ಉತ್ತರ ಪ್ರದೇಶದ ಹತ್ರಾಸ್ ಎಂಬ ಊರಿನಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಬಳಿಕ ಮರಣಾಂತಿಕ ಹಲ್ಲೆ ಮಾಡಲಾಗಿದೆ. ಯುವತಿಯ ನಾಲಗೆ ಕತ್ತರಿಸಲಾಗಿದೆ. 15 ದಿನ ಸಾವು-ಬದುಕಿನ ನಡುವೆ ಹೋರಾಡಿದ ಯುವತಿ ಕಡೆಗೂ ಬದುಕುಳಿಯಲಿಲ್ಲ. ಸತ್ತ ಮೇಲೆ ಆಕೆಯ ಶವವನ್ನು ಕುಟುಂಬ ವರ್ಗದವರಿಗೆ ನೀಡದೆ ಪೊಲೀಸರು ಸ್ವತಃ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದಾದ ಮರುದಿನವೇ ಇದೇ ಉತ್ತರ ಪ್ರದೇಶದ ಬಲರಾಂಪುರದಲ್ಲಿ ಮತ್ತೊಂದು ದಲಿತ ಯುವತಿ ಮೇಲೆ ಅತ್ಯಾಚಾರ ಮಾಡಲಾಗಿದೆ. ಆಕೆಯ ಮೇಲೂ ಅತ್ಯಾಚಾರದ ಬಳಿಕ ಹಲ್ಲೆ ಮಾಡಲಾಗಿದೆ. ಚಿಕಿತ್ಸೆಯೂ ಆಗಿದೆ. ಆಕೆ ಕೂಡ ಬದುಕುಳಿದಿಲ್ಲ. ಎರಡೂ ಪ್ರಕರಣದಲ್ಲಿ ಅತ್ಯಾಚಾರ, ಹಲ್ಲೆ ಮತ್ತು ಸಾವಿಗೆ ಕಾರಣರಾದವರು ‘ಮೇಲ್ವರ್ಗ’ದವರು. ಅದರಲ್ಲೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಠಾಕೂರ್ ಜನಾಂಗದವರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರೋಪಿ ಸ್ಥಾನದಲ್ಲಿರುವವರು ಠಾಕೂರ್ ಜಾತಿಯವರಾಗಿರುವ ಕಾರಣಕ್ಕೆ, ಯೋಗಿ ಸರ್ಕಾರದಲ್ಲಿ ಠಾಕೂರ್ ಗಳ ದರ್ಬಾರ್ ಹೆಚ್ಚಾಗಿರುವ ಕಾರಣಕ್ಕೆ ಈ ಎರಡೂ ಕಹಿ ಘಟನೆಗಳನ್ನು ಉತ್ತರ ಪ್ರದೇಶದ ಸರ್ಕಾರ ಮತ್ತು ಪೊಲೀಸರು ನಿಭಾಯಿಸಿದ ರೀತಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅವುಗಳನ್ನು ವಿಮರ್ಶಿಸುವ ಮೊದಲು ಒಂದು ಹಿನ್ನೋಟ…
