ಇತ್ತೀಚೆಗೆ ಬಿಜೆಪಿ ಸಚಿವರ, ಸಂಸದರ ಹಾಗೂ ಶಾಸಕರ ʼಇಸ್ಲಾಮೋಫೋಬಿಯಾʼ ಹೇಳಿಕೆಗಳು ಅದೆಷ್ಟರ ಮಟ್ಟಿಗೆ ಸದ್ದು ಮಾಡಿದೆ ಅಂದರೆ ಅತ್ತ ಗಲ್ಫ್ ರಾಷ್ಟ್ರಗಳ ಒಡೆಯರು ಕೂಡಾ ಕಳೆದ ಒಂದು ತಿಂಗಳಿನಿಂದಲೂ ನಿರಂತರವಾಗಿ ಭಾರತ ಸರಕಾರದ ಮೇಲೆ ಕ್ರಮಕ್ಕಾಗಿ ಒತ್ತಡವೇರುತ್ತಲೇ ಬಂದಿದ್ದಾರೆ. ಒಂದೊಮ್ಮೆ ಕರೋನಾ ಸೋಂಕಿಗೆ ತಬ್ಲೀಗ್ ಜಮಾಅತ್ ಹೆಸರಿನ ಮುಖಾಂತರ ಮುಸ್ಲಿಮರಿಗೆ ಸೋಂಕಿನ ಪಟ್ಟ ಕಟ್ಟಲು ಶತಪ್ರಯತ್ನ ನಡೆಸಿದ್ದ ದೇಶದ ಮಾಧ್ಯಮಗಳು ಹಾಗೂ ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳ ಬಗ್ಗೆ ಸುಮ್ಮನಿದ್ದ ಕೇಂದ್ರ ಸರಕಾರ, ಅದ್ಯಾವಾಗ ತೈಲ ರಾಷ್ಟ್ರಗಳು ಮುಗಿಬಿದ್ದವೋ ಅದಾಗಲೇ, ʼಸೋಂಕಿಗೆ ಧರ್ಮವಿಲ್ಲವೆಂದುʼ ಪ್ರಧಾನಿ ನರೇಂದ್ರ ಮೋದಿಯೂ, ʼಯಾರೋ ಒಬ್ಬರು ಮಾಡಿದ ತಪ್ಪಿಗೆ ಸಮುದಾಯ ಕಾರಣವಲ್ಲʼ ಎಂದೂ ಆರ್ಎಸ್ಎಸ್ ಸರಸಂಘವಾಹಕ ಮೋಹನ್ ಭಾಗವತ್ ಟ್ವೀಟ್ ಹಾಗೂ ವೀಡಿಯೋ ಸಂದೇಶದ ಮೂಲಕ ತಿಳಿಸುತ್ತಾರೆ.
COVID-19 does not see race, religion, colour, caste, creed, language or borders before striking.
Our response and conduct thereafter should attach primacy to unity and brotherhood.
We are in this together: PM @narendramodi
— PMO India (@PMOIndia) April 19, 2020
ಬಹುಶಃ ಇದೆಲ್ಲಕ್ಕೂ ಬುನಾದಿ ಹಾಕಿಕೊಟ್ಟಿದ್ದೇ ಬಿಜೆಪಿ ಕೂಸು, ಯುವ ಸಂಸದ ತೇಜಸ್ವಿ ಸೂರ್ಯ ಅವರ 5 ವರುಷಗಳ ಹಿಂದಿನ ಹಳೆಯ ಟ್ವೀಟ್ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಮಹಿಳೆಯರ ಬಗ್ಗೆ ತನಗಿರುವ ಕೆಟ್ಟ ಮನೋಭಾವವನ್ನ ಅವರು ಅರಬ್ ಮಹಿಳೆಯರ ಜೊತೆ ಸಮೀಕರಿಸಿ ಟ್ವೀಟ್ ಮಾಡಿದ್ದರು. 5 ವರುಷಗಳ ಬಳಿಕ ಅವರ ಟ್ವೀಟ್ ಟ್ರೆಂಡಿಂಗ್ಗೆ ಬಂದಿದ್ದೇ ಯುಎಇ ರಾಜಕುಮಾರಿ ಅದರ ಕುರಿತು ಕಾಮೆಂಟಿಸಿದಾಗ. ಇದು ಮಾತ್ರವಲ್ಲದೇ ʼಇಸ್ಲಾಮಿಕ್ ಭಯೋತ್ಪಾದನೆʼ ಕುರಿತ ವಿವಾದಾತ್ಮಕ ಟ್ವೀಟ್ಗಳೆಲ್ಲವೂ ತೇಜಸ್ವಿ ಸೂರ್ಯ ಅವರ ಕೋಮುವಾದಿತನವನ್ನ ಜಗತ್ತಿಗೆ ಸಾರಿ ಹೇಳಿದೆ.
