ಬಹುನಿರೀಕ್ಷಿತ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೋ ಸಂದೇಶ ಬೆಳಗ್ಗೆ ದೇಶದ ಜನರ ಮುಂದೆ ಮಂಡನೆಯಾಗಿದೆ. ಕರೋನಾ ಮಹಾಮಾರಿಯ ವಿರುದ್ಧದ ಹೋರಾಟದ ಭಾಗವಾಗಿ ಹೇರಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಮೋದಿಯವರ ಈ ವೀಡಿಯೋ ಸಂದೇಶದ ಬಗ್ಗೆ ಸಹಜವಾಗೇ ಭಾರೀ ಕುತೂಹಲ ಇತ್ತು.
ಆದರೆ, ಮೋದಿಯವರು ಕರೋನಾ ಸೋಂಕಿನ ವಿರುದ್ಧದ ನಮ್ಮ ಹೋರಾಟ ಎಲ್ಲಿಯವರೆಗೆ ಬಂದಿದೆ, ಸೋಂಕು ಯಾವ ಹಂತದಲ್ಲಿದೆ, ನಮ್ಮ ವೈದ್ಯಕೀಯ ಮತ್ತು ಆರೋಗ್ಯ ವಲಯ ಹೇಗೆ ಸಜ್ಜಾಗಿದೆ ಮತ್ತು ಸದ್ಯಕ್ಕೆ ಎದುರಿಸುತ್ತಿರುವ ಸವಾಲು ಏನು? ರೋಗ ನಿಯಂತ್ರಣ ಮತ್ತು ಚಿಕಿತ್ಸೆಗೆ ಮುಂದಿನ ಸವಾಲು ಮತ್ತು ಯೋಜನೆಗಳೇನು, ಲಾಕ್ ಡೌನ್ ನಿಂದಾಗಿ ದೇಶದ ಬಡವರು, ಕೂಲಿಕಾರರ ಬದುಕಿಗೆ ಬಿದ್ದಿರುವ ಪೆಟ್ಟು ಎಷ್ಟು ಮತ್ತು ಅದನ್ನು ಸರಿಪಡಿಸುವುದು ಹೇಗೆ, ದೇಶದ ಆರ್ಥಿಕತೆಗೆ ಬಿದ್ದ ಹೊಡೆತದಿಂದ ಪಾರಾಗುವುದು ಹೇಗೆ,, ಜನ ಇನ್ನೂ ಎಷ್ಟು ದಿನ ಈ ಸೋಂಕಿನ ಭೀತಿಯಲ್ಲೇ ಬದುಕು ಕಳೆಯಬೇಕು? ಎಂಬ ಯಾವ ವಿಷಯಗಳನ್ನು ಪ್ರಸ್ತಾಪಿಸಲಿಲ್ಲ.
ಬದಲಾಗಿ ಕರೋನಾ ಸೋಂಕಿನ ವಿಷಯದಲ್ಲಿ ಆರಂಭದಿಂದಲೂ ತಮ್ಮದೇ ಶೈಲಿಯಲ್ಲಿ ದೇಶದ ಜನರನ್ನು ನಿರ್ವಹಿಸುತ್ತಿರುವ ಪ್ರಧಾನಿ, ಈ ಬಾರಿಯೂ ಮತ್ತೊಂದು ಸಾಂಕೇತಿಕ ಕ್ರಿಯೆಗೆ ಕರೆ ನೀಡುವ ಮೂಲಕ ಜನರನ್ನು ಸದಾ ತಮ್ಮ ಆಜ್ಞಾನುವರ್ತಿಗಳಾಗಿ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ನಿರತರಾಗಿರುವಂತೆ ನೋಡಿಕೊಂಡಿದ್ದಾರೆ. ಈ ಹಿಂದೆ ಜನತಾ ಕರ್ಫ್ಯೂ, ಶಂಖ-ಜಾಗಟೆ ಬಾರಿಸುವುದಕ್ಕೆ ಕರೆ ನೀಡಿದ್ದ ಅವರು ಈ ಬಾರಿ ಏಪ್ರಿಲ್ 5ರಂದು ರಾತ್ರಿ 9ಕ್ಕೆ ಬರೋಬ್ಬರಿ 9 ನಿಮಿಷ ಕಾಲ ದೀಪ ಅಥವಾ ಮೊಂಬತ್ತಿ ಅಥವಾ ಮೊಬೈಲ್ ಟಾರ್ಚ್ ಬೆಳೆಗಿಸುವ ಮೂಲಕ ಪರಸ್ಪರ ಜೊತೆಗಿದ್ದೇವೆ ಎಂಬುದನ್ನು ಸಾರಿ ಹೇಳೋಣ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ಸಹಜವಾಗೇ ಬಹುತೇಕ ಕಟ್ಟಾ ಮೋದಿ ಭಕ್ತರು ಮೋದಿಯವರ ಈ ಕರೆಯನ್ನು ಬಹಳ ಉತ್ಸಾಹದಿಂದಲೇ ಸ್ವಾಗತಿಸಿದ್ದು, ಟ್ವಿಟರ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಮೋದಿಯವರ ದೀಪ, ಮೊಂಬತ್ತಿ, ಮೊಬೈಲ್ ಟಾರ್ಚ್ ಬೆಳಗಿಸುವ ಹಿಂದಿನ ಕಾರಣವನ್ನು, ಅವರು ನಿಗದಿ ಮಾಡಿರುವ ದಿನಾಂಕ, ಸಮಯ, ತಿಥಿ-ನಕ್ಷತ್ರದ ಮಹಿಮೆಯನ್ನು ಹಾಡಿಹೊಗಳತೊಡಗಿದ್ದಾರೆ. ಆ ಪೈಕಿ ಸೈನಾ ನೆಹ್ವಾಲ್ ಅವರಂಥ ಸೆಲೆಬ್ರಿಟಿಯಿಂದ ಹಿಡಿದು, ಮೈಸೂರು ಸಂಸದ ಪ್ರತಾಪ ಸಿಂಹರಂಥವರವರೆಗೆ ಹಲವರು ಹಲವು ರೀತಿಯಲ್ಲಿ ಮೋದಿಯವ ಯೋಚನೆಯನ್ನು ಸಂಭ್ರಮಿಸಿದ್ದಾರೆ.
I will join the nation for the call #5April9PM9Minutes appealed by our PM @narendramodi Sir .
— Saina Nehwal (@NSaina) April 3, 2020

“ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ #5April9PM9Minutes ಕರೆಗೆ ದೇಶದ ಜೊತೆ ನಾನೂ ಕೈಜೋಡಿಸುವೆ” ಎಂದು ಸೈನಾ ಟ್ವೀಟ್ ಮಾಡಿದ್ದಾರೆ. ನಿರ್ಮಲಾ ತಾಯ್ ಎಂಬುವವರು, ಮೋದಿಯವರ ಕರೋನಾ ವಿರುದ್ಧದ ಹೋರಾಟದ ಕರೆಗಳನ್ನೇ ಇಟ್ಟುಕೊಂಡು, “ತಾಲಿ ಬಜಾವೋ, ದಿಯಾ ಜಲಾವೋ, ಮೊಂಬತ್ತಿ ಜಲಾವೋ. ಮೋದಿಜೀ, ದಿವಾಲಿ ನಹಿ ಆಯಿ ಹೈ. ಎಪಿಡಮಿಕ್ ಹೈ. ಮಾಸ್ಕ್ ಲಾವೋ, ಟೆಸ್ಟ್ಸ್ ಬಡಾವೋ, ಹಾಸ್ಪಿಟಲ್ ಬನಾವೋ” ಎಂದು ನಿಜಕ್ಕೂ ಕರೋನಾ ವಿರುದ್ಧದ ಹೋರಾಟಕ್ಕೆ ಏನು ಮಾಡಬೇಕಿತ್ತು, ನೀವೇನು ಮಾಡುತ್ತಿದ್ದೀರಿ ಎಂದು ಮೋದಿಯವರನ್ನು ಪ್ರಶ್ನಿಸಿದ್ದಾರೆ.
Thali bajao.
Diya jalao.
Mombatti jalao.Modi ji, Diwali nahi aayi hai. Epidemic hai.
