ಕರ್ನಾಟಕದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಭೂಸುಧಾರಣೆ ಕಾಯ್ದೆ ಸುಗ್ರೀವಾಜ್ಞೆ ಹೊರಡಿಸಿರುವುದು ರೈತರ ಕೃಷಿ ಭೂಮಿಗೆ ಮಾರಕವಾಗಲಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷಗಳು ಸುಗ್ರೀವಾಜ್ಞೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸುತ್ತಾ ಬಂದಿದೆ. ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ರೈತರ ಹಿತದೃಷ್ಟಿಯಿಂದ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಭೂಸುಧಾರಣೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.
ಬಿ ಎಸ್ ಯಡಿಯೂರಪ್ಪ ತಂದಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ರೈತರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಂದ ತಿದ್ದುಪಡಿಯಾಗಿದೆ. ಈ ತಿದ್ದುಪಡಿ ಜಾರಿಗೆ ತರುವ ಮೊದಲು ಅಸೆಂಬ್ಲಿಯಲ್ಲಿ ಸುದೀರ್ಘ ಚರ್ಚೆ ನಡೆಯಬೇಕಿದೆ. ಕರ್ನಾಟಕದ ಲಕ್ಷಾಂತರ ರೈತರ ಹಿತದೃಷ್ಟಿಯಿಂದ ಭೂಸುಧಾರಣೆ ಕಾಯದೆ ತಿದ್ದುಪಡಿ ಸುಗ್ರೀವಾಜ್ಞೆಗೆ ತಡೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಪ್ರಧಾನಮಂತ್ರಿ ನಿರ್ದೇಶನ ನೀಡಬೇಕೆಂದು ಸಿದ್ದರಾಮಯ್ಯ ಕೇಳಿದ್ದಾರೆ.
ಭೂಸುಧಾರಣೆ ಕಾಯ್ದೆ(1961)ಗೆ 1974ರಲ್ಲಿ ದೇವರಾಜ ಅರಸು ಅವರು ಸೆಕ್ಷನ್ 63, ಸೆಕ್ಷನ್ 79 ಎ , ಸೆಕ್ಷನ್ 79 ಬಿ ,ಸೆಕ್ಷನ್ 79 ಸಿ ಹಾಗೂ ಸೆಕ್ಷನ್ 80 ಇವುಗಳನ್ನು ಸೇರ್ಪಡೆಗೊಳಿಸಿ ಪ್ರಗತಿಪರವಾದ, ಸಾಮಾಜಿಕ ನ್ಯಾಯದಿಂದ ಕೂಡಿದಂತಹ ಕ್ರಾಂತಿಕಾರಕ ನಿರ್ಣಯ ತೆಗೆದುಕೊಂಡರು. ʼಉಳುವವನೇ ಹೊಲದೊಡೆಯʼ ಎಂಬ ಘೋಷವ್ಯಾಕ್ಯದಂತೆ ಗೇಣಿಗೆ ಹೊಲ ಉಳುತ್ತಿದ್ದ ರೈತರಿಗೆ ಗೇಣಿ ಮಾಡುತ್ತಿದ್ದಂತಹ ಜಮೀನಿನ ಮಾಲಿಕತ್ವದ ಹಕ್ಕು ನೀಡಿದ್ದರು.1974ರಲ್ಲಿ ಅರಸು ಅವರು ತಂದಿದ್ದ ತಿದ್ದುಪಡಿ ಇಡೀ ದೇಶಕ್ಕೆ ಮಾದರಿಯಾಗಿತ್ತು. ಅಂತಹ ಪ್ರಗತಿಪರವಾದ ನಿರ್ಣಯವನ್ನು ಕರ್ನಾಟಕ ರಾಜ್ಯ ಸರ್ಕಾರ ಈಗ ರದ್ದು ಗೊಳಿಸುತ್ತಿದೆ ಎಂದು ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊಡಿಸಿದಾಗ ಸಿದ್ದರಾಮಯ್ಯ ಕಿಡಿಕಾರಿದ್ದರು.
1961ರ ಭೂ ಸುಧಾರಣಾ ಕಾಯ್ದೆಯ 79A, 79B ಮತ್ತು 79C ಸೆಕ್ಷನ್‌ಗಳನ್ನು ತೆಗೆದುಹಾಕುವ ಕರ್ನಾಟಕ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ವಿರುದ್ದವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶರಾದ ಅಭಯ್ ಶ್ರೀನಿವಾಸ್ ಓಕಾ ಅವರಿದ್ದ ವಿಭಾಗೀಯ ಪೀಠವು, ಸರ್ಕಾರದ ಪ್ರತಿಕ್ರಿಯೆಯನ್ನು ಕೋರಿತ್ತು.