ಜಮ್ಮು ಕಾಶ್ಮೀರ ದಲ್ಲಿ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗದಗ್ ಜಿಲ್ಲೆಯ ರೋಣ ತಾಲೂಕಿನ ಕರಮುಡಿ ಗ್ರಾಮದ ವೀರೇಶ ಬೋಜಪ್ಪ ಕುರಟ್ಟಿ ಎಂಬ ಯೋಧ ವೀರ ಮರಣ ಹೊಂದಿದರು.
ಇನ್ನು ಮೂರೇ ತಿಂಗಳಿನಲ್ಲಿ ನಿವೃತ್ತಿ ಹೊಂದಲಿದ್ದು ಅವರು ರೈತನಾಗಬೇಕೆಂಬ ಕನಸು ಕಂಡಿದ್ದರು. ಇದನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ವೀರೇಶ್ ಅವರು ಕಳೆದ ಬಾರಿ ಪ್ರವಾಹದ ಸಮಯದಲ್ಲಿ ಊರಿಗೆ ಬಂದಾಗ ಅನೇಕ ಜನರನ್ನು ರಕ್ಷಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ಅವರ ಸ್ನೇಹಿತರ ಜೊತೆಗೆ ಹಾಗೂ ಕುಟುಂಬದವರ ಜೊತೆಗೆ ನೂತನ ಕೃಷಿ ವಿಧಾನ ಬಳಸಿ ಉತ್ತಮ ಬೆಳೆ ತೆಗೆಯಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು.
ವೀರೇಶ್ ಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಓರ್ವ ಸಹೋದರನಿದ್ದು. ಪತ್ನಿ ಮತ್ತು ಮಕ್ಕಳನ್ನು ಗದುಗಿನ ವಿದ್ಯಾಭ್ಯಾಸಕ್ಕಾಗಿ ಮನೆ ಬಾಡಿಗೆ ಪಡೆದಿದದ್ದರು. ಕಳೆದ ಬಾರಿ ಬಂದಾಗ ಮಕ್ಕಳಿಗೆ ಚೆನ್ನಾಗಿ ಓದಿ, ಇನ್ನು ಐದಾರು ತಿಂಗಳಿನಲ್ಲೇ ಬರುತ್ತೇನೆ, ನಂತರ ನಿಮ್ಮನ್ನು ಬಿಟ್ಟು ಎಲ್ಲಿಯೂ ಹೋಗಲ್ಲ ಎಂದವರು ವೀರಮರಣ ಅಪ್ಪಿದ್ದು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.
ವೀರೇಶ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹಾನಗಲ್ ತಾಲೂಕಿನ ಬೊಮ್ಮನಳ್ಳಿ, ಗದಗ್‌ನ ಮಲ್ಲಾಪುರ ಹಾಗೂ ಮೆಣಸಗಿಯಲ್ಲಿ ಮುಗಿಸಿ, ನಂತರ ಐಟಿಐ ಸೇರಿದರು. ಅಷ್ಟರಲ್ಲೇ ಸೈನ್ಯಕ್ಕೆ ಆಯ್ಕೆಯಾಗಿ ಬೆಳಗಾವಿಯ 18ನೇ ಮರಾಠಾ ರೆಜಿಮೆಂಟ್ ನಲ್ಲಿ ತರಬೇತಿ ಪಡೆದು ಒಟ್ಟು 30 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಸುಬೇದಾರ್ ಅಗಿದ್ದರು.
ಒಂದಲ್ಲ ಎರಡಲ್ಲ ಮೂರು ಬಾರಿ ಸೇವೆಯನ್ನು ವಿಸ್ತರಿಸಿಗೊಂಡು ಜಮ್ಮು ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸಿದ್ದು ಅನೇಕ ಶತ್ರುಗಳನ್ನು ಸದೆಬಡಿದ ಕೀರ್ತಿ ವೀರೇಶ ಅವರಿಗೆ ಸಲ್ಲುತ್ತದೆ. ಗ್ರಾಮಕ್ಕೆ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಬಂದು ಮಾರತೇಶ್ವರ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಂಡು ಸೇನೆಯ ರೋಚಕ ಕತೆಗಳನ್ನು ಹೇಳುತ್ತಿದ್ದ ವೀರ ಇಂದು ನಮ್ಮೊಂದಿಗಿಲ್ಲ ಎಂದು ಗ್ರಾಮಸ್ಥರ ರೋಧಿಸುತ್ತಾರೆ.
ಸುದ್ದಿ ತಿಳಿಯುತ್ತಿದ್ದಂತೆ ವೀರೇಶ್ ಅವರ ತಾಯಿ ಅಳುತ್ತಾ ಮೂರ್ನಾಲ್ಕು ತಿಂಗಳಿನಲ್ಲಿ ವಾಪಸ್ಸು ಬರುತ್ತೇನೆಂದ..ಸಾಯುವಾಗ ನಾವು ನೆನಪಾಗಲಿಲ್ಲವೇ, ಇಬ್ಬರು ಚಿಕ್ಕ ಚಿಕ್ಕ ಮಕ್ಕಳಿದ್ದಾರೆ, ಅವರಿಗಿನ್ನು ಯಾರು ಗತಿ, ನಾವು ಹೇಗೆ ಸಮಾಧಾನಪಡಿಸಬೇಕು ಎಂದು ಅಲವತ್ತು ಕೊಂಡರು.
ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಗ್ರಾಮವನ್ನು ಸ್ವಚ್ಛಗೊಳಿಸಿ ಶುಕ್ರವಾರವೇ ಅಂತ್ಯಕ್ರಿಯೆಗೆ ತಯಾರಿ ಮಾಡಿಕೊಂಡಿದ್ದಾರೆ.
ಉದ್ಯೋಗ ಮಾಡಿ, ಖಾಲಿ ಕೂಡಬೇಡಿ ಎಂದು ಪ್ರೇರೇಪಿಸುತ್ತಿದ್ದ ವೀರೇಶ್
ವೀರೇಶ್ ಪ್ರತಿ ಬಾರಿ ಗ್ರಾಮಕ್ಕೆ ಬಂದಾಗ ಕೃಷಿ ಮಿತ್ರರನ್ನು ಕರೆದು ಬರ, ನೆರೆ ಅಂತ ಖಾಲಿ ಕೂಡಬೇಡಿ, ಏನಾದರೂ ಕೆಲಸ ಹುಡುಕಿಕೊಳ್ಳಿ ಎಂದು ಆತ್ಮ ವಿಶ್ವಾಸ ತುಂಬುತ್ತಿದ್ದರು. ತಮಗೆ ಪರಿಚಯವಿರುವ ಕಡೆಗೆ ಕೆಲಸಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದರು. ಈ ಗುಣ ಅವರನ್ನು ಎಲ್ಲರ ಸೆಳೆಯುವ ಹಾಗೆ ಮಾಡಿತ್ತು. ನೆರೆ ಬಂದಾಗ ಹಗಲು ರಾತ್ರಿ ಎನ್ನದೇ ಗ್ರಾಮದ ಒಳಗಡೆ ನೀರು ತುಂಬುತ್ತಿದ್ದರೂ ಅದನ್ನು ಲೆಕ್ಕಿಸದೇ ಹಲವರನ್ನು ಅವರ ಗಂಟು ಮೂಟೆಗಳ ಸಹಿತ ಕಾಪಾಡಿದ್ದರು. ಅದನ್ನು ವರದಿ ಮಾಡಬೇಡಿ ತಮ್ಮ ಮಾಧ್ಯಮ ಮಿತ್ರರಿಗೂ ತಿಳಿಸಿದ್ದರು. ಪರೋಪಕಾರಿ, ಮಾರ್ಗದರ್ಶಿ ಹಾಗೂ ರೈತ ಪರನಾಗಿದ್ದ ವೀರೇಶ ತಮ್ಮ ತಂದೆ ಬೋಜಪ್ಪ ತೀರಿಕೊಂಡಾಗ ತಾಯಿಗೆ ಹಾಗೂ ತಮ್ಮನಿಗೆ ತಾನಿದ್ದೇನೆ ಎಂಬ ಧೈರ್ಯ ತುಂಬಿ ಯುದ್ಧಕ್ಕೆ ಹೋಗಿದ್ದು ಇನ್ನೂ ಹಲವು ಗ್ರಾಮಸ್ಥರು ಮೆಲುಕು ಹಾಕುತ್ತಾರೆ.
ಪ್ರಕಾಶ ಕೌಜಗೇರಿ, ವೀರೇಶ ಬಾಲ್ಯದ ಗೆಳೆಯ ಹೇಳಿದ್ದು ಹೀಗೆ, “ಅವನು ಬಂದರೆ ನಾವೆಲ್ಲ ಗೆಳೆಯರು ಎಷ್ಟೇ ಕೆಲಸವಿದ್ದರೂ ಒಂದೆಡೆ ಸೇರುತ್ತಿದ್ದೆವು. ದುರಭ್ಯಾಸದ ಮನುಷ್ಯ ಅವನಲ್ಲ. ಚೆನ್ನಾಗಿ ತಿನ್ನಿ ಹಾಗೇ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮಿತ್ರರಿಗೆ ದುರಭ್ಯಾಸಗಳನ್ನೂ ಬಿಡಿಸಿದ್ದ. ಸೈನಿಕನಾಗಿ ನಿವೃತ್ತಿ ಹೊಂದಿದ ಮೇಲೆ ಉತ್ತಮ ಕೃಷಿಕನಾಗುತ್ತೇನೆ, ಮಾರ್ಚ್ 2020 ಕ್ಕೆ ಬರುತ್ತೇನೆ ಎಂದು ಹೋದವನು ಬದುಕಿ ಬರಲೇ ಇಲ್ಲ”.
ಇಂದು ವೀರೇಶ್ ಅವರ ಶವ ಸಂಸ್ಕಾರ ಗೌರವ ವಿಧಿ ವಿಧಾನದೊಂದಿಗೆ ನೇರವೇರಲಿದ್ದು ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ನೇರವೇರಲಿದೆ.