ಡ್ರಗ್ಸ್ ಮಾಫಿಯಾ, ಬೆಟ್ಟಿಂಗ್ ದಂಧೆ ಮಾಡುವವರಿಂದ ವಸೂಲಿ ಮಾಡಿದ ಹಣದಿಂದಲೇ ಮೈತ್ರಿ ಸರ್ಕಾರವನ್ನು ಬುಡಮೇಲು ಮಾಡಲಾಯಿತು ಎಂಬ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜನಸೇವೆಯಲ್ಲಿ ವಿಶ್ವಾಸವಿಟ್ಟು ರಚನೆಗೊಂಡ ಸರಕಾರವೊಂದು ಮಾಫಿಯಾದ ಹಣದಿಂದ ಹೇಗೆ ಬುಡಮೇಲಾಯಿತು ಎಂಬುದಷ್ಟನ್ನೇ ಜನತೆಯ ಮುಂದೆ ಹೇಳಿದ್ದೇನೆ. ಆದರೆ ಸಚಿವ ಸುಧಾಕರ್ ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಉದ್ಭವಿಸಿದ್ದು ಏಕೆಂದು ಅರ್ಥವಾಗಲಿಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಸುಧಾಕರ್, ʼಸರ್ಕಾರದ ವಿರುದ್ಧ ತಮ್ಮ ಆರೋಪಗಳಿಗೆ ಪುರಾವೆ ನೀಡಿ. ಸರ್ಕಾರದಲ್ಲಿ ಸಚಿವನಾಗಿ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಅದಕ್ಕೆ ಪುರಾವೆ ಕೇಳುವುದು ಹೆಗಲು ಮುಟ್ಟಿಕೊಳ್ಳುವ ಪ್ರಮೇಯ ಹೇಗಾದೀತು? ಎಂದು ತಿರುಗಿ ಪ್ರಶ್ನಿಸಿದ್ದಾರೆ.
ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಮುಖ್ಯಮಂತ್ರಿಗಳಾದಿರಿ ಎಂಬ ಬಗ್ಗೆಯೂ ಒಮ್ಮೆ ತಮ್ಮನ್ನು ಕೇಳಬಹುದೇ? ಪಕ್ಕದಲ್ಲಿ ಧರಮ್ ಸಿಂಗ್ ಅವರನ್ನು ಇಟ್ಟುಕೊಂಡು, ಕೆಲವು ಸ್ನೇಹಿತರೊಂದಿಗೆ ರಾತ್ರೋರಾತ್ರಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದ ಹಿನ್ನಲೆ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ. ಒಮ್ಮೆ ಕೇಳಿಸಿಕೊಳ್ಳಿ! ಎಂದು ಕುಮಾರಸ್ವಾಮಿಯನ್ನು ಟೀಕಿಸಿದ್ದಾರೆ.
Also Read: ಡ್ರಗ್ಸ್ ಮಾಫಿಯಾ ವಸೂಲಿ ಹಣದಿಂದಲೇ ಮೈತ್ರಿ ಸರ್ಕಾರವನ್ನು ಉರುಳಿಸಲಾಗಿದೆ- HDK ಗಂಭೀರ ಆರೋಪ
ತಮ್ಮ ಆರೋಪಗಳ ಹಿನ್ನಲೆ ಆಧಾರಗಳ ಬಗ್ಗೆ ಕೇಳಿದ್ದೇನೆ. ನಾನು ಮಾಜಿ ಮುಖ್ಯಮಂತ್ರಿ ಮಾಜಿ ಪ್ರಧಾನಮಂತ್ರಿಯ ಮಗನಲ್ಲ, ಒಬ್ಬ ಸಾಮಾನ್ಯ ಶಾಲಾ ಶಿಕ್ಷಕನ ಮಗನಾಗಿ ಸ್ವಸಾಮರ್ಥ್ಯದಿಂದ, ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ನಾನೆಂದೂ ಯಾರ ಹೆಸರಿನಲ್ಲೂ ರಾಜಕೀಯ ಮಾಡಿಲ್ಲ. ಎಲ್ಲರ ಹಿನ್ನಲೆಗಳನ್ನೂ ರಾಜ್ಯದ ಜನರು ಗ್ರಹಿಸಿದ್ದಾರೆ. ನಾನು ಯಾವ ಮುಂಬೈಗೂ ಹೋಗಿಲ್ಲ. ಡ್ರಗ್ ಮಾಫಿಯಾ ಹಣದಿಂದ ಈ ಸರ್ಕಾರ ಬಂದಿದ್ದರೆ, ಅದು ಖಂಡಿತ ಇರಬಾರದು. ಮಾಜಿ ಮುಖ್ಯಮಂತ್ರಿಗಳಾಗಿ ಇಂಥ ಗಂಭೀರ ಆರೋಪಗಳಿಗೆ ಪುರಾವೆಯನ್ನೂ ನೀಡಲೇಬೇಕಾಗುತ್ತದೆ. ಇದನ್ನು ತಾವು ಸಾಬೀತು ಮಾಡಿದರೆ ನಾನು ರಾಜೀನಾಮೆ ಕೊಡ್ತೇನಿ ಆಗದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವಿರಾ? ಎಂದು ಸುಧಾಕರ್ ಸವಾಲು ಹಾಕಿದ್ದಾರೆ.
ಬಿಜೆಪಿ ಕಾರ್ಯಕರ್ತರ ಪರವಾಗಿ ಮಾತನಾಡಲು ನಮಲ್ಲಿ ಅರ್ಹ ವಕ್ತಾರರು ಇದ್ದಾರೆ. ಪಕ್ಷದ ಸಿದ್ದಾಂತದ ಬಗ್ಗೆ, ಅಥವಾ ನನ್ನ ಅರ್ಹತೆ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ನಿರ್ಣಯಿಸುತ್ತಾರೆ ಬಿಡಿ! ತಾವು ತಲೆಕೆಡಿಸಿಕೊಳ್ಳುವ ಅಗತ್ಯವೇನಿದೆ? ನಾನು ಕೇಳಿದ್ದು ಡ್ರಗ್ ಮಾಫಿಯಾ ಆರೋಪದ ಹಿನ್ನಲೆಗಳ ಬಗ್ಗೆ, ಮಾಜಿ ಮುಖ್ಯಮಂತ್ರಿಗಳಾಗಿ, ಡ್ರಗ್ ಮಾಫಿಯಾ ಹಣದಿಂದ ಸರ್ಕಾರ ಬಂದಿದೆ ಎಂದು ಚುನಾಯಿತ ಸರ್ಕಾರದ ಮೇಲಿನ ಬೇಜಾವಾಬ್ದಾರಿ ಹೇಳಿಕೆಯ ಹಿನ್ನಲೆ ಬಗ್ಗೆ! ಬಿಜೆಪಿ ಅನೈತಿಕ ಕೆಲಸವನ್ನು ಎಂದೂ ಮಾಡಿಲ್ಲ, ಮಾಡುವುದಿಲ್ಲ. ಅದಕ್ಕೆ 2 ಸ್ಥಾನದಿಂದ 303 ಸ್ಥಾನಗಳನ್ನು ಜನ ಆಶೀರ್ವದಿಸಿದ್ದಾರೆ ಎಂದು ಸುಧಾಕರ್ ಹೇಳಿದ್ದಾರೆ.