ಪ್ರಧಾನಿ ಮೋದಿಯವರ ಸರ್ಕಾರ ಕರೋನಾ ಸಂಕಷ್ಟದಿಂದ ದೇಶವನ್ನು ಪಾರು ಮಾಡುವುದಾಗಿ ಹೇಳಿ ಘೋಷಿಸಿದ ಬರೋಬ್ಬರಿ 20 ಲಕ್ಷ ಕೋಟಿ ರೂ. ಮೊತ್ತದ ಆತ್ಮನಿರ್ಭರ ಭಾರತ ಪ್ಯಾಕೇಜ್ ಯಾರು-ಯಾರಿಗೆ ತಲುಪಿದೆ ಎಂಬುದು ಇನ್ನೂ ಬಹುತೇಕ ಗುಟ್ಟಾಗಿಯೇ ಉಳಿದಿದೆ. ಈ ನಡುವೆ, ಗಡಿಯಲ್ಲಿ ಚೀನಾ ದಾಳಿಯ ಹಿನ್ನೆಲೆಯಲ್ಲಿ ನಮ್ಮ ಸೇನಾ ಬಲ ವೃದ್ಧಿಯ ಧಾವಂತದಲ್ಲಿ ಅನುಮೋದನೆ ನೀಡಿದ ಭಾರೀ ಮೊತ್ತದ ರಕ್ಷಣಾ ಖರೀದಿಯ ಕಥೆ ಕೂಡ ಭಿನ್ನವಾಗಿಲ್ಲ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.
ಸುಮಾರು 39 ಸಾವಿರ ಕೋಟಿ ರೂ. ಮೊತ್ತದ ಆ ಬೃಹತ್ ಖರೀದಿ ಪ್ರಸ್ತಾಪಕ್ಕೆ ಅನುಮೋದನೆ ನೀಡುವ ಮುನ್ನ ಅಷ್ಟು ದೊಡ್ಡ ಮೊತ್ತದ ಹಣಕಾಸು ಲಭ್ಯತೆಯ ಬಗ್ಗೆಯಾಗಲೀ, ಹೊಂದಾಣಿಕೆಯ ದಾರಿಗಳ ಬಗ್ಗೆಯಾಗಲೀ ರಕ್ಷಣಾ ಸಚಿವಾಲಯ ಯೋಚಿಸಿಯೇ ಇಲ್ಲ. ಜೊತೆಗೆ ದಿಢೀರನೇ ಅಷ್ಟು ದೊಡ್ಡ ಪ್ರಮಾಣದ ಖರೀದಿ ಅಗತ್ಯವಿದೆಯೇ? ಬೃಹತ್ ಮೊತ್ತದ ಹೊರೆ ಕಡಿತ ಮಾಡುವ ಇತರೆ ಪರ್ಯಾಯ ಮಾರ್ಗಗಳೇನು? ಹಂತಹಂತವಾಗಿ ಖರೀದಿಗೆ ಅವಕಾಶವಿದೆಯೇ? ಜೊತೆಗೆ ಬರಲಿರುವ ಚಳಿಗಾಲದ ಹಿನ್ನೆಲೆಯಲ್ಲಿ ಚೀನಾ ಆಕ್ರಮಣ ಎದುರಿಸಲು ಗಲ್ವಾನಾ ಕಣಿವೆಯಲ್ಲಿ ನಿಯೋಜಿತರಾಗಿರುವ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ರಕ್ಷಣಾ ಸಿಬ್ಬಂದಿಗೆ ತುರ್ತು ಅಗತ್ಯದ ಸಾಮಗ್ರಿ, ಸಲಕರಣೆಗಳ ಸರಬರಾಜಿಗೆ ನೀಡಬೇಕಾದ ಹಣಕಾಸು ಆದ್ಯತೆ ಏನು ಎಂಬ ಬಗ್ಗೆ ಯೋಚಿಸದೇ ಸಚಿವಾಲಯ, ಒಂದು ಬಗೆಯ ಗಲಿಬಿಲಿಯಲ್ಲಿ ಅನುಮೋದನೆ ನೀಡಿದ ಈ ಬೃಹತ್ ಖರೀದಿ ಪ್ರಸ್ತಾಪ ಪ್ರಾಯೋಗಿಕವಾಗಿ ಈಗ ಸಂಕಷ್ಟದಲ್ಲಿದೆ ಎಂದು ಸ್ವತಃ ರಕ್ಷಣಾ ಸಚಿವಾಲಯದ ಮಾಜಿ ಹಣಕಾಸು ಸಲಹೆಗಾರ ಅಮಿತ್ ಕೌಶಿಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 15ರಂದು ಚೀನಾ ಪಡೆಗಳೊಂದಿಗಿನ ಐತಿಹಾಸಿಕ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗುತ್ತಲೇ ದಿಕ್ಕು ದಿಗಿಲುಬಿದ್ದ ರಕ್ಷಣಾ ಸಚಿವಾಲಯ, ಜುಲೈ 2ರಂದು ಭಾರೀ ಮೊತ್ತದ ಈ ರಕ್ಷಣಾ ಸಾಮಗ್ರಿ ಖರೀದಿ ಪ್ರಸ್ತಾಪಕ್ಕೆ ತರಾತುರಿಯಲ್ಲಿ ಅನುಮೋದನೆ ನೀಡಿತು. ಆ ಖರೀದಿ ಪ್ರಸ್ತಾಪದಲ್ಲಿ ಅತ್ಯಾಧುನಿಕ ಕ್ಷಿಪಣಿಗಳು, ಸಾಫ್ಟ್ ವೇರ್ ರೇಡಿಯೋ, ರಷ್ಯಾದ 33 ಯುದ್ಧ ವಿಮಾನ ಸೇರಿದಂತೆ ಹಲವು ರಕ್ಷಣಾ ಸಾಮಗ್ರಿಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಪ್ರಮುಖವಾಗಿ ಅಮೆರಿಕದಿಂದ 72 ಸಾವಿರ ಸಿಗ್ 916 ರೈಫಲ್ಸ್, ಆರು ಬೋಯಿಂಗ್ ಪಿ-81 ನೆಪ್ಚೂನ್ ಕಾರ್ಯಾಚರಣೆ ವಿಮಾನ, ಆರು ಪ್ರಿಡೇಟರ್ ಬಿ ಶಸ್ತ್ರಸಜ್ಜಿತ ಡ್ರೋನ್, 200 ಸ್ಪೈಕ್ ಟ್ಯಾಂಕರ್ ಪ್ರತಿರೋಧಕ ಕ್ಷಿಪಣಿ ಮತ್ತು 20 ಕ್ಷಿಪಣಿ ಲಾಂಚರ್, ಹೆರಾನ್ ಯುಎವಿ ಸೇರಿದಂತೆ ಬಹುತೇಕ ಅಮೆರಿಕ ಮತ್ತು ಇಸ್ರೇಲಿನಿಂದ ಹಲವು ಬಗೆಯ ಸೇನಾ ಸಲಕರಣೆಗಳ ಖರೀದಿ ಪ್ರಸ್ತಾಪ ಅದು. ಹಾಗೇ ದಶಕಗಳ ಕಾಲ ನೆನಗುದಿಗೆ ಬಿದ್ದಿದ್ದ, ಲಡಾಖ್ ನಂತಹ ಅತಿ ಕಡಿದಾದ ಪ್ರದೇಶದಲ್ಲಿ ಬಳಸಬಹುದಾದ ಲಘು ಟ್ಯಾಂಕರ್ ಖರೀದಿಗೂ ಅನುಮೋದನೆ ನೀಡಲಾಗಿತ್ತು.
