ಈತ ಮುಂಬೈಯ ಬಂಕ್ಸಿ, ಈತನ ಇನ್ಸ್ಟಾಗ್ರಾಮ್ ಖಾತೆಯ ಹೆಸರು ಟೇಲರ್ ಸ್ಟ್ರೀಟ್ ಆರ್ಟಿಸ್ಟ್ (tylerstreetart). ತನ್ನ ಸೃಜನಶೀಲ ಚಿತ್ರಗಳ ಮೂಲಕ ಸಮಾಜದ ʼಟಾಬೂʼಗಳನ್ನು, ಸಮಸ್ಯೆಗಳನ್ನು ಬೀದಿ ಬದಿಯ ಅನಾಥ ಗೋಡೆಯ ಮೇಲೆ ಚಿತ್ರಿಸುವ ಈತ ಮೂಲತಃ ಮುಂಬೈ ಮಹಾನಗರಿಯವನು. ಸದ್ಯ ಇನ್ಸ್ಟಗ್ರಾಮ್‌ನಲ್ಲಿ 57.7 ಸಾವಿರ ಹಿಂಬಾಲಕರು ಈತನಿಗಿದ್ದಾರೆ. ಆದರೆ ಯಾರಿಗೂ ಈತನ ನೈಜನಾಮ ಗೊತ್ತಿಲ್ಲ. ಯಾಕೆಂದರೆ Tyler street artist ಎಲ್ಲೂ ಬಹಿರಂಗವಾಗಿ ತನ್ನ ಮುಖ ತೋರಿಸಿಲ್ಲ, ಸಾಕಷ್ಟು ಜನಪ್ರಿಯಗೊಂಡರೂ ಈತ ಬಹಿರಂಗವಾಗಿ ತಾನೇ ಟೈಲರ್ ಸ್ಟ್ರೀಟ್ ಆರ್ಟಿಸ್ಟ್ ಎಂದು ಎಲ್ಲೂ ಗುರುತಿಸಿಕೊಂಡಿಲ್ಲ. ಓರ್ವ ಸೂಪರ್ ಹೀರೋ ರೀತಿ ಮುಖವಾಡದೊಂದಿಗೆ ಜನರೆದುರು ಬರುತ್ತಾನೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈತನ ಐಡೆಂಟಿಟಿ ಎಂದರೆ ಕಲೆ, ರಸ್ತೆ ಬದಿಯ ಗೋಡೆಗಳಲ್ಲಿ ಅರಳುವ ತನ್ನ ವಿಶೇಷ ಚಿತ್ರಗಳಿಗಾಗಿಯೇ ಅನೇಕ ಅಭಿಮಾನಿಗಳನ್ನು ಸಂಪಾದಿಸಿರುವ ಈತನ ನೈಜ ಐಡೆಂಟಿಟಿ ಯಾರಿಗೂ ಅಗತ್ಯವಿಲ್ಲ. ಬಹುಷ ಸರ್ಕಾರಕ್ಕೆ ಹೊರತುಪಡಿಸಿ..! 2019 ರ ವರೆಗೆ ರಾಜಕೀಯ ವ್ಯಂಗ್ಯ ಚಿತ್ರಗಳ ಕಡೆಗೆ ಅಷ್ಟೊಂದು ಗಮನ ಹರಿಸದ ಈತ 2019ರ ಬಳಿಕ ರಾಜಕೀಯ ಸಂದೇಶ ನೀಡುವ ಸಾಲು ಸಾಲು ಚಿತ್ರ ಬಿಡಿಸಿದ. ಟ್ರಂಪ್‌ನಿಂದ ಹಿಡಿದು ಯೋಗಿಯವರೆಗೆ ರಾಜಕಾರಣಿಗಳ ಚಿತ್ರ ಬಿಡಿಸಿದ, ಎಲ್ಲವೂ ತೀಕ್ಷ್ಣ ಅರ್ಥ ಹೊಮ್ಮುವಂತಹದ್ದು.
