ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆಯೇ? ಹೀಗೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಇದಕ್ಕೆ ಕಾರಣ ಉಪ ಚುನಾವಣೆ ಫಲಿತಾಂಶ ಹೊರಬಿದ್ದು, ಬಿಜೆಪಿ ಸರ್ಕಾರ ಭದ್ರವಾಗಿ ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಸಾಧ್ಯವಾಗದೇ ಇರುವುದು.
ಉಪ ಚುನಾವಣೆ ಫಲಿತಾಂಶ ಬಂದು ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡುತ್ತೇನೆ. ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ಮಾಡಿ ಅನರ್ಹಗೊಂಡ ಬಳಿಕ ಉಪ ಚುನಾವಣೆಯಲ್ಲಿ ಗೆದ್ದು ಬಂದವರಿಗೆ ಕೂಡಲೇ ಸಚಿವ ಸ್ಥಾನ ನೀಡುತ್ತೇನೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ್ದ ಭರವಸೆ ತಿಂಗಳಾದರೂ ಈಡೇರುವ ಲಕ್ಷಣ ಕಾಣಿಸುತ್ತಿಲ್ಲ. ಉಪ ಚುನಾವಣೆ ಫಲಿತಾಂಶ ಹೊರಬಿದ್ದು ಬಿಜೆಪಿ ಸರ್ಕಾರ ಭದ್ರವಾಗಿ ತಿಂಗಳು ಕಳೆದಿದೆ. ಶಾಸಕರಾದ ಮಾರನೇ ದಿನವೇ ಸಚಿವರಾಗುವ ಕನಸು ಕಾಣುತ್ತಿಲ್ಲ ನೂತನ ಶಾಸಕರ ತಾಳ್ಮೆ ಮೀರುತ್ತಿದೆ. ಸಂಪುಟ ವಿಸ್ತರಣೆಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಮುಖ್ಯಮಂತ್ರಿ ಯಡಿಯೂರಪ್ಪ ನಡೆಸುತ್ತಿರುವ ಪ್ರಯತ್ನಗಳು ವಿಫಲವಾಗುತ್ತಿದೆ. ಒಟ್ಟಾರೆ ಯಡಿಯೂರಪ್ಪ ಅವರ ಮಂತ್ರಿಮಂಡಲ ವಿಸ್ತರಣೆಗೆ ಹಸಿರು ನಿಶಾನೆ ತೋರಿಸಲು ಹೈಕಮಾಂಡ್ ವಿಳಂಬ ಮಾಡುತ್ತಿದೆ.
ಹೈಕಮಾಂಡ್ ನ ಈ ಧೋರಣೆ ಇದೀಗ ನೂತನ ಶಾಸಕರನ್ನು ಮಾತ್ರವಲ್ಲ, ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ತಾಳ್ಮೆಗೆಡುವಂತೆ ಮಾಡುತ್ತಿದೆ. ಹೀಗಾಗಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಸಚುವ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಅವರು ಇದೀಗ ಹೊಸ ಮಂತ್ರಿಗಳ ಪ್ರಮಾಣವಚನಕ್ಕೆ ತಾವೇ ಗಡುವು ವಿಧಿಸಿದ್ದಾರೆ. ತಾವು ವಿದೇಶ ಪ್ರವಾಸಕ್ಕೆ ತೆರಳುವ ಮುನ್ನವೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎನ್ನುವ ಮೂಲಕ ವರಿಷ್ಠ ನಾಯಕರ ವಿಳಂಬ ಧೋರಣೆಗೆ ಸೆಡ್ಡುಹೊಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಉಪ ಚುನಾವಣೆ ಫಲಿತಾಂಶ ಹೊರಬಿದ್ದ ಸಂದರ್ಭದಲ್ಲಿ ಜಾರ್ಖಂಡ್ ಚುನಾವಣೆ ನಡೆಯುತ್ತಿದ್ದುದರಿಂದ ಈ ಚುನಾವಣೆ ಬಳಿಕ (ಡಿಸೆಂಬರ್ 20ರ ಬಳಿಕ) ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ, ಅದೇ ಸಂದರ್ಭದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಭೇಟಿ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಜನವರಿ ಮೊದಲ ವಾರದಲ್ಲಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಈ ಕುರಿತು ಚರ್ಚಿಸಿ ನಂತರ ಅಮಿತ್ ಶಾ ಅವರ ಸಮಯಾವಕಾಶ ಸಿಕ್ಕಿದರೆ ದೆಹಲಿಗೆ ತೆರಳಿ ಮಾತುಕತೆ ನಡೆಸುವುದು. ಅದು ಸಾಧ್ಯವಾಗದೇ ಇದ್ದರೆ ದೂರವಾಣಿ ಮೂಲಕವೇ ಮಾತುಕತೆ ನಡೆಸಿ ಮಂತ್ರಿಮಂಡಲ ವಿಸ್ತರಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದರು. ಆದರೆ, ಇದು ಯಾವುದೂ ಸಾಧ್ಯವಾಗಿರಲಿಲ್ಲ.
