ಬೊಮ್ಮಸಂದ್ರದ ಕಿತ್ತಗಾನಹಳ್ಳಿ ಕೆರೆಯಲ್ಲಿ ಮಾಲಿನ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಕೇಂದ್ರ ಹಸಿರು ನ್ಯಾಯಮಂಡಳಿ ರಾಜ್ಯ ಸರ್ಕಾರ ಹಾಗೂ ಬೊಮ್ಮಸಂದ್ರ ಪುರಸಭೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದೆ. ಕೆರೆ ನೀರಿಗೆ ಮಾಲಿನ್ಯ ಹಾಕುವುದನ್ನು ತಡೆಯಲು ಸಾಧ್ಯವಾಗದ್ದನ್ನು ಅಧಿಕಾರಿಗಳ ಅಪರಾಧ ಕೃತ್ಯವೆಂದು ಪರಿಗಣಿಸಿದ ಮಂಡಳಿ ರಾಜ್ಯಕ್ಕೆ 10 ಲಕ್ಷ ಮಧ್ಯಂತರ ದಂಡ ವಿಧಿಸಿದೆ.
ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠವು ತನ್ನ ಜವಾಬ್ದಾರಿ ನಿರ್ವಹಿಸಲು ಸೋತಿದೆಯೆಂದು ಬೊಮ್ಮಸಂದ್ರ ಪುರಸಭೆಗೆ ಛೀಮಾರಿ ಹಾಕಿ 5 ಲಕ್ಷ ದಂಡ ಕಟ್ಟಲು ಸೂಚಿಸಿದೆ.
ಪುರಸಭೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಮಾಲಿನ್ಯ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟಿನ ಆದೇಶವನ್ನೂ ಪಾಲಿಸಲಾಗಿಲ್ಲ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ತ್ವರಿತ ಪರಿಹಾರ ಕಂಡುಕೊಳ್ಳಬೇಕೆಂದು ಕೇಂದ್ರ ಹಸಿರು ನ್ಯಾಯಮಂಡಳಿ ಅಭಿಪ್ರಾಯಿಸಿದೆ.

ಸಂಸ್ಕರಿಸದ ಒಳಚರಂಡಿ ನೀರನ್ನು ನೇರವಾಗಿ ಕೆರೆ ನೀರಿಗೆ ಬಿಡುವುದರಿಂದ ಭಾರಿ ಹಾನಿಯಾಗಿದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಪರಿಸರಕ್ಕೆ ಉಂಟಾದ ಹಾನಿಗಾಗಿ ಕರ್ನಾಟಕ ಹಾಗೂ ಬೊಮ್ಮಸಂದ್ರ ಪುರಸಭೆಗೆ ಕ್ರಮವಾಗಿ 10 ಲಕ್ಷ ಹಾಗೂ 5 ಲಕ್ಷ ಮಧ್ಯಂತರ ದಂಡ ವಿಧಿಸಲಾಗಿದೆ. ಸರ್ಕಾರದ ಹಾಗೂ ಪುರಸಭೆ ಮಂಡಳಿಯ ಪ್ರತಿಕ್ರಿಯೆ ಬಳಿಕ ಅಂತಿಮ ಪರಿಹಾರ ಮೊತ್ತ ನಿರ್ಧರಿಸಲಾಗುವುದು ಎಂದು ಕೇಂದ್ರ ಹಸಿರು ನ್ಯಾಯಮಂಡಳಿ ತಿಳಿಸಿದೆ.
ತಪ್ಪಿತಸ್ಥ ಅಧಿಕಾರಿಗಳಿಂದ ದಂಡ ವಸೂಲಿ ಮಾಡುವ ಅಧಿಕಾರ ಪುರಸಭೆ ಹಾಗೂ ರಾಜ್ಯ ಆಡಳಿತಕ್ಕೆ ಇದೆ. ದಂಡದ ಮೊತ್ತವನ್ನು ಒಂದು ತಿಂಗಳೊಳಗೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಜಮಾಗೊಳಿಸಬೇಕು, ಅದನ್ನು ಪರಿಸರ ಪುನರ್‌ಸಂರಕ್ಷಣೆಗೆ ಬಳಸಲಾಗುವುದು ಎಂದು ಮಂಡಳಿ ಹೇಳಿದೆ.
ಬೊಮ್ಮಸಂದ್ರ ಬಳಿ ಇರುವ ಕಿತ್ತಗಾನಹಳ್ಳಿ ಕೆರೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕಳೆದ ವರ್ಷ ಸೆಪ್ಪಂಬರ್ ತಿಂಗಳಲ್ಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿತ್ತು.
ಕೈಗಾರಿಕಾ ಪ್ರದೇಶದ ವಿಷಪೂರಿತ ಮಾಲಿನ್ಯ ನೀರು ಕೆರೆಯನ್ನು ಸೇರಿ ಕಲುಷಿತಗೊಳಿಸುತ್ತಿದೆ. ಇದು ಸಾರ್ವಜನಿಕರ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸಂಜಯ್ ರಾವ್ ಎಂಬವರು ನೀಡಿದ ದೂರಿನ ಅರ್ಜಿಯನ್ನು ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠದಲ್ಲಿಯೇ 2019 ರಲ್ಲಿ ವಿಚಾರಣೆ ನಡೆಸಲಾಗಿತ್ತು.
ಕೆರೆಯ ದುಃಸ್ಥಿತಿ ಕುರಿತು ಗಂಭೀರವಾಗಿ ಪರಿಗಣಿಸಿದ್ದ ಮಂಡಳಿ, ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ಒಂದು ತಿಂಗಳೊಳಗೆ ಅದರ ವರದಿ ಸಲ್ಲಿಸಬೇಕು ಎಂದು ಮಂಡಳಿಗೆ ಸೂಚಿಸಿ, ವಿಚಾರಣೆಯನ್ನು ಕಳೆದ ಜನವರಿ 10ಕ್ಕೆ ಮುಂದೂಡಿತ್ತು.
ನಾರಾಯಣ ಹೃದಯಾಲಯದ ಹಿಂಭಾಗದಲ್ಲಿ ಇರುವ ಈ ಕೆರೆಗೆ ಕೈಗಾರಿಕೆಗಳ ವಿಷಪೂರಿತ ನೀರು, ತ್ಯಾಜ್ಯ ಸೇರಿಕೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಪ್ರತಿಭಟನೆ ನಡೆಸಿ ಬೊಮ್ಮಸಂದ್ರ ಪುರಸಭೆಯ ಗಮನ ಸೆಳೆದಿದ್ದರೂ, ಸ್ಥಳೀಯ ಆಡಳಿತ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿನಲ್ಲಿ ಉಲ್ಲೇಖಿಸಿದ್ದರು.
ಕೆರೆ ಮಾಲಿನ್ಯಗೊಳ್ಳುತ್ತಿರುವ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೊಮ್ಮಸಂದ್ರ ಪುರಸಭೆ ಅಧಿಕಾರಿಗಳಿಗೆ 2016 ರಲ್ಲೇ ಪತ್ರ ಬರೆದಿತ್ತು. ಆ ಪತ್ರದ ಪ್ರತಿ ಸೇರಿದಂತೆ ಕಿತ್ತಗಾನಹಳ್ಳಿ ಕೆರೆಯ ಸಂರಕ್ಷಣೆಯ ಕುರಿತು ಅಧಿಕಾರಿಗಳಿಗೆ ಬಂದಿರುವ ಹಲವು ಆದೇಶ ಪತ್ರಗಳ ಪ್ರತಿಗಳು ಇಲ್ಲಿವೆ.