ವಿಶ್ವದ ಬಹುಪಾಲು ಸ್ಟ್ರೀಟ್ ಆರ್ಟ್‌ನಂತೆಯೇ ಮುಂಬೈ ನಗರಿಯ ಹಲವು ಗೋಡೆಗಳಲ್ಲಿ ಬಿಡಿಸಲಾಗಿರುವ ರಾಜಕೀಯ, ಸಾಮಾಜಿಕ ವಿಡಂಬಣೆಯ ಈತನ ಚಿತ್ರಗಳಲ್ಲೂ ಕೂಡಾ ಪ್ರತಿಭಟನೆ ವ್ಯಕ್ತವಾಗುತ್ತದೆ. 2019 ರಲ್ಲಿ ಸ್ಕ್ರಾಲ್.ಇನ್ ವೆಬ್ ನ್ಯೂಸ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ʼʼಸ್ಟ್ರೀಟ್ ಆರ್ಟ್(ಬೀದಿ ಚಿತ್ರ) ಎಂದರೆ ಪ್ರತಿಭಟನೆ ಹೊರತು, ಬೇರೇನೂ ಅಲ್ಲ. ಇದಕ್ಕೆ ಸ್ವಲ್ಪ ಹಾಸ್ಯವನ್ನು ಸೇರಿಸಬಹುದು, ಆದರೆ ಮುಖ್ಯವಾಗಿ ಸ್ಟ್ರೀಟ್ ಆರ್ಟ್ ಎಂದರೆ ಕಲೆಯ ಮೂಲಕ ಪ್ರಶ್ನೆ ಕೇಳುವುದುʼʼ ಎಂದು ಗಂಭೀರ ಉತ್ತರ ನೀಡಿದ್ದ.
2019 ರ ಲೋಕಸಭೆ ಚುನಾವಣೆಯ ಸಂಧರ್ಭದಲ್ಲಿ ಈತ ಬಿಡಿಸಿದ ಚಿತ್ರ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ದೇಶೀಯ, ಅಂತರಾಷ್ಟ್ರೀಯ ಮಾಧ್ಯಮಗಳ ಸಂಪಾದಕೀಯದಲ್ಲೂ ಈತ ಬಿಡಿಸಿದ ಚಿತ್ರವೊಂದು ಬಳಕೆಯಾಗಲ್ಪಟ್ಟಿತ್ತು. ಆ ಚಿತ್ರದಲ್ಲಿ ಆತ ರಾಹುಲ್ ಹಾಗೂ ಮೋದಿಯ ಹಗ್ಗ ಜಗ್ಗಾಟದಲ್ಲಿ ಭಾರತ ಮುರಿಯುವಂತೆ ಬಿಡಿಸಿದ್ದ. ಈ ಕುರಿತು ಆತನನ್ನು ಪ್ರಶ್ನಿಸಿದಾಗ, ಆತ ಅನಾಮಧೇಯನಾಗಿಯೇ, ʼನಿಜಕ್ಕೂ ನಾನು ನನ್ನ ದೇಶದ ಜನರು, ರಾಜಕೀಯವನ್ನು ಹೇಗೆ ಗಮನಿಸುತ್ತಾರೆ ಎಂಬ ಗಡಿಯನ್ನು ಇನ್ನಷ್ಟು ಸರಿಸಲು ಬಯಸಿದ್ದೇನೆʼ ಎಂದು ಉತ್ತರಿಸಿದ್ದ.
