ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲು ಕೊನೆಯ ಮೊಳೆ ಬಿದ್ದಾಗಿದೆ. ಜೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರುತ್ತಿದ್ದ ಹಾಗೆ ಕಾಂಗ್ರೆಸ್ನ ಅಧಿಕಾರದ ನಾವೆ ಮುಳುಗುತ್ತಿದೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಾವೆಯ ನಾವಿಕನೊಂದಿಗೆ 22 ಮಂದಿ ಶಾಸಕರು ಒಮ್ಮೆಗೆ ದಡಕ್ಕೆ ಹಾರಿದ್ದಾರೆ. ಈಗ ನಾವೆಯ ರಕ್ಷಣೆ ಮಾಡುವುದು ಸುಲಭ ಸಾಧ್ಯವಲ್ಲ. ಅಸಾಧ್ಯವಾಗುವ ತನಕ ಬಿಟ್ಟುಕೊಂಡ ಕಾಂಗ್ರೆಸ್ ಇದನ್ನು ಅನುಭವಿಸಲೇ ಬೇಕಿದೆ. ಆದರೆ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಆಗುತ್ತಿದ್ದ ಹಾಗೆ ರಾಜಸ್ಥಾನದಲ್ಲೂ ಆಪರೇಷನ್ ಕಮಲ ಶುರುವಾಗಲಿದೆ ಎನ್ನುವ ಸೂಚನೆ ಲಭಿಸಿದೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರ ರಾಜೆ ಮೂಲಕವೇ ಮಧ್ಯಪ್ರದೇಶದ ಆಪರೇಷನ್ ಕಮಲ ಮಾಡಲಾಯ್ತು ಎನ್ನುವ ಮಾತಿದೆ. ಮಸುಂದರ ರಾಜೆಗೆ ಆಪರೇಷನ್ ಕಮಲ ಉಸ್ತುವಾರಿ ವಹಿಸುವಾಗಲೇ ಕೇಂದ್ರ ನಾಯಕರು ಈ ಬಗ್ಗೆ ಮಾತು ಕೊಟ್ಟಿದ್ದು, ಒಂದು ವೇಳೆ ಮಧ್ಯಪ್ರದೇಶದಲ್ಲಿ ನಾವು ಸರ್ಕಾರ ರಚನೆಯಲ್ಲಿ ಯಶಸ್ಸು ಸಾಧಿಸಿದ್ದಲ್ಲಿ, ರಾಜಸ್ಥಾನದಲ್ಲೂ ಸರ್ಕಾರ ರಚನೆ ಮಾಡುವ ಭರವಸೆ ಸಿಕ್ಕಿದೆ. ಮಧ್ಯಪ್ರದೇಶ ಹೈಡ್ರಾಮಾ ಮುಗಿಯುತ್ತಿದ್ದ ಹಾಗೆ ರಾಜಸ್ಥಾನದಲ್ಲಿ ಸರ್ಕಾರ ರಚನೆಯ ಕಸರತ್ತು ಶುರುವಾಗಲಿದೆ ಎನ್ನಲಾಗಿದೆ. ಮಧ್ಯಪ್ರದೇಶದಲ್ಲಿ ಕರ್ನಾಟಕ ಮಾದರಿಯ ಆಪರೇಷನ್ ಕಮಲ ಯಶಸ್ವಿಯಾಗಿದ್ದು, ಇದೀಗ ಮಧ್ಯಪ್ರದೇಶ ಮಾದರಿಯಲ್ಲಿ ಆಪರೇಷನ್ ಕಮಲ ರಾಜಸ್ಥಾನದಲ್ಲಿ ಜಾರಿಯಾಗಲಿದೆ.
ಕರ್ನಾಟಕದಲ್ಲಿ ರಮೇಶ್ ಜಾರಕಿಹೊಳಿಯನ್ನು ಟೀಂ ಲೀಡರ್ ಆಗಿ ಆಯ್ಕೆ ಮಾಡಿಕೊಂಡಿದ್ದ ಬಿಜೆಪಿ ನಾಯಕರು, ಎಲ್ಲಾ ಉಸ್ತುವಾರಿಯನ್ನು ರಮೇಶ್ ಜಾರಕಿಹೊಳಿ ಹೆಗಲಿಗೆ ವಹಿಸಿದ್ದರು. ಆಪರೇಷನ್ ಕಮಲದ ಉಸ್ತುವಾರಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ನೇರವಾಗಿ ಭಾಗಿಯಾಗಿರಲಿಲ್ಲ. ಆದರೆ, ಮಧ್ಯಪ್ರದೇಶದ ಆಪರೇಷನ್ ಕಮಲದಲ್ಲಿ ನೇರವಾಗಿ ಹೈಕಮಾಂಡ್ ನಾಯಕರೇ ಅಖಾಡಕ್ಕೆ ಇಳಿದು ಕರ್ನಾಟಕ ಮಾದರಿಯಲ್ಲೇ ಜೋತಿರಾಧಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಇದೀಗ ರಾಜಸ್ಥಾನದ ಸರದಿ. ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಆಪ್ತ ನಾಯಕನನ್ನೇ ಬುಟ್ಟಿಗೆ ಹಾಕಿಕೊಂಡು, ರಾಜಸ್ಥಾನದಲ್ಲೂ ರಾಹುಲ್ ಟೀಂನ ನಾಯಕನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಮಧ್ಯಪ್ರದೇಶದಲ್ಲಿ ಜೋತಿರಾಧಿತ್ಯ ಸಿಂಧಿಯಾ ರಾಹುಲ್ ಗಾಂಧಿಗೆ ಆಪ್ತ ನಾಯಕ ಎನಿಸಿದ್ದರೆ, ರಾಜಸ್ಥಾನದಲ್ಲಿ ಸಚಿನ್ ಪೈಲಟ್ ರಾಹುಲ್ ಗಾಂಧಿ ಟೀಂನಲ್ಲಿದ್ದ ನಾಯಕ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೋತಿರಾದಿತ್ಯ ಸಿಂಧಿಯಾ ರೀತಿಯಲ್ಲೇ ಸಚಿನ್ ಪೈಲಟ್ ಸೆಳೆಯುವ ಕಸರತ್ತು ಶುರುವಾಗಲಿದೆ ಎನ್ನುವುದು ರಾಜಕೀಯ ಪಂಡಿತರ ಮಾತಾಗಿದೆ. ಸಚಿನ್ ಪೈಲಟ್ ಯುವನಾಯಕನಾಗಿದ್ದು, ಕಳೆದ ವಿಧಾನಸಭಾ ಚುನಾವಣೆ ವೇಳೆ ಶ್ರಮ ಹಾಕಿ ಗೆಲುವು ದಕ್ಕುವಂತೆ ಮಾಡಿದ್ದರು. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವೇಳೆ ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ಗೆ ಮಣೆ ಹಾಕಿದ್ದು, ಸಚಿನ್ ಪೈಲಟ್ಗೆ ನುಂಗಲಾರದ ತುತ್ತಾಗಿತ್ತು. ಆ ಬಳಿಕ ಮಧ್ಯಪ್ರದೇಶದಂತೆ ರಾಜಸ್ಥಾನ ವಿಚಾರದಲ್ಲೂ ಮಧ್ಯಪ್ರವೇಶ ಮಾಡಿದ್ದ ರಾಹುಲ್ ಗಾಂಧಿ ಆಪ್ತರಿಬ್ಬರನ್ನೂ ಸಮಾಧಾನ ಮಾಡಿ ಹಿರಿಯ ನಾಯಕರು ಮುಖ್ಯಮಂತ್ರಿ ಆಗಲು ಸಹಕರಿಸಿದ್ರು. ಆ ಬಳಿಕ ಕಾಂಗ್ರೆಸ್ನಲ್ಲಿ ಕೇವಲ ಹಿರಿಯರ ಆಣತೆಯಂತೆ ಎಲ್ಲವೂ ನಡೆಯುತ್ತಿದ್ದು, ಯುವ ನಾಯಕರ ಮಾತಿಗೆ ಮನ್ನಣೆ ಇಲ್ಲದಂತಾಯಿತು ಎನ್ನುವ ಆರೋಪವಿದೆ. ಸ್ವತಃ ರಾಹುಲ್ ಗಾಂಧಿ ಸಹ ಚುನಾವಣೆ ವೇಳೆಯಲ್ಲಿ ಬಿಟ್ಟರೆ ಬೇರೆ ಸಮಯದಲ್ಲಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದ್ದು, ಇಂದಿನ ಸ್ಥಿತಿಗೆ ಕಾರಣ ಎನ್ನಲಾಗ್ತಿದೆ.
ಮಧ್ಯಪ್ರದೇಶದಲ್ಲಿ 47 ವರ್ಷದ ಜೋತಿರಾಧಿತ್ಯ ಸಿಂಧಿಯಾ ಎದುರು 74 ವರ್ಷದ ಕಮಲನಾಥ್ರನ್ನು ಆಯ್ಕೆ ಮಾಡಿದ್ದರು. ಅದೇ ರೀತಿ ರಾಜಸ್ಥಾನದಲ್ಲಿ 41 ವರ್ಷದ ಸಚಿನ್ ಪೈಲಟ್ ಎದುರು 67 ವರ್ಷದ ಅಶೋಕ್ ಗೆಹ್ಲೋಟ್ ಆಯ್ಕೆ ಮಾಡಿದ್ದರು. ಅದು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ. ಸಚಿನ್ ಪೈಲಟ್ ಕೂಡ ರಾಜಸ್ಥಾನದಲ್ಲಿ ಕಮಲ ಪಕ್ಷದತ್ತ ಹೊರಳುವ ಕಾಲ ಸನಿಹ ಆಗ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೇಂದ್ರ ಸರ್ಕಾರ ಸೂಕ್ತ ಭರವಸೆಗಳನ್ನು ಕೊಡುತ್ತಿದ್ದಂತೆ ರಾಜಸ್ಥಾನದಲ್ಲೂ ಕಮಲ ಪತಾಕೆ ಹಾರಲಿದೆ. ಸಂವಿಧಾನ ಬದ್ಧವೋ ವಿರುದ್ಧವೋ ಒಟ್ಟಾರೆ ರಾಜಸ್ಥಾನದಲ್ಲೂ ಪಕ್ಷದ ಆಡಳಿತ ನೆಲೆಗೊಳಿಸುವತ್ತ ಬಿಜೆಪಿ ಚಿಂತನೆ ನಡೆಸಿದೆ.