ಮಡಿಕೇರಿ: ಲಾಕ್ ಡೌನ್ ಸಮಯದಲ್ಲಿ ಮನೆ ಬಿಟ್ಟು ಹೋಗಿದ್ದಕ್ಕಾಗಿ ಪೊಲೀಸರಿಂದ ಥಳಿಸಲ್ಪಟ್ಟ 50 ವರ್ಷದ ಮೂರ್ಛೆ ರೋಗಿಯು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ವಿರಾಜ್‌ಪೇಟೆ ನಿಲ್ದಾಣದ ಎಂಟು ಪೊಲೀಸರನ್ನು ಅಮಾನತುಗೊಳಿಸಲಾಗಿದ್ದು, ವಿಚಾರಣೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. “ಅಪರಾಧಿಗಳು ಯಾರೇ ಆಗಿರಲಿ, ನಿಷ್ಪಕ್ಷಪಾತ ವಿಚಾರಣೆಯ ಆಧಾರದ ಮೇಲೆ ಅವರಿಗೆ ಶಿಕ್ಷೆಯಾಗುತ್ತದೆ” ಎಂದು ದಕ್ಷಿಣ ಶ್ರೇಣಿಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹೇಳಿದ್ದಾರೆ.
ಫಿಟ್ಸ್‌ನಿಂದಾಗಿ ರಾಯ್ ಡಿಸೋಜ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಮತ್ತು ಬುಧವಾರ ರಾತ್ರಿ ಕೈಯಲ್ಲಿ ಕುಡಗೋಲಿನೊಂದಿಗೆ ಮನೆಯಿಂದ ಹೊರಗೆ ಓಡಿಹೋಗಿದ್ದರು ಎಂದು ಅವರ ಕುಟುಂಬ ತಿಳಿಸಿದೆ. ಕೋವಿಡ್ ಕರ್ಫ್ಯೂ ಜಾರಿಯಲ್ಲಿದ್ದಾಗ ಮನೆಯಿಂದ ಏಕೆ ಹೊರಗಡೆ ಬಂದಿದ್ದೀರಿ ಎಂದು ಕೇಳಿದಾಗ ಡಿಸೋಜ ಪೋಲಿಸರ ಮೇಲೆ ಹಲ್ಲೆಗೆ ಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಯ್ ಅವರ ತಾಯಿಯನ್ನು ಮುಂಜಾನೆ 3 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಕರೆಸಿದಾಗ ರಾಯ್ ಡಿಸೋಜ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು ಎಂದು ರಾಯ್ ಅವರ ಕಿರಿಯ ಸಹೋದರ ರಾಬಿನ್ ಹೇಳಿದ್ದಾರೆ. ರಾಯ್ ತನ್ನ ತಾಯಿಯೊಂದಿಗೆ ವಿರಾಜ್‌ಪೇಟೆಯಲ್ಲಿ ವಾಸಿಸುತ್ತಿದ್ದಾರೆ, ಬೆಂಗಳೂರಿನಲ್ಲಿ ವಾಸಿಸುವ ರಾಬಿನ್ ಈ ಘಟನೆಯ ನಂತರ ಕೊಡಗುಗೆ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ರಾಯ್ ಅವರನ್ನು ಮಡಿಕೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾದರು ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ರಾಬಿನ್ ಪೊಲೀಸರಿಗೆ ಈ ಪ್ರಕರಣದ ಕುರಿತು ದೂರು ನೀಡಿದ್ದು, ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಎಸ್‌ಪಿ ಕ್ಷಮಾ ಮಿಶ್ರಾ ಅವರನ್ನು ಒತ್ತಾಯಿಸಿದ್ದಾರೆ.
ನನ್ನ ಸಹೋದರನನ್ನು ಮನಬಂದಂತೆ ಥಳಿಸಿದ್ದಾರೆ ಮತ್ತು ಪೊಲೀಸ್ ಠಾಣೆಯ ಮುಂದೆ ಪ್ರಜ್ಞಾಹೀನವಾಗಿ ಮಲಗಿದ್ದನ್ನು ಅವರನ್ನು ಕಂಡಿದ್ದಾರೆ. “ಹೊಡೆತದಿಂದ ಅನೇಕ ಗಾಯಗಳಿಂದಾಗಿ ರಾಯ್ ಡಿಸೋಜ ಆಸ್ಪತ್ರೆಯಲ್ಲಿ ನಿಧನರಾದರು” ಎಂದು ರಾಬಿನ್ ಆರೋಪಿಸಿದ್ದಾರೆ.
ಸಿಐಡಿ ತನಿಖಾ ತಂಡ ಭಾನುವಾರ ಕೊಡಗು ತಲುಪುವ ನಿರೀಕ್ಷೆಯಿದೆ. ಅಮಾನತುಗೊಂಡವರಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ಎಂ.ಯು.ಸುನೀಲ್ ಮತ್ತು ಕೆ.ಜಿ. ನೆಹರೂ, ಕಾನ್‌ಸ್ಟೆಬಲ್‌ಗಳಾದ ಎನ್.ಎಸ್.ಲೋಕೇಶ್, ಎಚ್.ಜೆ.ತನುಕುಮಾರ್, ಎನ್.ಎಚ್. ಸತೀಶ್, ಎಂ.ಎಲ್.ಸುನಿಲ್, ಎ ರಮೇಶ್, ಬಿ.ಟಿ.ಪ್ರದೀಪ್ ಎಂದು ತಿಳಿದುಬಂದಿದೆ.
ರಾಯ್ ಸಾವಿನ ಸುದ್ದಿ ಹರಡುತ್ತಿದ್ದಂತೆ, ವಿವಿಧ ಸಂಘಟನೆಗಳ ಸದಸ್ಯರು ಪೋಲಿಸ್ ದೌರ್ಜನ್ಯವನ್ನು ವಿರೋಧಿಸಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ವಿರಾಜ್‌ಪೇಟೆ ಪಟ್ಟಣದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ ಅವರು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿ ಉಪ ಎಸ್ಪಿ ಜೈಕುಮಾರ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.