ಭಾರತದಾದ್ಯಂತ ಪೌರತ್ವ ಕಾಯ್ದೆಯ ಹಿನ್ನೆಲೆಯಲ್ಲಿ ಎದ್ದಿರುವ ಕಿಚ್ಚು, ನೂರಾರು ಕೋಟಿ ರುಪಾಯಿ ಬಂಡವಾಳ ಹೂಡಿ ಸೃಷ್ಟಿ ಮಾಡಿದ ನರೇಂದ್ರ ಮೋದಿಯವರ ವರ್ಚಸ್ಸಿಗೆ ಮಸಿ ಬಳಿಯಲಾರಂಭಿಸಿದೆ. ಮುಗ್ಧರನ್ನು ಮರಳು ಮಾಡಲು ಮೋದಿ ಹಾಗೂ ಅವರ ಮಾರುಕಟ್ಟೆ ತಂಡ ಸೃಷ್ಟಿ ಮಾಡಿದ ಪದಪುಂಜಗಳು ಅನಾಥವಾಗಿವೆ. ನರೇಂದ್ರ ಮೋದಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ವಿಭಿನ್ನ ರೀತಿಯಲ್ಲಿ ಪೀಠಿಕೆಯಾಕುತ್ತಿದ್ದ ಮಾಧ್ಯಮಗಳು ಕಳೆದೊಂದು ವಾರದಿಂದ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ, ಪೊಲೀಸರ ಅಟ್ಟಹಾಸವನ್ನು ಒತ್ತಾಯಪೂರ್ವಕವಾಗಿ ಜನರ ಮುಂದಿಡುವ ಮೂಲಕ ಹಿಂದೂ ಹೃದಯ ಸಾಮ್ರಾಟನಿಗೆ ಕಸಿವಿಸಿ ಉಂಟು ಮಾಡುತ್ತಿವೆ. ಆದರೆ, ಅದೇ ಪ್ರಜಾಪ್ರಭುತ್ವದ ಸೌಂದರ್ಯ ಎಂಬುದು ಸಾರ್ವಕಾಲಿಕ ಸತ್ಯ.
ಅಧಿಕೃತ ಸರ್ಕಾರಿ ಕಾರ್ಯಕ್ರಮಗಳನ್ನೂ ಚುನಾವಣಾ ಪ್ರಚಾರ ಸಭೆ ಎಂದು ಭಾವಿಸಿ ಅದರ ಘನತೆ, ಪಾವಿತ್ರ್ಯವನ್ನು ಲೆಕ್ಕಿಸದೆ ರಾಜಕೀಯ ಭಾಷಣ ಮಾಡುತ್ತಿದ್ದ ನರೇಂದ್ರಮೋದಿಯುವರ ಕಂಠದಿಂದ ಹೊರಟ ಪದಪುಂಜಗಳಿಗೆ ಲೆಕ್ಕವೇ ಇಲ್ಲ. ಇವುಗಳಲ್ಲಿ ಬಹುಚರ್ಚಿತ ಮತ್ತು ಮಹತ್ವವಾದವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಡಿಜಿಟಲ್ ಇಂಡಿಯಾ, ಮನ್ ಕಿ ಬಾತ್, ನ್ಯೂ ಇಂಡಿಯಾ.. 2014ರ ನಂತರ ನರೇಂದ್ರ ಮೋದಿಯವರು ಈ ಪದಪುಂಜಗಳ ಮೂಲಕ ಪಡೆದ ಪ್ರಚಾರ, ಮಾನ್ಯತೆ, ವಿಶ್ವಾಸಕ್ಕೆ ಲೆಕ್ಕವೇ ಇಲ್ಲ. ದುರಂತವೆಂದರೆ ಅದೇ ಪದಪುಂಜಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ನಿರ್ದಯವಾಗಿ ಹೊಸಕಿ ಹಾಕುವ ಮೂಲಕ ಖಳನಾಯಕನ ಸ್ಥಾನಕ್ಕೇರಿಸುತ್ತಿವೆ.
