ಕರೋನಾ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಅಷ್ಟೇ ಮದ್ದು ಎಂದು ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಮಾರ್ಚ್ 24 ರಿಂದ ಏಪ್ರಿಲ್ 14ರ ತನಕ ದೇಶವನ್ನು ಲಾಕ್‌ಡೌನ್ ಮಾಡಿ ಆದೇಶ ಹೊರಡಿಸಿತ್ತು. ಆ ಬಳಿಕ ಲಾಕಲ್ಡೌನ್ ಮಾಡಿದ್ರಿಂದ ಭಾರತದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದಿದೆ. ಅದನ್ನೇ ಮುಂದುವರಿಸಲು ಲಾಕ್‌ಡೌನ್ ಮುಂದುವರಿಕೆ ಅನಿವಾರ್ಯ ಎಂದು 2ನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಮಾಡಿದ್ದರು. ಏಪ್ರಿಲ್ 14 ರಿಂದ ಮೇ 3 ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿತ್ತು. ಇದೀಗ ಮೂರನೇ ಬಾರಿಗೆ ಲಾಕ್‌ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ಎರಡು ವಾರಗಳಿಗೆ ಲಾಕ್‌ಡೌನ್ ದೇಶಾದ್ಯಂತ ವಿಸ್ತರಣೆಯಾಗಿದೆ.
ದೇಶಾದ್ಯಂತ ಈಗಾಗಲೇ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೆಲವೊಂದು ಸಡಿಲಿಕೆಗಳನ್ನು ಕೇಂದ್ರ ಸರ್ಕಾರವೇ ಘೋಷಣೆ ಮಾಡಿದೆ. ಇಂದಿನ ಆದೇಶದಲ್ಲಿ ಏಪ್ರಿಲ್ 30ರಂದು ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಮಾನದಂಡಗಳನ್ನೇ ಅನುಸರಿಸುವಂತೆ ಕೇಂದ್ರ ಗೃಹ ಇಲಾಖೆ ಆದೇಶ ಮಾಡಿದೆ. ಕೆಂಪು ವಲಯ, ಕಿತ್ತಳೆ ವಲಯ, ಹಸಿರು ವಲಯಗಳಾಗಿ ವಿಂಗಡಿಸಬೇಕು. ಯಾವುದೇ ಸೋಂಕು ಇಲ್ಲದಿದ್ದರೆ ಹಸಿರು ವಲಯ. 21 ದಿನಗಳಲ್ಲಿನ ಬದಲಾವಣೆಗಳನ್ನು ನೋಡಿಕೊಂಡು ವಲಯಗಳನ್ನು ಬದಲಾವಣೆ ಮಾಡಬಹುದು ಎಂದು ತಿಳಿಸಿದೆ. ಮೇ 3 ರ ತನಕ ಅಧಿಕಾರಿಗಳು ನಿರ್ವಹಿಸಬೇಕಾದ ಶಿಷ್ಟಾಚಾರ (SOP)ದ ಅನ್ವಯ ಕರ್ತವ್ಯ ಮಾಡಲು ಸೂಚಿಸಲಾಗಿದೆ. ದೇಶದ ಇತರೆ ಭಾಗದಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳನ್ನು ವಾಪಸ್ ರಾಜ್ಯಕ್ಕೆ ಕರೆತರಲು ರಸ್ತೆ ಮಾರ್ಗ ಅಥವಾ ರೈಲು ಮಾರ್ಗವನ್ನು ಬಳಸಬಹುದು ಎಂದಿದೆ.

ಆಟೋ, ಟ್ಯಾಕ್ಸಿ ಸಂಚಾರಕ್ಕೂ ಈ ಬಾರಿಯ ಲಾಕ್‌ಡೌನ್‌ನಲ್ಲಿ ಅವಕಾಶ ಕೊಡಲಾಗಿದೆ. ಆದರೆ ಕೆಂಪು ವಲಯದಲ್ಲಿ ಈ ಸೇವೆ ಇರುವುದಿಲ್ಲ. ಚಾಲಕನನ್ನು ಹೊರತು ಪಡಿಸಿ ಇಬ್ಬರು ಪ್ರಯಾಣಿಕರು ಕಾರಿನಲ್ಲಿ ಪ್ರಯಾಣ ಮಾಡಬಹುದು. ಇದು ಹಸಿರು ಮತ್ತು ಕಿತ್ತಳೆ ವಲಯಕ್ಕೆ ಮಾತ್ರ ಅನ್ವಯ. ಹಸಿರು ವಲಯದಲ್ಲಿ ಬಸ್ ಸಂಚಾರಕ್ಕೂ ಅನುಮತಿ ನೀಡಲಾಗಿದೆ. ಆದರೆ ಶೇಕಡ 50 ರಷ್ಟು ಪ್ರಯಾಣಿಕರು ಮಾತ್ರ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಇನ್ನುಳಿದಂತೆ ಸರಕು ಸಾಗಣೆ ವಾಹನಗಳಿಗೆ ಯಾವುದೇ ಜಿಲ್ಲೆ, ರಾಜ್ಯದಲ್ಲೂ ತಡೆಯುವಂತಿಲ್ಲ ಎಂದು ತಿಳಿಸಲಾಗಿದೆ.
ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಸೀಮಿತ ಸಂಖ್ಯೆಯ ಚಟುವಟಿಕೆಗಳಿಗೆ ಅವಕಾಶ ಕೊಡಲಾಗಿದೆ. ಆದರೆ ರಸ್ತೆ, ರೈಲು, ಮೆಟ್ರೋ ಮತ್ತು ಅಂತರ್-ರಾಜ್ಯ ಸಂಚಾರ, ಚಳವಳಿ, ಶಾಲೆಗಳು, ಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು, ಹೋಟೆಲ್‌ಗಳು ಸೇರಿದಂತೆ ಆತಿಥ್ಯ ಸೇವೆಗಳನ್ನು ನಡೆಸುವುದಕ್ಕೆ ಅವಕಾಶವಿಲ್ಲ. ರೆಸ್ಟೋರೆಂಟ್‌ಗಳು, ಸಿನೆಮಾ ಹಾಲ್‌ಗಳು, ಮಾಲ್‌ಗಳು, ಜಿಮ್ನಾಷಿಯಂಗಳು, ಕ್ರೀಡಾ ಸಂಕೀರ್ಣಗಳು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಇತರ ರೀತಿಯ ಸಭೆಗಳು, ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಪೂಜಿಸುವ ಅವಕಾಶ ಇಲ್ಲ. ಆದಾಗ್ಯೂ, ವಾಯು, ರೈಲು ಮತ್ತು ರಸ್ತೆಯ ಮೂಲಕ ವ್ಯಕ್ತಿಗಳ ಸಂಚಾರಕ್ಕೆ ಆಯ್ದ ಉದ್ದೇಶಗಳಿಗೆ ಅವಕಾಶವಿದ್ದು ಕೇಂದ್ರ ಗೃಹ ಇಲಾಖೆಯಿಂದ (MHA) ಅನುಮತಿ ಅವಶ್ಯಕ. ಎಲ್ಲಾ ಅನಿವಾರ್ಯಗಳ ಚಟುವಟಿಕೆಗಳು ಸಂಜೆ 7 ರಿಂದ ಬೆಳಗ್ಗೆ 7 ರವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿವೆ. ಸ್ಥಳೀಯ ಅಧಿಕಾರಿಗಳು ಕಾನೂನಿನ ಅನ್ವಯ ಸೂಕ್ತ ನಿಬಂಧನೆಗಳ ನೀಡುತ್ತಾರೆ ಎಂದಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಿತ ಪ್ರದೇಶದಲ್ಲಿ (ಕರ್ಫ್ಯೂ) ಎಲ್ಲಾ ವಲಯಗಳಲ್ಲೂ 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು, ಕೆಲವೊಂದು ಸೈಹಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಇರಬೇಕು ಎಂದು ಆದೇಶಿಸಲಾಗಿದೆ
ಒಟ್ಟಾರೆ, ಮೊದಲು ಹಾಗೂ 2ನೇ ಬಾರಿ ಲಾಕ್‌ಡೌನ್ ಘೋಷಣೆ ಮಾಡಲು ಪ್ರಧಾನಿ ನರೇಂದ್ರ ಮೋದಿಯೇ ಸ್ವತಃ ದೇಶದ ಜನರ ಮುಂದೆ ಬಂದಿದ್ದರು. ಆದರೆ ಮೂರನೇ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರೇ ದೇಶದವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇಂದ್ರ ಗೃಹ ಇಲಾಖೆ ಕೇವಲ ಆದೇಶ ಹೊರಡಿಸಿದ್ದು, ಮಾಧ್ಯಮ ಪ್ರಕರಣೆಗಾಗಿ ರವಾನಿಸಿದೆ. ಮೋದಿ ದೇಶದ ಜನರ ಎದುರು ಯಾಕೆ ಬಾರಲಿಲ್ಲ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಸಾಕಷ್ಟು ರಿಯಾಯಿತಿ ಕೊಟ್ಟು ಲಾಕ್‌ಡೌನ್ ಮಾಡಿದರೂ ಪ್ರಯೋಜನ ಆಗುತ್ತಾ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.