ಈ ಮಧ್ಯೆ ಸಂಕ್ರಾಂತಿ ಮುಗಿಯುತ್ತಿದ್ದಂತೆ ಅಂದರೆ ಜನವರಿ 15 ಆಗುತ್ತಿದ್ದಂತೆ ಸಂಪುಟ ವಿಸ್ತರಿಸಿ ನೂತನ ಶಾಸಕರ ಜತೆಗೆ ಬಿಜೆಪಿಯ ಒಂದಿಬ್ಬರು ಶಾಸಕರಿಗೂ ಸಚಿವ ಸ್ಥಾನ ನೀಡಲಾಗುವುದು ಎಂಬ ಮಾತು ಕೇಳಿಬರುತ್ತಿತ್ತು. ಅದಕ್ಕೆ ಪೂರಕವಾಗಿ ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಅಮಿತ್ ಶಾ ಜತೆಗೆ ಈ ಕುರಿತು ಚರ್ಚೆ ಮಾಡಬೇಕಿತ್ತು. ಆದರೆ, ಏಕೋ ಅದು ಸಾಧ್ಯವಾಗಲಿಲ್ಲ. ಈ ಮಧ್ಯೆ ಜ. 20ರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ವಿಜರ್ ಲೆಂಡ್ ದೇಶದ ದಾವೋಸ್ ನಲ್ಲಿ ನಡೆಯಲಿರುವ ಜಾಗತಿಕ ಆರ್ಥಿಕ ಸಮ್ಮೇಳನಕ್ಕೆ ಹೋಗುವವರಿದ್ದಾರೆ. ಅಲ್ಲಿಂದ ಯುರೋಪ್ ಪ್ರವಾಸ ಕೈಗೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗಲಿದ್ದು, ಫೆಬ್ರವರಿ ಮೊದಲ ವಾರದಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂಬ ಮಾತು ಕೇಳಿಬರಲಾರಂಭಿಸಿತ್ತು.
ಆದರೆ, ಸೋಮವಾರ ಈ ಎಲ್ಲಾ ಊಹಾಪೋಹಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಸೋಮವಾರವೇ ದೆಹಲಿಗೆ ತೆರಳಬೇಕಿತ್ತು. ಅಮಿತ್ ಶಾ ಅವರು ಮಾತುಕತೆಗೆ ಸಮಯವನ್ನೂ ನೀಡಿದ್ದರು. ರಾಯಚೂರಿನಲ್ಲಿ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮಕ್ಕೆ ಹೋಗಲೇ ಬೇಕಾಗಿದ್ದರಿಂದ ಮತ್ತು ಇದು ಪೂರ್ವನಿರ್ಧರಿತವಾಗಿದ್ದರಿಂದ ಹೋಗಲು ಸಾಧ್ಯವಾಗಲಿಲ್ಲ. ಅಮಿತ್ ಶಾ ಅವರು ನಾಳೆ (ಮಂಗಳವಾರ) ಸಮಯ ನೀಡಿದರೆ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಪಡಿಸಿಕೊಂಡು ಬರುತ್ತೇನೆ. ಅದು ಸಾಧ್ಯವಾಗದೇ ಇದ್ದರೆ ಜ. 17, 18ರಂದು ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಿದ್ದು, ಆಗ ಸಂಪುಟ ವಿಸ್ತರಣೆ ಕುರಿತು ಅವರೊಂದಿಗೆ ಚರ್ಚಿಸುತ್ತೇನೆ. ಒಟ್ಟಿನಲ್ಲಿ ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ (ಜ. 20) ಸಂಪುಟ ವಿಸ್ತರಣೆ ಮಾಡುತ್ತೇನೆ. ಆದ್ದರಿಂದ ಊಹಾಪೋಹಗಳಿಗೆ ಯಾವ ಶಾಸಕರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಯಾರ್ಯಾರಿಗೆ ಮಾತು ಕೊಟ್ಟಿದ್ದೇನೆಯೋ ಅವರೆಲ್ಲರಿಗೂ ಸಚಿವ ಸ್ಥಾನ ನೀಡುತ್ತೇನೆ. ದೆಹಲಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಅನ್ನೋದೆಲ್ಲ ಸುಳ್ಳು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಹಾಗಿದ್ದರೆ ಊಹಾಪೋಹಗಳೆಲ್ಲವೂ ಸುಳ್ಳೇ?