ನೂರಾರು ಜಾತಿ, ಧರ್ಮ, ಭಾಷೆ, ಜನಾಂಗಗಳನ್ನು ಒಳಗೊಂಡ ದೇಶವನ್ನು ಮುನ್ನಡೆಸುವ ತಾನು ಸಬ್ ಕಾ ಸಾಥ್, ಸಬ್ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ ಗಳಿಸುತ್ತೇನೆ ಎಂದು ಸಿಕ್ಕಸಿಕ್ಕಲೆಲ್ಲಾ ಒದರಿದ ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಅಸಹಾಯಕರು, ಮುಸ್ಲಿಮರು ಸೇರಿದಂತೆ ದೇಶದ ಹಲವು ನಿವಾಸಿಗಳಲ್ಲಿ ಪೌರತ್ವ ಕಾನೂನಿಕ ಕುರಿತು ಸೃಷ್ಟಿಯಾಗಿರುವ ಅನುಮಾನಗಳನ್ನು ಓಡಿಸಬೇಕಾದ ಕೆಲಸ ಮಾಡುತ್ತಿಲ್ಲವೇ? ಹೀಗಾದಲ್ಲಿ ಅವರ ಸಬ್ ಕಾ ಸಾಥ್.. ಘೋಷಣೆಯನ್ನು ದೇಶದ ಜನತೆಯನ್ನು ವಂಚಿಸಲು ಬಳಸಿದ ಪದಪುಂಜ ಎಂದು ನರೇಂದ್ರ ಮೋದಿ ಹಾಗೂ ಅವರ ಬಾಲಬುಡಕರು ಒಪ್ಪಿಕೊಳ್ಳುತ್ತಾರೆಯೇ?
21ನೇ ಶತಮಾನವು ಡಿಜಿಟಲ್ ಯುಗ. ಜಗತ್ತಿನ 700 ಕೋಟಿ ಜನಸಂಖ್ಯೆಯ ಪೈಕಿ 130 ಕೋಟಿಗೆ ತವರಾದ ಭಾರತದಲ್ಲಿ 15-35 ವಯೋಮಾನದವರೆ ಸಂಖ್ಯೆ ಹೆಚ್ಚು. ಇಂಥ ರಾಷ್ಟ್ರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇವಾ ಸವಲತ್ತುಗಳನ್ನು ಬೆರಳ ತುದಿಯಲ್ಲಿ ಕಲ್ಪಿಸುವ ಶಕ್ತಿ ಡಿಜಿಟಲ್ ಸೇವಾ, ಸಾಧನೆಗಳಿಗಿದೆ. ಯುವ ಜನತೆ ಹೊಸತನಕ್ಕೆ ಹೊಂದುಕೊಳ್ಳುವುದರಿಂದ ಡಿಜಿಟಲ್ ವ್ಯವಸ್ಥೆಗೆ ಭಾರತದಲ್ಲಿ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ ಪ್ರಸಿದ್ಧವಾದ ಬೆಂಗಳೂರಿನಂಥ ಸ್ಥಳಗಳು ಜಗತ್ತಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ವಹಿಸುವ ಮಟ್ಟಕ್ಕೆ ಬೆಳೆದು ನಿಂತಿವೆ. ಇದನ್ನು ಅರಿತು ಯುವ ಸಮೂಹವನ್ನು ಗೆಲ್ಲಲು ಡಿಜಿಟಲ್ ಇಂಡಿಯಾ ಕ್ಯಾಂಪೇನ್ ಮೂಲಕ ಯುವ ಜನತೆಯ ನಾಡಿ ಹಿಡಿದ ನರೇಂದ್ರ ಮೋದಿಯವರು ಇದುವರೆಗೆ ಭಾರತದ 102 ಸ್ಥಳಗಳಲ್ಲಿ ಇಂಟರ್ನೆಟ್ ನಿಷೇಧಕ್ಕೆ ಕಾರಣರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಶಾಂತಿ, ಸುವ್ಯವಸ್ಥೆ ಕಾಪಾಡುವ ಕಾರಣನೀಡಿ ನಾಲ್ಕು ತಿಂಗಳಿಂದ ಇಂಟರ್ನೆಟ್ ನಿಷೇಧಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ನಂತರ ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳ ಸ್ಥಿತಿ ಕೈಮೀರಿದ್ದು ಅಲ್ಲಿಯೂ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ, ಕರ್ನಾಟಕದ ಬಂದರು ನಗರಿ ಮಂಗಳೂರು, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂಜಾಗ್ರತೆ ಕಾರಣ ನೀಡಿ ಇಂಟರ್ನೆಟ್ಗೆ ನಿರ್ಬಂಧ ಹೇರಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಹದ್ದುಬಸ್ತಿನಲ್ಲಿಡಲು ಡಿಜಿಟಲ್ ಭಾರತದ ರುವಾರಿಗಳಾದ ಯುವ ಜನತೆಯನ್ನೇ ನರೇಂದ್ರ ಮೋದಿ ಸರ್ಕಾರವು ಇಂಟರ್ನೆಟ್ ಬಳಸದಂತೆ ಮಾಡಿದೆ.
ಡಿಜಿಟಲ್ ಭಾರತದ ಯಶಸ್ಸಿನಲ್ಲಿ ಯುವ ಜನತೆಯ ಪಾತ್ರ ಮುಖ್ಯ. ಈಗ ತಾನು ತೆಗೆದುಕೊಂಡ ಮೂರ್ಖ ನಿರ್ಧಾರವೊಂದರಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಇಂಟರ್ನೆಟ್ ನಿರ್ಬಂಧದಿಂದ ಜಾರಿಗೊಳ್ಳಲಾಗದ ಮಟ್ಟಕ್ಕೆ ತಲುಪಿವೆ. ತನ್ನ ಕೊರಳಿಗೆ ಉರುಳು ಹಾಕಿಕೊಳ್ಳುವ, ಅಧಿಕಾರಕ್ಕಾಗಿ ದೇಶ ಹಾಗೂ ಜನರ ಹಿತಾಸಕ್ತಿಗಳನ್ನು ಬಲಿಕೊಡಲು ತಾನು ಸಿದ್ಧ ಎಂಬ ಸಂದೇಶವನ್ನು ಮೋದಿ ಸರ್ಕಾರ ಇಂಟರ್ನೆಟ್ ಬಂದ್ ಮಾಡುವ ಮೂಲಕ ಹೊರಡಿಸಿಲ್ಲವೇ? ದೇಶದ ಹಲವೆಡೆ ಇಂಟರ್ನೆಟ್ ನಿರ್ಬಂಧಿಸಿ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಅನುಷ್ಠಾನಕ್ಕೆ ತರುವುದಾದರೂ ಹೇಗೆ? ಇದರಿಂದ ತಿಳಿಯುವುದೇನೆಂದರೆ ಡಿಜಿಟಲ್ ಇಂಡಿಯಾ ಎಂಬ ಘೋಷಣೆ ನರೇಂದ್ರ ಮೋದಿಯ ಪ್ರಭಾವಳಿಯನ್ನು ಕಟ್ಟಲು ಸೃಷ್ಟಿಸಿದ ಪದಪುಂಜ.
ಕಟ್ಟ ಕಡೆಯ ಪ್ರಜೆಯನ್ನೂ ತಲುಪುವ ಮೂಲಕ ಶಾಶ್ವತವಾಗಿ ನರೇಂದ್ರ ಮೋದಿಯನ್ನು ಜನರ ಗುಂಡಿಗೆಯಲ್ಲಿ ಅಚ್ಚೊತ್ತುವ ಬಿಜೆಪಿಯ ಮಹತ್ವಾಕಾಂಕ್ಷಿ ಕಾರ್ಯಕ್ರಮ ಮನ್ ಕಿ ಬಾತ್. ಮಾದ್ಯಮಗಳಿಗೆ ಮುಖಾಮುಖಿಯಾಗುವುದನ್ನು ಪ್ರಧಾನಿಯಾದಾಗಿನಿಂದ ತಪ್ಪಿಸಿರುವ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮದ ಮೂಲಕ ಜನರೊಂದಿಗೆ ಒಂದಾಗಲು ಮುಂದಾಗಿದ್ದರು. ಕಾಡು, ಕಟ್ಟೆ ಬೆಟ್ಟ, ಗುಡ್ಡಗಳನ್ನು ತಲುಪುವ ಶಕ್ತಿ ಹೊಂದಿರುವ ರೇಡಿಯೋದ ಮೂಲಕ ಬಿಜೆಪಿಯ ಮತಬ್ಯಾಂಕ್ ಭದ್ರಪಡಿಸಲು ನೂರಾರು ಮನ್ ಕಿ ಬಾತ್ ಕಾರ್ಯಕ್ರಮ ನಡೆಸಿರುವ ನರೇಂದ್ರ ಮೋದಿಯವರ ಸಾಂತ್ವನದ ಮಾತುಗಳನ್ನು ಕೇಳಲು ದೇಶದ ಜನತೆ ಕಾದಿದೆ.
ಪೌರತ್ವ ಕಾಯ್ದೆ ವಿರೋಧದ ಹೋರಾಟದಲ್ಲಿ ದೇಶಾದ್ಯಂತ ಸುಮಾರು 10 ಮಂದಿ ಸತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೋಟ್ಯಂತರ ಜನರು ಆತಂಕ, ಭಯದಲ್ಲಿ ದಿನ ದೂಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮನದ ಮಾತನಾಡದ ನರೇಂದ್ರ ಮೋದಿಯವರು ಇನ್ಯಾವಾಗ ದೇಶದ ಜನತೆಗೆ ಮುಖಾಮುಖಿಯಾಗುತ್ತಾರೆ? ದೇಶವಾಸಿಗಳು ಕಷ್ಟದಲ್ಲಿದ್ದಾಗ ನಾಯಕತ್ವ ವಹಿಸಿದವರು ವಿಶ್ವಾಸ ತುಂಬಬೇಕಲ್ಲವೇ? ಇದನ್ನು ಬಿಟ್ಟು ನರೇಂದ್ರ ಮಾಡುತ್ತಿರುವುದೇನು? ಅಂದರೆ, ಮನ್ ಕಿ ಬಾತ್ ಸಹ ಮೋದಿಯ ಇಮೇಜ್ ಅನ್ನು ಜತನದಿಂದ ಕಟ್ಟಲು ಬಳಸಿದ ಪುದಪುಂಜ ಎಂದ ಅರ್ಥೈಸಿಕೊಳ್ಳಬೇಕೆ?
ಯುವ ಜನತೆಯಲ್ಲಿ ನವ ಭಾರತದ ಕನಸು ಬಿತ್ತಿದ ಮೋದಿಯವರು ಎಂದಿಗೂ ನ್ಯೂ ಇಂಡಿಯಾ ಪದಪುಂಜ ಬಳಸದೇ ಭಾಷಣ ಅಂತ್ಯಗೊಳಿಸದವರಲ್ಲ. ವಿರೋಧಿಗಳನ್ನು ಅಣಿಯಲು ನ್ಯೂ ಇಂಡಿಯಾದಲ್ಲಿ ಅದಕ್ಕೆ, ಇದಕ್ಕೆ ಮಾನ್ಯತೆ ಇಲ್ಲ ಎಂದು ಅಬ್ಬರಿಸುತ್ತಿದ್ದ ಮೋದಿಯವರು ನೇತೃತ್ವ ವಹಿಸಿರುವ ಭಾರತದಲ್ಲಿ ಕಳೆದೊಂದು ವಾರದಿಂದ ಕೌದಿ ಮೌನ, ದ್ವೇಷ, ಉದ್ವಿಗ್ನತೆಯ ವಾತಾವರಣವಿದೆ. ವಿವಿಧೆಡೆ ರಸ್ತೆಗಳಲ್ಲಿ ಟೈರ್ ಹಾಗೂ ವಾಹನ ದಹಿಸುವುದು, ಕಲ್ಲು, ಇಟ್ಟಿಗೆ ಚೂರಿ, ಟಿಯರ್ ಗ್ಯಾಸ್ ಶಬ್ಧ, ಸಾಮಾನ್ಯವಾಗಿದೆ.
ಸಿರಿಯಾ, ಇರಾನ್, ಆಫ್ಘಾನಿಸ್ತಾನದಲ್ಲಿ ಸಾಮಾನ್ಯವಾದ ಘಟನೆಗಳು ನಮ್ಮದೇ ಊರು, ನಗರ ಪಟ್ಟಣಗಳಲ್ಲಿ ಸೃಷ್ಟಿಯಾಗುತ್ತಿದೆ. ಶಾಲೆ, ಕಾಲೇಜು, ಕಚೇರಿಗೆ ಹೋದವರ ಬಗ್ಗೆ ಮನೆಯಲ್ಲಿರುವವರು ಕುತೂಹಲಗೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಗೊಡ್ಡುತನ, ಅಪನಂಬಿಕೆ, ಅವಿಶ್ವಾಸ, ನಕಾರಾತ್ಮಕ ಯೋಚನೆಗಳ ಹೊರತಾದದ್ದು ನವ ಭಾರತದ ಕನಸು. ಆದರೆ, ಇದಕ್ಕೆ ತದ್ವಿರುವಾದ ಸ್ಥಿತಿ ಮನೆ-ಮನ, ಊರು-ಕೇರಿಗಳಲ್ಲಿ ಸೃಷ್ಡಿಯಾಗಿರುವಾಗ ನ್ಯೂ ಇಂಡಿಯಾ ಎಂದು ಮೋದಿಯವರು ತಾಸುಗಟ್ಟಲೆ ಉಪನ್ಯಾಸ ನೀಡಿದ್ದು ಚುನಾವಣೆ ಗೆಲ್ಲುವುದರ ಭಾಗವಲ್ಲದೆ ಮತ್ತೇನು?
