ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಕಳೆದ ವಾರ ಭಾರತದ ಕ್ರೆಡಿಟ್ ರೇಟಿಂಗ್ ತಗ್ಗಿಸಿದಾಗ ಷೇರುಪೇಟೆಯಲ್ಲಾಗಲೀ, ಹಣಕಾಸು ಮಾರುಕಟ್ಟೆಯಲ್ಲಾಗಲೀ ಯಾರಿಗೂ ಅಚ್ಚರಿ ಆಗಲಿಲ್ಲ. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರ ರೇಟಿಂಗ್ ಏಜೆನ್ಸಿ ನಿಲವಿನ ಪಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿ, ಭಾರತದ ಆರ್ಥಿಕಸ್ಥಿತಿ ದೃಢವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು. ಅಷ್ಟಕ್ಕೂ ಮೂಡಿ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ‘Baa2’ ಇಂದ (ಅಂದರೆ ಹೂಡಿಕೆಗೆ ಸ್ಥಿರವಾದ) ‘Baa3’ಗೆ (ಅಂದರೆ ಹೂಡಿಕೆಗೆ ಅಷ್ಟೇನೂ ಸ್ಥಿರವಲ್ಲದ) ಕಡಿತ ಮಾಡಿದಾಗ ಷೇರುಪೇಟೆಯಲ್ಲಿ ಒಂದು ದಿನದ ಮಟ್ಟಿಗೆ ಸಣ್ಣ ಏರಿಳಿತ ಹೊರತಾಗಿ ಹಣಕಾಸು ಮಾರುಕಟ್ಟೆ ಕೂಡಾ ಸ್ಪಂದಿಸಲಿಲ್ಲ.
ಅದಕ್ಕೇನು ಕಾರಣ ಗೊತ್ತೇ? ಎರಡು ವರ್ಷಗಳ ಹಿಂದೆ ಇದೇ ಜಾಗತಿಕ ರೇಟಿಂಗ್ ಏಜೆನ್ಸಿ ಮೂಡಿ ಭಾರತದ ಸಾವರಿನ್ ರೇಟಿಂಗ್ ಅನ್ನು ‘Baa3’ಯಿಂದ ‘Baa2’ಗೆ ಏರಿಸಿತ್ತು. ಆಗ ತಾನೆ ಉಪನಗದೀಕರಣದ ಆಘಾತದಿಂದ ಇಡೀ ದೇಶದ ಆರ್ಥಿಕತೆ ತತ್ತರಿಸುತ್ತಿರುವಾಗ ಮತ್ತು ತರಾತುರಿಯಲ್ಲಿ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಿಂದ ಇಡೀ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುವ ಹಂತದಲ್ಲಿರುವಾಗ ಮೂಡಿ ತನ್ನ ರೇಟಿಂಗ್ ಏರಿಸಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಬಹುತೇಕ ಆರ್ಥಿಕತಜ್ಞರು ರೇಟಿಂಗ್ ಏರಿಕೆಯ ಹಿಂದೆ ಮೋದಿ ಸರ್ಕಾರದ ‘ಸಾರ್ವಜನಿಕ ಸಂಪರ್ಕದ ಲಾಬಿ’ ಇರಬಹುದೆಂದು ಶಂಕಿಸಿದ್ದರು. ರೇಟಿಂಗ್ ಬಗ್ಗೆ ಸಾರ್ವಜನಿಕವಾಗಿ ತೀವ್ರವಾಗಿ ಟೀಕೆ ವ್ಯಕ್ತವಾಗಿತ್ತು. ನಿಜವಾದ ಅರ್ಥದಲ್ಲಿ ರೇಟಿಂಗ್ ಏಜೆನ್ಸಿ ಮೂಡಿ ಆಗ ನಗೆಪಾಟಲೀಗೆ ಈಡಾಗಿತ್ತು.