ಸಮಾಜದಲ್ಲಿರುವ ದುರಾಸೆ, ಬಡತನ ಅಥವಾ ಅಸಮಾನತೆಯ ಕುರಿತೇ ಹೆಚ್ಚು ಚಿತ್ರ ಬರೆದಿದ್ದ ಈತ ಈ ಎಲ್ಲ ಸಮಸ್ಯೆಗಳಿಗೆ ನಮ್ಮ ಸುತ್ತಲಿನ ರಾಜಕಾರಣವೇ ಕಾರಣ ಎಂದು ಕಂಡುಕೊಂಡ, ಬಳಿಕ ಈತನ ರಾಜಕೀಯ ಸಂದೇಶದ ವ್ಯಂಗ್ಯ ಚಿತ್ರಗಳು ಹೆಚ್ಚಾದವು. ಈತನ ಚಿತ್ರಗಳು ಆಳುವ ವರ್ಗಕ್ಕೆ ಎಷ್ಟು ಇರಿಸು-ಮುರಿಸು ತಂದಿಟ್ಟಿತೆಂದರೆ, ಕಡೆಗೆ ಈತ ಬಿಡಿಸಿ ಹೋದ ಚಿತ್ರಗಳಿಗೆ ಕಪ್ಪು ಬಣ್ಣ ತುಂಬುವ ಕೆಲಸವನ್ನು ಸ್ಥಳೀಯ ಆಡಳಿತ ಕೈಗೊಂಡಿತು. ಸಮಾಜದ ವಿಕಾರಗಳನ್ನು ಪ್ರತಿಬಿಂಬಿಸುವ ಈತನ ಚಿತ್ರಗಳು ಮತ್ತದೇ ವ್ಯವಸ್ಥೆಯ ಆಡಳಿತಶಾಹಿಯಿಂದ ಕುರೂಪಗೊಂಡವು.
ಆದರೆ, ಟೇಲರ್ ಎಲ್ಲೂ ಧೃತಿಗೆಡಲಿಲ್ಲ. ಮತ್ತೂ ಚಿತ್ರಗಳನ್ನು ಬರೆದ, ಅಳಿಸಿದಷ್ಟೂ, ವಿಕಾರಗೊಳಿಸಿದಷ್ಟೂ ಈತನ ಪ್ರತಿಭಟನೆಯ ಕಾವು ಭುಗಿಲೆದ್ದಿತು. ಈತನ ರಾಜಕೀಯ ನಿಲುವುಗಳು ಸ್ಪಷ್ಟವಾಗಿ ಕಾಣಿಸಿಕೊಂಡದ್ದು, ಭಾರತದ ಅಸಮಾನತೆಯ ಕಾನೂನೆಂದೇ ಕರೆಯಲ್ಪಡುವ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟದ ಸಂಧರ್ಭದಲ್ಲಿ. ಸರ್ಕಾರದ ಒಡೆದು ಆಳುವ ನೀತಿ, ನಾಯಕರ ರಕ್ತಪಿಪಾಸುತನವನ್ನು ಬೀದಿಯಲ್ಲೇ ಬರೆದ. ಸಾಮಾಜಿಕ ಜಾಲತಾಣದ ಮೂಲಕ ಹಂಚಿದ. ಅಭಿಮಾನಿಗಳ ಸಂಖ್ಯೆ ಏರುತ್ತಿತ್ತು. ಈತ ಹಲಗೆಯ ಮೇಲೆ ಚಿತ್ರಿಸಿದ ಒಂದು ಚಿತ್ರ ಸಿಎಎ-ಎನ್‌ಆರ್‌ಸಿ ವಿರೋಧಿ ಹೋರಾಟಗಾರರು ತಮ್ಮ ಪ್ರತಿಭಟನೆಯಲ್ಲಿ ಬಳಸಿಕೊಂಡರು. ರಸ್ತೆ ಬದಿಯಲ್ಲಿ ಈತ ಬಿಡಿಸಿದ ಚಿತ್ರಗಳ ಎದುರು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚುವ ಯುವ ಸಮೂಹದ ಸಂಖ್ಯೆ ಏರಿಕೆಯಾಯಿತು. ಇದನ್ನೆಲ್ಲಾ ಈತನೇ ತನ್ನ ಖಾತೆಯ ಮೂಲಕ ಹಂಚಿ ಸಂತೃಪ್ತ ಖುಷಿಪಟ್ಟ.
