ಎರಡನೇ ಅಲೆಯ ರೂಪಾಂತರೀ ಕೋವಿಡ್ 19 ಸೋಂಕು ಕಾಡ್ಗಿಚ್ಚಿನಂತೆ ಎಲ್ಲ ಕಡೆ ಹಬ್ಬುತ್ತಿದೆ. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲಾಗದೇ ನಮ್ಮ ಅಧ್ಯಕ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬರೀ ಭರವಸೆಯಲ್ಲೆ ಕಾಲ ಕಳೆಯುತ್ತಿವೆ. ಆಕ್ಷಿಜನ್ ಕೊರತೆಯಿಂದಾಗಿ ನಿತ್ಯವೂ ನೂರಾರು ಜನರು ಸಾಯುತ್ತಿದ್ದಾರೆ. ಆದರೆ ನಮ್ಮ ಅಧಿಕಾರಿಗಳು ಸಾವಿನ ಸಂಖ್ಯೆಯನ್ನೂ ನಿಖರವಾಗಿ ನೀಡುತ್ತಿಲ್ಲ. ಅಷ್ಟೇ ಅಲ್ಲ ಸಚಿವರಿಗೇ ಕೋವಿಡ್ ಕೇರ್ ಸೆಂಟರ್ ನ ಬಗ್ಗೆ ನೀಡಿರುವ ತಪ್ಪು ಮಾಹಿತಿಯು ಮಡಿಕೇರಿಯ ಕೊಡಗು ರಕ್ಷಣಾ ವೇದಿಕೆಯ ಸದಸ್ಯರು ವೀಡೀಯೋ ಸಾಕ್ಷಿಯನ್ನೂ ನೀಡುವ ಮೂಲಕ ಬಹಿರಂಗಪಡಿಸಿದ್ದಾರೆ.. ಇದರಿಂದಾಗಿ ಅಧಿಕಾರಿಗಳು ನಾಚಿ ತಲೆ ತಗ್ಗಿಸುವಂತಾಗಿದೆ.
ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದ ಉಸ್ತುವಾರಿ ಸಚಿವ ವಿ ಸೋಮಣ್ಣ ಅವರು ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಅವರು 2018 ರಲ್ಲಿ ಭೂಕುಸಿತದಿಂದಾಗಿ ಮನೆ ಕಳೆದುಕೊಂಡಿದ್ದ ನಿರಾಶ್ರಿತರಿಗೆ ಮನೆಗಳನ್ನೂ ವಿತರಿಸಿದರು. ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ ಸಚಿವ ಸೋಮಣ್ಣ ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಸುಸಜ್ಜಿತವಾದ 56 ಬೆಡ್ಗಳ ತೀವ್ರ ನಿಗಾ ಘಟಕ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಮಕ್ಕಳ ಮತ್ತು ನವಜಾತ ಶಿಶುಗಳಿಗೆ ವಿಶೇಷ ಸೌಲಭ್ಯವಿರುತ್ತದೆ. ಕೋವಿಡ್ ರೋಗಿಗಳಿಗೆ ಡಯಾಲಿಸಿಸ್ಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 26+6 ಒಟ್ಟು 32 ವೆಂಟಿಲೇಟರ್ ಸೌಲಭ್ಯವಿರುತ್ತದೆ. ಇದಲ್ಲದೆ 13 ಕೆ.ಎಲ್ ಆಮ್ಲಜನಕ ಘಟಕ ಸ್ಥಾಪಿಸಲಾಗಿದ್ದು ಅಕ್ಟೋಬರ್ 10 2020 ರಿಂದ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಒಂದು ಖಾಸಗಿ ಆಸ್ಪತ್ರೆಯನ್ನು ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಹಸ್ತಾಂತರ ಪಡೆದುಕೊಂಡಿದ್ದು ಸಾರ್ವಜನಿಕರಿಗೆ ನಾನ್ ಕೋವಿಡ್ ಸೇವೆಗಳನ್ನು ಒದಗಿಸಲಾಗುತ್ತದೆ.
ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಮುಖಗವಸು ಧರಿಸದ ಸಾರ್ವಜನಿಕರ ಮೇಲೆ ಕಟ್ಟುನಿಟ್ಟಿನ ಕ್ರಮ. ಜಿಲ್ಲೆಯಲ್ಲಿ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದ್ದು, ಈಗಿರುವ 3 ಸಿಸಿಸಿ (300 ಹಾಸಿಗೆಗಳ) ಜೊತೆಗೆ ಹೆಚ್ಚುವರಿಯಾಗಿ 3 ಸಿಸಿಸಿ (400 ಹಾಸಿಗೆಗಳ) ಒಟ್ಟು 700 ಹಾಸಿಗೆಗಳಿಗೆ ಹೆಚ್ಚಿಸಲು ಕ್ರಮವಹಿಸಲಾಗಿದೆ.
