ಭಾರತದ ಗಡಿಯಲ್ಲಿ ವಿನಾ ಕಾರಣ ತಂಟೆ ನೀಡುತ್ತಿರುವ ಚೀನಾ ಜೂನ್ 16 ರಂದು 20 ಭಾರತೀಯ ಯೋಧರನ್ನು ಬಲಿ ಪಡೆದುಕೊಂಡಿತ್ತು. ಅದರೊಂದಿಗೆ ಚೀನಾದ ಮೇಲೆ ಅದುವರೆಗೂ ಇದ್ದ ಅಸಹನೆ ಭಾರತೀಯರಲ್ಲಿ ಧ್ವೇಷಕ್ಕೆ ತಿರುಗಿಕೊಂಡಿದೆ. ಚೀನಾ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು, ಭಾರತೀಯರು ನಡು ರಸ್ತೆಯಲ್ಲಿ ಚೀನಾ ವಸ್ತುಗಳನ್ನು ಬಹಿರಂಗವಾಗಿ ನಾಶಗೊಳಿಸಿ ತಮ್ಮ ಕೋಪದ ತೀವ್ರತೆ ವ್ಯಕ್ತ ಪಡಿಸುತ್ತಿದ್ದಾರೆ.
ಭಾರತದ ಬೀದಿ ಬೀದಿಗಳಲ್ಲಿ ಚೀನಾದ ವಿರುದ್ಧದ ಅಸಹನೆ ವ್ಯಕ್ತವಾಗುತ್ತಿರುವಾಗಲೂ, ದೇಶದ ಮಾನ್ಯ ಪ್ರಧಾನ ಮಂತ್ರಿ ಘಟನೆ ನಡೆದು ಮೂರು ದಿನಗಳ ಕಾಲ ಈ ಕುರಿತು ಸೊಲ್ಲೆತ್ತಲಿಲ್ಲ. ಬಾಲಿವುಡ್ ನಟರ ಸಾವಿನ ಸುದ್ದಿಗೆ ತಕ್ಷಣವೇ ಪ್ರತಿಕ್ರಿಯಿಸುವ ಭಾರತದ ಮಾನ್ಯ ಪ್ರಧಾನಮಂತ್ರಿ, ದೇಶ ರಕ್ಷಣೆಗೆ ಗಡಿಯಲ್ಲಿ ನಿಂತಿರುವ ಧೀರ 20 ಯೋಧರ ಮರಣವಾದಾಗ ಯಾವ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಬಹುಷ ಮೋದಿ ಅಭಿಮಾನಿಗಳಿಂದ “ಮೌನಿ ಬಾಬಾ” ಎಂದೂ, “ರೋಬೋಟ್ʼ ಎಂದು ಕರೆಯಲ್ಪಡುತ್ತಿದ್ದ ಮನಮೋಹನ್ ಸಿಂಗ್‌ರಿಂದ ಈ ರೀತಿಯ ಉದಾಸೀನತೆ ಕಂಡು ಬಂದಿದ್ದರೆ ಮೋದಿ ಅಭಿಮಾನಿಗಳಿಗೆ ಆಘಾತವಾಗುತ್ತಿರಲಿಲ್ಲ. ಆದರೆ ಈಗ ಇರುವುದು ಮನಮೋಹನ್ ಸಿಂಗ್‌ರ ಆಡಳಿತವಲ್ಲ, ಬದಲಾಗಿ ಭಾರತದ ಒಂದು ಸೈನಿಕನ ತಲೆಗೆ ಹತ್ತು ಸೈನಿಕರ ತಲೆ ತರುತ್ತೇನೆಂದು ಅಧಿಕಾರಕ್ಕೇರಿದ ಹಿಂದೂ ಸಾಮ್ರಾಟ್, 56 ಇಂಚು ಎದೆಯ ವ್ಯಕ್ತಿ ಎಂಬೆಲ್ಲಾ ವಿಶೇಷಣಗಳನ್ನು ಅಭಿಮಾನಿಗಳಿಂದ ಪಡೆದಿರುವ ಗುಜರಾತ್ ಮಾಡೆಲ್ ರುವಾರಿ ಶ್ರೀಮಾನ್ ನರೇಂದ್ರ ಮೋದಿಯವರದ್ದು.