Also Read: ಭಾರತದ ಅಂತರಾಷ್ಟ್ರೀಯ ಸಂಬಂಧಕ್ಕೆ ಹುಳಿ ಹಿಂಡಿದ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಟ್ವೀಟ್!

ಇತ್ತೀಚೆಗೆ ಭಾರತ ಸರಕಾರ ಕೋಮುದ್ವೇಷ ಹುಟ್ಟುಹಾಕುವ ಟ್ವೀಟ್ ಸಂದೇಶಗಳನ್ನ ಅಳಿಸಿ ಹಾಕುವಂತೆ ʼಲಿಂಕ್ʼ ಸಮೇತ ಟ್ವಿಟ್ಟರ್ ಕಂಪೆನಿಗೆ ಮನವಿ ಮಾಡಿತ್ತು. ಅಚ್ಚರಿ ಅಂದ್ರೆ ಧಾರ್ಮಿಕ ದ್ವೇಷ ಹುಟ್ಟುಹಾಕುವ ವಿಶೇಷವಾಗಿ ಯಾವ ಸಂದೇಶಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆನ್ನುವ ಒತ್ತಾಯ ಕೇಳಿಬಂದಿತ್ತೋ ಅಂತಹ ಸಂದೇಶಗಳನ್ನೇ ಅಳಿಸಿ ಹಾಕುವಂತೆ ಸರಕಾರ ಕೇಳಿಕೊಂಡಿದೆ. ವಿಶೇಷ ಅಂದ್ರೆ, ಅದರಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಟ್ವೀಟ್ ಲಿಂಕ್ ಗಳೂ ಇದ್ದವು. ಈ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನ ಕೂಸನ್ನ ರಕ್ಷಿಸುವ ಹೊಣೆ ಹೊತ್ತಿಕೊಂಡಿದೆ. ಇದು ಮಾತ್ರವಲ್ಲದೇ ಬಹುತೇಕ ಈ ಬಲಪಂಥೀಯ ಕಿಡಿಗೇಡಿಗಳ ಕೋಮುದ್ವೇಷದ ಟ್ವೀಟ್ಗಳನ್ನ ಅಳಿಸಿ ಹಾಕುವಂತೆಯೂ ಮನವಿ ಮಾಡಿದೆ.
ಟ್ವೀಟ್ ಖಾತೆಯಲ್ಲಿ 5ಲಕ್ಷಕ್ಕೂ ಅಧಿಕ ಫಾಲೋವರ್ಸ್ ಅನ್ನು ಹೊಂದಿರುವ ತೇಜಸ್ವಿ ಸೂರ್ಯ ಸಹಿತ ಕಾಶ್ಮೀರ ವಿರೋಧಿ ಹಾಗೂ ಪಾಕಿಸ್ತಾನ ಪರ ಟ್ವೀಟ್ಗಳನ್ನೂ ಅಳಿಸಿ ಹಾಕುವಂತೆ ತಿಳಿಸಿದೆ. ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಡಿರುವ ಮನವಿಯನ್ನ ಆಧರಿಸಿ Lumen ತನ್ನ ವರದಿಯಲ್ಲಿ ಇದನ್ನ ಉಲ್ಲೇಖಿಸಿದೆ. ಅದರಂತೆ ಟ್ವಿಟ್ಟರ್ನಲ್ಲಿ ಕೋಮುದ್ವೇಷ ಹರಡುವ ಹಾಗೂ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಟ್ವೀಟ್ಗಳನ್ನ ಟ್ವಿಟ್ಟರ್ ಕಂಪೆನಿಯು ಅಳಿಸಿ ಹಾಕಿವೆ. ಈ ಹಿಂದೆಯೂ ಇಂತಹ ಮನವಿಯನ್ನ, ವಿಶೇಷವಾಗಿ ಕಾಶ್ಮೀರ ಕುರಿತಾದ ವಿರೋಧಿ ಟ್ವೀಟ್ ಖಾತೆಗಳನ್ನ ಅಳಿಸಿ ಹಾಕುವಂತೆ ಕೇಂದ್ರ ಸರಕಾರವು ಟ್ವಿಟ್ಟರ್ ಸಂಸ್ಥೆಗೆ ಮನವಿ ಸಲ್ಲಿಸುತ್ತಲೇ ಬಂದಿವೆ.
