ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪಂದ್ಯಾವಳಿಯಿಂದಲೇ ಹೊರಬೀಳುವ ಆತಂಕದಲ್ಲಿದೆ. ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ದ ನಡೆದ ಪಂದ್ಯವನ್ನು ಕೂಡಾ ಕೈಚೆಲ್ಲಿ ಕುಳಿತ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‌ಕೆ ಪಡೆ ತನ್ನ ಪ್ಲೇ ಆಫ್ ಕನಸನ್ನು ಇನ್ನಷ್ಟು ಕಠಿಣವಾಗಿಸಿದೆ.
ಈ ಸೋಲಿನ ನಂತರ ಸಿಎಸ್‌ಕೆ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಆಡಿರುವ ಮಾತುಗಳಿಗೆ ಈಗ ಬಹಳಷ್ಟು ವಿರೋಧ ವ್ಯಕ್ತವಾಗುತ್ತಿದೆ. ಭಾರತ ತಂಡದ ಹಿಂದಿನ ಕಪ್ತಾನ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಧೋನಿಯವರ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜಸ್ಥಾನ ರಾಯಲ್ಸ್ ವಿರುದ್ದದ ಸೋಲು ಸಿಎಸ್‌ಕೆ ಈ ಪಂದ್ಯಾವಳಿಯ ಏಳನೇ ಸೋಲು. ಐಪಿಎಲ್ ಪ್ರಾರಂಭವಾದಾಗಿಂದ ಈವರೆಗೆ ಪ್ಲೇ ಆಫ್ ಪ್ರವೇಶ ಪಡೆಯಲು ವಿಫಲವಾಗದ ತಂಡ ಈ ಬಾರಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೇಯ ಸ್ಥಾನದಲ್ಲಿದೆ. ಸೋಲಿನ ನಂತರ ಸ್ಟಾರ್ ಸ್ಪೋರ್ಟ್‌ನೊಂದಿಗೆ ಮಾತನಾಡಿದ ಧೋನಿ ಅವರು, “ಯುವ ಕ್ರಿಕೆಟಿಗರಲ್ಲಿ ಪಂದ್ಯವನ್ನು ಗೆಲ್ಲಿಸಿಕೊಡುವ ಕಿಚ್ಚು ಇನ್ನೂ ಬಂದಿಲ್ಲ,” ಎಂದು ಹೇಳಿದ್ದರು.
ಈ ಬಾರಿಯ ಸಿಎಸ್‌ಕೆ ತಂಡದಲ್ಲಿ ಕಿರಿಯ ಆಟಗಾರರಿಗಿಂತ ಹಿರಿಯ ಆಟಗಾರರೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಆರಂಭಿಕ ಪಂದ್ಯದಿಂದ ಹಿಡಿದು ಇಲ್ಲಿಯವರೆಗೆ ಹೆಚ್ಚಾಗಿ ಹಿರಿಯ ಆಟಗಾರರೇ ತುಂಬಿಕೊಂಡಿದ್ದ ಸಿಎಸ್‌ಕೆ ತಂಡದಲ್ಲಿ ಕಿರಿಯ ಆಟಗಾರರಿಗೆ ಅಷ್ಟು ಪ್ರಾಮುಖ್ಯತೆ ಸಿಕ್ಕಿರಲಿಲ್ಲ.
Also Read: ಧೋನಿ ಮಗುವಿಗೆ ಹೇಯ ಬೆದರಿಕೆ: ನವ ಭಾರತದ ಹೊಸ ವರಸೆಯ ದರ್ಶನ!