ಝೀ ಕನ್ನಡ ವಾಹಿನಿಯಲ್ಲಿ ‘ಮಹಾನಾಯಕ’ ಧಾರವಾಹಿ ಪ್ರಸಾರವಾಗುತ್ತಿದೆ. ಬಹಳಷ್ಟು ಖ್ಯಾತಿಯನ್ನೂ ಗಳಿಸಿದೆ. ಮಹಾನಾಯಕ ಧಾರವಾಹಿಯ ಇತ್ತೀಚಿನ ಕಂತೊಂದರಲ್ಲಿ ಭೀಮ ರಾವ್ (ಅಂಬೇಡ್ಕರ್) ಮತ್ತು ಅವರ ತಂದೆ ರಾಮ್ ಜಿ ಸತ್ಪಾಲ್ ಇರುವ ಊರಿನಲ್ಲಿ ಓರ್ವ ಮಹಿಳೆಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗುತ್ತದೆ. ಆನಂತರದಲ್ಲಿ ಆಕೆಯನ್ನು ಆಕೆಯ ಪತಿಯೂ ಸೇರಿದಂತೆ ಊರಿನ ಗ್ರಾಮಸ್ಥರೆಲ್ಲಾ ಸೇರಿ ಸಾಯಿಸುತ್ತಾರೆ. ಹೊಡೆದು ಸಾಯಿಸಿದವರೇ ಮಹಿಳೆಗೆ ಆಶ್ರಯ ನೀಡಿದ್ದ ರಾಮ್ ಜಿ ಸತ್ಪಾಲ್ ವಿರುದ್ಧ ದೂರು ನೀಡುತ್ತಾರೆ. ಪ್ರಕರಣ ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲುತ್ತದೆ. ಆದರೆ ವಾದ ಮಾಡಲು ಒಪ್ಪಿದ್ದ ಬ್ಯಾರಿಸ್ಟರ್ (ಆಗಿನ ವಕೀಲರು) ನಿರ್ಣಾಯಕ ಹಂತದಲ್ಲಿ ಕೈ ಕೊಡುತ್ತಾರೆ. ರಾಮ್ ಜಿ ಸತ್ಪಾಲ್ ಗೆ ಜೈಲೇ ಗಟ್ಟಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
Also Read: ಅಂಬೇಡ್ಕರ್ ಜೀವನಾಧಾರಿತ ಧಾರವಾಹಿಗೆ ಬೆದರಿಕೆ: ʼಮಹಾನಾಯಕನʼ ಪರ ನಿಂತ ನೆಟ್ಟಿಗರು
ಆಗ ಬಾಲಕ ಭೀಮ ರಾವ್ ಬ್ಯಾರಿಸ್ಟರ್ ಬಳಿ ಬಂದು ತಂದೆ ರಾಮ್ ಜಿ ಸತ್ಪಾಲ್ ಹೇಳಿಕೊಟ್ಟಿದ್ದ ಕನ್ನಡಿ ಕತೆಯೊಂದನ್ನು ವಿವರಿಸುತ್ತಾನೆ. ರಾಮ್ ಜಿ ಸತ್ಪಾಲ್ ಪ್ರತಿದಿನ ಕೆಲಸಕ್ಕೆ ಹೊರಡುವ ಮುನ್ನ ಕನ್ನಡಿ ನೋಡಿಕೊಳ್ಳುತ್ತಿರುತ್ತಾರೆ. ಇದನ್ನು ಗಮನಿಸಿದ ಭೀಮ ರಾವ್ ‘ಪ್ರತಿದಿನ ಕನ್ನಡಿ ನೋಡಿಕೊಳ್ಳುವುದೇಕೆ?’ ಎಂದು ಪ್ರಶ್ನಿಸುತ್ತಾನೆ. ‘ಪ್ರತಿದಿನವೂ ನಾನು ನನ್ನ ಮುಖವನ್ನು ಆತ್ಮವಿಶ್ವಾಸದಿಂದ, ಹೆಮ್ಮೆಯಿಂದ ನೋಡಿಕೊಳ್ಳಲು ಸಾಧ್ಯವೇ? ನಾನು ಹಾಗೆ ಬದುಕುತ್ತಿದ್ದೆನೆಯೇ? ಎಂಬುದನ್ನು ಪರೀಕ್ಷಿಸಿಕೊಳ್ಳಲು ಈ ರೀತಿ ಮಾಡುತ್ತೇನೆ’ ಎನ್ನುತ್ತಾರೆ. ಈ ಘಟನೆಯನ್ನು ಬ್ಯಾರಿಸ್ಟ್ರೇಟ್ ಗೆ ವಿವರಿಸುವ ಬಾಲಕ ಭೀಮ ರಾವ್ ‘ನನ್ನ ಮುಖವನ್ನು ನಾನು ನೋಡಿಕೊಳ್ಳುವಂತೆ ಬದುಕುತ್ತೇನೆ’ ಎಂದು ಹೇಳಿ ನಿರ್ಗಮಿಸುತ್ತಾನೆ.