ಸಂಪುಟ ವಿಸ್ತರಣೆ ಕುರಿತಂತೆ ಊಹಾಪೋಹಗಳೆಲ್ಲವೂ ಸುಳ್ಳು ಎಂದು ಯಡಿಯೂರಪ್ಪ ಹೇಳುತ್ತಿದ್ದಾರಾದರೂ ಅದು ಸಂಪೂರ್ಣ ಸುಳ್ಳೂ ಅಲ್ಲ, ಪೂರ್ಣ ಸತ್ಯವೂ ಅಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹೈಕಮಾಂಡ್ ನಾಯಕರ ಮಧ್ಯೆ ಸಣ್ಣ ಮಟ್ಟಿನ ಹಗ್ಗ ಜಗ್ಗಾಟ ನಡೆಯುತ್ತಿರುವುದಂತೂ ಸ್ಪಷ್ಟ. ಈ ಕಾರಣಕ್ಕಾಗಿಯೇ ಶೂನ್ಯ ಮಾಸ ಆರಂಭಕ್ಕೆ ಮೊದಲೇ ಆಗಬೇಕಿದ್ದ ಸಂಪುಟ ವಿಸ್ತರಣೆ ಒಂದು ತಿಂಗಳು ವಿಳಂಬವಾಗಿದೆ. ಹಾಗೆಂದು ಇಲ್ಲಿ ಇಬ್ಬರ ಮಧ್ಯೆ ವೈಮನಸ್ಯವೇನೂ ಇಲ್ಲ. ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಹೆಚ್ಚು ಶಕ್ತಿಯೊಂದಿಗೆ ಯಡಿಯೂರಪ್ಪ ಅವರು ಹೋಗುತ್ತಿರುವ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವರಿಷ್ಠರು ಸ್ವಲ್ಪ ಆಟವಾಡಿಸುತ್ತಿದ್ದಾರೆ.
ಮೈತ್ರಿ ಸರ್ಕಾರ ಉರುಳಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಸಂಪುಟ ರಚನೆಗೆ ಹೈಕಮಾಂಡ್ ಅನುಮತಿ ಪಡೆದಿದ್ದರಾದರೂ ಉಪಮುಖ್ಯಮಂತ್ರಿ ಸ್ಥಾನ ಹೊರತುಪಡಿಸಿ ಸಚಿವ ಸಂಪುಟಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಯಡಿಯೂರಪ್ಪ ಅವರ ಆಯ್ಕೆಗೆ ಬಿಡಲಾಗಿತ್ತು. ಅದರಂತೆ ಅವರು ಸಂಪುಟವನ್ನೂ ರಚಿಸಿದ್ದರು. ಈ ಬಗ್ಗೆ ಉಂಟಾಗಿದ್ದ ಅಸಮಾಧಾನವನ್ನು ಹೈಕಮಾಂಡ್ ಹೆಗಲಿಗೆ ವರ್ಗಾಯಿಸಿ ತಾವು ಪಾರಾಗಿದ್ದರು.
