ರಾಜ್ಯದ ಅತ್ಯಂತ ಬೇಡಿಕೆಯ ಪ್ರವಾಸಿ ಜಿಲ್ಲೆ ಕೊಡಗು ದಿನೇ ದಿನೇ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಸಂಭವಿಸಿದ ಬೀಕರ ಭು ಕುಸಿತದಿಂದ ಪ್ರವಾಸಿಗರಿಗೆ ಕೆಲ ಕಾಲ ನಿರ್ಬಂಧ ಹೇರಲಾಗಿತ್ತು. ಅನ್ ಲಾಕ್ ನಂತರ ಈಗ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಕಲರವ ಕೇಳಿ ಬರುತ್ತಿದೆ. ಇಡೀ ಜಿಲ್ಲೆಗೆ ಅತ್ಯಂತ ಹೆಚ್ಚು ಜನರನ್ನು ಸೆಳೆಯುತ್ತಿರುವ ಪ್ರವಾಸೀ ತಾಣವೆಂದರೆ ಮಡಿಕೇರಿಯ ರಾಜಾಸೀಟು. ಸುತ್ತಲೂ ದೃಷ್ಟಿ ಹಾಯಿಸಿದರೆ ಪ್ರಕೃತಿಯ ವಿಹಂಗಮ ನೋಟ ಕಿಲೋಮೀಟರ್ ಗಟ್ಟಲೆ ದೂರದವರೆಗೂ ಕಾಣುತ್ತದೆ. ಹಾಗಾಗಿ ನಿತ್ಯ ಇಲ್ಲಿ ಪ್ರವಾಸಿಗರ ಜಂಗುಳಿ ಸಾಮಾನ್ಯವಾಗಿದೆ. ಇದೀಗ ಈ ತಾಣವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದ್ದು ಅದಕ್ಕಾಗಿ ಜೆಸಿಬಿ ಬಳಸಿ ಕೆಲಸ ಮಾಡುತ್ತಿದೆ. ಆದರೆ ಇದಕ್ಕೆ ಸ್ಥಳೀಯರ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪ್ರಕೃತಿ ಪ್ರಿಯರ ನೆಚ್ಚಿನ ಪ್ರವಾಸಿತಾಣ ಮಡಿಕೇರಿಯ ರಾಜಾಸೀಟ್ ಉದ್ಯಾನವನ ನೈಜ ಸೌಂದರ್ಯದ ಮೂಲಕವೇ ದೇಶ, ವಿದೇಶಿಗರ ಗಮನ ಸೆಳೆದಿದ್ದು, ಕೃತಕತೆಯ ಮೂಲಕ ನೈಜತೆಗೆ ದಕ್ಕೆ ತರುವ ಅಗತ್ಯವಿಲ್ಲವೆಂದು ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ. ಪ್ರಕೃತಿ ಸೌಂದರ್ಯಕ್ಕೆ ಮತ್ತು ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುವ ರೀತಿಯ ಕಾಮಗಾರಿಗಳನ್ನು ಕೈಗೊಂಡರೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜಾಸೀಟ್ ನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು ಕೊಡಗಿನ ಭೌಗೋಳಿಕ ವಸ್ತುಸ್ಥಿತಿಯ ಅರಿವಿಲ್ಲದ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಅಧಿಕಾರಿಗಳು ಪ್ರಕೃತಿಗೆ ವಿರುದ್ಧವಾದ ಯೋಜನೆಗಳನ್ನು ರೂಪಿಸಿ ಅನಾಹುತಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಮಾಡುವ ತಪ್ಪುಗಳನ್ನು ತಿದ್ದುವ ಜವಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಜಾಣ ಮೌನಕ್ಕೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಿದರು. ಕೊಡಗು ಪ್ರಯೋಗ ಶಾಲೆಯಲ್ಲ, ಇದೊಂದು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಇದನ್ನು ವಿರೂಪಗೊಳಿಸುವ ಪ್ರಯತ್ನಕ್ಕೆ ಯಾರೂ ಪ್ರಯತ್ನಿಸಬಾರದು. ಈ ರೀತಿಯ ದೂರದೃಷ್ಟಿ ಇಲ್ಲದ ಯೋಜನೆಗಳಿಂದಲೇ ಇಂದು ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಇದರ ಅರಿವಿದ್ದರೂ ಅಧಿಕಾರಿಗಳು ರಾಜಾಸೀಟ್ ನಲ್ಲಿ ಜೆಸಿಬಿ ಮತ್ತು ಇಟಾಚಿ ಯಂತ್ರಗಳನ್ನು ಬಳಸಿ ಕಾಮಗಾರಿ ಕೈಗೊಂಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ನೈಜ ಪ್ರಕೃತಿ ಸೌಂದರ್ಯವನ್ನು ಹಾಳು ಮಾಡಲು 3.50 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಮಡಿಕೇರಿ ನಗರದ ರಸ್ತೆಗಳು ಕಳೆದ ಎರಡು ವರ್ಷಗಳಿಂದ ಹೊಂಡ ಗುಂಡಿಗಳಾಗಿ ವಾಹನಗಳು ಸಂಚರಿಸಲಾಗದ ದುಸ್ಥಿತಿಯಲ್ಲಿದ್ದರೂ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಗೆ ಅಗತ್ಯವಿಲ್ಲದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸರ್ಕಾರದ ಅನುದಾನವನ್ನು ದುರುಪಯೋಗ ಪಡಿಸಲಾಗುತ್ತಿದೆ ಎಂದು ಪವನ್ ಪೆಮ್ಮಯ್ಯ ಆರೋಪಿಸಿದರು. ರಾಜಾಸೀಟ್ ಉದ್ಯಾನವನ ರಾಜಾಸೀಟ್ ನಂತೆ ಇರಲಿ, ಇಲ್ಲಿ ಕೃತಕತೆಯ ಅಗತ್ಯವಿಲ್ಲವೆಂದು ಹೇಳಿದ ಅವರು, ಉದ್ಯಾನವನದಲ್ಲಿ ಕೈಗೆತ್ತಿಕೊಂಡಿರುವ ಯೋಜನೆಯನ್ನು ತಕ್ಷಣ ಕೈಬಿಟ್ಟು ಅದೇ ಹಣವನ್ನು ನಗರದ ರಸ್ತೆಗಳ ಅಭಿವೃದ್ಧಿಗೆ ಬಳಸಿದರೆ ಪ್ರವಾಸಿಗರ ಜತೆ ಸ್ಥಳೀಯರಿಗೂ ಅನುಕೂಲ ಆಗುತ್ತದೆ ಎಂದು ಅವರು ಹೇಳುತ್ತಾರೆ.
ಈ ಕುರಿತು ಸಾರ್ವಜನಿಕ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ವಿವಿಧ ಅಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನು ಮುಂದೆ ಜೆಸಿಬಿ ಅಥವಾ ಹಿಟಾಚಿ ಯಂತ್ರಗಳನ್ನು ಬಳಸುವುದಿಲ್ಲವೆಂದು ಸ್ಪಷ್ಟೀಕರಣ ನೀಡಿದ್ದಾರೆ. ಪ್ರತಿರೋಧದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ರಾಜಾಸೀಟು ಉದ್ಯಾನವನದಲ್ಲಿ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಉದ್ದೇಶಿಸಲಾದ ಎರಡು ಕೃತಕ ಕೆರೆಗಳು ಹಾಗೂ ಮೆಟ್ಟಿಲು ಸೇತುವೆಗಳ ನಿರ್ಮಾಣವನ್ನು ಕೈಬಿಡಲಾಗಿದೆ. ಜೆಸಿಬಿ ಅಥವಾ ಹಿಟಾಚಿ ಯಂತ್ರಗಳಿಂದ ಕಾಮಗಾರಿ ನಡೆಸದಂತೆ ನಿರ್ಧರಿಸಲಾಗಿದೆ. ಈ ಪ್ರದೇಶದಲ್ಲಿ ಮೂಲ ಸ್ವರೂಪವನ್ನು ಬದಲಾವಣೆ ಮಾಡದೆ ಯಾವುದೇ ಮರ ಗಿಡ ಕಟಾವು ಮಾಡದೆ ಲಭ್ಯವಿರುವ ಸ್ಥಳದಲ್ಲಿ ಸುಂದರವಾಗಿ ಕಾಮಗಾರಿ ಕೈಗೊಳ್ಳಲಾಗುವುದಾಗಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ರಾಜಾಸೀಟು ಉದ್ಯಾನವನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಮಗ್ರ ಉದ್ಯಾನವನಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ರೂ.455.00 ಲಕ್ಷಗಳಿಗೆ ಕ್ರೀಯಾ ಯೋಜನೆಗೆ ಅನುಮೋದನೆಯಾಗಿದ್ದು, ಅದರಲ್ಲಿ ರೂ.369.00 ಲಕ್ಷಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆರವರು ಅನುಮೋದಿತ ಅಂದಾಜು ಪಟ್ಟಿಯಂತೆ ಕಾಮಗಾರಿಯನ್ನು ಕೈಗೊಳ್ಳಲು ಟೆಂಡರ್ ಕರೆದು ಅನುಮೋದಿತ ಸಂಸ್ಥೆಗೆ ನೀಡಿರುತ್ತಾರೆ. ಉದ್ದೇಶಿತ ಉದ್ಯಾನವನದ ಕಾಮಗಾರಿಯಲ್ಲಿ ಪೊದೆ ಸಸ್ಯಗಳಾದ ಡ್ರೀಸಿನಾ, ಹೇಮೀಲಿಯಾ, ಕೇಶಿಯಾ, ಟಿಕೋಮಾ, ಸ್ಟೇಫೀಲಿರ ಇತ್ಯಾದಿ 21300 ಸಸ್ಯಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ.
ಇಳಿಜಾರು ಪ್ರದೇಶದಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ನೆಲದಲ್ಲಿ ಹಬ್ಬುವ ಹಾಗೂ ಬಳ್ಳಿಗಳ ಜಾತಿಯ ಗಿಡಗಳಾದ ಲಂಟನಾ, ವರ್ಬಿನಾ, ಗಜೇನಿಯಾ, ಬೋಗನ್ವಿಲ್ಲಾ, ಸೈಡರ್ಲಿಲ್ಲಿ ಇತ್ಯಾದಿ 25000 ಸಂಖ್ಯೆಯ ಗಿಡಗಳನ್ನು ನಾಟಿ ಮಾಡಲಾಗುವುದು. ಉದ್ದೇಶಿತ ಉದ್ಯಾನವನದಲ್ಲಿ ಹೂವಿನ ಮರಗಳಾದ ಅಶೋಕ, ಸಂಪಿಗೆ, ಪ್ಲೋಮೀರಿಯಾ, ತಬೋಬಿಯಾ, ಸ್ಪೇತೋಡಿಯಾ, ಲಗೋಸ್ಟ್ರೀಮಿಯಾ ಇತ್ಯಾದಿ 1265 ಮರಗಳನ್ನು ನಾಟಿ ಮಾಡಲು ಉದ್ದೇಶಿಸಲಾಗಿದೆ. ಉದ್ದೇಶಿತ ಉದ್ಯಾನವನದಲ್ಲಿ 17222 ಚ.ಅಡಿ ವಿಸ್ತೀರ್ಣದಲ್ಲಿ ಸ್ಥಳೀಯ ಹಾವಾಗುಣಕ್ಕೆ ಹೊಂದಿಕೊಳ್ಳುವ ಬರ್ಮುಡಾ, ಕೆಂಟುಕಿ ಬ್ಲೂ, ಸೈಟೋಪೋರಮ್ ಇತ್ಯಾದಿ ಹುಲ್ಲು ಹಾಸು (ಲಾನ್) ರಚಿಸಲಾಗುವುದು.