ಜಿಲ್ಲೆಯಲ್ಲಿ ಏ.22 ರವರೆಗೆ 206916 ಕೋವಿಡ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 1,72,273 ಆರ್ಟಿಪಿಸಿಆರ್ ಪರೀಕ್ಷೆ, 34,643 ರ್ಯಾಪಿಡ್ ಆಂಟಿಜನ್ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 73,650 ಪಾಸಿಟಿವ್ ಬಂದಿದೆ. 6562 ಮಂದಿ ಗುಣಮುಖರಾಗಿದ್ದಾರೆ. 713 ಸಕ್ರಿಯ ಪ್ರಕರಣಗಳಿದ್ದು, 90 ಮರಣ ಪ್ರಕರಣಗಳು ವರದಿಯಾಗಿದೆ. 87 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, 626 ಮಂದಿ ಹೋಮ್ ಐಸೋಲೇಷನಲ್ಲಿ ಇದ್ದಾರೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರತಿ ದಿನ ಕೋವಿಡ್ ಪರೀಕ್ಷೆಯ ಗುರಿ ಹೆಚ್ಚಿಸಲಾಗಿದ್ದು, ಪ್ರತಿ ದಿನ 900 ಆರ್ಟಿಪಿಸಿಆರ್ ಮತ್ತು 100 ಆರ್‌ಎಟಿರಂತೆ ಪ್ರತಿ ದಿನ ಒಟ್ಟು 1000 ಪರೀಕ್ಷೆ ಮಾಡಲು ಗುರಿಯನ್ನು ನಿಗಧಿಪಡಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಒಟ್ಟು 9 ಸಂಚಾರಿ ತಂಡಗಳನ್ನು ರಚಿಸಲಾಗಿದ್ದು, ಗ್ರಾಮ ಮಟ್ಟದಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಆರೋಗ್ಯ ತಪಾಸಣಾ ತಂಡಕ್ಕೆ ಸಹಕರಿಸುವ ನಿಟ್ಟಿನಲ್ಲಿ ಟಾಸ್ಕ್ಪೋರ್ಸ್ ರಚಿಸಲಾಗಿದೆ. ಆರೋಗ್ಯ ತಪಾಸಣಾ ತಂಡಕ್ಕೆ ಹೆಚ್ಚುವರಿಯಾಗಿ ಆಂಬ್ಯುಲೆನ್ಸ್ಗಳು ಹಾಗೂ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
ಕೊಡಗು ವೈದ್ಯಕಿಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಅವರು ಮಾತನಾಡಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 250 ಹಾಸಿಗೆ ಇದ್ದು, 150 ಆಕ್ಸಿಜನ್ ಬೆಡ್ ಇದೆ ಎಂದು ಅವರು ಮಾಹಿತಿ ನೀಡಿದರು.
ಈ ಮಾಹಿತಿಯನ್ನು ಪಡೆದ ಸಚಿವ ಸೋಮಣ್ಣ ಅವರು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಆದರೆ ಈ ಸಭೆಯ ವಿವರ ಬಹಿರಂಗಗೊಳ್ಳುತಿದ್ದಂತೆ ವಾಸ್ತವದ ಅರಿವಿದ್ದ ಕೊಡಗು ರಕ್ಷಣಾ ವೇದಿಕೆಯ ಸದಸ್ಯರು ರಂಗಕ್ಕಿಳಿದರು. ಸ್ವತಃ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು ಕೋವಿಡ್ ಆಸ್ಪತ್ರೆಯ ನ್ಯೂನತೆಗಳ ವೀಡಿಯೋ ಮಾಡಿ ಹೊರಜಗತ್ತಿಗೆ ಆಸ್ಪತ್ರೆಯ ಮತ್ತೊಂದು ಮುಖವನ್ನು ದರ್ಶನ ಮಾಡಿಸಿದ್ದಾರೆ. ವಾಸ್ತವ ಏನೆಂದರೆ ಇಲ್ಲಿ ಒಂದೇ ಬೆಡ್ ನಲ್ಲಿ 3-4 ಸೋಂಕಿತರನ್ನು ಮಲಗಿಸಲಾಗಿದೆ. ಇಲ್ಲಿಗೆ ಸಮಯಕ್ಕೆ ಸರಿಯಾಗಿ ವೈದ್ಯರೂ ಬರುತ್ತಿಲ್ಲ. ಸೂಕ್ತ ಸಿಬ್ಬಂದಿ ಕೊರತೆಯೂ ಇದ್ದು ವೈದ್ಯೋಪಚಾರದ ನ್ಯೂನತೆಯನ್ನೂ ಬಿಚ್ಚಿಟ್ಟಿದ್ದಾರೆ. ಇಲ್ಲಿನ ಅವ್ಯವಸ್ಥೆಗಳ ಬಗ್ಗೆ ವಿಡಿಯೋ ದೃಶ್ಯಾವಳಿಯನ್ನೂ ಹರಿಬಿಟ್ಟಿದ್ದು, ಶುಕ್ರವಾರ ಸಂಜೆಯಿಂದಲೇ ಈ ಎರಡು ವೀಡಿಯೋ ಕ್ಲಿಪ್ ಗಳು ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಆದರೆ ಪವನ್ ಪೆಮ್ಮಯ್ಯ ಅವರು ಪ್ರತಿಬಿಂಬಿಸಿರುವ ಕೊರತೆಗಳನ್ನು ಗಮನಿಸಿದಾಗ ಅಧಿಕಾರಿಗಳು ಸಚಿವರಿಗೆ ನೀಡಿದ ಮಾಹಿತಿಯು ಸಂಪೂರ್ಣ ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ. ಈ ಬಗ್ಗೆ ಸಚಿವರು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವರೇ ಕಾದು ನೋಡಬೇಕಿದೆ.