ಒಂದು ಕಡೆ ಚೀನಾ ಆಕ್ರಮಣ, ಸತತ ಮಾತುಕತೆಯ ಪ್ರಯತ್ನಗಳ ಬಳಿಕವೂ ಗಡಿಯಿಂದ ಹಿಂತೆಗೆಯದ ಅದರ ಮೊಂಡುತನ, ಮತ್ತೊಂದು ಕಡೆ ಪಾಕಿಸ್ತಾನದ ಪ್ರೇರಿತ ನುಸುಳುಕೋರರ ಉಪಟಳ, ಪಾಕಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್ ಸೇರಿದಂತೆ ದೇಶದ ದಶದಿಕ್ಕುಗಳ ರಾಷ್ಟ್ರಗಳೊಂದಿಗೆ ಮಿಲಿಟರಿ ಸಂಬಂಧ ವಿಸ್ತರಿಸಿಕೊಂಡು ಸುತ್ತುವರಿಯುತ್ತಿರುವ ಚೀನಾದ ದೂರಗಾಮಿ ವ್ಯೂಹಾತ್ಮಕ ತಂತ್ರಗಾರಿಕೆಗಳ ನಡುವೆ ನಮ್ಮ ಸೇನಾ ಪಡೆಗಳನ್ನು ಸದೃಢಗೊಳಿಸುವ, ಬಲಪಡಿಸುವ ಅನಿವಾರ್ಯತೆ ತಲೆದೋರಿದೆ ಎಂಬುದು ನಿಜ. ಆ ವಾಸ್ತವಾಂಶವನ್ನು ಯಾರೂ ತಳ್ಳಿಹಾಕಲಾಗದು. ಆದರೆ, ಹೀಗೆ ದಿಗಿಲುಬಿದ್ದು ಸಾವಿರಾರು ಕೋಟಿ ರೂ. ಮೊತ್ತದ ಖರೀದಿಗೆ ಅನುಮೋದನೆ ನೀಡುವ ಮುನ್ನ ರಕ್ಷಣಾ ಸಚಿವಾಲಯ ಹಣಕಾಸು ಯೋಜನೆಯ ಬಗ್ಗೆ ಚಿಂತಿಸಿತ್ತೆ ಎಂಬುದು ಈಗ ಅಮಿತ್ ಕೌಶಿಶ್ ಎತ್ತಿರುವ ಪ್ರಶ್ನೆ.
13ನೇ ಪಂಚವಾರ್ಷಿಕ ಯೋಜನೆ(2017-22) ಅವಧಿಯಲ್ಲಿ ರಕ್ಷಣಾ ವಲಯಕ್ಕೆ 26.85 ಟ್ರಿಲಿಯನ್ ರೂಪಾಯಿ(26.85 ಲಕ್ಷ ಕೋಟಿ) ಅಂದಾಜು ಅನುದಾನ ನಿಗದಿ ಮಾಡಿತ್ತು. ಆದರೆ, ಅದು ವಾಸ್ತವವಾಗಿ ಹಣಕಾಸು ಸಚಿವಾಲಯದ ಲೆಕ್ಕಾಚಾರಗಳಿಗೆ ತಾಳೆಯಾಗಿರಲಿಲ್ಲ. ಆ ಹಿಂದಿನ 12 ಮತ್ತು 11ನೇ ಪಂಚವಾರ್ಷಿಕ ಯೋಜನೆಗಳ ವಿಷಯದಲ್ಲಿಯೂ, ರಕ್ಷಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಅಂದಾಜು ಅನುದಾನ ನಿಗದಿಯೂ, ವಾಸ್ತವವಾಗಿ ಲಭ್ಯವಿರುವ ಅನುದಾನಕ್ಕೂ ಇದ್ದ ಈ ಅಜಗಜಾಂತರ ವ್ಯತ್ಯಾಸದ ಕಾರಣದಿಂದಾಗಿಯೇ ರಕ್ಷಣಾ ಖರೀದಿಗೆ ಸಂಬಂಧಿಸಿದ ಪ್ರಸ್ತಾಪಗಳು ದಶಕಗಳ ಕಾಲ ನೆನಗುದಿಗೆ ಬೀಳುತ್ತಿದ್ದವು. ಅಂತಹ ವಿಳಂಬ ಮತ್ತು ಅದರಿಂದಾಗಿ ರಕ್ಷಣಾ ಪಡೆಗಳ ಮೇಲೆ ಆಗುತ್ತಿದ್ದ ವ್ಯತಿರಿಕ್ತ ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಮೋದಿಯವರ ಸರ್ಕಾರ 2018ರಲ್ಲಿ ರಕ್ಷಣಾ ಯೋಜನಾ ಸಮಿತಿ(ಡಿಪಿಸಿ) ರಚಿಸಿ, ಮುಂದಿನ 15 ವರ್ಷಗಳ ವರೆಗೆ ಭಾರತೀಯ ಸೇನಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಯೋಜನೆ ರೂಪಿಸಲು ಸೂಚಿಸಿತ್ತು.
