ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ದಿನಕ್ಕೊಂದು ಸುದ್ದಿಯನ್ನ ಗುಜರಾತ್‌ನಿಂದ ಹೊತ್ತು ತರುತ್ತಿದೆ, ಟ್ರಂಪ್ ಬರುವ ಹಾದಿಯಲ್ಲಿ ಸ್ಲಂ ಕಾಣದಿರಲಿ ಎಂದು ಗೋಡೆಕಟ್ಟಿ, ಕೊಳಚೆ ಪ್ರದೇಶದ ನಿವಾಸಿಗಳನ್ನ ಒಕ್ಕಲೆಬ್ಬಿಸಿ, ರೋಡ್‌ಶೋ ಹಾದಿಯಲ್ಲೆಲ್ಲಾ ಸ್ವಚ್ಛ ಭಾರತ ಅಭಿಯಾನ ನಡೆಸಿ, ಅಭೂತಪೂರ್ವ ಭದ್ರತೆ ನೀಡಿರುವ ಗುಜರಾತ್ ಸರ್ಕಾರ ವ್ಯಯಿಸುತ್ತಿರುವುದು ಬರೊಬ್ಬರಿ ನೂರು ಕೋಟಿ ರುಪಾಯಿ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಹೇಳಿದೆ, ಈ ಬೃಹತ್ ಮೊತ್ತ ಗುಜರಾತ್ ಬಜೆಟ್‌ನ ವೆಚ್ಚದ 1.5 ಶೇಕಡಾ ಎಂದು ಅಂದಾಜಿಸಲಾಗಿದೆ.
ಅಮೆರಿಕ ಅಧ್ಯಕ್ಷರ ಗುಜರಾತ್ ಪ್ರವಾಸಕ್ಕೆ ಏಕಿಷ್ಟು ಮಹತ್ವ?
ರಾಜತಾಂತ್ರಿಕತೆಯ ಆಚೆ ಪ್ರಧಾನಿ ಮೋದಿ ವಿಶ್ವಕ್ಕೆ ಸಂದೇಶ ಸಾರಲು, ದೇಶದೊಳಗಿನ ಬುದ್ಧಿಜೀವಿಗಳಿಗೆ ಉತ್ತರ ನೀಡಲು ಬೇಕಾಬಿಟ್ಟಿ ಹಣ ವ್ಯಯಿಸುತ್ತಿದ್ದಾರೆಯೇ? ಕಳೆದ ಹದಿನೈದು ದಿನಗಳಿಂದ ಟ್ರಂಪ್ ಭಾರತ ಭೇಟಿಯದ್ದೇ ಚರ್ಚೆ. ಫೆ.24ರಂದು ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿಯುವ ಟ್ರಂಪ್‌ರನ್ನ ಪ್ರಧಾನಿ ಮೋದಿ ನೂರಾರು ಕೋಟಿ ವೆಚ್ಚದಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಿದ್ದಾರೆ, ಟ್ರಂಪ್ ಪೂರ್ವನಿಗದಿಯಂತೆ ಮೂರೇ ಗಂಟೆಗಳ ಕಾಲ ಅಹಮದಾಬಾದ್‌ನಲ್ಲಿರ್ತಾರೆ, ಆದರೂ ಕೂಡ ಅಲ್ಲಿನ ಕೊಳಕನ್ನ ಮರೆಮಾಚಿ ಟ್ರಂಪ್ ಎದುರು ಸುಂದರ ಭಾರತ ತೋರಿಸಲು ಪ್ರಧಾನಿ ಸಿದ್ಧರಾಗಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಚೀನಾ,ಜಪಾನ್ ಹಾಗೂ ಇಸ್ರೇಲ್ ಪ್ರಧಾನಿಗಳು ಭೇಟಿ ನೀಡಿದ್ದರು ಆದರೆ ಅಮೆರಿಕಾ ಅಧ್ಯಕ್ಷರು ಬಂದಿರಲಿಲ್ಲ, ಈ ಭೇಟಿ ಹಲವು ಆಯಾಮಗಳಲ್ಲಿ ಮಹತ್ವ ಪಡೆದುಕೊಂಡಿದೆ, ಅಧ್ಯಕ್ಷೀಯ ಚುನಾವಣೆ ಹೊಸ್ತಿಲಲ್ಲಿ ಟ್ರಂಪ್‌ಗೂ ಅನಿವಾಸಿ ಭಾರತೀಯರನ್ನ ಓಲೈಸಿಕೊಳ್ಳಬೇಕಿದೆ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ನಡೆದ ನರಮೇಧದ ಕಾರಣಕಕ್ಕೆ ಅಮೆರಿಕಾ ವೀಸಾ ನಿರಾಕರಣೆ ಮಾಡಿತ್ತು. ದೇಶದ ಬುದ್ಧಿಜೀವಿಗಳೇ ಪ್ರಧಾನಿಯನ್ನ ಆರೋಪಿ ಸ್ಥಾನದಲ್ಲಿಟ್ಟಿದ್ದು ಎಂದು ಸಂಘಪರಿವಾರದ ಸದಸ್ಯರು ಸೂಕ್ತ ಉತ್ತರ ನೀಡಲು ಕಾಯುತ್ತಿದ್ದರು. ಕಳೆದ ಭಾನುವಾರ ಶಿವಮೊಗ್ಗದಲ್ಲಿ ಪಕ್ಷದ ಹಿರಿಯರ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕೂಡ ಟ್ರಂಪ್ ಬರುವಿಕೆಯನ್ನ ದಶಕದ ದ್ವೇಷ ಎಂಬಂತೇ ಮಾತನಾಡಿ, ನಮ್ಮಲ್ಲಿರುವ ಬುದ್ಧಿಜೀವಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮರ್ಯಾದೆ ತೆಗೆದಿದ್ದರು, ವೀಸಾ ನಿರಾಕರಣೆ ಮಾಡಿದ ರಾಷ್ಟ್ರದ ಅಧ್ಯಕ್ಷ ಗುಜರಾತ್‌ಗೇ ಬರುತ್ತಿರುವುದು ಸಾಮಾನ್ಯ ಅಲ್ಲ ಎಂದಿದ್ದರು.
ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಕ್ಕೆ ಬಂದಿಳಿಯುವ ಟ್ರಂಪ್‌ರನ್ನ ಪ್ರಧಾನಿ ಬರಮಾಡಿಕೊಳ್ಳಲಿದ್ದಾರೆ, ಅಲ್ಲಿಂದು ಏರ್‌ಪೋರ್ಟ್ ಹಾದಿಯಲ್ಲಿ ನಗರದೊಳಗೆ ಸುಮಾರು 22 ಕಿಲೋಮೀಟರ್ ರೋಡ್ ಶೋ ನಡೆಯಲಿದೆ ಈ ಕಾರಣಕ್ಕಾಗಿಯೇ ಟ್ರಂಪ್ ಬರುವ ಮಾರ್ಗದ ಆಚೀಚೆ ಇರುವ ಕೊಳಚೆ ಪ್ರದೇಶಗಳ ಮರೆಮಾಡಿ ಬೃಹತ್ ಗೋಡೆಗಳನ್ನ ನಿರ್ಮಾಣ ಮಾಡಿ ವೆಲ್‌ಕಂ ಬರಹಗಳನ್ನ ಬರೆದಿರುವುದು, ನಂತರ ಸಬರಮತಿಗೆ ಭೇಟಿ ನೀಡಲಿದ್ದಾರೆ, ಸುತ್ತಲೂ ಲಕ್ಷಾಂತರ ಜನ ಉಭಯ ನಾಯಕರಿಗೆ ಸ್ವಾಗತ ಕೋರುತ್ತಾರೆ, ಅಲ್ಲಿಂದ ಮೊಟೆರದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಉದ್ಘಾಟನೆ ಮಾಡಲಿದ್ದಾರೆ, ಈ ಎಲ್ಲಾ ಭದ್ರತೆಗೆ ಹನ್ನೆರಡು ಸಾವಿರ ಪೊಲೀಸ್ ಹಾಗೂ ಅರೆಸೇನಾ ಪಡೆಯನ್ನ ನಿಯೋಜಿಸಲಾಗಿದೆ. ಕೇವಲ ಮೂರೇ ಗಂಟೆಯಲ್ಲಿ ನಡೆಯುವ ಈ ಕಾರ್ಯಕ್ರಮಗಳಿಗೆ ನೂರು ಕೋಟಿ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಟ್ರಂಪ್ ಗುಜರಾತ್‌ಗೇ ಬರುವ ಅನಿವಾರ್ಯವೇನಿಲ್ಲ ಆದರೆ ಪ್ರಧಾನಿಗೆ ಅವಶ್ಯಕತೆ ಇದೆ, ಭಾರತವನ್ನ ರಾಜಕೀಯೇತರ ಕಾರಣಗಳಿಗೆ ಭೇಟಿ ನೀಡುವುದೇ ಆಗಿದ್ದರೆ ಬೆಂಗಳೂರು ಸೇರಿ ದೇಶದ ಹಲವು ಸ್ಥಳಗಳು ಯೋಗ್ಯ ಎನಿಸುತ್ತಿದ್ದವು, ಟ್ರಂಪ್‌ಗೆ ಸುಂದರ ಗುಜರಾತ್ ತೋರಿಸಲು ಕೊಳಚೆ ಪ್ರದೇಶಗಳಿಗೆ ಗೋಡೆ ಏರಿಸಿ, ಜನರನ್ನ ತಾತ್ಕಾಲಿಕವಾಗಿ ಒಕ್ಕಲೆಬ್ಬಿಸಿ ನೂರಾರು ಕೋಟಿ ಸುರಿಯುತ್ತಿರುವ ಗುಜರಾತ್ ಸರ್ಕಾರ ಟೀಕೆ ಟಿಪ್ಪಣಿಗಳೊಂದಿಗೆ ಇತಿಹಾಸ ನಿರ್ಮಿಸಲಿದೆ. ಭೇಟಿ ಬಳಿಕ ಮಾಧ್ಯಮಗಳು ಹೇಗೆ ವಿಶ್ಲೇಷಣೆ ಮಾಡಲಿವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.