Masks lao,
Tests badhao,
Hospitals banao.#ModiVideoMessage— Nirmala Tai (@Vishj05) April 3, 2020
ಖ್ಯಾತ ಚಿಂತಕ ರಾಮಚಂದ್ರ ಗುಹಾ ಅವರು, “ಈವೆಂಟ್ ಮ್ಯಾನೇಜ್ಮೆಂಟ್ 9.0. ಇತಿಹಾಸ ಮರುಕಳಿಸುತ್ತದೆ; ಮೊದಲು ದುರಂತವಾಗಿ, ಬಳಿಕ ಹಾಸ್ಯಾಸ್ಪದ ಪ್ರಹಸನವಾಗಿ ಎಂದು ಪ್ರಸಿದ್ಧ ಚಿಂತಕರೊಬ್ಬರು ಹೇಳಿದ್ದರು. ಆದರೆ, 21ನೇ ಶತಮಾನದ ಭಾರತದಲ್ಲಿ ನಾವು ದುರಂತದ ಹೊತ್ತಲ್ಲಿ ನಗೆಪಾಟಲಿನ ಪ್ರಹಸನವನ್ನು ಕಾಣುತ್ತಿದ್ದೇವೆ” ಎಂದು ಟ್ವೀಟ್ ಮಾಡುವ ಮೂಲಕ ಮೋದಿಯವರ ಈ ಕರೆ ಎಷ್ಟು ಹಾಸ್ಯಾಸ್ಪದ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
Event Management 9.0
A great thinker once said that history repeats itself, first as tragedy, then as farce. In 21st century India, we have farce at the time of tragedy.— Ramachandra Guha (@Ram_Guha) April 3, 2020
ಅದೇ ಹೊತ್ತಿಗೆ, “ಮೋದಿಯವರು ದೇಶದ ಕರೋನಾ ವೈರಸ್ ಕೇಸುಗಳ ಬಗ್ಗೆಯಾಗಲೀ, ಸಾವಿನ ಬಗ್ಗೆಯಾಗಲೀ, ವೈರಾಣು ಪರೀಕ್ಷೆ ಬಗ್ಗೆಯಾಗಲೀ, ಸರ್ಕಾರ ವೈದ್ಯಕೀಯ ಸಿಬ್ಬಂದಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆಯಾಗಲೀ, ವಲಸೆ ಕಾರ್ಮಿಕರ ಬಗ್ಗೆಯಾಗಲೀ, ಆಹಾರ ಬಿಕ್ಕಟ್ಟಿನ ಬಗ್ಗೆಯಾಗಲೀ, ಉದ್ಯೋಗ ನಷ್ಟದ ಬಗ್ಗೆಯಾಗಲೀ, ಆರ್ಥಿಕತೆ ಬಗ್ಗೆಯಾಗಲೀ ಒಂದೂ ಮಾತನಾಡಲೇ ಇಲ್ಲ. ಬಹುಶಃ ಅವರು ಇಂತಹ ಕ್ಷುಲ್ಲಕ ಆಡಳಿತ ವಿಷಯಗಳನ್ನು ಮೀರಿ ನಿಂತ ಮಹಾನ್ ನಾಯಕ ಎನಿಸುತ್ತದೆ” ಎಂದು ಮತ್ತೊಬ್ಬ ಟ್ವಿಟ್ಟಿಗ ತೇಜಸ್ ಹರದ್ ಎಂಬುವರು ಕಾಲೆಳೆದಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರು, “ಪ್ರಧಾನ್ ಶೋಮ್ಯಾನ್ ಅವರ ಮಾತು ಕೇಳಿದೆ. ಜನರ ನೋವು ಕಡಿಮೆ ಮಾಡುವ ಬಗ್ಗೆ, ಅವರ ಭಾರ ಇಳಿಸುವ ಬಗ್ಗೆ, ಹಣಕಾಸು ಆತಂಕದ ಬಗ್ಗೆ ಏನನ್ನೂ ಹೇಳಲಿಲ್ಲ. ಭವಿಷ್ಯದ ಬಗ್ಗೆ ಯಾವ ಯೋಜನೆಯೂ ಇಲ್ಲ. ಲಾಕ್ ಡೌನ್ ಬಳಿ ಪರಿಸ್ಥಿತಿ ನಿಭಾಯಿಸುವ ಬಗ್ಗೆ ತಮ್ಮ ಯೋಜನೆಗಳೇನು ಎಂಬ ಬಗ್ಗೆ ಪ್ರಸ್ತಾಪವಿಲ್ಲ. ಭಾರತದ ಫೋಟೋ ಆಪ್ ಪ್ರಧಾನಮಂತ್ರಿಗಳು ಕೇವಲ ಒಂದಿಷ್ಟು ಹೊತ್ತಿನ ಫೀಲ್ ಗುಡ್ ಹೇಳಿಕೆಯನ್ನಷ್ಟೇ ನೀಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.
Event Management 9.0
A great thinker once said that history repeats itself, first as tragedy, then as farce. In 21st century India, we have farce at the time of tragedy.— Ramachandra Guha (@Ram_Guha) April 3, 2020
ಈ ಮೊದಲು ‘ತಾಲಿ ಬಜಾವೋ’ ಎಂಬ ಮೋದಿ ಕರೆಗೆ ಹಲವು ಮಂದಿ ಮನೆಯಲ್ಲಿದ್ದ ಶಂಖ, ಜಾಗಟೆ, ಘಂಟೆ, ಪಾತ್ರೆ-ಪಗಡೆಯನ್ನೆಲ್ಲಾ ಬಾರಿಸಿ ಸಂಭ್ರಮಿಸಿದ್ದ, ರಸ್ತೆಗಿಳಿದು ಮೆರವಣಿಗೆ ಮಾಡಿ ಆ ಫೋಟೋ, ವೀಡಿಯೋಗಳನ್ನು ಫೇಸ್ಬುಕ್ ಮತ್ತು ಟ್ವಿಟರಿನಲ್ಲಿ ಹಂಚಿಕೊಂಡಿದ್ದವರು. ಈ ಬಾರಿ ಅದೇ ಮಂದಿ, ಮೋದಿಯವರ ಈ ‘ಮೊಂಬತ್ತಿ ಜಲಾವೋ’ ಹೇಳಿಕೆಯ ಬಗ್ಗೆ ಭ್ರಮನಿರಸನದ ಮಾತುಗಳನ್ನಾಡಿದ್ದಾರೆ ಎಂಬುದು ಕುತೂಹಲಕಾರಿ. ಬೆಳಗ್ಗೆ ಮೋದಿಯವರ ವೀಡಿಯೋ ಪ್ರಸಾರವಾಗುತ್ತಲೇ ಹಲವು ಮಂದಿ ಅವರ ಅಭಿಮಾನಿಗಳೇ, ಪ್ರಧಾನಿಗಳ ಬಗ್ಗೆ ಅಪಾರ ನಂಬಿಕೆ ಇತ್ತು. ಆದರೆ, ಇಂಥ ಹೊತ್ತಲ್ಲೂ ಇವರು ವೈದ್ಯಕೀಯ ಸಿಬ್ಬಂದಿಗೆ ಸೂಕ್ತ ಸುರಕ್ಷಾ ಸಾಧನ ನೀಡುವ ಬಗ್ಗೆಯಾಗಲೀ, ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿರುವ ಕಾರ್ಮಿಕರ ಬಗ್ಗೆಯಾಗಲೀ ಚಕಾರವೆತ್ತದಿರುವುದು ಬೇಸರ ತರಿಸಿದೆ. ನಿಜಕ್ಕೂ ಇದು ಬಹಳ ನೋವಿನ ಸಂಗತಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಆದರೆ, ಅಂಥ ಕೆಲವು ಸ್ಟೇಟಸ್ ಮತ್ತು ಟ್ವೀಟ್‌ಗಳನ್ನು ಕೆಲವೇ ಕ್ಷಣಗಳಲ್ಲಿ ಡಿಲೀಟ್ ಮಾಡಿ, ಮತ್ತೆ ಮೋದಿಯವರ ಏಪ್ರಿಲ್ 5ರ ಮೊಂಬತ್ತಿ ಬೆಳಗಿಸುವ ಕರೆಯ ಹಿಂದಿನ ಮರ್ಮ, ಆ ದಿನ, ನಕ್ಷತ್ರಗಳ ಮಹತ್ವ, ದೀಪದ ಬೆಳಕಿಗೆ ಕರೋನಾ ವೈರಸ್ ನಾಶಪಡಿಸುವ ಪವಾಡಶಕ್ತಿ, ಮೋದಿ ಚಾಣಾಕ್ಷತೆ ಮುಂತಾದ ಬಗ್ಗೆ ಅವರ ಟ್ರೋಲ್ ಪಡೆ ಸಿದ್ಧಪಡಿಸಿದ ವೀಡಿಯೋ, ಮೀಮ್ ಗಳನ್ನು ಹಂಚಿಕೊಂಡು ಯೂ ಟರ್ನ್ ಹೊಡೆದ ಉದಾಹರಣೆಗಳೂ ಇವೆ.