ಸತತ ಟೀಕೆ ಎದುರಿಸುತ್ತಿದ್ದ ಮೋದಿ ಸರ್ಕಾರ ಮಾತ್ರ ಮೂಡಿ ರೇಟಿಂಗ್ ಏರಿಕೆಯನ್ನು ತನ್ನ ಸುರಕ್ಷ ಕವಚವಾಗಿ ಬಳಸಿಕೊಂಡು ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಬಿಂಬಿಸಲು ವಿಫಲಯ ಯತ್ನ ನಡೆಸಿತ್ತು. ಆದರೆ, ನಂತರದಲ್ಲಿ ನಿಯತಕಾಲಿಕವಾಗಿ ಬಂದ ಅಂಕಿಅಂಶಗಳೆಲ್ಲವೂ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವುದನ್ನು ದೃಢಪಡಿಸುತ್ತಲೇ ಬಂದವು. ಅದರ ಕ್ಲೈಮ್ಯಾಕ್ಸ್ ಏನಪ್ಪಾ ಅಂದರೆ, ಇದುವರೆಗೂ ಭಾರತದ ಆರ್ಥಿಕತೆ ಚೇತೋಹಾರಿಯಾಗಿದೆ ಎಂದೇ ವಾದಿಸುತ್ತಾ ಬಂದಿದ್ದ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮತ್ತು ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಅವರಿಬ್ಬರೂ ಸಹ ದೇಶದ ಆರ್ಥಿಕತೆ ಕುಂಟುತ್ತಾಸಾಗಿದೆ ಎಂದು ಹೇಳಿದ್ದಾರೆ. ಆ ಮೂಲಕ ನರೇಂದ್ರಮೋದಿ ನೇತೃತ್ವದ ಎನ್ ಡಿಎ-2 ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಕುಸಿಯುತ್ತಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.
ಎರಡು ವರ್ಷಗಳ ಹಿಂದೆ ಮೂಡಿ ರೇಟಿಂಗ್ ಏರಿಕೆ ಮಾಡಿದ್ದಾಗ ನೀಡಿದ್ದ ಕಾರಣಗಳೆಂದರೆ- ಸರಕು ಮತ್ತು ಸೇವಾ ತೆರಿಗೆಯಂತಹ ಸುಧಾರಣೆಗಳು, ಅಪನಗದೀಕರಣ, ಹಣದುಬ್ಬರ ಮಿತಿ ಗುರಿಯಾಧಾರಿತ ಆರ್ಥಿಕ ನೀತಿ, ದಿವಾಳಿ ಸಂಹಿತೆ, ಬ್ಯಾಂಕುಗಳಿಗೆ ಬಂಡವಾಳ ಮರುಪೂರಣ, ಆಧಾರ್ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸಹಾಯಧನ ಪಾವತಿ ಇತ್ಯಾದಿಗಳನ್ನು ಪಟ್ಟಿ ಮಾಡಿತ್ತು. ಮೂಡಿ ರೇಟಿಂಗ್ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ಆಗ ಕೇಳಿ ಬರಲು ಇದ್ದ ಪ್ರಮುಖ ಕಾರಣ ಎಂದರೆ, ಅಪನಗದೀಕರಣವನ್ನು ಮೂಡಿ ರೇಟಿಂಗ್ ಏಜೆನ್ಸಿ ಅತಿದೊಡ್ಡ ಆರ್ಥಿಕ ಸುಧಾರಣೆ ಎಂದೂ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಅತಿದೊಡ್ಡ ತೆರಿಗೆ ಸುಧಾರಣಾ ನೀತಿ ಎಂದು ಉಲ್ಲೇಖಿಸಿತ್ತು. ಆದರೆ, ಮೂಡಿ ರೇಟಿಂಗ್ ಏರಿಸುವ ಹೊತ್ತಿಗೆ ಇಡೀ ದೇಶದ ಆರ್ಥಿಕತೆ ಈ ಉಭಯ ‘ಆರ್ಥಿಕ ಸುಧಾರಣೆ’ಗಳಿಂದಾಗಿಯೇ ಸಂಕಷ್ಟವನ್ನು ಎದುರಿಸಲಾರಂಭಿಸಿತ್ತು. ಅಂದರೆ ಮೂಡಿ ವಾಸ್ತವಿಕ ಸ್ಥಿತಿಯನ್ನು ಅರಿಯವಲ್ಲಿ ವಿಫಲವಾಗಿತ್ತು. ದುರಾದೃಷ್ಟವಶಾತ್ ಮೂಡಿ ರೇಟಿಂಗ್ ಏರಿಸಿದ ನಂತರ ಹಲವು ರೇಟಿಂಗ್ ಏಜೆನ್ಸಿಗಳು ವಿವಿಧ ಕಾರಣಗಳಿಗಾಗಿ ವ್ಯಾಪಕ ಟೀಕೆಗೆ ಒಳಗಾದವು. ದೇಶೀಯ ಕ್ರಿಸಿಲ್, ಕೇರ್ ಮತ್ತು ಇಕ್ರಾ ರೇಟಿಂಗ್ ಏಜೆನ್ಸಿಗಳು ಐಎಲ್ಅಂಡ್ಎಫ್ಎಸ್ ನೀಡಿದ ಸಾಲಗಳ ಕ್ರೆಡಿಟ್ ರೇಟಿಂಗ್ ನೀಡುವಲ್ಲಿ ಎಡವಿದ್ದರಿಂದ ತೀವ್ರ ಟೀಕೆಗೆ ಒಳಗಾದವು. ಈ ಏಜೆನ್ಸಿಗಳ ಮುಖ್ಯಸ್ಥರನ್ನು ಕಿತ್ತುಹಾಕಲಾಯಿತು ಇಲ್ಲವೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಯಿತು. ದೇಶ ಕಂಡ ಅತಿ ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಹಣಗರಣಕ್ಕೆ ಕಾರಣವಾದ ಐಎಲ್ಅಂಡ್ ಎಫ್ಎಸ್ ಪ್ರಕರಣದಲ್ಲಿ ರೇಟಿಂಗ್ ಏಜೆನ್ಸಿಗಳು ಕ್ರೆಡಿಟ್ ರೇಟಿಂಗ್ ನೀಡುವಲ್ಲಿ ಪ್ರಮಾದ ಎಸಗಿದ್ದೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಕ್ರೆಡಿಟ್ ರೇಟಿಂಗ್ ನೀಡುವಾಗ ಮುನ್ನೆಚ್ಚರಿಕೆ ವಹಿಸಿದ್ದರೆ, ಭಾರಿ ಹಗರಣವನ್ನು ಆರಂಭದ ಹಂತದಲ್ಲೇ ತಡೆಯಬಹುದಾಗಿತ್ತು. ರೇಟಿಂಗ್ ಏಜೆನ್ಸಿಗಳ ಈ ಪ್ರಮಾಣ ಬಹಿರಂಗಗೊಂಡ ನಂತರ ಷೇರುಪೇಟೆಯಲ್ಲಿ ಈ ಏಜೆನ್ಸಿ ಷೇರುಗಳ ಶೇ.50-60ರಷ್ಟು ಕುಸಿತ ಕಂಡವು.
