ಸದ್ಯ ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ ಕಾರ್ಪರೇಟ್ ಕಂಪೆನಿಗಳು COVID-19ಗಾಗಿ ‘ರಾಜ್ಯ ಪರಿಹಾರ ನಿಧಿಗೆʼ ಅಥವಾ ʼಮುಖ್ಯಂಮತ್ರಿಗಳ ಪರಿಹಾರ ನಿಧಿʼಗೆ ಹಣಕಾಸಿನ ಕೊಡುಗೆ ನೀಡುವುದನ್ನು “ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ”(CSR) ಎಂದು ಹಕ್ಕುಸಾಧಿಸಲು ಸಾಧ್ಯವಿಲ್ಲ ಎಂದು ಭಾರತದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.
ಕಾರ್ಪೊರೇಟ್ ಸಂಸ್ಥೆಗಳು ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸ್ಥಾಪಿಸಲಾದ PM-CARES ನಿಧಿಗೆ ತಮ್ಮ ದೇಣಿಗೆ ನೀಡುವುದು ಕಾನೂನಿನ ಪ್ರಕಾರ CSR ಅಡಿಯಲ್ಲಿ ಬರುತ್ತದೆಯೆಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ(MCA) ಎರಡು ವಾರಗಳ ಹಿಂದೆ ಹೇಳಿತ್ತು. ಅಥವಾ CSR ಖರ್ಚು ಎಂದು ಹೇಳಿಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ರಾಜ್ಯ ಸರಕಾರದ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ದೇಣಿಗೆ ನೀಡಬೇಕಾಗುತ್ತದೆ.
ಕಳೆದ ಕೆಲವು ವಾರಗಳಲ್ಲಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ದೇಣಿಗೆಗಳನ್ನು CSR ಅಡಿಯಲ್ಲಿ ಪರಿಗಣಿಸಬೇಕೆಂದು MCA ಮತ್ತು ಹಣಕಾಸು ಸಚಿವಾಲಯಗಳಿಗೆ ವಿನಂತಿಗಳು ಬಂದಿವೆ, ಆದರೆ ಸದ್ಯ ಇರುವ ಕಾನೂನಿನ ಪ್ರಕಾರ ಇದನ್ನು ಅನುಮತಿಸಲಾಗುವುದಿಲ್ಲ.

ಕಂಪೆನಿ ಕಾಯ್ದೆಯ ಶೆಡ್ಯುಲ್ VII ರಡಿಯಲ್ಲಿ ಮುಖ್ಯಂಮತ್ರಿಗಳ ಪರಿಹಾರ ನಿಧಿ ಅಥವಾ COVID-19 ರಾಜ್ಯ ಪರಿಹಾರ ನಿಧಿಯನ್ನು ಸೇರಿಸಲಾಗಿಲ್ಲ. ಹಾಗಾಗಿ ಅಂತಹ ನಿಧಿಗಳಿಗೆ ನೀಡಿದ ದೇಣಿಗೆಗಳನ್ನು CSR ಅಡಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಆದರೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಿದ ದೇಣಿಗೆಗಳನ್ನು CSR ಖರ್ಚು ಎಂದು ಪರಿಗಣಿಸಬಹುದು ಎಂದಿದೆ.

ಈ ನಿಯಮಗಳಿಗೆ ವಿರೋಧ ಪಕ್ಷದ ಮುಖಂಡರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕಾಗಿ ನರೇಂದ್ರ ಮೋದಿಯವರ ಸರಕಾರ ಈ ನಿಯಮಗಳನ್ನು ತಿದ್ದುಪಡಿ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ತಮಿಳುನಾಡಿನಂತಹ ರಾಜ್ಯಗಳು ಪರಿಹಾರೋಪಾಯಗಳಿಗೆ ಒತ್ತಾಯಿಸಿದ್ದಾರೆ.
ತಮಿಳುನಾಡು ಸರಕಾರ ತನ್ನ ಮುಖ್ಯಂಮತ್ರಿ ಸಾರ್ವಜನಿಕ ಪರಿಹಾರ ನಿಧಿಗೆ ಬಂದಿರುವ ದೇಣಿಗೆಗಳನ್ನು ತಮಿಳುನಾಡು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಹಂಚಿಕೆ ಮಾಡಬೇಕೆಂದು ಆದೇಶ ಹೊರಡಿಸಿದೆ. ದೇಣಿಗೆಯನ್ನು ಸಿಎಸ್ಆರ್ ವೆಚ್ಚವಾಗಿ ಪರಿವರ್ತಿಸಬೇಕೆಂಬ ಉದ್ದೇಶದಿಂದ ಹಣವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವರ್ಗಾಯಿಸಲು ನಾವು ನಿರ್ದೇಶಿಸಿದ್ದೇವೆಂದು ತಮಿಳುನಾಡು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ದೇಣಿಗೆಯನ್ನು ಸಿಎಸ್‌ಆರ್ ಆಗಿ ಅರ್ಹತೆ ಪಡೆಯಲು ಕಂಪೆನಿ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕೆಂದು CPI(M) ನಾಯಕ ಸೀತರಾಮ್ ಯೆಚೂರಿ ಹೇಳಿದ್ದಾರೆ.
ಕಾರ್ಪೊರೇಟ್ ಕಂಪೆನಿಗಳು ಹಿಂದಿನ ಮೂರು ಹಣಕಾಸು ವರ್ಷಗಳ ಲಾಭವನ್ನು ಲೆಕ್ಕಹಾಕಿ ಸರಾಸರಿ ನಿವ್ವಳ ಲಾಭದ 2% CSR ಗೆ ನಿಯೋಗಿಸುವುದು ಕಡ್ಡಾಯವಾಗಿದೆ. ಈ CSR ನಿಧಿಯನ್ನು ಬಡತನ,ಹಸಿವು ನಿವಾರಣೆ, ಕೌಶಲ್ಯ ಅಭಿವೃಧ್ಧಿ ,ಮತ್ತು ಶಿಕ್ಷಣ ಹಾಗೂ ವಿಪತ್ತು ಪರಿಹಾರ ಮುಂತಾದ ಚಟುವಟಿಕೆಗಳಿಗೆ ಬಳಸಲಾಗುತ್ತದೆ.
ಪ್ರಸ್ತುತ ಐದು ಕೋಟಿ ನಿವ್ವಳ ಲಾಭ ಅಥವಾ ಐನೂರು ಕೋಟಿ ನಿವ್ವಳ ಅಥವಾ ಸಾವಿರ ಕೋಟಿ ವಹಿವಾಟು ಹೊಂದಿರುವ ಕಂಪೆನಿಗಳು ಕಳೆದ ಮೂರು ವರ್ಷದ ತಮ್ಮ ಸರಾಸರಿ ನಿವ್ವಳ ಲಾಭವನ್ನು CSR ಗೆ ಖರ್ಚುಮಾಡಬೇಕಿದೆ.