ಗಮನಾರ್ಹ ಸಂಗತಿ ಎಂದರೆ; ಮೋದಿಯವರು ಮೊಂಬತ್ತಿ ಹಚ್ಚಲು ಕರೆ ನೀಡಿದ ಮೊದಲ ಕೆಲವು ಗಂಟೆಗಳವರೆಗೆ ಸಾಮಾಜಿಕ ಜಾಲತಾಣದಲ್ಲಿ ಆ ಕರೆಯ ನಿರರ್ಥಕತೆಯ ಬಗ್ಗೆ, ಹೇಗೆ ಅದು ಕೇವಲ ಜನರನ್ನು ಮೂರ್ಖರನ್ನಾಗಿಸುವ, ಜನರ ಗಮನ ಬೇರೆಡೆ ಸೆಳೆಯುವ ಮತ್ತು ಈಗಾಗಲೇ ಇಟಲಿ, ಸ್ಪೇನ್ ನಂಥ ದೇಶಗಳಲ್ಲಿ ಬಳಕೆಯಾಗಿರುವ ತಂತ್ರವನ್ನೇ ಮತ್ತೊಮ್ಮೆ(ಮೊದಲು ಚಪ್ಪಾಳೆ- ಘಂಟೆ ಬಾರಿಸುವುದನ್ನು ಕಾಪಿ ಮಾಡಲಾಗಿತ್ತು!) ನಕಲು ಮಾಡಿದ್ದಾರೆ. ನಿಜವಾಗಿಯೂ ಈ ಸಂದರ್ಭದಲ್ಲಿ ದೇಶದ ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ಜೀವರಕ್ಷಕ ಸಾಧನ ನೀಡಬೇಕಿತ್ತು. ಬಡವರು- ಕೂಲಿಗಳಿಗೆ ಆಸರೆಯಾಗಲು ಕಾರ್ಯಕ್ರಮ ರೂಪಿಸಬೇಕಿತ್ತು. ಲಾಕ್ ಡೌನ್ ಗೆ ಸಹಕರಿಸಿದ ಜನತೆ ಮತ್ತು ಸರ್ಕಾರಿ ಸಿಬ್ಬಂದಿಗೆ ಧನ್ಯವಾದ ಹೇಳಬೇಕಿತ್ತು. ಆದರೆ, ಅದೆಲ್ಲಾ ಬಿಟ್ಟು ನಾವೆಲ್ಲಾ ಪರಸ್ಪರ ಜೊತೆಗಿದ್ದೇವೆ ಎಂದು ಹೇಳಲು ಮೊಂಬತ್ತಿ ಬೆಳಗಿಸಿ ಎಂದು ಮಾತು ಮುಗಿಸುವುದು ಜವಾಬ್ದಾರಿ ಸ್ಥಾನದಲ್ಲಿರುವ, ದೇಶದ ಚುಕ್ಕಾಣಿ ಹಿಡಿದವರಿಗೆ ಶೋಭೆ ತರದು ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಎರಡು ಮೂರು ತಾಸು ಕಳೆಯುತ್ತಿದ್ದಂತೆ ಯಾರು ಈ ಮೊದಲು ಟೀಕಿಸಿದ್ದರೋ, ಬೇಸರ ವ್ಯಕ್ತಪಡಿಸಿದ್ದರೋ, ಇದನ್ನು ಪ್ರಧಾನಿಯಿಂದ ನಿರೀಕ್ಷಿಸಿರಲಿಲ್ಲ ಎಂದು ನುಡಿದಿದ್ದರೋ ಅದೇ ಮಂದಿ, ಸಂಪೂರ್ಣ ಮೋದಿಯವರ ಘೋಷಣೆಯನ್ನು ಅದರ ಹೆಚ್ಚುಗಾರಿಕೆಯನ್ನು ಹೊಗಳಲು ತೊಡಗಿದರು. ಅಂದರೆ; ಮೋದಿಯವರ ಹೇಳಿಕೆಯ ಬಗ್ಗೆ ವ್ಯಕ್ತವಾಗತೊಡಗಿದ ಜನಾಭಿಪ್ರಾಯದಿಂದ ಕಂಗೆಟ್ಟ ಬಿಜೆಪಿ ಮತ್ತು ಮೋದಿಯವರ ಟ್ರೋಲ್ ಪಡೆ, ಆ ಅಭಿಪ್ರಾಯಗಳನ್ನು, ಅಭಿಮಾನವಾಗಿ ಪರಿವರ್ತಿಸಲು ಅಷ್ಟರಲ್ಲಿ ರಂಗಪ್ರವೇಶ ಮಾಡಿದ್ದರು! ಹಾಗಾಗಿ ದಿನ, ನಕ್ಷತ್ರ, ತಿಥಿ, ತಾರಾಮಂಡಲಗಳ ಲೆಕ್ಕಾಚಾರಗಳನ್ನು ಗುಣಿಸಿ, ಭಾಗಿಸಿ ಮೋದಿ ಮಾತುಗಳಿಗೆ ಮಹತ್ವ ಹಚ್ಚುವ ಪ್ರಯತ್ನ ಸಮರೋಪಾದಿಯಲ್ಲಿ ನಡೆಯಿತು. ಪರಿಣಾಮ ಮಧ್ಯಾಹ್ನದ ಹೊತ್ತಿಗೆ ಸಾಮಾಜಿಕ ಜಾಲತಾಣ ನಿಧಾನವಾಗಿ ಮೋದಿಯವರ ಮೊಂಬತ್ತಿಯ ಪರ ವಾಲಿತು!