ಹೀಗೆ, ಪದಪುಂಜಗಳ ಮೂಲಕ ಯುವ ಜನತೆಯನ್ನು ಮರಳು ಮಾಡಿ, ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿದ ಭಾರತ ರಾಜಕಾರಣ? ಸೂಪರ್ ಸ್ಟಾರ್ ನರೇಂದ್ರ ಮೋದಿಯವರ ವರ್ಚಸ್ಸು ಕುಸಿತದ ಹಾದಿ ಹಿಡಿದಿದೆ. ಧರ್ಮಗಳ ನಡುವೆ ಪಿತೂರಿ ಮಾಡಿ ಗೆಲ್ಲುವ ತಂತ್ರವೂ ಬಹಳಷ್ಟು ದಿನ ನಡೆಯದು ಎಂಬುದಕ್ಕೆ ಭಾರತದಲ್ಲಿ ನಡೆಯುತ್ತಿರುವ ಚಾರಿತ್ರಿಕ ಹೋರಾಟ ಸಾಕ್ಷಿಯಾಗಿದೆ. ಅಲ್ಪಾವಧಿಯಲ್ಲಿ ಯಶಸ್ಸಿನ ಉತ್ತುಂಗವೇರಿದ, ಚಹಾ ಮಾರುವ ಯುವಕನೋರ್ವ ಪ್ರಧಾನ ಮಂತ್ರಿಯಾದ ಕಥೆ ಮೂಲಕ ಕೋಟ್ಯಂತರ ಮಂದಿಯಲ್ಲಿ ಭರವಸೆ ಮೂಡಿಸಿದ್ದ ಮೋದಿಯವರ ಘೋಷಣೆಗಳ ಆಯುಷ್ಯ ಅಂತ್ಯವಾಗುತ್ತಿದೆ. ಸ್ವಯಂ ಪ್ರೇರಿತವಾಗಿ ರೂಪುಗೊಂಡಿರುವ ಜನ ಹೋರಾಟವನ್ನು ಹತ್ತಿಕ್ಕಲು ಪ್ರಜಾತಂತ್ರಕ್ಕೆ ವಿರುದ್ಧವಾದ ನಿರ್ಧಾರಗಳ ಮೂಲಕ ಪ್ರತಿಭಟಿಸುವವರ ಹಕ್ಕು ಮೊಟಕುಗೊಳಿಸಲು ಮುಂದಾಗಿರುವ ನರೇಂದ್ರ ಮೋದಿ ಎಂಬ ಭ್ರಮಾಲೋಕ ಜಗತ್ತಿನ ಮುಂದೆ ಕ್ಷಣಕ್ಷಣಕ್ಕೂ ಬೆತ್ತಲಾಗುತ್ತಿದೆ.
ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಸ್ವಾಭಿಮಾನಕ್ಕೆ ಹೆಸರಾದ ಹಲವಾರು ದೇಶಗಳ ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಗಾಂಧಿ ನಾಡಿನ ಮೋದಿ ತಾನೊಬ್ಬ ದುರ್ಬಲ ಹಾಗೂ ನಿರಂಕುಶ ಆಡಳಿತಗಾರ ಎಂಬುದನ್ನು ತಮ್ಮ ನಡೆ-ನುಡಿಗಳ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ದೇಶ ದುಬಾರಿ ಬೆಲೆ ತೆರಬೇಕಾಗಿರುವುದು ದುರಂತ. ಅಂದಹಾಗೆ, ಮೋದಿಯವರ ಡಿಕ್ಷನರಿಯಿಂದ ಹೊರಬಂದ ಪದಪುಂಜಗಳು ಹಿಂದಿನ ಭಾರತದ ಸ್ಥಿತಿ ನೋಡಿ ನಗುತ್ತಿವೆಯಂತೇ?