ʼನಾನು ಬೇರೆ ದೇಶದ ಆರ್ಟಿಸ್ಟ್‌ಗಳನ್ನು ಗಮನಿಸುತ್ತಿದ್ದೆ. ಅವರು ಅಪಾಯ ಮೈಮೇಲೆ ಎಳೆದು ಯಾಕೆ ಅನುಮತಿಯಿಲ್ಲದೆ ಚಿತ್ರ ಬರೆಯಬೇಕೆಂದು ಯೋಚಿಸುತ್ತಿದ್ದೆ. ಅವರನ್ನು ಈ ರೀತಿ ಮಾಡಲು ಪ್ರೇರೇಪಿಸುವುದು ಏನೆಂದು ಹುಡುಕಿದೆ. ಚಿತ್ರ ಬಿಡಿಸುವ ಮೊದಲು ನಾನು ಅನುಮತಿ ಕೇಳಿದೆ, ನಿರಾಕರಿಸಲಾಯಿತು. ಬಳಿಕ ಅರ್ಥವಾಯಿತು, ಪ್ರತಿಭಟನೆಗಳಿಗೆ ಅನುಮತಿಯಿಲ್ಲ, ಇದು ಹೀಗೆಯೇ ಮಾಡಬೇಕಾದುದು. ಹಾಗಾಗಿ ನಾನು ಚಿತ್ರ ಬಿಡಿಸುತ್ತಾ ಬಂದೆ, ಅವರು ಸಾಕಷ್ಟು ಅಳಿಸುತ್ತಾ ಬಂದರುʼ ಎಂದು ಸಂದರ್ಶನದಲ್ಲಿ ಹೇಳುತ್ತಾನೆ.
2018 ರ ಕ್ರಿಸ್‌ಮಸ್ ವೇಳೆ ಉಡುಗೊರೆಗಳಿರುವ ತಳ್ಳುಗಾಡಿಯನ್ನು ಒಬ್ಬ ಸಾಂತಾ ಟೋಪಿ ಹಾಕಿರುವ ಬಾಲ ಕಾರ್ಮಿಕ ತಳ್ಳಿಕೊಂಡು ಹೋಗುವ ಹಾಗೆ, ಹಾಗೂ ಹಿಮ ಸಾರಂಗವನ್ನು ಬಲವಾಗಿ ಸಾಂತಾ ಕ್ಲಾಸ್ ಎಳೆಯುವಂತೆ ಚಿತ್ರಿಸಿದ್ದ ಟೈಲರ್, 2019 ರ ಕ್ರಿಸ್‌ಮಸ್ ವೇಳೆ- ಈ ಸಂಧರ್ಭದಲ್ಲಿ ಸಿಎಎ ಎನ್‌ಆರ್‌ಸಿ ವಿರುದ್ಧ ದೇಶವ್ಯಾಪಿ ಹೋರಾಟಗಳು ನಡೆಯುತ್ತಿತ್ತು- ಸಾಂತಾ ಟೋಪಿ ಹಾಕಿದ ಅಮಿತ್ ಷಾ ನನ್ನು ಚಿತ್ರಿಸುತ್ತಾನೆ. ಮೆರಿ ಸಿಎಎ ಹಾಗೂ ಹ್ಯಾಪಿ ಎನ್‌ಆರ್‌ಸಿ ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಹಂಚುತ್ತಾನೆ. ಅದರಲ್ಲಿ ಸಾಂತಾ ಟೋಪಿ ಹಾಕಿರುವ ದೇಶದ ಗೃಹಮಂತ್ರಿ ಅಮಿತ್ ಷಾ ನ ಮುಖದ ಮೇಲೆ ರಕ್ತದ ಕಲೆಗಳು, ಹಾಗೂ ವಿಕಾರ ನಗುವನ್ನು ಚಿತ್ರಿಸುತ್ತಾನೆ. ಆ ಒಟ್ಟು ಚಿತ್ರ ಅಮಿತ್ ಷಾ ನ ವಿಕೃತತೆಯನ್ನು ಪ್ರತಿಬಿಂಬಿಸುತ್ತದೆ.
