ರಮ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಉಪ ಸಮಿತಿ ತೀರ್ಮಾನ ಮಾಡಿದೆ. ಇದಕ್ಕೆ ಪೂರಕವಾಗಿ ಬಿಡಿಎ ಕಾಯ್ದೆ 1976ರ ಕಾನೂನಿಗೆ ತಿದ್ದುಪಡಿ ತರುವ ಸಂಬಂಧ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಈ ನಿರ್ಧಾರ ಕೈಗೊಂಡಿದೆ. ಅಂದಾಜು 5000 ಎಕರೆ ಪ್ರದೇಶದಲ್ಲಿ 75,000 ನಿವೇಶನ ಸಕ್ರಮ ಮಾಡಲು ಮುಂದಾಗಿದ್ದಾರೆ. 120X100 ಅಳತೆವರೆಗಿನ ನಿವೇಶನಗಳು ಮತ್ತು ಅವುಗಳಲ್ಲಿ ಕಟ್ಟಿರುವ ಮನೆಗಳನ್ನು ಸಕ್ರಮಕ್ಕೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಆದ್ರೆ ರಾಜ್ಯ ಸರ್ಕಾರ ಈ ಯೋಜನೆ ಹಳ್ಳ ಹಿಡಿವ ಎಲ್ಲಾ ಸಾಧ್ಯತೆಗಳು ಇವೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ಆರ್ಥಿಕ ನಿಯಂತ್ರಣ ಮಾಡುವುದಕ್ಕೆ ಇರುವ ಆಸ್ತಿಯನ್ನು ಮಾರುವುದು ಸರಿ ಅಲ್ಲ. ಅವಶ್ಯಕತೆ ಇದ್ದರೆ ಬ್ಯಾಂಕ್ಗಳಿಂದ ಸಾಲ ಮಾಡಿ, ಕೇಂದ್ರ ಸರ್ಕಾರದಿಂದ ತರಿಸಿಕೊಳ್ಳಿ. ಇರುವ ಬಿಡಿಎ ಸೈಟ್‌ಗಳನ್ನು ಮಾರಿದ್ರೆ ಈ ಸಂದರ್ಭದಲ್ಲಿ ಕಳೆದುಕೊಳ್ಳುವುದು ಸರಿಯಲ್ಲ. ಈಗ ಜನರ ಬಳಿ ಕೊಂಡುಕೊಳ್ಳಲು ಹಣವಿಲ್ಲ , ತುಂಬಾ ಕಡಿಮೆ ಹಣಕ್ಕೆ ಮಾರಬೇಕಾಗುತ್ತದೆ. ನೀವು ನಿರೀಕ್ಷೆ ಮಾಡಿದಷ್ಟು ಹಣ ಸಿಗುವುದಿಲ್ಲ, ಬ್ಯಾಂಕ್‌ನಲ್ಲಿ ಲೋನ್ ತೆಗೆದುಕೊಳ್ಳುವುದೇ ಉತ್ತಮ ಎಂದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿರೋಧ ಪಕ್ಷದ ನಾಯಕರು ಸೂಕ್ತ ರೀತಿಯಲ್ಲಿ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಒಂದು ವೇಳೆ ವಿರೋಧ ಪಕ್ಷದ ನಾಯಕರ ಮಾತನ್ನು ಕೇಳದಿದ್ದರೆ ಸರ್ಕಾರ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ ಕರೋನಾ ವೈರಸ್ ನಿಂದ ಬದುಕಿದ್ರೆ ಸಾಕು ಎನ್ನುವ ಚಿಂತನೆಯಲ್ಲಿ ರಾಜ್ಯದ ಜನರಿದ್ದಾರೆ. ಸೈಟ್ ಕೊಳ್ಳುವ ಯಾವುದೇ ಆಲೋಚನೆಯಲ್ಲಿ ಇರುವುದಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟ ಆಗುವುದು ಬಹುತೇಕ ಖಚಿತ.
ವಿರೋಧ ಪಕ್ಷವಾಗಿ ಕಾಂಗ್ರೆಸ್ ಸೂಕ್ತ ರೀತಿಯಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿರುವುದು ಸರಿ. ಆದರೆ ಒಂದೊಮ್ಮೆ ರಾಜ್ಯ ಸರ್ಕಾರ ತನ್ನ ಮೊಂಡುತನ ಮುಂದುವರಿಸಿ ಬಿಡಿಎ, ನಗರಾಭಿವೃದ್ಧಿ ವ್ಯಾಪ್ತಿಯ ನಿವೇಶನಗಳನ್ನು ಮಾರಾಟ ಮಾಡುವ ಉದ್ದೇಶ ಮುಂದುವರಿಸಿದರೆ, ರಾಜ್ಯ ಸರ್ಕಾರದ ಖಜಾನೆಗೆ ಹಣ ಸಂಗ್ರಹ ಮಾಡುವ ಉದ್ದೇಶಕ್ಕಿಂತ ಸೈಟ್ಗಳನ್ನು ಲೂಟಿ ಹೊಡೆಯುವ ಉದ್ದೇಶವಿದೆ ಎನ್ನುವುದೇ ಸತ್ಯ ಎನ್ನುತ್ತಾರೆ ಉನ್ನತ ಮಟ್ಟದ ಅಧಿಕಾರಿಗಳು. ಸದ್ಯಕ್ಕೆ ಜನರಿಗೆ ಸೈಟ್ ಕೊಳ್ಳುವ ಉದ್ದೇಶ ಇರಲ್ಲ. ಒಂದು ವೇಳೆ ಕೆಲವು ಜನರು ಸೈಟ್ ಕೊಳ್ಳಲು ಮುಂದಾದರೂ ಸರ್ಕಾರ ನಿರೀಕ್ಷೆ ಮಾಡಿದ ಮಟ್ಟಕ್ಕೆ ಹಣ ಸಂಗ್ರಹವಾಗಲ್ಲ. ಇದನ್ನೇ ಲಾಭಕ್ಕೆ ಬಳಸಿಕೊಳ್ಳಲು ಕೆಲವು ರಾಜಕಾರಣಿಗಳು ಮುಂದಾಗಿದ್ದು, ನೂರಾರು ಸೈಟ್ಗಳನ್ನು ಬೇನಾಮಿ ಹೆಸರಲ್ಲಿ ಖರೀದಿ ಮಾಡುತ್ತಾರೆ ಎನ್ನುವ ಮಾತುಗಳು ಪತ್ರಿಕೋದ್ಯಮ ಪಡಸಾಲೆಯ ಮಾತಾಗಿದೆ. ಒಟ್ಟಾರೆ ಹಣ ಸಂಗ್ರಹದ ಹೆಸರಿನ ಮಾಸ್ಟರ್ ಪ್ಲ್ಯಾನ್ ಹಳ್ಳ ಹಿಡಿಯುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ.