ಫೇಸ್ ಬುಕ್ ಸಾಮಾಜಿಕ ಜಾಲತಾಣ ಸಂಸ್ಥೆ ಭಾರತದ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಈಡಾಗಲು ಕಾರಣವಾಗಿದ್ದ ಆ ಸಂಸ್ಥೆಯ ಭಾರತೀಯ ಕಾರ್ಯನಿರ್ವಹಣಾ ಮುಖ್ಯಸ್ಥೆ ಅಂಖೀ ದಾಸ್ ರಾಜೀನಾಮೆ ನೀಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಅಮೆರಿಕದ ‘ದ ವಾಲ್ ಸ್ಟ್ರೀಟ್ ಜರ್ನಲ್’, ಫೇಸ್ ಬುಕ್ ದೇಶದ ಆಡಳಿತರೂಢ ಬಲಪಂಥೀಯ, ಉಗ್ರ ಹಿಂದುತ್ವವಾದಿ ವ್ಯವಸ್ಥೆಯ ಪರವಾಗಿ ಹೇಗೆ ಕೆಲಸ ಮಾಡುತ್ತಿದೆ. ತನ್ನ ನೀತಿ ಮತ್ತು ನಿಲುವುಗಳ ವಿಷಯದಲ್ಲಿ ಆಡಳಿತರೂಢ ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ಪೂರಕವಾಗಿ ಮತ್ತು ಪ್ರತಿಪಕ್ಷಗಳ ವಿರುದ್ಧದ ಧೋರಣೆಗಳನ್ನು ಅನುಸರಿಸುತ್ತಿದೆ. ಆ ಮೂಲಕ ಭಾರತದ ರಾಜಕಾರಣ, ಪ್ರಜಾಪ್ರಭುತ್ವ ಮತ್ತು ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಹೇಗೆ ಹಸ್ತಕ್ಷೇಪ ನಡೆಸುತ್ತಿದೆ ಎಂಬ ಕುರಿತು ತನಿಖಾ ವರದಿ ಪ್ರಕಟಿಸಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೊತೆಗೆ ದೆಹಲಿ ಗಲಭೆಯ ವಿಷಯದಲ್ಲಿ ಕೂಡ ಬಹುಸಂಖ್ಯಾತರ ಪರ ಮತ್ತು ಅಲ್ಪಸಂಖ್ಯಾತರ ವಿರೋಧಿ ಧೋರಣೆ ತಳೆದು ಪರೋಕ್ಷವಾಗಿ ಗಲಭೆಗೆ ಕುಮ್ಮಕ್ಕು ನೀಡಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಆ ಹಿನ್ನೆಲೆಯಲ್ಲಿ ದೆಹಲಿ ವಿಧಾನಸಭಾ ಸಮಿತಿ ಫೇಸ್ ಬುಕ್ ವಿರುದ್ಧ ತನಿಖೆಗೂ ಚಾಲನೆ ನೀಡಿತ್ತು.
Also Read: ಬಯಲಾಯ್ತು ಮೋದಿ ಬಿಜೆಪಿ- ಫೇಸ್ ಬುಕ್ ನಡುವಿನ ಅಪವಿತ್ರ ಮೈತ್ರಿ!
ಜಾಲತಾಣ ದೈತ್ಯ ಸಂಸ್ಥೆಯ ಅಂತಹ ತಾರತಮ್ಯದ ಮತ್ತು ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಗಂಭೀರ ಆರೋಪಗಳಿಗೆ ಪ್ರಮುಖವಾಗಿ ಸಂಸ್ಥೆಯ ಭಾರತೀಯ ಕಾರ್ಯನಿರ್ವಹಣಾ ವಿಭಾಗ ಮುಖ್ಯಸ್ಥೆ ಅಂಖೀ ದಾಸ್ ಅವರೇ ಕಾರಣ. ಪ್ರಧಾನಿ ಮೋದಿ ಮತ್ತು ಬಿಜೆಪಿಯೊಂದಿಗೆ ಆಪ್ತ ನಂಟು ಹೊಂದಿರುವ ಆಕೆ, ಹಲವು ಸಂದರ್ಭಗಳಲ್ಲಿ ಬಿಜೆಪಿ ಮತ್ತು ಮೋದಿಯವರ ಪರ ಸಾರ್ವಜನಿಕವಾಗಿಯೇ ನಿಲವು ತಳೆದಿದ್ದರು ಮತ್ತು ಆಂತರಿಕವಾಗಿಯೂ ಕಂಪನಿಯ ಸಿಬ್ಬಂದಿಗೆ ಮೋದಿ ಮತ್ತು ಬಿಜೆಪಿ ಪರ ಇರುವಂತೆ ತಾಕೀತು ಮಾಡುತ್ತಿದ್ದರು ಎಂಬ ಗಂಭೀರ ಸಂಗತಿ ಹಲವು ಸಾಕ್ಷ್ಯಾಧಾರ ಸಹಿತ ಬಹಿರಂಗಗೊಂಡಿತ್ತು.
Also Read: ಬಿಜೆಪಿ ಗೆಲುವು ಸಮಾಜವಾದಿ ರಾಷ್ಟ್ರ ಎಂಬ ಕಳಂಕ ತೊಳೆಯಿತು ಎಂದಿದ್ದ ಅಂಖೀ ದಾಸ್!
ಜಾಹೀರಾತು ಲಾಭ ಮತ್ತು ಕಂಪನಿಯ ವ್ಯವಹಾರ ವಿಸ್ತರಣೆಯ ಉದ್ದೇಶದಿಂದ ಅಂಖೀ ದಾಸ್ ಅವರು ಇಡೀ ಸಂಸ್ಥೆಯ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಕಾರ್ಯನಿರ್ವಹಣೆಯ ನೈತಿಕತೆಯನ್ನೇ ದೇಶದ ಆಡಳಿತರೂಢ ಪಕ್ಷ ಮತ್ತು ಅದರ ಕಟ್ಟರ್ ಹಿಂದುತ್ವವಾದಿ ಸಂಘಟನೆಗಳಿಗೆ ಅಡವಿಟ್ಟಿದ್ದಾರೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಫೇಸ್ ಬುಕ್ ಕಂಪನಿ ಭಾರತವಷ್ಟೇ ಅಲ್ಲದೆ, ಜಾಗತಿಕ ಮಟ್ಟದಲ್ಲಿಯೂ ತೀವ್ರ ಟೀಕೆಗೆ ಗುರಿಯಾಗಿತ್ತು. ಕಾಂಗ್ರೆಸ್ ಸೇರಿದಂತೆ ಭಾರತದ ಪ್ರಮುಖ ಪ್ರತಿಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ಫೇಸ್ ಬುಕ್ ವಿರುದ್ದ ತನಿಖೆಗೆ ಆಗ್ರಹಿಸಿದ್ದವು. ಅಷ್ಟೇ ಅಲ್ಲ; ಕಂಪನಿ ಆಂತರಿಕ ಸಿಬ್ಬಂದಿ ಮತ್ತು ಆಡಳಿತ ಕೂಡ ಅಂಖೀ ದಾಸ್ ಅವರ ಕ್ರಮದಿಂದಾಗಿ ಜಾಗತಿಕ ಮಟ್ಟದಲ್ಲಿ ಕಂಪನಿ ಮುಜಗರಕ್ಕೀಡಾಗಿದೆ ಮತ್ತು ಕಂಪನಿಯ ನೈತಿಕತೆಗೆ ಪೆಟ್ಟುಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
Also Read: ಫೇಸ್ಬುಕ್-ಬಿಜೆಪಿ ಒಳ ಒಪ್ಪಂದ: ತನಿಖೆಯ ಬೇಡಿಕೆಯನ್ನು ಮತ್ತೆ ಮುಂದಿಟ್ಟ ಕಾಂಗ್ರೆಸ್
ವಾಲ್ ಸ್ಟ್ರೀಟ್ ಜರ್ನಲ್ ತನ್ನ ಮತ್ತೊಂದು ವರದಿಯಲ್ಲಿ, ‘ಪ್ರಧಾನಿ ಮೋದಿಯವರು ಭಾರೀ ಜಯಭೇರಿ ಭಾರಿಸಿದ 2014ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನಾ ದಿನ ಫೇಸ್ ಬುಕ್ ಇಂಡಿಯಾದ ಅಂಖೀ ದಾಸ್, “ಅವರ ಸಾಮಾಜಿಕ ಜಾಲತಾಣ ಪ್ರಚಾರಕ್ಕೆ ನಾವೊಂದು ಕಿಡಿ ಹೊತ್ತಿಸಿದೆವು. ಅದರ ಪ್ರತಿಫಲವೇನು ಎಂಬುದು ಈಗ ಇತಿಹಾಸ ನಿರ್ಮಿಸುತ್ತಿದೆ” ಎಂದು ತಮ್ಮ ಸಂಸ್ಥೆಯ ಆಂತರಿಕ ಜಾಲತಾಣ ಗುಂಪಿನಲ್ಲಿ ಬೆನ್ನುತಟ್ಟಿಕೊಂಡಿದ್ದರು ಎಂಬುದನ್ನು ಆಧಾರಸಹಿತವಾಗಿ ಬಹಿರಂಗಪಡಿಸಿತ್ತು.
ಈ ಸರಣಿ ವರದಿಗಳು ಭಾರತದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿತ್ತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸಾಕಷ್ಟು ಕೆಸರೆರಚಾಟಕ್ಕೂ ನಾಂದಿ ಹಾಡಿತ್ತು. ಈ ನಡುವೆ ಆ ವರದಿಗಳ ಹಿನ್ನೆಲೆಯಲ್ಲಿ ತನಗೆ ಬೆದರಿಕೆ ಕರೆಗಳು ಬರುತ್ತಿವೆ. ತನಗೆ ರಕ್ಷಣೆ ಒದಗಿಸಿ ಎಂದು ಅಂಖೀ ದಾಸ್ ಪತ್ರಕರ್ತರೊಬ್ಬರು ಸೇರಿದಂತೆ ಹಲವರ ವಿರುದ್ದ ಪೊಲೀಸ್ ದೂರು ಕೂಡ ನೀಡಿದ್ದರು. ಅದೇ ಹೊತ್ತಿಗೆ, ಫೇಸ್ ಬುಕ್ ಕಂಪನಿಯ ರಾಜಕೀಯ ಪಕ್ಷಪಾತ ಧೋರಣೆ ಮತ್ತು ಚುನಾವಣೆಗಳ ಮೇಲೆ ಪ್ರಭಾವ ಬೀರುವ ನೀತಿಯ ಕುರಿತು ವಿಚಾರಣೆ ನಡೆಸುವುದಾಗಿ ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ಹೇಳಿತ್ತು.
Also Read: ಬಾಯಲ್ಲಿ ಬಾಯ್ಕಾಟ್ ಚೀನಾ, ಬಗಲಲ್ಲಿ ಸಾಲ: ಬಯಲಾಯ್ತು ಡಬ್ಬಲ್ ಸ್ಟ್ಯಾಂಡರ್ಡ್ !
2011ರಿಂದ ಫೇಸ್ ಬುಕ್ ಕಂಪನಿಯ ಭಾರತದ ವ್ಯವಹಾರಗಳ ಹೊಣೆ ಹೊತ್ತಿರುವ ಅಂಖೀ ದಾಸ್, ಆರಂಭದಿಂದಲೂ ಬಿಜೆಪಿ ಮತ್ತು ಮೋದಿ ಪರವಾಗಿ ಮತ್ತು ಕಾಂಗ್ರೆಸ್ ವಿರುದ್ಧವಾಗಿ ನಿರಂತರವಾಗಿ ಸಂದೇಶಗಳನ್ನು ಕಂಪನಿಯ ಸಿಬ್ಬಂದಿಯ ಆಂತರಿಕ ಬಳಕೆಯ ಗುಂಪುಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅಲ್ಲದೆ ಆಕೆ ಆ ಮುನ್ನ ಕೂಡ ಮೋದಿಯವರ ಗುಜರಾತ್ ಚುನಾವಣೆಗಳಲ್ಲಿ ಅವರ ಆನ್ ಲೈನ್ ಪ್ರಚಾರ ತಂಡಗಳಿಗೆ ತರಬೇತಿ ನೀಡಿದ್ದರು ಮತ್ತು ಮೋದಿಯವರ ಕುರಿತು ಒಂದು ಕೃತಿಯನ್ನೂ ರಚಿಸಿದ್ದರು.