ಭೀಮನ ಮಾರ್ಮಿಕ ಮಾತುಗಳಿಂದ ಮನಪರಿವರ್ತನೆಯಾಗುವ ವಕೀಲರು ಬಂದು ರಾಮ್ ಜಿ ಸತ್ಪಾಲ್ ಪರ ವಾದ ಮಾಡುತ್ತಾರೆ. ವಾದದ ವೇಳೆ ಸತ್ತ ಮಹಿಳೆಯ ಗಂಡನನ್ನು ‘ನಿಮ್ಮ ಹೆಂಡತಿಯನ್ನು ಸಾಯಿಸಿದ್ದೇಕೆ?’ ಎಂದು ಪ್ರಶ್ನಿಸುತ್ತಾರೆ. ಆತ ‘ಧರ್ಮ ರಕ್ಷಣೆಗಾಗಿ’ ಎನ್ನುತ್ತಾನೆ. ವಕೀಲರು ‘ಧರ್ಮದ ಪ್ರಕಾರ ಸತ್ತ ಮೇಲೆಯೂ ಆಕೆ ನಿಮ್ಮ ಹೆಂಡತಿಯೇ ಹೌದಲ್ಲವಾ? ಹಾಗಿದ್ದರೆ ಆಕೆ ಯಾವುದೇ ರೀತಿಯಲ್ಲಿ ಸತ್ತಿದ್ದರೂ ಆಕೆಯನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಬೇಕಿದ್ದು ಧರ್ಮ ರಕ್ಷಣೆಯೇ ಅಲ್ಲವೇ? ಎಂದು ಪ್ರಶ್ನಿಸುತ್ತಾರೆ. ಪತಿ ನಿರುತ್ತರನಾಗುತ್ತಾನೆ. ಆನಂತರ ಮಹಿಳೆ ಸತ್ತ ಬಗ್ಗೆ ರಾಮ್ ಜಿ ಸತ್ಪಾಲ್ ಕೊಟ್ಟ ದೂರನ್ನು ತೆಗೆದುಕೊಳ್ಳಲಿಲ್ಲ ಏಕೆ? ಎಂದು ಪೊಲೀಸರನ್ನು ಪ್ರಶ್ನಿಸಲಾಗುತ್ತದೆ. ಪೊಲೀಸರು ಕೂಡ ನಿರುತ್ತರರಾಗುತ್ತಾರೆ. ವ್ಯಾಜ್ಯ ರಾಮ್ ಜಿ ಸತ್ಪಾಲ್ ಪರ ಆಗುತ್ತದೆ. ಈಗ ಹಿನ್ನೋಟದಿಂದ ವಾಸ್ತವಕ್ಕೆ ಮರಳೋಣ….
Also Read: ಮೇಲ್ಜಾತಿಯವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಹುಡುಗಿ ಮೃತ್ಯು
ಈ ಘಟನೆಯಾಗಿ ಶತಮಾನ ಉರುಳಿದರೂ ಉತ್ತರ ಪ್ರದೇಶ ಬದಲಾಗಿಲ್ಲ. ಅದೂ ಧರ್ಮ ರಕ್ಷಣೆಯನ್ನು ಗುತ್ತಿಗೆ ಪಡೆದವರಂತೆ ಸಂತನ ವೇಷ ತೊಟ್ಟವರು ಮುಖ್ಯಮಂತ್ರಿ ಆಗಿದ್ದಾಗಲೂ ಬದಲಾಗಿಲ್ಲ. ಹೊರತಾಗಿ ಇದೇ ಸಂತನ ಜಾತಿಯವರು ಅತ್ಯಾಚಾರ ಮಾಡಿದ್ದಾರೆ. ಹಲ್ಲೆ ಮಾಡಿದ್ದಾರೆ. ಆ ಮೂಲಕ ಸಾವಿಗೂ ಕಾರಣರಾಗಿದ್ದಾರೆ. ಆರೋಪಿಗಳು ಸಂತನ ಜಾತಿಗೆ ಸೇರಿರುವ ಕಾರಣಕ್ಕಾಗಿಯೇ ಘಟನೆಯನ್ನು ಮುಚ್ಚಿಹಾಕಲಾಗುತ್ತಿದೆ. ಅನಾಥ ಶವದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂಬ ಮಾತು ಈಗ ಗಟ್ಟಿ ದನಿಯಲ್ಲಿ ಕೇಳಿಬರುತ್ತಿದೆ.