ತಾನು ಬಾಲ್ಯದಲ್ಲಿ ಟೀ ಮಾರುತ್ತಿದ್ದುದಾಗಿ ಹೇಳಿಕೊಂಡು ಜನಮಾನಸದಲ್ಲಿ ಸ್ಥಾನ ಪಡೆದ ನರೇಂದ್ರ ಮೋದಿಯವರು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಡಿಗ್ರಿ ಪಡೆದು, ಆಕ್ಸ್‌ಫರ್ಡ್ ಯುನಿವರ್ಸಿಟಿಯಲ್ಲಿ PhD ಮಾಡಿ RBI ಗವರ್ನರಾಗಿ, ಭಾರತದ ಹಣಕಾಸು ಸಚಿವರಾಗಿ, ದೇಶದ ಪ್ರಧಾನ ಮಂತ್ರಿಯಾಗಿ ಹಲವಾರು ಆರ್ಥಿಕ ಯೋಜನೆಗಳಿಂದ ಭಾರತದ ಆರ್ಥಿಕತೆಯನ್ನು ಸ್ಥಿರಗೊಳಿಸಿದ, 2008 ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಕುಸಿತದ ಬಿಸಿ ಭಾರತಕ್ಕೆ ತಟ್ಟದಂತೆ ನೋಡಿಕೊಂಡ, ಹೆಚ್ಚು ಮಾತನಾಡದ ಮನಮೋಹನ್ ಸಿಂಗರನ್ನು ದುರ್ಬಲ ಪ್ರಧಾನಿಯೆಂದು ಟೀಕಿಸುವಾಗೆಲ್ಲಾ ಭಾರತದ ಮತದಾರರಲ್ಲಿ 30% ಜನರ ಗುಂಪು ಹೆಚ್ಚು ಮಾತನಾಡದ ಮನಮೋಹನ್‌ರಿಗಿಂತ ನಿರರ್ಗಳವಾಗಿ ಮಾತನಾಡುವ ಮೋದಿಯನ್ನು ನೆಚ್ಚಿಕೊಂಡಿತು. ಹಾಗೂ ತನ್ನ 56 ಇಂಚಿನ ಎದೆಯುಬ್ಬಿಸಿ ಪ್ರಧಾನಿಯೇ ನೇರವಾಗಿ ಗಡಿಗಳಲ್ಲಿ ಯುದ್ಧ ಮಾಡಲು ತೆರಳುತ್ತಾರೆಂಬ ಭ್ರಮೆಯಲ್ಲಿ ತೇಲಿಕೊಂಡಿತ್ತು.

ಡ್ರ್ಯಾಗನ್ ಫ್ಯಾಂಟಸಿ ಕಥಾ ಪಾತ್ರ ಪರಿಚಯಿಸಿದ ನಾಡು ಭಾರತದೊಂದಿಗೆ ತೆಗೆದ ತಗಾದೆಯೊಂದಿಗೆ, ಮೋದಿ ಕುರಿತು ಫ್ಯಾಂಟಸಿ ಲೋಕದಲ್ಲಿದ್ದ ಅಭಿಮಾನಿಗಳಿಗೆ ವಾಸ್ತವವನ್ನು ಕಾಣುವಂತಹ ಅವಕಾಶ ಒದಗಿ ಬಂದಿದೆ. ಭಾರತೀಯ ಸೈನ್ಯವನ್ನು ಒಂದು ಅಜೆಂಡಾದ ಸೇನೆಯಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದ, ಸೇನೆಯನ್ನು ತಾವು ಮಾತ್ರ ಗೌರವಿಸುತ್ತಿರುವುದು ಎಂಬ ಭ್ರಮೆಯಲ್ಲಿದ್ದ ಮೋದಿ ಅಭಿಮಾನಿ ಬಳಗ ಅಥವಾ ಬಲಪಂಥೀಯ ಗುಂಪಿಗೆ ತನ್ನ ಬುದ್ದಿಮತ್ತೆಯ ಸುತ್ತಲೂ ಕಟ್ಟಿಕೊಂಡಿದ್ದ ಪೊರೆಯಲ್ಲಿ ಬಿರುಕು ಬೀಳಲು ಮೋದಿಯ ದಿವ್ಯಮೌನ ಒಂದು ನಿಮಿತ್ತವಾಯಿತು.
ಸೈನಿಕರ ಮರಣದ ಬಳಿಕ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ ಅನ್ನುವಂತಾಗದಿರಲು, ಸರ್ವ ಪಕ್ಷ ಸಭೆ ಕರೆದ ಮೋದಿ, ತಾನು ದೇಶದಿಂದ ಮುಕ್ತಗೊಳಿಸಬೇಕೆಂದು ಬಯಸಿದ ವಿರೋಧ ಪಕ್ಷಗಳಿಂದಲೇ ಚೀನಾ ವಿರುದ್ಧ ಕ್ರಮ ಕೈಗೊಳ್ಳಲು ಸಂಪೂರ್ಣ ಬೆಂಬಲ ಪಡೆದರು. ಸಭೆಯ ಬಳಿಕ ಕೇವಲ 8 ನಿಮಿಷ ಮಾತನಾಡಿದ ಮೋದಿ ಸೂಚ್ಯವಾಗಿ ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಲ್ಲ ಎಂಬರ್ಥದಲ್ಲಿ ಮಾತು ಮುಗಿಸಿದರು.
ಸನ್ಮಾನ್ಯ ಪ್ರಧಾನಿಯ ಮೌನಕ್ಕಿಂತಲೂ ಹೆಚ್ಚು ಕಸಿವಿಸಿ ಹುಟ್ಟಿಸಿದ್ದು ಮೋದಿಯ ಬರೀ ಎಂಟು ನಿಮಿಷದ ಮಾತು. ದಾಳಿ ಮಾಡಿ ಭಾರತೀಯ 20 ಯೋಧರನ್ನು ಬಲಿ ಪಡೆದ ಚೀನಾ, ತನ್ನನ್ನು ಸಮರ್ಥಿಸಲು ನೀಡಿರುವ ಹೇಳಿಕೆಯಂತೆಯೇ ಧ್ವನಿಸುವ ಹೇಳಿಕೆಯನ್ನು ಭಾರತದ ಪ್ರಧಾನಿಯೂ ನೀಡಿದ್ದಾರೆ. ಅಲ್ಲಿಗೆ ಚೀನಾದ ಹೇಳಿಕೆಯನ್ನು ಭಾರತದ ಪ್ರಧಾನಿಯೂ ಒಪ್ಪಿದಂತಾಯ್ತು. ʼಭಾರತ ಮಾತೆಯ ರಕ್ಷಿಸಲು ಬಂದಿರುವ ವಿಶೇಷ ಅವತಾರʼ ಎಂದು ಬಿಜೆಪಿ ಐಟಿ ಸೆಲ್ಲಿನಿಂದ ಬಿಂಬಿತವಾಗಿದ್ದ ಮೋದಿ ಈ ಬಾರಿ ಮತ್ತೆ ನಿವೃತ್ತ ಯೋಧರ ಕೆಂಗಣ್ಣಿಗೆ ಗುರಿಯಾದರು. ಇದುವರೆಗೂ ಮೋದಿಯವರನ್ನು ಪ್ರಶ್ನಿಸುವವರನ್ನು ದೇಶದ್ರೋಹಿಯೆಂದು ಸಾರಸಗಾಟಾಗಿ ಹೇಳಿಬಿಡುವ ಧೈರ್ಯವನ್ನು ಮೋದಿ ಅಭಿಮಾನಿಗಳು ಈ ಬಾರಿ ತೋರಲಿಲ್ಲ. ಬದಲಾಗಿ ಮೋದಿಯ ಮೇಲೆ ನಂಬಿಕೆ ಕಳೆದುಕೊಂಡ ಯೋಧರ ಬಳಿ ಮೋದಿಯನ್ನು ನಂಬುವಂತೆ ಸಾಮಾಜಿಕ ಜಾಲತಾಣದಲ್ಲಿ ಅಂಗಲಾಚಿಕೊಂಡರು. ಅಸಲಿಗೆ ಭಾರತವನ್ನು ನಿಜಾರ್ಥದಲ್ಲಿ ಶತ್ರುಗಳಿಂದ ರಕ್ಷಿಸಲು ತಮ್ಮ ಅಮೂಲ್ಯ ಯೌವನವನ್ನು ಸವೆಸಿರುವ ಯೋಧರನ್ನು ದೇಶದ್ರೋಹಿಯೆಂದು ಕರೆಯುವುದಾದರೂ ಹೇಗೆ? ಅಷ್ಟಕ್ಕೂ ಯೋಧರನ್ನು ದೇಶದ್ರೋಹಿಯನ್ನಾಗಿಸಿದರೆ, ಎಂದಿನಂತೆ ಮೋದಿ ವಿರೋಧಿಗಳ ಮನೆಯ ಹೆಂಗಸರಿಗೆ ಅವ್ಯಾಚ್ಯವಾಗಿ ನಿಂದಿಸಿದರೆ ಭಾರತದಲ್ಲಿ ಮೌನವಾಗಿರುವ ‘ಅಸಲಿ’ ದೇಶಭಕ್ತ ಬಹುಜನರು ಸುಮ್ಮನಿರುತ್ತಾರೆಯೇ ?

