ಕಳೆದ ವಾರವಷ್ಟೇ ಅಪ್ಪಳಿಸಿ ಸಾಕಷ್ಟು ಹಾನಿ ಮಾಡಿ ಹೋದ ʼನಿವಾರ್ʼ ಚಂಡಮಾರುತದ ಬೆನ್ನಲ್ಲೀಗ ಬುರೆವಿ ಹೆಸರಿನ ಮತ್ತೊಂದು ಚಂಡಮಾರುತ ಶ್ರೀಲಂಕಾ ಹಾಗೂ ಭಾರತದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ.
ಈಗಾಗಲೇ ಬಂದು ಹೋಗಿರುವ ನಿವಾರ್ ಹೊಡೆತವನ್ನೇ ಇನ್ನೂ ಜೀರ್ಣಿಸಲಾಗದ ಆ ಭಾಗದ ಜನತೆಗೆ ʼಬುರೆವಿʼ ಮತ್ತೊಂದು ಆತಂಕವಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮಂಗಳವಾರ ರಾತ್ರಿಯಿಂದಲೇ ತೀವ್ರಗೊಳ್ಳಲಿದ್ದು ಡಿ. 4 ರಂದು ತಮಿಳುನಾಡು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.
ಬುರೆವಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದು, ಶ್ರೀಲಂಕಾದ ತ್ರೀನ್ ಕೊಮಾಲಿಯಿಂದ 370 ಕಿಮೀ, ಕನ್ಯಾಕುಮಾರಿಯಿಂದ 770 ಕಿಮೀ, ಪಂಬನ್ ನಿಂದ 600 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ. ಡಿಸೆಂಬರ್ 2 ರ ರಾತ್ರಿ ಅಥವಾ ಸಂಜೆ ವೇಳೆ ಗಂಟೆಗೆ 100 ಕಿಮೀ ವೇಗದಲ್ಲಿ ಶ್ರೀಲಂಕಾ ಕರಾವಳಿಯನ್ನು ದಾಟುವ ಸಾಧ್ಯತೆ ಇದೆಯೆಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಚಂಡ ಮಾರುತದ ಪ್ರಭಾವದಿಂದ ಡಿಸೆಂಬರ್ ಆರಂಭದಿಂದಲೇ ಭಾರೀ ಮಳೆಯಾಗಲಿದೆ. ತಿರುನಲ್ವೇಲಿ, ತೂತುಕುಡಿ, ಕನ್ಯಾಕುಮಾರಿ, ರಾಮನಾಥಪುರಂ, ತಂಜಾವೂರು, ತಿರುವರೂರು, ನಾಗಪಟ್ಟಿನಂ, ಕಾರೈಕಲ್ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಉಪ ನಿರ್ದೇಶಕ ಎಸ್ ಬಾಲಚಂದ್ರನ್ ತಿಳಿಸಿದ್ದಾರೆ.
Also Read: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ
ಈಗಾಗಲೇ NDRF ತಂಡ ಕೇರಳ, ತಮಿಳುನಾಡು ಭಾಗದಲ್ಲಿ ಮುನ್ನೆಚ್ಚರಿಕೆಯೊಂದಿಗೆ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿ ನಿಂತಿದೆ. ಈ ಎರಡೂ ರಾಜ್ಯಗಳ ಹಲವು ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು ಪ್ರವಾಹ ಬರುವ ಸಾಧ್ಯತೆಯ ಕುರಿತು ಹವಾಮಾನ ಇಲಾಖೆ ಎಚ್ಚರಿಸಿದೆ. ಶುಕ್ರವಾರದವರೆಗೆ ಮೀನುಗಾರಿಕೆಯನ್ನು ನಿರ್ಭಂಧಿಸಲಾಗಿದೆ.