ಧರ್ಮ ರಕ್ಷಕ, ಸಂತ ಸ್ವರೂಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಮಹಾನಾಯಕ ಧಾರವಾಹಿಯ ಬ್ಯಾರಿಸ್ಟರ್ ಸತ್ತ ಮಹಿಳೆಯ ಪತಿಗೆ ಕೇಳುವ ಪ್ರಶ್ನೆಗಳನ್ನು ಈಗ ನಿಮಗೂ ಕೇಳಬೇಕಾಗುತ್ತದೆ. ಅತ್ಯಾಚಾರಕ್ಕೆ ಒಳಗಾಗಿ, ಹಲ್ಲೆಗೆ ಒಳಗಾಗಿ ಸತ್ತ ಯುವತಿ ಹಿಂದೂ ಧರ್ಮದವಳಲ್ಲವಾ? ಆಕೆಯ ಅಂತ್ಯ ಸಂಸ್ಕಾರವನ್ನು ಧರ್ಮದ ಪ್ರಕಾರ ಮಾಡಬೇಕಿತ್ತಲ್ಲವೇ? ಯುವತಿಯ ತಾಯಿ ಕಡೆಯದಾಗಿ ಪ್ರಾರ್ಥಿಸಿಕೊಂಡಿದ್ದು ಅದನ್ನೇ ಅಲ್ಲವೇ? ತಮ್ಮ ಮಗಳ ಶವವನ್ನು ತಮಗೆ ನೀಡಬೇಕಿತ್ತು, ತಾವು ತಮ್ಮ ಧರ್ಮದ ಪ್ರಕಾರ ಅಂತ್ಯ ಸಂಸ್ಕಾರ ಮಾಡಬೇಕಿತ್ತು ಎಂದಲ್ಲವೇ? ಹೇಳಿಬಿಡಿ, ದಲಿತರು ಹಿಂದುಗಳಲ್ಲೇ? ಅವರು ಧಾರ್ಮಿಕವಾಗಿ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಅರ್ಹರಲ್ಲವೇ? ನಿಮ್ಮದೇ ಜನಾಂಗದ ಪುಂಡರು ನಡೆಸಿದ ಪಾಪಕೃತ್ಯ ಆಗಿರುವುದಕ್ಕೆ ತಾನೇ ಈ ಮೌನ? ಈ ಎರಡೂ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನೇ ಇರಬಹುದು. ಆದರೆ ವಾಸ್ತವದ ಉತ್ತರ ‘ಹೌದು’ ಎನ್ನುವುದೇ ಆಗಿದೆ.
Also Read: ಹಾಥ್ರಸ್ ನಂತರ ಉತ್ತರ ಪ್ರದೇಶದಲ್ಲಿ ಮತ್ತೋರ್ವ ದಲಿತ ಯುವತಿಯ ಮೇಲೆ ಅತ್ಯಾಚಾರ
ಕಡೆಗಿನ್ನೊಂದು ಪ್ರಶ್ನೆ… ಯುವತಿ ಮೇಲೆ ಅತ್ಯಾಚಾರ ಮಾಡಿದವರು ಹಾಗೂ ಹಲ್ಲೆ ಮಾಡಿದವರು ತಾಂತ್ರಿಕವಾಗಿ ಅಪರಾಧಿಗಳು. ಆದರೆ ಆಕೆಗೆ ನ್ಯಾಯ ಒದಗಿಸದ, ಕಡೆಯ ಪಕ್ಷ ಅಂತ್ಯ ಸಂಸ್ಕಾರವನ್ನು ಸರಿಯಾಗಿ ಮಾಡದ ನೀವು, ನಿಮ್ಮ ಜಿಲ್ಲಾ ಮ್ಯಾಜಿಸ್ಟ್ರೇಟ್ (ಜಿಲ್ಲಾಧಿಕಾರಿ) ಮತ್ತು ಪೊಲೀಸರು ಧಾರ್ಮಿಕವಾಗಿ ಅಪರಾಧಿಗಳಲ್ಲವೇ? ಈಗ ಹೇಳಿ ಯೋಗಿ ಆದಿತ್ಯನಾಥ್ ಆಲಿಯಾಸ್ ಅಜಯ್ ಮೋಹನ್ ಬಿಷ್ಠ್ ಅವರೇ, ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೀವೇ ನೋಡಿಕೊಳ್ಳಬಲ್ಲಿರೆ?