ಹಾಗಾಗಿಯೇ ಕೇಂದ್ರ ಸರ್ಕಾರ, ಪ್ರಧಾನಿಯ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆಯೆಂದು ತಿಪ್ಪೆ ಸಾರಿಸಲು ಯತ್ನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ನಂಬಿಯೆಂದು ಅಹವಾಲಿಡುವ, ಮೋದಿ ವಿರೋಧಿಗಳು ಭಕ್ತರೆಂದು ಸಂಭೋದಿಸುವ ಮೋದಿ ಅಭಿಮಾನಿಗಳಂತೆಯೇ ಸರ್ಕಾರವೂ ಮೋದಿಯ ಮೇಲೆ ನಂಬಿಕೆ ಹುಟ್ಟಿಸಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. ಆದರೆ, 2014ರ ಮೊದಲು ಧೀರೋಧಾತ್ತ ಭಾಷಣ ನಡೆಸಿ, ಮಾತಿನಲ್ಲೇ ಶತ್ರು ರಾಷ್ಟ್ರಗಳ ಸೈನಿಕರ ತಲೆ ಕಡಿಯುತ್ತಿದ್ದ ನರೇಂದ್ರ ಮೋದಿಯವರು ಈಗ ಮಾತನಾಡಲು ತಡವರಿಸುತ್ತಿದ್ದಾರೆ. ಬಹುಪಾಲು ಮೌನವನ್ನೇ ನೆಚ್ಚಿಕೊಂಡಿದ್ದಾರೆ. ಮೋದಿಯವರ ಈ ಮೌನ ಮನಮೋಹನ್ ಸಿಂಗರ ಜ್ಞಾನದ, ಅನುಭವದ, ಪ್ರಭುದ್ಧತೆಯ ಮೌನದಂತೆ ಭಾಸವಾಗುತ್ತಿಲ್ಲ. ಈ ವಿಷಮ ಸಂಧರ್ಭದಲ್ಲಿ ಪ್ರಧಾನಿಯ ಮೇಲೆ ಭರವಸೆ ಇಡದೇ ಬೇರೆ ವಿಧಿಯಿಲ್ಲದಿರುವುದರಿಂದ ‘ಹೇಡಿತನದ ಮೌನ’ ಎಂದೂ ಹೇಳುವಂತಿಲ್ಲ.
ಪ್ರಧಾನಿ ಎಷ್ಟೇ ಅಸಮರ್ಥನಾಗಿರಲಿ, ಆದರೆ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾಗುವ ಈ ಸಂಧರ್ಭದಲ್ಲಿ ವಿರೋಧ ಪಕ್ಷಗಳೂ ಸರ್ಕಾರದ ಜೊತೆಗೆ ನಿಲ್ಲಬೇಕೆಂಬ ಪ್ರಬುದ್ಧತೆ ಹೊಂದಿರುವ ವಿರೋಧ ಪಕ್ಷಗಳು ಇಷ್ಟರವರೆಗೆ ಮೋದಿಯವರ ವಿಫಲ ಆರ್ಥಿಕ ನೀತಿ, ಅಪೂರ್ಣ ಯೋಜನೆಗಳು, ಆಡಳಿತದ ವೈಫಲ್ಯವನ್ನು ಟೀಕಿಸುತ್ತಿದ್ದರೂ ತಾತ್ಕಾಲಿಕವಾಗಿ ಟೀಕೆಯನ್ನು, ವಿರೋಧವನ್ನು ಬದಿಗಿಟ್ಟಿವೆ. ಅಷ್ಟರ ಮಟ್ಟಿಗೆ ದೇಶವೇ ಒಂದಾಗಿ ಎದುರಿಸಬೇಕಾದಂತಹ ಬಿಕ್ಕಟ್ಟೆಂದು ಎಲ್ಲರಿಗೂ ಅರ್ಥವಾಗಿದೆ. ದೇಶದ ಬಹುಪಾಲು ಜನರ ವಿರೋಧದ ನಡುವೆಯೂ ಸಿಎಎ, ಎನ್‌ಆರ್‌ಸಿ ಮುಂತಾದ ಕಾನೂನುಗಳನ್ನು ತರಲು ಹಿಂಜರಿಯದಿದ್ದ ಮೋದಿ, ಈಗ ಎಲ್ಲರ ಬೆಂಬಲವಿದ್ದೂ ಚೀನಾದ ವಿರುದ್ಧ ಕ್ರಮ ಕೈಗೊಳ್ಳಲು ಆಲೋಚಿಸುತ್ತಿದ್ದಾರೆ. ಬಹುಷ ಮಾತು ಕಡಿಮೆಗೊಳಿಸಿರುವುದು ಕೆಲಸ ಜಾಸ್ತಿ ಮಾಡುವುದರ ಆರಂಭಿಕ ಲಕ್ಷಣವಾಗಿರಬೇಕು. ಕಪ್ಪುಹಣದಿಂದ ದೇಶವನ್ನು ಮುಕ್ತಗೊಳಿಸಿರುವ, ಭಾರತವನ್ನು ವಿಶ್ವಗುರುವಾಗಿಸಲು ಹೊರಟಿರುವ ಪ್ರಧಾನಿ ಭಾರತೀಯ ಯೋಧರ ಹುತಾತ್ಮ ಆತ್ಮಗಳಿಗೆ ಖಂಡಿತವಾಗಿಯೂ ನ್ಯಾಯ ಒದಗಿಸುತ್ತಾರೆ.