ಆ ಎಲ್ಲಾ ಹಿನ್ನೆಲೆಯಲ್ಲಿ ಅಂಖೀ ದಾಸ್ ಇತ್ತೀಚಿನ ವರ್ಷಗಳಲ್ಲಿ ದೊಡ್ಡಮಟ್ಟದ ವಿವಾದಕ್ಕೆ ಕಾರಣವಾದ ಸಾಮಾಜಿಕ ಜಾಲತಾಣ ಸಂಸ್ಥೆಗಳ ಅಧಿಕಾರಿಯಾಗಿ ಕುಖ್ಯಾತಿ ಪಡೆದಿದ್ದರು. ಕಳೆದ ವಾರ ಕೂಡ ಫೇಸ್ ಬುಕ್ ಡೇಟಾ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣವೊಂದರ ಸಂಬಂಧ ಸಂಸದೀಯ ಸಮಿತಿಯ ವಿಚಾರಣೆಗೆ ಹಾಜರಾಗಿದ್ದ ಅಂಖೀ ದಾಸ್, ಇದೀಗ ದಿಢೀರನೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಕಂಪನಿಯನ್ನು ತೊರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ನಡುವೆ, ಫೇಸ್ ಬುಕ್ ಇಂಡಿಯಾದ ಎಂಡಿ ಅಜಿತ್ ಮೋಹನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, “ಕಂಪನಿಯಲ್ಲಿ ಬರೋಬ್ಬರಿ 9 ವರ್ಷ ಸೇವೆ ಸಲ್ಲಿಸಿದ ಅಂಖೀ ದಾಸ್ ಇದೀಗ ನಾಗರಿಕ ಸೇವೆಯ ತಮ್ಮ ಕನಸು ನನಸು ಮಾಡಿಕೊಳ್ಳಲು ಕಂಪನಿಯ ಹುದ್ದೆ ತೊರೆದಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಅಂಖೀ ದಾಸ್ ಅವರ ಮೋದಿ ಭಕ್ತಿ ಮತ್ತು ಬಿಜೆಪಿ ಪರ ಧೋರಣೆಯಿಂದಾಗಿ ಫೇಸ್ ಬುಕ್ ಕಂಪನಿ ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಎದುರಿಸಿದ ಮುಜುಗರ ಮತ್ತು ಕಾನೂನು ಪ್ರಕ್ರಿಯೆಗಳು ಈ ರಾಜೀನಾಮೆಯ ಹಿಂದೆ ಇವೆಯೇ? ಅಥವಾ ಅದಕ್ಕಿಂತಲೂ ಗಂಭೀರ ಸಂಗತಿಗಳು ತೆರೆಮರೆಯಲ್ಲಿ ನಡೆದಿವೆಯೇ? ಅಥವಾ ಎಂಡಿ ಹೇಳಿದಂತೆ ಕೇವಲ ನಾಗರಿಕ ಸೇವೆಯ ಕನಸು ಕಾರಣವೇ ಎಂಬುದನ್ನು ಭವಿಷ್ಯದ ದಿನಗಳು ಬಹಿರಂಗಪಡಿಸಲಿವೆ. ಸದ್ಯಕ್ಕಂತೂ ವಿವಾದಿತ ಅಧಿಕಾರಿ ಫೇಸ್ ಬುಕ್ ನಿಂದ ಹೊರನಡೆದಿದ್ದಾರೆ. ಅಷ್ಟರಮಟ್ಟಿಗೆ ಫೇಸ್ ಬುಕ್ ಇನ್ನಷ್ಟು ಮುಜುಗರದಿಂದ ಪಾರಾಗಿದೆ ಎನ್ನಬಹುದು!