ಮುಂಬೈಯಲ್ಲಿ ನಡೆದ ಹಲವು ಸಿಎಎ ವಿರೋಧಿ ಹೋರಾಟದಲ್ಲೂ ಈತ ಪಾಲ್ಗೊಂಡಿದ್ದಾನೆ, ಅಲ್ಲಿ This Revolution will not be televised ಎಂಬ ಭಿತ್ತಿ ಚಿತ್ರವನ್ನು ಪ್ರದರ್ಶಿಸಿದ್ದಾನೆ. ಅಮೆರಿಕಾದ ಹಾಡುಗಾರ ಗಿಲ್ ಸ್ಕಾಟ್ ಹೆರೊನ್ ನ (Gil Scott-Heron) ಈ ಪ್ರಸಿದ್ಧ ಸಾಲಿನ ಅರ್ಥ, “ಈ ಕ್ರಾಂತಿ ದೂರದರ್ಶನದಲ್ಲಿ ಪ್ರದರ್ಶನವಾಗುವುದಿಲ್ಲ” .
ಒಟ್ಟಾರೆ ತನ್ನ ಬಂಡಾಯ ಚಿತ್ರ ಕಾವ್ಯದ ಮೂಲಕ ಸಮಾಜವನ್ನೂ, ರಾಜಕಾರಣವನ್ನು ತೀಕ್ಷ್ಣವಾಗಿ ವಿಡಂಭಿಸುವ ಈತನಲ್ಲಿ ಯಾಕೆ ಗೋಡೆಗಳನ್ನೇ ಕ್ಯಾನ್ವಾಸ್ ಆಗಿ ಬಳಸುತ್ತೀರಿ ಎಂದು ಪ್ರಶ್ನಿಸಿದರೆ, ಸಾಮಾಜಿಕ ಜಾಲತಾಣ ಮಾಧ್ಯಮದ ಮೂಲಕ ನೀವು ಹಂಚಿದರೆ, ಅದು ಸ್ಕ್ರಾಲ್ ಮಾಡುತ್ತಿದ್ದಂತೆ ಹಿನ್ನಲೆಗೆ ಸರಿದು ಬಿಡುತ್ತವೆ, ಗೋಡೆ ಭಿತ್ತಿ ಪರಿಣಾಮಕಾರಿಯಾದುದು. ಯಾರಾದರೂ ವೈಟ್ ವಾಶ್ ಮಾಡುವ ತನಕ ಅದು ಅಲ್ಲೇ ಭದ್ರವಾಗಿರುತ್ತದೆ, ಮತ್ತು ಅದು ಗಮನಕ್ಕೆ ಬಿದ್ದೇ ಬೀಳುತ್ತವೆ ಎಂದು ಹೇಳುತ್ತಾನೆ.
ತನ್ನ ಅನಾಮಧೇಯತೆಯನ್ನು ಕಾಪಾಡಲು ರಾತ್ರಿ ಸಮಯವನ್ನೇ ಆಯ್ದುಕೊಳ್ಳುವ ಈ ಚಿತ್ರ ಕ್ರಾಂತಿಕಾರಿ ಹಲವಾರು ಬಾರಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಿದ್ದಾನೆ. ಈತ ಚಿತ್ರ ಬಿಡಿಸುವಾಗ ಹಲವು ಬಾರಿ ಸ್ಥಳೀಯ ಪೊಲೀಸರು ಈತನನ್ನು ತಡೆದಿದ್ದಾರೆ. ಆತನೇ ಹೇಳುವಂತೆ ಆತ ಯಾವುದೇ ರಾಜಕೀಯ ಚಿತ್ರಗಳು ಬರೆಯುವಾಗ ಸಿಕ್ಕಿಕೊಂಡಿಲ್ಲ. ಒಂದು ವೇಳೆ ಮೋದಿಯ ವ್ಯಂಗ್ಯ ಚಿತ್ರ ಬರೆಯುವಾಗ ನಾನೇನಾದರೂ ಸಿಕ್ಕಿಬಿದ್ದಿದ್ದರೆ ಈ ವೇಳೆಗೆ ಜೈಲಿನಲ್ಲಿರಬೇಕಿತ್ತು, ಅದೃಷ್ಟವಶಾತ್ ಮೋದಿ ಚಿತ್ರ ಬರೆಯುವಾಗ ನಾನೆಂದೂ ಸಿಕ್ಕಿಹಾಕಿಕೊಂಡಿಲ್ಲ ಎಂದಿದ್ದಾನೆ.