ಇನ್ನು ತೇಜಸ್ವಿ ಸೂರ್ಯ ಸಹಿತ ಹಲವರ ಟ್ವೀಟ್ಗಳನ್ನ ಅಳಿಸಿ ಹಾಕುವಂತೆ ಕಳೆದ ಎಪ್ರಿಲ್ 28ರಂದು ಟ್ವಿಟ್ಟರ್ ಗೆ ಮನವಿ ಸಲ್ಲಿಸಿದ್ದು, ಅದರಂತೆ ಕೇಂದ್ರ ಐಟಿ ಸಚಿವಾಲಯ ಕಳುಹಿಸಿರುವ ʼಲಿಂಕ್ʼ ಗಳ ಅನ್ವಯ ಟ್ವೀಟ್ಗಳನ್ನ ಟ್ವಿಟ್ಟರ್ ಸಂಸ್ಥೆಯು ಅಳಿಸಿ ಹಾಕಿವೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಇದರನ್ವಯ ಸೆಕ್ಷನ್ 69A ರಡಿ ದೇಶದ ಭದ್ರತೆ ಹಾಗೂ ವಿದೇಶಿ ಸಂಬಂಧ ಕುರಿತು ಯಾವುದೇ ವ್ಯತಿರಿಕ್ತ ಕಮೆಂಟ್, ಸಂದೇಶ ಅಥವಾ ಟ್ವೀಟ್ಗಳು ಜಾಲತಾಣಗಳಲ್ಲಿ ಕಂಡು ಬಂದರೆ ಅವರನ್ನ ಬ್ಲಾಕ್ ಮಾಡುವಂತೆ ಐಟಿ ಸಚಿವಾಲಯವು ಮನವಿ ಸಲ್ಲಿಸುತ್ತವೆ. ಇದೇ ಕಾಯ್ದೆಯಡಿ ಟ್ವೀಟ್ ಸಂದೇಶ ಅಳಿಸಿ ಹಾಕುವಂತೆ ಕೇಂದ್ರ ಐಟಿ ಸಚಿವಾಲಯ ಮನವಿ ಸಲ್ಲಿಸಿದ್ದು, ಅದನ್ನ ಪುರಸ್ಕರಿಸಿದ ಟ್ವಿಟ್ಟರ್ ಖಾತೆಯ ದತ್ತಾಂಶ ಸಂಗ್ರಹಿಸುವ ʼLumenʼ ಸಂಸದ ತೇಜಸ್ವಿ ಸೂರ್ಯನ ಸಹಿತ ಹಲವರ ಟ್ವೀಟ್ ಸಂದೇಶಗಳಿಗೆ ಮುಕ್ತಿ ನೀಡಿದೆ. ಆದರೆ ಈ ರೀತಿ ಅಳಿಸಿ ಹಾಕಲಾದ ಟ್ವೀಟ್ ಸಂದೇಶಗಳು ಭಾರತದ ಟ್ವೀಟ್ ಬಳಕೆದಾರರಿಗೆ ಮಾತ್ರ ಕಾಣದು, ಆದರೆ ಇತರೆ ದೇಶಗಳ ಟ್ವೀಟ್ ಖಾತೆದಾರರು ಇದನ್ನ ಎಂದಿನಂತೆ ವೀಕ್ಷಿಸಬಹುದಾಗಿದೆ.

ಸುಮಾರು ಅಳಿಸಿ ಹಾಕಲು ವಿನಂತಿಸಿದ 130 ಟ್ವೀಟ್ ಸಂದೇಶಗಳಲ್ಲಿ ಶೇಕಡಾ 60ರಷ್ಟು ಟ್ವೀಟ್ ಸಂದೇಶಗಳು ʼಇಸ್ಲಾಮೋಫೋಬಿಯಾʼಗೆ ಸಂಬಂಧಿಸಿದ ಟ್ವೀಟ್ಗಳಾಗಿತ್ತು. ಇನ್ನುಳಿದಂತೆ ಇಸ್ಲಾಮಿಕ್ ಪರ ಹಾಗೂ ಹಿಂದೂ ಹಾಗೂ BJP/RSS ವಿರೋಧಿ ಟ್ವೀಟ್ ಗಳಾಗಿದ್ದವು. ಅದರಲ್ಲಿ ಕೆಲವು ಟ್ವೀಟ್ ಸಂದೇಶಗಳಂತೂ ಹಿಂದೂ-ಮುಸ್ಲಿಂ ಸಂಬಂಧವನ್ನೇ ದೇಶಾದ್ಯಂತ ಹಾಳುಗೆಡುವಂತದ್ದೂ ಆಗಿದ್ದವು.
ಎಬಿವಿಪಿ ಹಾಗೂ ಸಂಘ ಪರಿವಾರದ ಮೂಲಕ ಸುಲಭವಾಗಿ ಗುರುತಿಸಿಕೊಂಡು, ಜಾತಿ ಬಲದಿಂದ ಬಿಜೆಪಿ ಪಕ್ಷದಿಂದ ಕಳೆದ ವರುಷ ನಡೆದ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಗೆಲ್ಲುವ ಮೂಲಕ ಸಂಸತ್ ಪ್ರವೇಶಿಸಿದವರು. ಆದರೆ ಸದಾ ಹಿಂದುತ್ವ ವಿಚಾರಧಾರೆ ಹಿಡಿದುಕೊಂಡು ಮಾತನಾಡುವ ತೇಜಸ್ವಿ ಸೂರ್ಯ ಈ ಹಿಂದೆ ಸಿಎಎ ವಿರೋಧಿಗಳ ಕುರಿತು ಮಾತನಾಡುವಾಗ, ʼಟೈರ್ ಪಂಕ್ಚರ್ ಹಾಕುವವರು.. ಎದೆ ಬಗೆದರೆ ಎರಡು ಅಕ್ಷರವಿಲ್ಲದವರುʼ ಅನ್ನೋ ಅಹಂಕಾರದ ಮಾತುಗಳನ್ನಾಡಿ ಬಳಿಕ ವಿಷಾದ ವ್ಯಕ್ತಡಿಸಿದ್ದರು. ಆ ನಂತರ ಇತ್ತೀಚೆಗೆ ಅವರ 5 ವರುಷಗಳ ಹಿಂದಿನ ಸಾಲು ಸಾಲು ʼಮಹಿಳಾ ಹಾಗೂ ಮುಸ್ಲಿಂ ವಿರೋಧಿʼ ಟ್ವೀಟ್ಗಳು ಮೇಲೆ ಬಂದಿದ್ದವು. ವಿಶೇಷವಾಗಿ ಗಲ್ಫ್ ರಾಜಮನೆತನದ ರಾಣಿಯರು, ರಾಜಕುಮಾರರು ಪ್ರತಿಕ್ರಿಯೆ ನೀಡುತ್ತಿದ್ದಂತೆ ನರೇಂದ್ರ ಮೋದಿ ಸರಕಾರವೂ ಒಂದು ಕ್ಷಣ ತಲ್ಲಣಗೊಂಡಿತ್ತು. ದುಬೈಯಲ್ಲಿ ನೆಲೆಸಿರುವ ಜನರಿಗೆ ರಾಯಭಾರಿ ಮೂಲಕ ʼಇಸ್ಲಾಮೋಫೋಬಿಯಾʼ ಹರಡದಂತೆ ತಿಳಿಸಿತ್ತು. ಮಾತ್ರವಲ್ಲದೇ ಟ್ವೀಟ್ ಮೂಲಕ ʼಸಾಮರಸ್ಯʼ ಸಾರುವ ಸಂದೇಶವನ್ನ ಮೋದಿ ಬಿತ್ತಿದ್ದರು. ಇದುವರೆಗೂ ದೇಶವನ್ನ ಉದ್ದೇಶಿಸಿ ಮಾತಾಡದ ಸಂಘಪರಿವಾರದ ಮೋಹನ್ ಭಾಗವತ್ ಕೂಡಾ ಮಾಧ್ಯಮದ ಮೂಲಕ ಸಂದೇಶ ನೀಡಲು ದೌಡಾಯಿಸಿದ್ದರು. ಎಲ್ಲರದ್ದೂ ʼಸಾಮರಸ್ಯದ ಮಂತ್ರʼವಾಗಿತ್ತು.