ಈಗ ಕಿರಿಯ ಆಟಗಾರರ ಕುರಿತು ಮಾತನಾಡಿದ ಧೋನಿ ವಿರುದ್ದ ಕೆ ಶ್ರೀಕಾಂತ್ ಕಿಡಿಕಾರಿದ್ದಾರೆ. “ಧೋನಿಯವರ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅವರು ಯಾವ ಪ್ರಕ್ರಿಯೆ ಕುರಿತು ಮಾತನಾಡುತ್ತಿದ್ದಾರೆ ಅದೇ ತಪ್ಪು. ಸಿಎಸ್‌ಕೆಯು ಆಡುವ ಬಳಗವನ್ನು ಆಯ್ಕೆ ಮಾಡುವಾಗ ಎಡವಿದ್ದೇ ಇಷ್ಟು ಪಂದ್ಯಗಳನ್ನು ಕೈಚೆಲ್ಲಲು ಕಾರಣ,” ಎಂದು ಶ್ರೀಕಾಂತ್ ಹೇಳಿದ್ದಾರೆ.
ಐಪಿಎಲ್ ಆರಂಭವಾದ ವರ್ಷ ಸಿಎಸ್‌ಕೆ ತಂಡ ರಾಯಭಾರಿಯಾಗಿದ್ದ ಶ್ರೀಕಾಂತ್ ಅವರು ಜಗದೀಶನ್ ಅವರ ಉದಾಹರಣೆಯನ್ನು ನೀಡಿದ್ದು, ಜಗದೀಶನ್ ಈ ಬಾರಿಯ ಐಪಿಎಲ್‌ನಲ್ಲಿ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ 33 ರನ್ ಹೊಡೆದು ಅವರು ಗಮನ ಸೆಳೆದಿದ್ದಾರೆ. ಇನ್ನೊಂದು ಕಡೆ ಕೇದಾರ್ ಜಾಧವ್ 8 ಪಂದ್ಯಗಳಲ್ಲಿ ಕೇವಲ 62 ರನ್ ಮಾತ್ರ ಗಳಿಸಿದ್ದಾರೆ, ಎಂದು ಹೇಳಿದ್ದಾರೆ.
Also Read: ಐಪಿಎಲ್‌ನಲ್ಲಿ ಮಿಂಚುತ್ತಿರುವ ಭಾರತ ತಂಡದ ಭವಿಷ್ಯದ ವೇಗಿಗಳು
ಪೀಯೂಷ್ ಚಾವ್ಲಾ ಹಾಗೂ ಕೇದಾರ್ ಜಾಧವ್ ಅವರ ಫಿಟ್ನೆಸ್ ಕುರಿತಾಗಿಯೂ ಕುಹಕವಾಡಿರುವ ಶ್ರೀಕಾಂತ್, ಕ್ರೀಡಾಂಗಣದಲ್ಲಿ ಅಚೀಚೆ ಓಡಾಡಲು ಅವರಿಗೆ ಸ್ಕೂಟರ್‌ನ ಅಗತ್ಯವಿದೆ ಎಂದು ಹೇಳಿದ್ದಾರೆ.
“ಧೋನಿ ಏನು ಲೆಕ್ಕಾಚಾರ ಹಾಕುತ್ತಿದ್ದಾರೆಂದು ತಿಳಿದಿಲ್ಲ. ಜಗದೀಶನ್‌ರಲ್ಲಿ ಪಂದ್ಯ ಗೆಲ್ಲಿಸುವ ಕಿಡಿಯಿರಲಿಲ್ಲವೇ? ʼಸ್ಕೂಟರ್ʼ ಜಾಧವ್ ಬಳಿ ಆ ಕಿಡಿ ಇತ್ತೇ? ಧೋನಿ ಅವರ ಉತ್ತರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈಗ ಒತ್ತಡ ಇಲ್ಲದ ಕಾರಣ ಯುವ ಆಟಗಾರರಿಗೆ ಅವಕಾಶ ನೀಡುವುದಾಗಿ ಧೋನಿ ಹೇಳಿದ್ದಾರೆ. ಧೋನಿ ಕ್ರಿಕೆಟ್‌ನ ʼಜೀವಂತ ದಂತಕಥೆʼ ಆಗಿರಬಹುದು, ಆದರೆ ಅವರ ಇಂದಿನ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಶ್ರೀಕಾಂತ್ ಹೇಳಿದ್ದಾರೆ.