ಆದರೆ ಇತ್ತೀಚೆಗೆ ಈತ ಜನಪ್ರಿಯನಾಗಿದ್ದಾನೆ. ಹಾಗಾಗಿ ಸವಾಲುಗಳು ಹೆಚ್ಚಿವೆ. ಹೆಚ್ಚು ಜನರಿಗೆ ಈತನ ಚಿತ್ರದ ಪರಿಚಯವಾದುದರಿಂದ ಈತನನ್ನು ಗಮನಿಸುವ ಕಣ್ಣಗಳು ಹೆಚ್ಚಾಗಿವೆ. ವಾಚ್‌ಮನ್‌ಗಳು, ಸ್ಥಳೀಯ ಪೊಲೀಸರು, ನಾಗರಿಕರು ಇವರನ್ನೆಲ್ಲಾ ತಪ್ಪಿಸಿ ತಾನು ಚಿತ್ರ ಬರೆಯಬೇಕಿದೆ ಎಂದು ತನ್ನ ಮುಂದಿರುವ ಸವಾಲುಗಳನ್ನು ಬಿಚ್ಚಿಟ್ಟಿದ್ದಾನೆ.
ಅದಾಗ್ಯೂ, ಈತ ಇತ್ತೀಚೆಗೆ ರಸ್ತೆಯಲ್ಲಿ ಬರೆದ “ವಾಕ್ ಆಫ್ ಷೇಮ್” ಚಿತ್ರ ಈತನ ಇನ್ಸ್ಟಗ್ರಾಮ್ ಖಾತೆಯನ್ನೇ ನಿಷ್ಕ್ರಿಯಗೊಳಿಸುವ ಮಟ್ಟಕ್ಕೆ ತಲುಪಿತ್ತು. ಸಾಮಾಜಿಕ ಜಾಲತಾಣದ ಬಳಕೆದಾರರ ಮೂಲಕ ʼವಾಕ್ ಆಫ್ ಷೇಮ್ʼ ಚಿತ್ರಕ್ಕೆ ಯಾರ ಹೆಸರನ್ನು ಬಳಕೆ ಮಾಡಬೇಕೆಂಬ ಮತದಾನ ನಡೆಸಿ ಅದರಲ್ಲಿ ಆಯ್ಕೆಯಾಗಿದ್ದ ಕಂಗಣಾ ರಾಣಾವತ್, ಅರ್ನಾಬ್ ಗೋಸ್ವಾಮಿ ಹಾಗೂ ಸಂಬೀತ್ ಪಾತ್ರರ ಹೆಸರನ್ನು ಬಳಸಿಕೊಂಡಿದ್ದ, ಇದೇ ಕಾರಣ ಎದುರಿಟ್ಟುಕೊಂಡು ಆತನ ಖಾತೆಯ ವಿರುದ್ಧ ಬಿಜೆಪಿ ವಕ್ತಾರೆ ದೂರು ದಾಖಲಿಸಿದ್ದಳು.
ತನ್ನ ಚಿತ್ರಗಳನ್ನು ʼಸಂದೇಶʼ ಎಂದು ಕರೆಯುವ ಈತ ಒಂದು ಮಾತನ್ನು ಖಚಿತವಾಗಿ ಹೇಳುತ್ತಾನೆ. “ಬಹುಷ, ಈ ಕ್ರಾಂತಿ ದೂರದರ್ಶನದಲ್ಲಿ ಪ್ರದರ್ಶನಗೊಳ್ಳದಿರಬಹುದು, ಆದರೆ ಖಚಿತವಾಗಿ ಚಿತ್ರದ ಮೂಲಕ ಹೇಳಲಾಗುವುದು.”