ತೇಜಸ್ವಿ ಸೂರ್ಯ ಮಾತ್ರವಲ್ಲದೇ ʼಶೆಫಾಲಿ ವೈದ್ಯʼ ಹಾಗೂ ʼರಂಜನ್ ಗೊಗೊಯಿʼ ಹೆಸರಿನ ನಕಲಿ ಖಾತೆಗಳನ್ನೂ ಅಳಿಸಿ ಹಾಕಲಾಗಿದೆ. ಇವುಗಳಲ್ಲಿ ಅತಿಯಾಗಿ ಇಸ್ಲಾಮೋಫೋಬಿಯಾ ಸಂದೇಶಗಳೇ ಬಿತ್ತರವಾಗಿದ್ದವು. ಮಾತ್ರವಲ್ಲದೇ ಇನ್ನಿತರ ʼಮುಸ್ಲಿಮ್ ವಿರೋಧಿʼ, ಅದರಲ್ಲೂ ವಿಶೇಷವಾಗಿ ಮುಸ್ಲಿಮ್ ವ್ಯಾಪಾರಿಗಳ ಜೊತೆಗಿನ ವ್ಯವಹಾರ ಕಡಿದುಕೊಳ್ಳುವಂತಹ ಸಂದೇಶಗಳನ್ನೂ ಟ್ವೀಟ್ ಖಾತೆಗಳಿಂದ ಅಳಿಸಿ ಹಾಕಲಾಗಿದೆ.
ಒಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ತನ್ನ ಕೂಸು ಐದು ವರುಷದ ಹಿಂದೆ ಮಾಡಿಟ್ಟ ʼಟ್ವೀಟ್ʼವೊಂದು ಈ ಹಂತದಲ್ಲಿ ಕತ್ತು ಕುಯ್ಯುವ ಹಂತಕ್ಕೆ ಬರುತ್ತೆ ಅನ್ನೋದು ಊಹಿಸಲೂ ಸಾಧ್ಯವಿರಲಿಲ್ಲ. ಆದರೂ ಕೇಂದ್ರ ಸರಕಾರ ಒಂದು ಕಡೆ ತೇಜಸ್ವಿ ಟ್ವೀಟ್ ಅಳಿಸಿ ಹಾಕುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ತೀನಿ ಅನ್ನೋ ಭಾವನೆಯಲ್ಲಿದ್ದರೂ, ವಿದೇಶಗಳಲ್ಲಿ ಅಳಿಸಿ ಹಾಕಲಾದ ಟ್ವೀಟ್ ಸಂದೇಶಗಳನ್ನ ಗಮನಿಸಬಹುದು ಅನ್ನೋದನ್ನ ʼLumenʼ ಸಂಸ್ಥೆಯೇ ಸ್ಪಷ್ಟಪಡಿಸಿದೆ. ಆದರೆ ದೇಶೀ ಮಟ್ಟದಲ್ಲಿ ಕಾನೂನು ಕ್ರಮ ಜರುಗಿಸಬಹುದಾದ ಟ್ವೀಟ್ಗಳಲ್ಲಿ ತೇಜಸ್ವಿ ಸೂರ್ಯ ಅವರ ಟ್ವೀಟ್ ಕೂಡಾ ಇದ್ದು ಅದನ್ನ ಅಳಿಸಿ ಹಾಕುವ ಮೂಲಕ ಜಾಣತನ ಪ್ರದರ್ಶಿಸ ಹೊರಟಿದೆಯೇನೋ..? ಆದರೆ ಇದೆಲ್ಲಕ್ಕೂ ಜಾಸ್ತಿ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಹಾಗೂ ʼಮುಸ್ಲಿಂ ವಿರೋಧಿʼ ಟ್ವೀಟ್ಗಳು ನರೇಂದ್ರ ಮೋದಿ ನೇತೃತ್ವದ ಸರಕಾರದ ಅಂತರಾಷ್ಟ್ರೀಯ ಸಂಬಂಧಕ್ಕೆ ಮುಳುವಾಗಿದ್ದಂತು ಸುಳ್ಳಲ್ಲ.
ಕೃಪೆ: ದಿ ವೈರ್