ಇದರ ಮಧ್ಯೆ ಉಪ ಚುನಾವಣೆಯಲ್ಲಿ ಸಿಕ್ಕಿದ ಗೆಲುವು ಯಡಿಯೂರಪ್ಪ ಅವರನ್ನು ಮತ್ತಷ್ಟು ಗಟ್ಟಿ ಮಾಡಿದೆ. ರಾಜ್ಯ ಬಿಜೆಪಿಯಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂಬ ಅಹಂ ಸ್ವಲ್ಪ ಮಟ್ಟಿಗೆ ಕಾಣಿಸಿಕೊಂಡಿದೆ. ಇದರ ಪರಿಣಾಮವೇ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಿದ್ದಾಗ ಅವರ ಸಮ್ಮುಖದಲ್ಲೇ ನೆರೆ ಪರಿಹಾರ ಬಿಡುಗಡೆಯಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು. ಹೀಗೆಯೇ ಬಿಟ್ಟರೆ ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರನ್ನು ಕೂಡ ಕ್ಯಾರೇ ಎನ್ನಲಿಕ್ಕಿಲ್ಲ ಎಂಬ ಕಾರಣಕ್ಕೆ ಸಂಪುಟ ವಿಸ್ತರಣೆಗೆ ವಿಳಂಬ ಮಾಡಿ ಯಡಿಯೂರಪ್ಪ ಅವರನ್ನು ಸ್ವಲ್ಪ ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಇದರ ಮೊದಲ ಭಾಗವೇ ಜ. 11-12ರಂದು ಸಂಪುಟ ವಿಸ್ತರಣೆ ಕುರಿತು ಚರ್ಚೆಗೆ ಸಮಯ ನಿಗದಿಪಡಿಸಿದ್ದರೂ ನಂತರದಲ್ಲಿ ಅದನ್ನು ರದ್ದುಗೊಳಿಸಿರುವುದು. ಆದರೆ, ವರಿಷ್ಠರ ಈ ಕ್ರಮ ಯಡಿಯೂರಪ್ಪ ಅವರ ಸಿಟ್ಟಿಗೆ ಕಾರಣವಾಗಿದ್ದು, ಮಂಗಳವಾರ ಚರ್ಚೆಗೆ ಸಮಾಯಾವಕಾಶ ನೀಡಿ. ಇಲ್ಲದೇ ಇದ್ದರೆ ರಾಜ್ಯಕ್ಕೆ ಬಂದಾಗ ಚರ್ಚೆ ಮಾಡೋಣ. ಒಟ್ಟಿನಲ್ಲಿ ಜನವರಿ 20ರ ಮೊದಲು ಸಂಪುಟ ವಿಸ್ತರಣೆಗೆ ಅವಕಾಶ ಮಾಡಿಕೊಡಲೇ ಬೇಕು ಎಂದು ಅಮಿತ್ ಶಾ ಅವರ ಮೇಲೆ ಒತ್ತಡ ಹೇರಿದ್ದಾರೆ.
ಪಕ್ಷದ ಮೂಲಗಳು ಹೇಳುವ ಪ್ರಕಾರ ಮಂಗಳವಾರ ಅಥವಾ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಾಗ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆದು ಒಂದೆರಡು ದಿನಗಳಲ್ಲಿ ವಿಸ್ತರಣೆ ಕಾರ್ಯ ನಡೆಯಬಹುದು. ಕಾಂಗ್ರೆಸ್, ಜೆಡಿಎಸ್ ನಿಂದ ಬಂದು ನೂತನವಾಗಿ ಗೆದ್ದ ಬಹುತೇಕರಿಗೆ ಸಚಿವ ಸ್ಥಾನ ಸಿಗಲಿದೆ. ಈ ಬಾರಿಯೂ ಯಡಿಯೂರಪ್ಪ ಅವರ ಕೈ ಮೇಲಾಗಲಿದ್ದು, ಅವರಿಗೆ ಬೇಕಾದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅಮಿತ್ ಶಾ ಸಮ್ಮತಿಸಲಿದ್ದಾರೆ. ಆದರೆ, ಈ ವೇಳೆ ಯಡಿಯೂರಪ್ಪ ಅವರ ವೇಗಕ್ಕೆ ಸ್ವಲ್ಪ ಕಡಿವಾಣ ಬೀಳಬಹುದು. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಇದು ಹೌದೇ ಎಂಬುದು ಅಮಿತ್ ಶಾ ಮತ್ತು ಯಡಿಯೂರಪ್ಪ ಅವರ ಭೇಟಿ ಬಳಿಕವೇ ಸ್ಪಷ್ಟವಾಗಲಿದೆ.