ಮೂಡಿ ಸಹ ರೇಟಿಂಗ್ ಏರಿಕೆ ಮಾಡುವಾಗ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ನೀಡಿದ ವಿವರಣೆಗಳನ್ನೇ ಆಧಾರವಾಗಿಟ್ಟುಕೊಂಡಿತ್ತು. ಹೀಗಾಗಿ ಆರ್ಥಿಕ ಸುಧಾರಣೆಗಳು ತ್ವರಿತವಾಗಿ ಫಲ ನೀಡುತ್ತದೆಂದು ಅಂದಾಜಿಸಿತ್ತು. ಅಪನಗದೀಕರಣದಿಂದ ಸರ್ಕಾರಕ್ಕೆ ಭಾರಿಪ್ರಮಾಣದಲ್ಲಿ ಕಪ್ಪು ವಾಪಾಸಾಗುತ್ತದೆ ಮತ್ತು ಜಿ ಎಸ್ ಟಿ ಜಾರಿ ಆದ ನಂತರ ತಿಂಗಳುಗಳಲ್ಲಿ ತೆರಿಗೆ ಪ್ರಮಾಣವು ಮಾಸಿಕ ಒಂದು ಲಕ್ಷ ಕೋಟಿ ರುಪಾಯಿ ದಾಟುತ್ತದೆ ಮತ್ತು ವಾರ್ಷಿಕ ಸರಾಸರಿ ಶೇ.10ರಷ್ಟು ಏರಿಕೆ ದಾಖಲಿಸುತ್ತದೆ ಎಂಬ ಸರ್ಕಾರಿ ಲೆಕ್ಕಾಚಾರವನ್ನೇ ನಂಬಿತ್ತು. ವಸ್ತುಸ್ಥಿತಿ ಎಂದರೆ- ಅಪನಗದೀಕರಣ ಜಾರಿಯಾಗಿ ಮೂರು ವರ್ಷ ಮತ್ತು ಜಿ ಎಸ್ ಟಿ ಜಾರಿಯಾಗಿ ಎರಡು ವರ್ಷ ಕಳೆದ ನಂತರ ಉಭಯ ಸುಧಾರಣೆಗಳು ಆರ್ಥಿಕತೆಗೆ ಚೇತರಿಕೆ ನೀಡುವ ಬದಲು ಆರ್ಥಿಕತೆ ಕುಸಿತಕ್ಕೆ ಕಾರಣವಾಗಿವೆ. ಅಪನಗದೀಕರಣದ ನಂತರ ಅಸಂಘಟಿತ ವಲಯದ ಕೋಟ್ಯಂತರ ಉದ್ಯೋಗ ನಷ್ಟವನ್ನು ಇದುವರೆಗೆ ತುಂಬಿಕೊಳ್ಳಲು ಸಾಧ್ಯವಾಗಿಲ್ಲ. ಈಗಲೂ ದೇಶದಲ್ಲಿನ ನಿರುದ್ಯೋಗ ಸರ್ವಕಾಲಿಕ ಗರಿಷ್ಠಮಟ್ಟದಲ್ಲೇ ಇದೆ. ಸರಕು ಮತ್ತು ಸೇವಾ ತೆರಿಗೆ ಒಂದು ಲಕ್ಷ ಕೋಟಿ ದಾಟುವ ಗುರಿಯನ್ನು ಮುಟ್ಟಲು ಸಾಧ್ಯವಾಗೇ ಇಲ್ಲ.
ಎರಡು ವರ್ಷಗಳ ಹಿಂದೆ ತಾನು ಹಾಕಿದ್ದ ಲೆಕ್ಕಾಚಾರ ತಪ್ಪಾಗಿದೆ ಎಂಬುದು ಮೂಡಿಗೆ ಮನವರಿಕೆಯಾಗಿರಬಹುದು. ಹೀಗಾಗಿ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ತಗ್ಗಿಸಿದೆ. ಈಗ ಕ್ರೆಡಿಟ್ ರೇಟಿಂಗ್ ತಗ್ಗಿಸಲು ನೀಡಿರುವ ಕಾರಣಗಳನ್ನು ಯಾರೂ ಅಲ್ಲಗಳೆಯಲಾರರು. ಇದೇ ಕಾರಣಗಳಿಂದಾಗಿ ಪ್ರತಿ ತ್ರೈಮಾಸಿಕದಲ್ಲೂ ಭಾರತದ ಆರ್ಥಿಕ ಅಭಿವೃದ್ಧಿ ದರವು ಸತತ ಕುಸಿಯುತ್ತಲೇ ಇದೆ. ಸಮಾಧಾನದ ಅಂಶ ಎಂದರೆ ಮೂಡಿ ಎರಡು ವರ್ಷಗಳ ಹಿಂದೆ ಮಾಡಿದ್ದ ತಪ್ಪನ್ನು ಈಗ ತಿದ್ದಿಕೊಂಡಿದೆ.