ಶಾಸಕಾಂಗ ಪರಿಷತ್ತಿನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಲು ಸಿಎಂ ಠಾಕ್ರೆ ಬಯಸಿದ್ದಾರೆ. ಆದರೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯರಿ ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಠಾಕ್ರೆ ಮುಖ್ಯಮಂತ್ರಿ ಪದವಿ ತೂಗುಗತ್ತಿಯ ಮೇಲೆ ನಿಂತಿದೆ.
NCPಯ ಅಜಿತ್ ಪವಾರ್, ಜಯಂತ್ ಪಾಟೀಲ್, ಶಿವಸೇನೆಯ ಏಕಾಂತ್ ಶಿಂಢೆ, ಅನಿಲ್ ಪರಾಬ್, ಕಾಂಗ್ರೆಸ್ಸಿನ ಬಾಳಾಸಾಹೇಬ್ ಥೋರಟ್ ಹಾಗೂ ಅಸ್ಲಮ್ ಶೇಖ್‌ನ್ನು ಒಳಗೊಂಡ ಕ್ಯಾಬಿನೆಟ್ ನಿಯೋಗವು ಮಂಗಳವಾರ ರಾಜ್ಯಪಾಲರ ನಿವಾಸಕ್ಕೆ ತೆರಳಿ ಉದ್ದವ್ ಠಾಕ್ರೆಯನ್ನು ಪರಿಷತ್ತಿನ ಸದಸ್ಯರಾಗಿ ಮರು ನಾಮನಿರ್ದೇಶನ ಮಾಡಲು ಶಿಫಾರಸ್ಸು ಮಾಡಿದೆ.

“ರಾಜ್ಯಪಾಲರಿಗೆ ನಮ್ಮ ಮನವಿಯನ್ನು ಸಲ್ಲಿಸಿದ್ದೇವೆ, ಅವರು ನಮ್ಮ ನಮ್ಮ ಮನವಿಯನ್ನು ಸ್ವೀಕರಿಸುತ್ತಾರೋ ಇಲ್ಲವೋ ಎಂದು ಗೊತ್ತಿಲ್ಲ,” ಎಂದು ನಿಯೋಗದ ಹಿರಿಯ ಸದಸ್ಯರೊಬ್ಬರು ಠಾಕ್ರೆಯವರ ನಾಮನಿರ್ದೇಶನದ ಕುರಿತು ಅನಿಶ್ಚಿತತೆಯ ದನಿಯಲ್ಲಿ ಹೇಳಿದರು. ಶಾಸಕಾಂಗ ಪರಿಷತ್ತಿನ ಚುನಾವಣೆಯನ್ನು ನಿಗದಿಗಿಂತ ಮುಂಚಿತವಾಗಿ ನಡೆಸಲು ಚುನಾವಣಾ ಆಯೋಗವನ್ನು ಸಂಪರ್ಕಿಸಲು ಸರ್ಕಾರವು ಚಿಂತಿಸುತ್ತಿದೆ ಎಂದು ಹೇಳಿದರು.
ನಿಗದಿಯಂತೆ ಎಪ್ರಿಲ್ 24ರಂದು 9 ವಿಧಾನ ಪರಿಷತ್ತಿನ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಒಂದು ಸ್ಥಾನಕ್ಕೆ ಉಧ್ಧವ್ ಠಾಕ್ರೆ ಸ್ಪರ್ಧಿಸಬೇಕಿತ್ತು. ಆದರೆ, ಕರೋನ ಬಿಕ್ಕಟ್ಟು ಎದುರಿಟ್ಟು ಚುನಾವಣಾ ಆಯೋಗವು ಚುನಾವಣೆಯನ್ನು ಮುಂದೂಡಿತ್ತು. ಹೀಗಾಗಿ, ಖಾಲಿಯಿರುವ ಎರಡು ನಾಮನಿರ್ದೇಶಿತ ಹುದ್ದೆಗಳಲ್ಲಿ ಒಂದು ಸ್ಥಾನಕ್ಕೆ ರಾಜ್ಯಪಾಲರಿಂದ ನಾಮ ನಿರ್ದೇಶನಗೊಳ್ಳಲು ಮುಖ್ಯಮಂತ್ರಿ ಬಯಸಿದ್ದರು. ಈ ಹಿಂದೆಯೂ, ನಾಮ ನಿರ್ದೇಶನಗೊಳಿಸಲು ಕ್ಯಾಬಿನೆಟ್ ನಿಯೋಗವು ಎಪ್ರಿಲ್ 9ರಂದು ರಾಜಭವನಕ್ಕೆ ಶಿಫಾರಸನ್ನು ಸಲ್ಲಿಸಿತ್ತು. ಆದರೆ ತಾಂತ್ರಿಕ ಕಾರಣವನ್ನು ಮುಂದಿಟ್ಟು ರಾಜಭವನ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ.