ಉದ್ಯಾನವನದ ಸುತ್ತಲೂ ಅಂದಾಜು 1.350 ಕಿ.ಮೀಗಳ ಉದ್ದದ ಪಾಥ್ ವೇ/ ನಡೆದಾಡುವ ರಸ್ತೆಯನ್ನು ಸಾದರಳ್ಳಿ/ಶಿರಾ/ಕೋಬಲ್ ಕಲ್ಲುಗಳಿಂದ ನಿರ್ಮಿಸಲಾಗುವುದು. ಪಾಥ್ ವೇ ಯ ಎರಡು ಬದಿಗಳಲ್ಲಿ ಮಣ್ಣು ಸವಕಳಿಯಾಗದಂತೆ ತಡೆಗೋಡೆ ಹಾಗೂ ರೈಲಿಂಗ್ಸ್ (ರಕ್ಷಣಾತ್ಮಕ ಕಂಬಿಗಳು)ನ್ನು ಮಾಡಲಾಗುವುದು. ಉದ್ಯಾನವನದಲ್ಲಿ ಇಳಿಜಾರಿನಲ್ಲಿ ಮೆಟ್ಟಲುಗಳು ಹಾಗೂ ತಡೆಗೋಡೆಗಳನ್ನು ಎರಡು ಕಡೆ ನಿರ್ಮಿಸಲಾಗುವುದು. ಈಗಾಗಲೇ ಲಭ್ಯವಿರುವ ಉದ್ಯಾನವನ ಎತ್ತರದ ಗುಡ್ಡದಲ್ಲಿ ಮೂಲ ಸ್ವರೂಪಗಳಿಗೆ ದಕ್ಕೆಯಾಗದಂತೆ ಎರಡು ವೀಕ್ಷಣಾ ಗೋಪುರಗಳನ್ನು ಹಾಗೂ ಮಳೆ/ಬಿಸಿಲಿನಲ್ಲಿ ವಿಶ್ರಾಂತಿಗಾಗಿ ಮೂರು ಅಲಂಕಾರಿಕ ಮಂಟಪಗಳನ್ನು ನಿರ್ಮಿಸಲಾಗುವುದು. ಉದ್ಯಾನವನದ ವಿವಿಧ ಭಾಗಗಳಲ್ಲಿ ಅಲಂಕಾರಿಕ ಹೂವಿನ ಬಳ್ಳಿಗಳನ್ನು ಹಬ್ಬಿಸಲು ಕಲ್ಲಿನ ಎಂಟು ಪೆರ್ಗೊಲಾ (Peಡಿgoಟಚಿ) ಗಳನ್ನು ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ನೈಸರ್ಗಿಕವಾಗಿರುವ ಪ್ರದೇಶದಲ್ಲಿ ಮಕ್ಕಳ ಸಣ್ಣ ಆಟದ ಉದ್ಯಾನವನ್ನು ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ಸಾರ್ವಜನಿಕರ ವಿಶ್ರಾಂತಿಗಾಗಿ 25 ಆಸನಗಳ ವ್ಯವಸ್ಥೆ ಹಾಗೂ ಮರದ ಸುತ್ತಲೂ ಕೂರಲು ಆಸನದ ವ್ಯವಸ್ಥೆ ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ಮಕ್ಕಳ ಮನೋರಂಜನೆಗಾಗಿ ವಿವಿಧ ಪ್ರಾಣಿಗಳ ಕಲಾಕೃತಿಗಳನ್ನು ಹಾಗೂ ಶಿಲ್ಪಕಲಾಕೃತಿಗಳನ್ನು ಅಳವಡಿಸಲಾಗುವುದು.
ರಾಜಾಸೀಟು ಈಗಿನಂತೆಯೇ ಇರಲಿ ಮಾನವ ಹಸ್ತಕ್ಷೇಪದಿಂದಾಗಿ ಮತ್ತೆ ಭೂ ಕುಸಿತ ಸಂಭವಿಸದಿರಲಿ. ಎಂದಿನಂತೆ ಸಹಸ್ರಾರು ಜನರನ್ನು ಸೆಳೆಯಲಿ ಎಂಬುದೇ ಜನತೆಯ ಆಶಯ.