ರಕ್ಷಣಾ ತಂತ್ರಗಾರಿಕೆಗೆ ಪೂರಕ ಕಾರ್ಯಯೋಜನೆಯ ಜೊತೆಗೆ ಸೇನಾ ಅಭಿವೃದ್ಧಿ ಯೋಜನೆಯನ್ನೂ ರೂಪಿಸುವ ಹೊಣೆಗಾರಿಕೆಯನ್ನು ಡಿಪಿಸಿಗೆ ವಹಿಸಲಾಗಿತ್ತು. ಜೊತೆಗೆ ದೇಶೀಯವಾಗಿ ರಕ್ಷಣಾ ಉತ್ಪಾದನೆ ಉತ್ತೇಜಿಸಲು ಕೂಡ ಸೂಕ್ತ ಕಾರ್ಯಯೋಜನೆ ತಯಾರಿಸುವ ಹೊಣೆ ಕೂಡ ಅದರದ್ದಾಗಿತ್ತು. ಆದರೆ, ತನ್ನ ಅಧೀನದಲ್ಲಿ ಕಾರ್ಯನಿರ್ವಹಿಸು ನಾಲ್ಕು ಉಪಸಮಿತಿಗಳನ್ನು ರಚಿಸುವಲ್ಲಿ ತೋರಿದ ತರಾತುರಿಯನ್ನು ಆ ಡಿಪಿಸಿ ಮುಂದಿನ ಕಾರ್ಯಯೋಜನೆಯ ವಿಷಯದಲ್ಲಿ ತೋರಲಿಲ್ಲ ಎಂಬುದು ವಿಷಾದಕರ ಎಂದು ಕೌಶಿಶ್, ‘ದ ವೈರ್’ ಸುದ್ದಿತಾಣದಲ್ಲಿ ಪ್ರಕಟವಾಗಿರುವ ತಮ್ಮ ವಿಶ್ಲೇಷಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನೇತೃತ್ವದ ಡಿಪಿಸಿಯಲ್ಲಿ, ಮೂರೂ ಪಡೆಗಳ ಮುಖ್ಯಸ್ಥರು, ರಕ್ಷಣಾ, ವಿದೇಶಾಂಗ ಇಲಾಖೆ ಕಾರ್ಯದರ್ಶಿಗಳು ಸದಸ್ಯರಾಗಿದ್ದು, ಸಂಯುಕ್ತ ಸೇನಾ ಪಡೆಗಳ ಮುಖ್ಯಸ್ಥರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ಅಂತಹ ಉನ್ನತ ವ್ಯಕ್ತಿಗಳ ಆ ಸಮಿತಿ, ದೇಶದ ರಕ್ಷಣಾ ಯೋಜನೆಯ ಎಲ್ಲಾ ಲೋಪಗಳಿಗೆ ಒಂದು ಪರಿಹಾರ ಎಂದೇ ಆಗ ಭಾವಿಸಲಾಗಿತ್ತು. ಆದರೆ, ವಾಸ್ತವದಲ್ಲಿ ಆದದ್ದೇ ಬೇರೆ ಎಂಬುದಕ್ಕೆ ಕಳೆದ ಜುಲೈನ ಭಾರೀ ರಕ್ಷಣಾ ಖರೀದಿ ಪ್ರಸ್ತಾಪಕ್ಕೆ ಯಾವುದೇ ಸ್ಪಷ್ಟ ಯೋಜನೆ ಇಲ್ಲದೆ ಅನುಮೋದನೆ ನೀಡಿದ ಕ್ರಮವೇ ನಿದರ್ಶನ.
ರಚನೆಯಾಗಿ ಎರಡು ವರ್ಷಗಳ ಅವಧಿಯಲ್ಲಿ ಡಿಸಿಪಿ, ಉಪಸಮಿತಿಗಳ ರಚನೆ ಹೊರತುಪಡಿಸಿ ಇನ್ನಾವುದೇ ಮಹತ್ತರ ಕೆಲಸ ಮಾಡಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ 1962ರ ಚೀನಾ ಯುದ್ಧ, 1999ರ ಕಾರ್ಗಿಲ್ ಸಮರದ ಹೊತ್ತಿನಲ್ಲಿ ಭಾರತದ ಸೇನೆ ಎದುರಿಸಿದಂತಹದ್ದೇ ಸುಸಜ್ಜಿತ ಶಸ್ತ್ರಾಸ್ತ್ರ ಮತ್ತು ಸೇನಾ ಸಾಮಗ್ರಿ ಕೊರತೆಯಂತಹ ಬಿಕ್ಕಟ್ಟಿನ ಇತಿಹಾಸ ಮುರಕಳಿಸುವ ಸಾಧ್ಯತೆ ಹೆಚ್ಚಿದೆ. ಇತಿಹಾಸದ ತಪ್ಪುಗಳಿಂದ, ಯಡವಟ್ಟುಗಳಿಂದ ನಾವು ಪಾಠ ಕಲಿಯುವ ಹಾಗೆ ಕಾಣಿಸುತ್ತಿಲ್ಲ ಎಂದೂ ಕೌಶಿಶ್ ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಸೇನಾಪಡೆಗಳ ಬಗ್ಗೆ, ಸೇನಾ ಸಾಮರ್ಥ್ಯದ ಬಗ್ಗೆ ವೀರಾವೇಶದ ಹೇಳಿಕೆಗಳು, ಸೇನಾ ಸಬಲೀಕರಣಕ್ಕೆ ಹಣಕಾಸಿನ ಕೊರತೆ ಇಲ್ಲ ಎಂಬ ಬಿಡುಬೀಸಿನ ಹೇಳಿಕೆಗಳು ಕೇವಲ ಎದೆತಟ್ಟಿಕೊಳ್ಳುವ ವರಸೆಗಳಾಗಿ ಕಾಣುತ್ತಿವೆಯೇ ಹೊರತು, ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಹಾಗಾಗಿ ಆಡಳಿತ ವ್ಯವಸ್ಥೆ ಬಿಂಬಿಸುತ್ತಿರುವುದಕ್ಕೂ, ವಾಸ್ತವ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಸೇನಾ ಪಡೆಗಳ ಅಗತ್ಯಕ್ಕೂ, ವಾಸ್ತವವಾಗಿ ಒದಗಿಸುತ್ತಿರುವ ಸೌಕರ್ಯ, ಹಣಕಾಸಿಗೂ ತಾಳಮೇಳವಿಲ್ಲದ ಸ್ಥಿತಿ ಇದೆ. ಕಳೆದ ಒಂದು ದಶಕದ ಅವಧಿಯಲ್ಲಿ ನಿಜವಾಗಿಯೂ ಅಗತ್ಯ ಹಣಕಾಸು ಬೆಂಬಲಕ್ಕೂ, ಸರ್ಕಾರ ಒದಗಿಸುತ್ತಿರುವ ಹಣಕಾಸಿಗೂ ಇರುವ ವ್ಯತ್ಯಾಸ 23 ಸಾವಿರ ಕೋಟಿ ರೂಗಳಿಂದ 1.03 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿದೆ.
ಇದೀಗ ದೇಶ ಕರೋನಾ ಸಂಕಷ್ಟದಲ್ಲಿರುವಾಗ, ಇಡೀ ಆರ್ಥಿಕತೆ ನಕಾರಾತ್ಮಕ ಬೆಳವಣಿಗೆಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿರುವಾಗ, ಜಿಎಸ್ ಟಿ ಸಂಗ್ರಹ ಕೂಡ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿರುವಾಗ, ಸದ್ಯಕ್ಕೆ ದೇಶದ ಹಣಕಾಸು ಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ ಎಂದು ಸಮೀಕ್ಷೆಗಳು ಹೇಳುತ್ತಿರುವಾಗ, ದೇಶದ ಸೇನಾಪಡೆಗಳ ತುರ್ತು ಅಗತ್ಯಗಳಿಗೂ ಹಣಕಾಸಿನ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿದೆ ಎಂಬುದು ಅನುಮಾನಾಸ್ಪದ. ಪರಿಸ್ಥಿತಿ ಹೀಗಿರುವಾಗ, ಭಾರೀ ಮೊತ್ತದ ಖರೀದಿಗೆ ಪ್ರಸ್ತಾಪ ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬುದು ಪ್ರಶ್ನಾರ್ಹ ಎಂದು ಅವರು ವಿಶ್ಲೇಷಿಸಿದ್ದಾರೆ.
ಹಾಗಾಗಿ, 20 ಲಕ್ಷ ಕೋಟಿ ರೂಪಾಯಿ ಆತ್ಮ ನಿರ್ಭರ ಪ್ಯಾಕೇಜಿನ ದಾರಿಯಲ್ಲೇ ರಕ್ಷಣಾ ಖರೀದಿ ಕೂಡ ಸಾಗುತ್ತಿದ್ದು, ಬಿಜೆಪಿ ಸರ್ಕಾರ ಹೇಳುವ ಮಾತಿಗೂ, ವಾಸ್ತವದಲ್ಲಿ ಮಾಡುವ ಕಾರ್ಯಕ್ಕೂ ಇರುವ ವ್ಯತಿರಿಕ್ತ ಸಂಬಂಧದ ಸರಣಿಗೆ ಮತ್ತೊಂದು ಸೇರ್ಪಡೆಯಾಗಿದೆ!